ಬುಧವಾರ, ಆಗಸ್ಟ್ 28, 2013

ವೆಂಕಟೇಶ್ ಪ್ರಸಾದ್

ವೆಂಕಟೇಶ್ ಪ್ರಸಾದ್

ಕರ್ನಾಟಕ ಹಾಗೂ ಭಾರತ ಕಂಡ ಉತ್ತಮ ವೇಗದ ಬೌಲರುಗಳಲ್ಲಿ ವೆಂಕಟೇಶ್ ಪ್ರಸಾದ್  ಒಂದು ಗಣನೀಯ ಹೆಸರು.  ಬಾಪು ಕೃಷ್ಣರಾವ್ ವೆಂಕಟೇಶ್ ಪ್ರಸಾದ್ ಅವರು ಜನಿಸಿದ್ದು ಆಗಸ್ಟ್ 5, 1969ರಲ್ಲಿ. 

ಟೆಸ್ಟ್ ಕ್ರಿಕೆಟ್ಟಿನಲ್ಲಿ ಆಡಿದ 33 ಟೆಸ್ಟ್ ಪಂದ್ಯಗಳಲ್ಲಿ 96 ವಿಕೆಟ್ಟುಗಳನ್ನೂ, ಏಕ ದಿನ ಪಂದ್ಯಗಳಲ್ಲಿ 161 ವಿಕೆಟ್ಟುಗಳನ್ನೂ ಉರುಳಿಸಿದ ಪ್ರಸಾದ್ ಹಲವಾರು ಉತ್ತಮ ತಂಡಗಳೆದುರು ಭಾರತ ತಂಡ ನೀಡಿದ ಉತ್ತಮ ಪ್ರದರ್ಶನದಲ್ಲಿ ಪಾಲು ನೀಡಿದವರು.  1996ರ ವರ್ಷದಲ್ಲಿ ದಕ್ಷಿಣ ಆಫ್ರಿಕಾದ ದರ್ಬಾನ್ ಟೆಸ್ಟ್ ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಗಳಿಸಿದ್ದು, 1996ರ ವರ್ಷದ ಇಂಗ್ಲೆಂಡ್ ಸರಣಿಯಲ್ಲಿ 5 ವಿಕೆಟ್ ಗಳಿಸಿದ್ದು, 1999ರಲ್ಲಿ ಪಾಕಿಸ್ತಾನದ ವಿರುದ್ಧ ಬೌಲರುಗಳಿಗೆ ಸಹಾಯ ನೀಡದಂತಹ ಸಂದರ್ಭದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಅವರು ಬುದ್ಧಿವಂತಿಕೆಯ ಬೌಲಿಂಗ್ ಪ್ರದರ್ಶನದಿಂದ ಆರು ವಿಕೆಟ್ ಉರುಳಿಸಿದ್ದು,    2001ರಲ್ಲಿ ಶ್ರೀಲಂಕಾದಲ್ಲಿನ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗಳಿಸಿದ್ದು ಇವೆಲ್ಲಾ ವೆಂಕಟೇಶ್ ಪ್ರಸಾದರ ಪ್ರಮುಖ ಸಾಧನೆಗಳಾಗಿ ಗುರುತಿಸಲ್ಪಟ್ಟಿವೆ.

1996ರ ವಿಶ್ವಕಪ್ ಪ್ರಮುಖ ಪಂದ್ಯವೊಂದರಲ್ಲಿ  ವೆಂಕಿ ಅವರ ಬೌಲಿಂಗಿನಲ್ಲಿ ಪಾಕಿಸ್ತಾನದ ಅಮೀರ್ ಸೊಹೇಲ್ ಬೌಂಡರಿ ಬಾರಿಸಿದ ಅಹಂನ ಜೊತೆಗೆ ಸ್ಲೆಡ್ಜಿಂಗ್ ತಂತ್ರದಲ್ಲಿ ಅವಾಚ್ಯ ಮಾತಿಗೆ ತೊಡಗಿದ.  ಬಾಯಲ್ಲಿ ಒಂದಿನಿತೂ ಪ್ರತಿಕ್ರಯಿಸದ ವೆಂಕಿ ಅದೇ ಮರುಗಳಿಗೆಯಲ್ಲಿ ಉತ್ತಮವಾದ ಬಾಲ್ ಬೌಲ್ ಮಾಡಿ ಅಮೀರ್ ಸೊಹೇಲನನ್ನು ಕ್ಲೀನ್ ಬೌಲ್ಡ್ ಮಾಡುವುದರ ಮೂಲಕ ತಮ್ಮ ಸಾಮರ್ಥ್ಯವೇನೆಂದು ತೋರಿದರು.  ಆ ಘಟನೆಆ ಪಂದ್ಯವನ್ನು ಭಾರತ ತಂಡ ಗೆಲ್ಲುವಲ್ಲಿ ಮಹತ್ವದ ತಿರುವೆಂದು ಪ್ರಸಿದ್ಧಿ ಪಡೆಯಿತು.  ಆ ಪಂದ್ಯ ಮುಕ್ತಾಯವಾದಾಗ ಭಾರತೀಯ ಕ್ರಿಕೆಟ್ ಪಟುಗಳು ವೆಂಕಿ ಅವರನ್ನು ಹೊತ್ತು ಕುಣಿದಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಕರ್ನಾಟಕ ತಂಡ ಗೆದ್ದ ರಣಜಿ ಟ್ರೋಫಿ ಪ್ರಶಸ್ತಿಗಳಲ್ಲಿ, ಎರಡು ರಣಜಿ ಪ್ರಶಸ್ತಿಗಳನ್ನು ಗೆಲ್ಲುವುದರಲ್ಲಿ ಕೂಡಾ ವೆಂಕಟೇಶ್ ಪ್ರಸಾದರ ಪ್ರಮುಖ ಕೊಡುಗೆ ಇದೆ. 

ವೇಗದ ಬೌಲರುಗಳಿಗೆ ಶಾಪಗ್ರಸ್ತವಾದ ಹಲವಾರು ಪೆಟ್ಟುಗಳ ದೆಸೆಯಿಂದಾಗಿ 2001ರ ವರ್ಷದಿಂದ ಆಚೆಗೆ ಅಂತರಾಷ್ಟ್ರೀಯ ಪಂದ್ಯಗಳು ಮತ್ತು 2005ರ ವರ್ಷದಿಂದ ಈಚೆಗೆ ರಣಜಿ ಪಂದ್ಯಗಳಿಂದಲೂ ವೆಂಕಿ ನಿವೃತ್ತರಾದರು. 

ಕಿರಿಯರ ತಂಡದ ಮ್ಯಾನೇಜರ್, ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಭಾರತದ ಮುಂದಿನ ತಲೆಮಾರಿನ ಶ್ರೇಷ್ಠ ವೇಗಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ ವೆಂಕಿ  ಕೆಲವು ವರ್ಷಗಳ ಹಿಂದೆ ಯಾವುದೇ ಸಮಜಾಯಿಷಿ ಇಲ್ಲದೆ ಕ್ರಿಕೆಟ್ ಮಂಡಳಿಯಿಂದ ಹೊರಹಾಕಲ್ಪಟ್ಟದ್ದು ಕ್ರಿಕೆಟ್ ಮಂಡಳಿಯ ಗೌರವಕ್ಕೆ ಸಾಕಷ್ಟು ಮಸಿ ಉಂಟಾಯಿತು  ಎಂದೆನಿಸಿದ್ದು ವೆಂಕಿ ಅವರು ಕ್ರಿಕೆಟ್ಟಿನಲ್ಲಿ ಗಳಿಸಿದ ಉತ್ತಮ ಸೌಹಾರ್ದತೆಗೆ ಸಾಕ್ಷಿ ಎನಿಸಿತು.  ಸದ್ಯಕ್ಕೆ ಐಪಿಎಲ್ ಪಂದ್ಯಾವಳಿಗಳಲ್ಲಿ ಅಲ್ಲಲ್ಲಿ  ವೆಂಕಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುವುದಿದೆ.


ಒಟ್ಟಿನಲ್ಲಿ ಬೌಲಿಂಗ್ ವಿಭಾಗದಲ್ಲಿ ಭಾರತ ತಂಡದಲ್ಲಿ ಹೆಸರು ಮಾಡಿದ ಗಣನೀಯ ವೇಗದ ಬೌಲರುಗಳಲ್ಲಿ ಹೆಸರುಗಳಲ್ಲಿ ವೆಂಕಟೇಶ್ ಪ್ರಸಾದ್ ಅವರ ಹೆಸರೂ ಕೂಡಾ ನೆನಪಾಗುತ್ತದೆ ಎಂಬುದು ಮಹತ್ವದ ವಿಚಾರ.  ಅವರು ಕನ್ನಡ ಚಲನಚಿತ್ರವೊಂದರಲ್ಲಿ ಸಹಾ ಅಭಿನಯಿಸಿದ್ದಾರೆ.  ವೆಂಕಟೇಶ್ ಪ್ರಸಾದ್ ಕ್ರೀಡಾರಂಗದಲ್ಲಿ ಹೆಚ್ಚಿನ ರೀತಿಯಲ್ಲಿ ಮಾರ್ಗದರ್ಶನ ನೀಡಿ ಉತ್ತಮ ಪ್ರತಿಭೆಗಳು ಉದ್ಭವಿಸಲು ನೆರವಾಗಲಿ, ಅವರ ಬದುಕು ಸುಂದರವಾಗಿರಲಿ ಎಂದು ಹುಟ್ಟು ಹಬ್ಬದ ಶುಭಾಶಯ ಕೋರೋಣ.

Tag: Venkatesh Prasad

ಕಾಮೆಂಟ್‌ಗಳಿಲ್ಲ: