ಬುಧವಾರ, ಆಗಸ್ಟ್ 28, 2013

ಶ್ರೀಕೃಷ್ಣ ಜನನ

ಶ್ರೀಕೃಷ್ಣನ ಜನನ

ಚಂದ್ರಸಂಪ್ರದಾಯದವರು ಕಳೆದ ತಿಂಗಳೇ ಶ್ರೀಕೃಷ್ಣ ಜನ್ಮದಿನವನ್ನು ಆಚರಿಸಿದ್ದರು.  ಪ್ರಸಿದ್ಧ ಶ್ರೀಕೃಷ್ಣ ಕ್ಷೇತ್ರವಾದ ಉಡುಪಿಯನ್ನೂ ಒಳಗೊಂಡಂತೆ ಗೋಕುಲಾಷ್ಟಮಿಯನ್ನು ಹೆಚ್ಚು ವೈಭವಯುತವಾಗಿ ಆಚರಿಸುವ ಸೌರಸಂಪ್ರದಾಯದವರು ಇಂದು ಶ್ರೀಕೃಷ್ಣ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

ಒಂದು ಭಾದ್ರಪದ ಮಾಸದ ಕೃಷ್ಣಪಕ್ಷದ ಅಷ್ಟಮಿ.  ನಡುರಾತ್ರಿ.  ಚಂದ್ರೋದಯದ ಸಮಯ.  ಶ್ರಾವಣದಲ್ಲಿ ಕೃಷ್ಣ ಜನನ ಎನ್ನುವ ಪುರಾಣಗಳೂ ಉಂಟುಭಾದ್ರಪದದಲ್ಲಿ ಎನ್ನುವ ಪುರಾಣಗಳೂ ಉಂಟು.  ಸೌರಮಾಸದ ಗಣನೆಯಂತೆ ಶ್ರಾವಣ; ಅರ್ಥಾತ್ ಸಿಂಹಮಾಸ; ಸೋಣ.  ಚಾಂದ್ರಮಾಸದ ಗಣನೆಯಂತೆ ಭಾದ್ರಪದ.

ಕಲಿಯುಗಾರಂಭಕ್ಕಿಂತ ಸುಮಾರು 70 ವರ್ಷ ಪೂರ್ವದಲ್ಲಿ ಸಿಂಹಮಾಸದ ಕೃಷ್ಣಪಕ್ಷದ ಅಷ್ಟಮಿಯ ದಿನ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣಾವತಾರವಾಯಿತು.  ಆಗ ರೋಹಿಣೀ ನಕ್ಷತ್ರದ ಜಯಂತೀಯೋಗ.

ಈಗಲೂ ಅಷ್ಟೆ.  ಒಮ್ಮೆಮ್ಮೆ ಶ್ರಾವಣದಲ್ಲಿ, ಒಮ್ಮೊಮ್ಮೆ ಭಾದ್ರಪದದಲ್ಲಿ ರೋಹಿಣೀಯೋಗ ಬರುತ್ತದೆ.  ಕೃಷ್ಣಪಕ್ಷದ ಅಷ್ಟಮೀತಿಥಿಯ ಮಧ್ಯರಾತ್ರಿಯಲ್ಲಿ ರೋಹಿಣೀ ನಕ್ಷತ್ರದ ಯೋಗವೆ ಜಯಂತೀಯೋಗ.  ಈ ಯೋಗ ದೊರಕುವುದು ಸಿಂಹಮಾಸದಲ್ಲಿ ಮಾತ್ರ.  ಶ್ರಾವಣದಲ್ಲಿ ಸಿಂಹಮಾಸ ಬಂದ ವರ್ಷ ಶ್ರಾವಣದಲ್ಲಿ ಜಯಂತಿ.  ಭಾದ್ರಪದದಲ್ಲಿ ಸಿಂಹಮಾಸ ಬಂದ  ವರ್ಷ ಭಾದ್ರಪದದಲ್ಲಿ ಜಯಂತಿ ಬರಬಹುದು.  ಅಂತೂ ಸಿಂಹ ಮಾಸವಿಲ್ಲದೆ ಜಯಂತೀ ಯೋಗವಿಲ್ಲ.  ಕೆಲವೊಮ್ಮೆ ಎರಡೂ ತಿಂಗಳಲ್ಲಿ ರೋಹಿಣೀ ನಕ್ಷತ್ರ ಯೋಗ ಇರದಿರಬಹುದು.  ಆ ವರ್ಷ ಕೃಷ್ಣಜಯಂತಿಯಿಲ್ಲ  ಬರಿಯ ಕೃಷ್ಣಜನ್ಮಾಷ್ಟಮಿ.  ಅದರಿಂದ ಸಿಂಹಮಾಸ ಕೃಷ್ಣಪಕ್ಷದ ಅಷ್ಟಮಿಯಂದೆ ಕೃಷ್ಣಜನ್ಮಾಷ್ಟಮಿಯನ್ನು, ಜಯಂತಿಯನ್ನು ಆಚರಿಸುವ ಸೌರಸಂಪ್ರದಾಯ ಹೆಚ್ಚು ಅರ್ಥಪೂರ್ಣ. 

ಸಿಂಹ ಕೃಷ್ಣ-ಅಷ್ಟಮಿಯಂದು ಶ್ರೀ ಕೃಷ್ಣ ಜನಿಸಿದ ಸೆರೆಮನೆಯಲ್ಲಿ.   ಇವತ್ತಿಗೂ ಅದು ಸೆರೆಮನೆಯಾಗಿಯೇ ಉಳಿದಿದೆ.  ಹಿಂದೆ ಇದು ಮುಸ್ಲಿಂ ರಾಜರ ದಾಳಿಗೊಳಗಾಗಿ ಮಸೀದಿಯಾಗಿ ಪರವರ್ತನೆಗೊಂಡಿತ್ತು.  ದೇಶ ಸ್ವತಂತ್ರವಾದಾಗ ಸರಕಾರದ ಅಧೀನಕ್ಕೆ ಬಂತು.  ಇಡಿಯ ಮಸೀದಿಗೆ ಬೀಗ ಹಾಕಿ ಕೃಷ್ಣ ಹುಟ್ಟಿದ ಜಾಗವನ್ನಷ್ಟೆ ಸಾರ್ವಜನಿಕರ ದರ್ಶನಕ್ಕೆ ಬಿಡಲಾಗಿದೆ.

ಕೃಷ್ಣಾವತಾರವಾಯಿತು.  ಜಗತ್ತಿನ ಸೆರೆ ಬಿಡಿಸಲು ಬಂದ ಭಗವಂತ ತಾನು ಸೆರೆಮನೆಯಲ್ಲಿ ಮೂಡಿ ಬಂದ.  ದೇವಕಿ ಕಣ್ ಬಿಟ್ಟಳುವಸುದೇವ ಧಾವಿಸಿ ಬಂದ.  ಆಗ ಅವರಲ್ಲಿ ಕಂಡದ್ದೇನುಅವರಿಗೆ ಆ ಕ್ಷಣದಲ್ಲಿ ಪುಟ್ಟ ಮಗುವಿನ ಬದಲು ಶಂಖ-ಚಕ್ರ-ಗದಾ-ಪದ್ಮಧಾರಿಯಾದ ಭಗವಂತನ ದರ್ಶನವಾಯಿತು:

ತಮದ್ಭುತಂ ಬಾಲಕಮಂಬುಜೇಕ್ಷಣಂ
ಚತುರ್ಭುಜಂ ಶಂಖಗದಾದ್ಯುದಾಯುಧಮ್ |
ಶ್ರೀವತ್ಸಲಕ್ಷಂ ಗಲಶೋಭಿಕೌಸ್ತುಭಂ
ಪೀತಾಂಬರಂ ಸಾಂದ್ರಪಯೋದಸೌಭಗಮ್ ||

ಮಹಾರ್ಹವೈಡೂರ್ಯಕಿರೀಟಕುಂಡಲ-
ತ್ವಿಷಾ ಪರಿಷ್ವಕ್ತಸಹಸ್ರಕುಂತಲಮ್ |
ಉದ್ಧಾಮಕಾಂಚ್ಯಂಗದಕಂಕಣಾದಿಭಿಃ
ವಿರೋಚಮಾನಂ ವಸುದೇವ ಐಕ್ಷತ ||

ಅದೊಂದು ಅದ್ಭುತವಾದ ಮಗು.  ತಾವರೆಯಂಥ ಕಣ್ಣುಗಳು.  ನಾಕು ಕೈಗಳು.  ಕೈಯಲ್ಲಿ ಶಂಖ-ಚಕ್ರ-ಗದಾ-ಪದ್ಮಗಳು.  ಎದೆಯಲ್ಲಿ ಶ್ರೀವತ್ಸದ ಚಿಹ್ನೆ.  ಕೊರಳಲ್ಲಿ ಕೌಸ್ತುಭಮಣಿ.  ಕಾರ್ಗಾಲದ ಮೋಡದಂಥ ನೀಲಿ ಮೈಯ ಮೇಲೆ ಹಳದಿಪಟ್ಟೆಯ ಉಡಿಗೆ.  ಮಣಿಮಯವಾದ ಕಿರೀಟ; ಕಿವಿಯೋಲೆ.  ಅವುಗಳ ಕಾಂತಿಗೆ ಹೊಳೆವ ಗುಂಗುರು ಕೂದಲು.  ಚಿನ್ನದ ತೋಳುಬಂದಿ, ಬಳೆ, ನಡುದಾರ.  ಇಂಥ ಅಪೂರ್ವ ಬಾಲರೂಪವನ್ನು ಪುಣ್ಯವಂತರಾದ ಆ ತಾಯಿ-ತಂದೆ ಕಂಡರು.  ಕಂಡು ಸ್ತೋತ್ರ ಮಾಡಿದರು:

ರೂಪಂ ಯತ್ತತ್ ಪ್ರಾಹುರವ್ಯಕ್ತಮಾದ್ಯಂ
ಬ್ರಹ್ಮ ಜ್ಯೋತಿರ್ನಿರ್ಗುಣಂ ನಿರ್ವಿಕಾರಂ |
ಸತ್ತಾಮಾತ್ರಂ ನಿರ್ವಿಶೇಷಂ ನಿರೀಹಂ
ಸ ತ್ವಂ ಸಾಕ್ಷಾದ್ ವಿಷ್ಣುರಧ್ಯಾತ್ಮದೀಪಃ ||

ಜಗತ್ತು ರೂಪ ತಾಳುವ ಮುಂಚೆ ಇದ್ದ ರೂಪ.  ಮನುಷ್ಯ ಕಣ್ಣಿಂದ ನೋಡಲಾಗದ ರೂಪ.  ಅಂಥ ರೂಪವನ್ನು ನಮ್ಮ ಕಣ್ಣಿಗೆ ಕಾಣಿಸಿದ್ದೀಯ.  ಪರಬ್ರಹ್ಮಸ್ವರೂಪವಾದ, ಬೆಳಕಿನ ಪುಂಜವಾದ ರೂಪ.  ಅಂಥ ನಿನಗೆ ಪ್ರಕೃತಿಯ ಗುಣಗಳ ಸ್ಪರ್ಶವಿಲ್ಲ.  ಅದರಿಂದಲೇ ಪ್ರಾಕೃತಿಕ ವಿಕಾರಗಳೂ ಇಲ್ಲ. ನೀನು ನಿರ್ಗುಣನಾದರೂ ಸಚ್ಚಿದಾನಂದ ಸ್ವರೂಪ.  ಸತ್ತಾಮಾತ್ರ.  ದೋಷಗಳ ಸುಳಿವಿಲ್ಲದ ಕೇವಲ ಗುಣಮಯ ಮೂರ್ತಿ.  ನಿನ್ನನ್ನು ಮೀರಿಸುವ ಇನ್ನೊಂದು ವಸ್ತುವಿಲ್ಲ.  ನಿನಗಾಗಿ ನೀನು ಏನೂ ಮಾಡುತ್ತಿಲ್ಲ.  ಏಕೆಂದರೆ ನೀನು ಪೂರ್ಣಕಾಮ.  ನೀನು ನಿರೀಹ.  ನಿನಗೆ ಯಾವ ಬಯಕೆಯೂ ಇಲ್ಲ.  ನಮಗಾಗಿ ನೀನು ಬಂದೆ.  ಆಧ್ಯಾತ್ಮದ ಬೆಳಕಾಗಿ ಬಂದೆ.  ಸಾಕ್ಷಾತ್ ನಾರಾಯಣನೆ ನಮ್ಮ ಮಗುವಾಗಿ ಬಂದೆ.

ನಷ್ಟೇ ಲೋಕೇ ದ್ವಿಪರಾರ್ಧವಸಾನೇ
ಮಹಾಭೂತೇಷ್ವಾದಿಭೂತಂ ಗತೇಷು |
ವ್ಯಕ್ತೇsವ್ಯಕ್ತಂ ಕಾಲವೇಗೇನ ಯಾತೇ
ಭವಾನೇಕಃ ಶಿಷ್ಯತೇsಶೇಷಸಂಜ್ಞಃ ||

ಜಗತ್ತೆಲ್ಲ ನಾಶವಾದಾಗ ನೀನೊಬ್ಬನೆ ಉಳಿಯುವೆ.  432 ಕೋಟಿ ವರ್ಷಗಳಿಗೊಮ್ಮೆ ಪ್ರಳಯವಾಗುತ್ತೆ.  ಬ್ರಹ್ಮದೇವರ ದೈನಿಕ ಪ್ರಳಯ ಇದು.  ಇಂಥ 360 ದಿನಗಳಿಗೆ ಬ್ರಹ್ಮದೇವರ ಒಂದು ವರ್ಷ.  ಇಂಥ 50 ವರ್ಷಗಳು ಪರಾರ್ಧ.  ಇದರ ಎರಡು ಪಟ್ಟು ದ್ವಿಪರಾರ್ಧ ಅಥವಾ ಪರಕಾಲ.  ಇದನ್ನೇ ಮಹಾಕಲ್ಪ ಎನ್ನುತ್ತಾರೆ.  ಆಗ ಮಹಾಪ್ರಳಯ ಸಂಭವಿಸುತ್ತದೆ.  ಇಷ್ಟು ವಿಸ್ತೃತವಾದ ಬ್ರಹ್ಮಕಾಲ ಅವಸಾನವಾದಾಗ, ಎಲ್ಲ ಲೋಕಗಳೂ ನಾಶವಾಗುತ್ತವೆ.  ಲೋಕಸೃಷ್ಟಿಗೆ ಮೂಲದ್ರವ್ಯಗಳಾದ ಪಂಚಮಹಾಭೂತಗಳು ಆಕಾಶ, ಗಾಳಿ, ಬೆಂಕಿ, ನೀರು, ಮಣ್ಣು ಎಲ್ಲ ಒಂದರೊಳಗೊಂದು ಸೇರಿ ನಾಶವಾಗಿ ಭೂತಾದಿಯಾದ ಅಹಂಕಾರ ತತ್ವದಲ್ಲಿ ಸೇರಿಕೊಳ್ಳುತ್ತವೆ.  ಕಾಲಪುರುಷ ಎಲ್ಲವನ್ನೂ ಕಬಳಿಸಿದ.  ಎಲ್ಲ ವ್ಯಕ್ತಪ್ರಪಂಚವೂ ಅವ್ಯಕ್ತವಾದ ಮೂಲಪ್ರಕೃತಿಯಲ್ಲಿ ಏಕಾಯನವಾಯಿತು.  ಎಲ್ಲ ನಾಶವಾದಾಗ ಏನು ಉಳಿಯಿತು?  ‘ಭವಾನೇಕ ಶಿಷ್ಯತೇ’.”

ಯಾವುದೂ ಇರದಾಗ ಇದ್ದದ್ದು ಒಂದೇ ಒಂದು ಅದು ನೀನು.  ಆಗ ಎಲ್ಲ ಶಬ್ದಗಳೂ ನಿನ್ನನ್ನೆ ಕೊಂಡಾಡುತ್ತವೆ.  ಎಲ್ಲ ವಸ್ತು ನಾಶವಾದರೂ ಶಬ್ದಗಳು ನಾಶವಾಗುವುದಿಲ್ಲ.  ಹೀಗೆ ರೂಪ ಅಳಿದು ನಾಮ ಉಳಿದಾಗ ಆ ಎಲ್ಲ ನಾಮಗಳಿಗೆ ಆಶ್ರಯ ನೀನೆ.  ಎಲ್ಲ ಶಬ್ದಗಳಿಗೂ ನೀನೆ ಅರ್ಥ.  ಲೌಕಿಕವಿರಲಿ, ವೈದಿಕವಿರಲಿ, ಎಲ್ಲ ಶಬ್ದಗಳೂ ಮೂಲತಃ ನಿನ್ನ ಹೆಸರು.  ನೀನು ಸರ್ವಶಬ್ದ ವಾಚ್ಯಅಶೇಷಸಂಜ್ಞ.

ಸ್ತೋತ್ರದಿಂದ ಪ್ರಸನ್ನನಾದ ಭಗವಂತ ವಸುದೇವನ ಬಳಿ ನುಡಿದ:  ನಂದಗೊಪನಿದ್ದಲ್ಲಿಗೆ ನನ್ನನ್ನು ಕರೆದುಕೊಂಡು ಹೋಗು.  ಅಲ್ಲಿದ್ದ ಹೆಣ್ಣು ಮಗುವನ್ನು ಇಲ್ಲಿ ತಾ. ಕಂಸನಿಂದ ಏನೂ ತೊಂದರೆಯಾಗದಂತೆ ನನ್ನ ರಕ್ಷೆಯಿದೆ.”  ಇಷ್ಟು ನುಡಿದ ಭಗವಂತ ಮಗುವಾಗಿ ಮಲಗಿದ.  ವಸುದೇವ ಹಾಗೆಯೇ ಮಾಡಿದ.  ಕೃಷ್ಣನನ್ನು ಯಶೋದೆಯ ಮಂಚದಲ್ಲಿಟ್ಟ.  ಅಲ್ಲಿದ್ದ ಮಗುವನ್ನು ಇಲ್ಲಿಗೆ ತಂದ.  ನಿದ್ದೆಯ ಅಮಲಿನಲ್ಲಿ ಇದು ಯಾವುದೂ ಯಾರಿಗೂ ತಿಳಿಯಲೇ ಇಲ್ಲ.  ನಂದಗೋಕುಲಕ್ಕೆ ಹೋದದ್ದು, ಮರಳಿ ಬಂದದ್ದು, ಮಗುವಿನ ಬದಲಾವಣೆ ಯಾವ ಸುದ್ದಿಯೂ ಕಂಸನಿಗೂ ಗೊತ್ತಾಗಲಿಲ್ಲ.  ಎಂಟನೆಯ ಮಗು ಹುಟ್ಟಿದೆ ಎನ್ನುವ ಸುದ್ದಿ ಮಾತ್ರ ತಿಳಿಯಿತು.

ಕಂಸ ಬಂದ.  ಇದು ಹೆಣ್ಣು ಮಗುಎಂದು ತಿಳಿದಾಗ ಗೊಂದಲಕ್ಕೀಡಾದ.  ಎಂಟನೆಯ ಗಂಡುಮಗುವಿನಿಂದ ತನಗೆ ಅಪಾಯ ಎಂದು ಅಶರೀರವಾಣಿ ಕೇಳಿಸಿತ್ತು.  ಇದರಲ್ಲೇನೋ ವಂಚನೆಯಿದೆ ಅಂದುಕೊಂಡ.  ಹೆಣ್ಣು ಮಗುವನ್ನು ಕೊಲ್ಲಲು ಹಿಡಿದೆತ್ತಿದ.  ಮಗು ಕೈಯಿಂದ ಜಾರಿ ಆಕಾಶಕ್ಕೆ ನೆಗೆಯಿತು.  ಮತ್ತೆ ಆಕಾಶವಾಣಿ:

ಕಿಂ ಮಯಾ ಹತಯಾ ಮಂದ ಜಾತಃ ಖಲು ತವಾಂತಕೃತ್ |
ಯತ್ರಕ್ವಚಿತ್ ಪೂರ್ವಶತ್ರುರ್ಮಾ ಹಿಂಸೀಃ ಕೃಪಣಾಂ ವೃಥಾ ||

ಅಯ್ಯಾ ತಿಳಿಗೇಡಿ, ನನ್ನನ್ನು ಕೊಂದು ನಿನಗೇನು ಪ್ರಯೋಜನನಿನ್ನನ್ನು ಕೊಲ್ಲಬೇಕಾದವ ಬೇರೆ ಕಡೆ ಹುಟ್ಟಿದ್ದಾನೆ.  ನಿರಪರಾಧಿನಿಯಾದ ನನಗೇಕೆ ಶಿಕ್ಷೆ.ನಿನ್ನ ಶತ್ರು ಬೆಳೆಯುತ್ತಿದ್ದಾನೆ.  ಇನ್ನು ನಿನ್ನನ್ನು ಬದುಕಿಸುವುದು ಯಾರಿಂದಲೂ  ಸಾಧ್ಯವಿಲ್ಲ.

ಕಂಸನಿಗೆ ವಿಸ್ಮಯ:  ಗಾಬರಿ.   ಮರಳಿ ಬಂದು ದೇವಕಿಯನ್ನು ಸೆರೆಯಿಂದ ಬಿಡಿಸಿದ.  ಬಿಡಿಸಿ ಕ್ಷಮೆ ಕೇಳಿದ:  ತಂಗಿ, ಅಶರೀರವಾಣಿಯನ್ನು ನಂಬಿ ನಾನು ಮೋಸಹೋದೆ.  ಆದರೆ ಈಗ ಗೊತ್ತಾಯಿತು ದೇವತೆಗಳೂ ಸುಳ್ಳು ಹೇಳುತ್ತಾರೆ ಎಂದು.  ನನ್ನನ್ನು ಕೊಲ್ಲುವ ಮಗು ಬೇರೆ ಕಡೆ ಹುಟ್ಟಿದೆಯಂತೆ.  ದೇವತೆಗಳ ಅಶರೀರವಾಣಿಯನ್ನು ನಂಬಿ ನಿನಗೆ ಅನ್ಯಾಯ ಮಾಡಿದೆ.  ವೃಥಾ ನಿನ್ನ ಮಕ್ಕಳನ್ನು ಕೊಂದೆ.  ನನ್ನನ್ನು ಕ್ಷಮಿಸು.  ನಾನು ಯೋಚಿಸಿದ್ದು, ಯೋಜಿಸಿದ್ದು ಎಲ್ಲ ವ್ಯರ್ಥವಾಯಿತು.

ತನ್ನ ತಾಯಿ ತಂದೆಯರನ್ನು ಬಂಧನದಿಂದ ಬಿಡಿಸಿದ ಆ ಕೃಷ್ಣನ ಜನ್ಮಸಂದರ್ಭದ ಈ ದಿನ ನಮ್ಮ  ಭವಬಂಧನಗಳನ್ನೆಲ್ಲಾ ಇಲ್ಲವಾಗಿಸಲಿ.   ಶ್ರೀ ಕೃಷ್ಣ ಪರಮಾತ್ಮ ಎಲ್ಲರಿಗೂ ಒಳ್ಳೆಯದು ಮಾಡಲಿ.


ಕೃಪೆ: ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ 'ಸಂಗ್ರಹ ಭಾರತ'

Tag: Sri Krishna Janana, Sri Krishna's birth

ಕಾಮೆಂಟ್‌ಗಳಿಲ್ಲ: