ಶುಕ್ರವಾರ, ಆಗಸ್ಟ್ 30, 2013

ಶ್ರೀನಿವಾಸ ವೈದ್ಯ

ಶ್ರೀನಿವಾಸ ವೈದ್ಯ

ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಬರಹಗಾರರಾದ ಶ್ರೀನಿವಾಸ ವೈದ್ಯರು 1936ರ ಏಪ್ರಿಲ್ 4ರಂದು ದಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು.  ತಂದೆ ಬಿ.ಜಿ. ವೈದ್ಯರು ಸುಪ್ರಸಿದ್ಧ ವೈದ್ಯರು.  ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನಕ್ಕೆ ಸೇರಿದ ಸುಂದರಬಾಯಿಯವರು.  ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಧಾರವಾಡದಲ್ಲೇ ನಡೆಸಿದ ಶ್ರೀನಿವಾಸ ವೈದ್ಯರು 1959ರಲ್ಲಿ ಅರ್ಥಶಾಸ್ತ್ರ ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಯನ್ನೂ ಬ್ಯಾಂಕಿಂಗ್ ಕ್ಷೇತ್ರದ ಪರೀಕ್ಷೆಗಳಲ್ಲಿ ಉತೀರ್ಣತೆಯನ್ನೂ, ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಡಿಪ್ಲೋಮಾ ಪದವಿಯನ್ನೂ ಪಡೆದುಕೊಂಡರು. ಶ್ರೀನಿವಾಸ ವೈದ್ಯರ ತಾಯಿ ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ಓದಿನಲ್ಲಿ ಮಗ್ನರಾಗಿರುತ್ತಿದ್ದರು.  ಇದೇ ಪ್ರಭಾವ ಶ್ರೀನಿವಾಸ ವೈದ್ಯರಲ್ಲೂ ಮೂಡತೊಡಗಿತು.

ಹೈಸ್ಕೂಲಿನ ದಿನಗಳಲ್ಲಿ ಶ್ರೀನಿವಾಸ ವೈದ್ಯರು ಕೈಬರಹ ಪತ್ರಿಕೆಯಾದ ನಂದಾದೀಪವನ್ನು ಪ್ರಾರಂಭಿಸಿದರು.  ಇದಕ್ಕೆ ಅವರೊಡಗೂಡಿ ಸಹ ಸಂಪಾದಕರಾಗಿದ್ದವರು ಮಹಾದೇವ ಬಣಕಾರರು.  ಕಾಲೇಜಿನ ದಿನಗಳಲ್ಲಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯರಾಗಿದ್ದರು.  ಗಗ್ಗಯನ ಗಡಿಬಿಡಿ, ದಾಂಪತ್ಯದ ಬೊಂಬೆ, ತಿರುವು-ಮುರುವು ಮುಂತಾದ ಅನೇಕ ನಾಟಕಗಳಲ್ಲಿ ಅವರು ಪಾತ್ರ ವಹಿಸಿದ್ದರು.  ವಿದ್ಯಾವರ್ದಕ ಸಂಘದವರು ಏರ್ಪಡಿಸುತ್ತಿದ್ದ ಸಾಹಿತ್ಯ ಸ್ಪರ್ಧೆಗಳಲ್ಲಿ ಅವರು ಹಲವಾರು ಬಹುಮಾನಗಳನ್ನು ಗಳಿಸಿದ್ದರು.

ಕಾಲೇಜು ವ್ಯಾಸಂಗದ ಸಮಯದಲ್ಲಿ ವಿ. ಕೃ ಗೋಕಾಕರಿಂದ ಪ್ರಭಾವಿತರಾಗಿದ್ದ ಶ್ರೀನಿವಾಸ ವೈದ್ಯರು ಪಿ.ಎಚ್.ಡಿ ಪಡೆಯಲು ಮುಂಬೈಗೆ ತೆರಳಿದರಾದರೂ 1959ರ ವರ್ಷದಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಯಾಗಿ ಸೇರಿ, ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿ 1996ರಲ್ಲಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದರು.

1984ರ  ಸುಮಾರಿನಲ್ಲಿ ಪ್ರಸಿದ್ಧ ಹಾಸ್ಯ ಬರಹಗಾರರಾದ  ರಾಶಿ (ಡಾ. ಶಿವರಾಂ) ಅವರು ನಿಧನರಾದ ಸಂದರ್ಭದಲ್ಲಿ ಅವರ ಮಗ ಶಿವಕುಮಾರ್ ಅವರಿಗೆ ಬರೆದ ಸಾಂತ್ವನ ಪತ್ರದ ಭಾಷೆ, ಭಾವನೆಗಳನ್ನು ಮೆಚ್ಚಿದ ಶಿವಕುಮಾರ್ ಅವರು, ಶ್ರೀನಿವಾಸ ವೈದ್ಯರನ್ನು ಅಪರಂಜಿ ಪತ್ರಿಕೆಗೆ ಬರೆಯಲು ಪ್ರೇರೇಪಿಸಿದರು.  ಹಾಸ್ಯ ಬರಹಗಳಿಗೆ ಮೀಸಲಾದ ಅಪರಂಜಿ ಪತ್ರಿಕೆಗೆ ಮುಂಬೈನಲ್ಲಿ ಕಂಡ ನಿತ್ಯ ಬದುಕಿನ ಸಂಗತಿಗಳಿಗೆ ನಗೆಲೇಪ ಹಚ್ಚುತ್ತಾ ಬರೆಯತೊಡಗಿದರು.  ಹೀಗೆ ಶ್ರೀನಿವಾಸ ವೈದ್ಯರು ಬರೆದ ಪ್ರಥಮ ಲೇಖನ ಸ್ಯಾರಿಗಾರ್ಡ್’. ಮುಂದೆ 1994ರ ವರ್ಷದಲ್ಲಿ ಇಂಥಹ ಲೇಖನಗಳ ಸಂಕಲನ ರೂಪವಾಗಿ ತಲೆಗೊಂದು ತರತರ’   ಪ್ರಕಟಗೊಂಡಿತು.  ಧಾರವಾಡ ಭಾಷೆಯನ್ನು ವಿಶಿಷ್ಟ ರೀತಿಯಲ್ಲಿ ಉಪಯೋಗಿಸಿಕೊಂಡ ಈ ಕೃತಿ ವೈದ್ಯರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.

ಎರಡನೆಯ, ಲಲಿತ ಪ್ರಬಂಧಗಳ ಸಂಕಲನ ಮನಸುಖರಾಯನ ಮನಸು’ (1997), ಮತ್ತು ಮೂರನೆಯ ಹಾಸ್ಯ ಪ್ರಬಂಧಗಳ ಸಂಕಲನ ರುಚಿಗೆ ಹುಳಿಯೊಗರು’ (2003)ರಲ್ಲಿ  ಪ್ರಕಟಗೊಂಡವು.   ಮೇಲಿನ ಮೂರು ಕೃತಿಗಳೂ ಮೂರ್ನಾಲ್ಕು ಪುನರ್ಮುದ್ರಣಗಳನ್ನು ಕಂಡಿರುವುದೇ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಕೆ. ವಿ. ಅಕ್ಷರರು ಗುರುತಿಸಿರುವಂತೆ ಲಘು-ಗಂಭೀರ ಬರಹಗಳೆಂದು ವಿಭಾಗ ಮಾಡಲಾಗದ ಹಾಗೂ ಕಥೆ, ಪ್ರಬಂಧಗಳೆಂದು ಪ್ರತ್ಯೇಕಿಸಲಾಗದ ವಿಶಿಷ್ಟ ರೀತಿಯ ಬರಹಗಳನ್ನು ಶ್ರೀನಿವಾಸ ವೈದ್ಯರು ಹುಟ್ಟುಹಾಕಿದರು.  ನಂತರ ಗಂಭೀರ ಸಾಹಿತ್ಯದತ್ತ ಹೊರಳಿದ ವೈದ್ಯರು  ಅನೇಕ ಕಥೆಗಳನ್ನೂ, ಒಂದು ಕಾದಂಬರಿಯನ್ನೂ ರಚಿಸಿದರು.   ಜಂಟಿ ಕುಟುಂಬದಲ್ಲಿದ್ದ ಹಿರಿಯ ವ್ಯಕ್ತಿತ್ವದ ಅವರ ಅಜ್ಜ ಬೀರಿದ ಪ್ರಭಾವದಿಂದ ಕಾದಂಬರಿ ರಚಿಸಲು ಮುಂದಾಗಿ ಬರೆದ ಕಾದಂಬರಿಯೆ ಹಳ್ಳ ಬಂತು ಹಳ್ಳ’.  ಇದು 2004ರ ವರ್ಷದಲ್ಲಿ ಮೂಡಿಬಂದಿತು. ಈ ಕಾದಂಬರಿಯು 2004ರಲ್ಲಿ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾಗಿದೆ.

ಅಂಕಿತ ಪುಸ್ತಕ ಪ್ರಕಾಶನವು 2007ರ ವರ್ಷದಲ್ಲಿ ಹೊರತಂದ ಸಣ್ಣ ಕತೆಗಳ ಸಂಕಲನ ಅಗ್ನಿಕಾರ್ಯ’. “ಬರವಣಿಗೆ ಎಂದರೆ ಸೋದಿಶ್ಯವಾದ ಒಂದು ಬಹಿರಂಗ ಬೌದ್ಧಿಕ ಕಸರತ್ತು ಅಥವಾ ತೀರಾ ಖಾಸಗಿಯಾದ ಒಂದು ಆತ್ಮಶೋಧದ ಗೀಳು ಎಂಬ ಎರಡು ಅತಿರೇಕಗಳ ಹಂಗು ಕಳೆದುಕೊಂಡು, ಯಾವ ಹಪಾಹಪಿಯೂ ಇಲ್ಲದೆ, ನಿವೃತ್ತಿಯ ನಂತರವೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರ ಕಥೆ, ಕಾದಂಬರಿಗಳನ್ನು ಓದುವುದೆಂದರೆ ಎಲ್ಲೋ ಕಾಣೆಯಾಗಿದ್ದ ಬಂಧು-ಬಳಗದವರನ್ನು ಮತ್ತೆ ಭೇಟಿಯಾದಂತೆಎನ್ನುತ್ತಾರೆ ಜಯಂತ ಕಾಯ್ಕಿಣಿ. 

ಶ್ರೀನಿವಾಸ ವೈದ್ಯರ ಹಲವಾರು, ಕಥೆ, ಹಾಸ್ಯಬರಹಗಳು  ನಾಟಕಕ್ಕೆ ಅಳವಡಿತಗೊಂಡು ರಂಗಪ್ರದರ್ಶನಗಳನ್ನು ಕಂಡಿವೆ. ಅವುಗಳಲ್ಲಿ ಶ್ರದ್ಧಾ ಮತ್ತು ಹಣತೆಗಳು, ಬದುಕಲು ಕಲಿಯಿರಿ, ಕ್ರಯಸ್ಥ, ಬಿದ್ದೂರಿನ ಬಿಗ್‌ಬೆನ್‌, ದತ್ತೋಪಂತನ ಪತ್ತೇದಾರಿ, ಗಂಢಭೇರುಂಡ, ಮನಸುಖರಾಯನ ಮನಸು ಮುಂತಾದವುಗಳು ಸೇರಿವೆ.  ಹೆಗ್ಗೋಡಿನ ನಿನಾಸಂ, ಬೆಂಗಳೂರಿನ ವಿನಾಯಕ ಜೋಶಿ ತಂಡ, ಮೈಸೂರಿನ ರಂಗಾಯಣ, ಕುಂದಾಪುರದ ಭಂಡಾರ್ಕರ್ ಕಾಲೇಜು, ಬೆಂಗಳೂರಿನ ಯುಕೊ ಬ್ಯಾಂಕ್ ಕನ್ನಡ ಸಂಘ, ಯುವ ಜನೋತ್ಸವ ಸಂದರ್ಭದಲ್ಲಿ ಧಾರವಾಡದ ತಂಡ ಮುಂತಾದವುಗಳಿಂದ ಇವು ಅಭಿನಯಿಸಲ್ಪಟ್ಟಿವೆ.

ಮನಸುಖರಾಯನ ಮನಸು ಕೃತಿಗೆ 2003ರಲ್ಲಿ  ಪರಮಾನಂದ ಪ್ರಶಸ್ತಿ, ‘ಹಳ್ಳ ಬಂತು ಹಳ್ಳಕಾದಂಬರಿಗೆ 2004ರಲ್ಲಿ  ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ ಮತ್ತು  2008ರ ವರ್ಷದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿವೆ.  2010ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಶ್ರೀನಿವಾಸರು  ಸಂವಾದ ಟ್ರಸ್ಟ್ನ್ನು 1997ರಲ್ಲಿ ಸ್ಥಾಪಿಸಿದ್ದು, ನಾಡಿನ ಖ್ಯಾತ ಬರಹಗಾರರಿಂದ ಉಪನ್ಯಾಸ, ವಾಚನ, ಸಂವಾದ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕ್ರಿಯಾಶೀಲರಾಗಿದ್ದಾರೆ.


ಈ ಮಹನೀಯರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

Tag; Srinivas Vaidya

ಕಾಮೆಂಟ್‌ಗಳಿಲ್ಲ: