ಸೋಮವಾರ, ಆಗಸ್ಟ್ 26, 2013

ಹಯಗ್ರೀವ

ಹಯಗ್ರೀವ 

ಜ್ಞಾನಾನಂದ-ಮಯಮ್ ದೇವಮ್ ನಿರ್ಮಲಸ್ಪಟಿಕಾಕೃತಿಮ್ |
ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ ||

ಎಂಬುದು ವಿದ್ಯಾರ್ಜನೆಗೆ ತೊಡಗುವವರ ನಾಲಿಗೆಯಲ್ಲಿ  ಅನಾದಿಕಾಲದಿಂದಲೂ ನಲಿಯುತ್ತಿರುವ ಪ್ರಾರ್ಥನೆ.  ಸ್ಪಟಿಕದಂತೆ ನಿರ್ಮಲ ಸ್ವರೂಪರಾದ ಶ್ರೀಹಯಗ್ರೀವರು ಸಕಲ ವಿದ್ಯೆ ಜ್ಞಾನಗಳ ಆಧಾರ. ನಮ್ಮ ಅಜ್ಞಾನಗಳನ್ನು ದೂರಮಾಡಿ ಸುಜ್ಞಾನವನ್ನು ದಯಪಾಲಿಸು ಎಂದು ಶ್ರೀಲಕ್ಷ್ಮೀಹಯಗ್ರೀವರಿಗೆ ನಮಿಸುವ ಪ್ರಾರ್ಥನೆ ಇದಾಗಿದೆ.  ಇಂದು ಹಯಗ್ರೀವ ಜಯಂತಿ.  ಈ ಜಯಂತಿಯಂದು ದಿವ್ಯಜ್ಞಾನವನ್ನು ಬೇಡುವುದರ ಜೊತೆಗೆ ಮನೆ  ಮನೆಗಳಲ್ಲಿ, ದೇಗುಲಗಳಲ್ಲಿ ಮಾಡುವ  ಅತ್ಯಂತ ರುಚಿಕರವಾದ ಹೆಸರುಕಾಳಿನಿಂದ ಮಾಡುವ  ಸಿಹಿ ತಿನಿಸಿಗೂ ಹಯಗ್ರೀವವೆಂದೇ ಹೆಸರು.  ಅಂದ ಹಾಗೆ ಹಯ ಎಂದರೆ ಕುದುರೆ.  ಹಯಗ್ರೀವ ದೇವರು ಕುದುರೆ ಮುಖ ಉಳ್ಳವನು.  ದೇಗುಲಗಳಲ್ಲಿ ಈ ಹಯಗ್ರೀವ ದೇವರ ಜೊತೆಯಲ್ಲಿ ದೇವತೆ ಲಕ್ಷ್ಮಿಯ ಜೊತೆಗಾರಿಕೆಯೂ ಕಾಣುವುದರಿಂದ ಇದು ಮಹಾವಿಷ್ಣುವಿನ ಅವತಾರ ಎಂಬುದು  ಸುಲಭವಾಗಿ ಅರಿವಿಗೆ ಬರುತ್ತದೆ.

ಪಂಚರಾತ್ರ ಆಗಮಗಳಲ್ಲಿ ದೊರಕುವ ಈ ಸ್ತೋತ್ರದಿಂದ  ಮೊದಲ್ಗೊಂಡಂತೆ, ಮಹಾಭಾರತದ ಕಥಾನಕಗಳ ವರೆಗೆ  ಹಯಗ್ರೀವ ದೇವರ ಕುರಿತಾದ ವರ್ಣನೆಗಳು, ಭಕ್ತಿ ಹಿರಿಮೆಗಳು  ಅನಾದಿಕಾಲದಿಂದ ಹರಿದು ಬಂದಿದೆ.

ಬ್ರಹ್ಮನಿಂದ ವೇದಗಳನ್ನು ಕದ್ದೊಯ್ದ ಮಧು ಮತ್ತು ಕೈಟಭರೆಂಬ ರಾಕ್ಷಸರ ಸಂಹಾರ ಮಾಡಲು ವಿಷ್ಣುವೆತ್ತಿದ ಅವತಾರವೇ ಹಯಗ್ರೀವ ರೂಪ ಎಂಬುದು ಅನಾದಿ ಕಾಲದಿಂದ ಹರಿದು ಬಂದ ಚಿಂತನೆಯಾಗಿದೆ.  ಪರಮಾತ್ಮನ ಈ   ಹಯಗ್ರೀವ ಅವತಾರ ಲೋಕಕ್ಕೆ ಸಂದಿದ್ದು  ವೇದಗಳ ಸಂರಕ್ಷಣೆಗಾಗಿ.  ಜ್ಞಾನಾರ್ಜನೆಯ ಶ್ರೇಷ್ಠತೆಯ ಪ್ರತಿಷ್ಟಾಪನೆಗಾಗಿ.  ಈ ಕತೆಯನ್ನು ಒಂದು ರೂಪಕವಾಗಿ ಪರಿಗಣಿಸುವುದಾದರೆ ಪರಿಶುದ್ಧ ಜ್ಞಾನ ಎಂಬ ಶ್ರೇಷ್ಠತೆಗೆ,  ರಾಕ್ಷಸೀತನದ ಪ್ರತೀಕವಾದ  ಅಜ್ಞಾನವೆಂಬ ಕತ್ತಲೆಯ ವಿರುದ್ಧ  ಜಯ ಎಂಬ ಸಂದೇಶ ಇಲ್ಲಿ ದೊರಕುತ್ತದೆ.

ಮಹಾವಿಷ್ಣುವಿಗೆ ಈ ಕುದುರೆಯ ಮುಖ ಬಂದ ಹಿನ್ನೆಲೆಯಾದರೂ ಏನು?  ದೇವೀ ಪುರಾಣದ ಚಿಂತನೆಗಳಲ್ಲಿ  ಹಯಗ್ರೀವ ಎಂಬುವನೊಬ್ಬ ಕಶ್ಯಪ ಪ್ರಜಾಪತಿಯ ಪುತ್ರ. ದುರ್ಗೆಯನ್ನು ಕುರಿತು ತಪಸ್ಸು ಮಾಡಿ ಕೇವಲ  ತನ್ನ ಹೆಸರೇ ಉಳ್ಳವ ಹಾಗೂ ಹಯ-ಮುಖ ಉಳ್ಳವನಿಂದ ಮಾತ್ರವೇ ತಾನು ಸಾಯಬೇಕೆಂದು ವರಪಡೆದ ಅಸುರನೀತ.   ಈ ಅಸುರನೂ ಎಲ್ಲ ಪ್ರಮುಖ ಪೌರಾಣಿಕ ಅಸುರರಂತೆ, ತನ್ನ ರಾಕ್ಷಸ ಪ್ರವೃತ್ತಿಗಳಿನುಗುಣವಾಗಿ ಋಷಿಮುನಿಗಳ ನಾಶ, ಸುರರೊಡನೆ ಕಾದಾಟ, ಇಂದ್ರನನ್ನೇ ಓಡಿಹೋಗುವಂತೆ ಮಾಡುವ ಅಸಾಮಾನ್ಯ ದುಸ್ಸಾಹಸಗಳಿಗೆ ಕುಖ್ಯಾತನಾಗಿದ್ದ.  ಈತನ ದುಷ್ಕೃತ್ಯಗಳು ಇಷ್ಟಕ್ಕೇ ನಿಲ್ಲದೆ ಈತ ಬ್ರಹ್ಮನಿಂದ ವೇದಗಳನ್ನೇ ಅಪಹರಿಸಿಕೊಂಡು ಹೊರಟುಬಿಟ್ಟ.  ಇಂಥಹ ಪರಿಸ್ಥಿತಿಗಳಲ್ಲಿ ಕಷ್ಟಬಂದಾಗ ಸಂಕಟಹರಣನಾದ ಮಹಾವಿಷ್ಣುವೇ ಗತಿ.  ಹೀಗಾಗಿ  ದೇವತೆಗಳ ಪ್ರಾರ್ಥನೆಗೆ ಓಗೊಟ್ಟು ಮಹಾವಿಷ್ಣು ಹಯಗ್ರೀವನೊಡನೆ ಯುದ್ಧಕ್ಕೆ ಹೊರಟ..

ಸುದೀರ್ಘ ಅವಧಿಯವರೆಗೆ ಅಸುರ ಹಯಗ್ರೀವನೊಡನೆ ಸೆಣಸಿದ ವಿಷ್ಣುವಿಗೆ ಆತನನ್ನು ಕೊಲ್ಲಲಾಗಲಿಲ್ಲ.  ಈ ನಿರಂತರ ಹೋರಾಟದಿಂದ ಶ್ರೀಮನ್ನಾರಾಯಣನಿಗೂ ಬಳಲಿಕೆಗಳು ಮೂಡಿಬಂತು.  ಹೀಗಾಗಿ ವೈಕುಂಠಕ್ಕೆ ಹಿಂದಿರುಗಿದ ಮಹಾವಿಷ್ಣುವು ಕೈಯಲ್ಲಿದ್ದ ಧನುಸ್ಸನ್ನೇ ದಿಂಬನ್ನಾಗಿಸಿಕೊಂಡು ಯೋಗ ನಿದ್ರೆಗೊಳಗಾದನು. ಯುದ್ದದಲ್ಲಿ ಮಹಾವಿಷ್ಣುವೂ ತನ್ನನ್ನು ಸೋಲಿಸಲಾಗದೆ ಹಿಂತೆಗೆದ  ರೀತಿ, ಅಸುರ ಹಯಗ್ರೀವನಲ್ಲಿ  ಸಾವಿನ ಭೀತಿಯನ್ನೇ  ದೂರಮಾಡಿತ್ತು.  ಹೀಗಾಗಿ ಆತ ಮತ್ತಷ್ಟು ಅಟ್ಟಹಾಸದಿಂದ ದೇವತೆಗಳ ಲೋಕಕ್ಕೇ ಅಡಿ ಇಟ್ಟ.  ಈ ಅಸುರ ಹಯಗ್ರೀವನ ಕಾಟ ತಾಳಲಾರದ ದೇವತೆಗಳು  ಮತ್ತೆ ಯೋಗನಿದ್ರೆಯಲ್ಲಿದ್ದ ಮಹಾವಿಷ್ಣುವಿನ ಬಳಿ ಓಡೋಡಿ ಬಂದರು.  ಬ್ರಹ್ಮ, ಇಂದ್ರ, ಮಹೇಶ್ವರರೂ ಬಂದರು. ಆದರೆ ಏನು ಮಾಡಿದರೂ ಏಳಲೊಲ್ಲ ಈ  ಮುರಾರಿ. ಕಡೆಗೆ ಇವರೆಲ್ಲಾ ಧನುಸ್ಸಿನ ಝೇಂಕಾರ ಮಾಡಲು ಯತ್ನಿಸಿದರು. ಆ ಕ್ಷಣದಲ್ಲಿ ನಡೆದ ಅಚಾತುರ್ಯದಿಂದ  ಆ ಧನುಸ್ಸಿನ ಕಂಬಿ, ಯೋಗನಿದ್ರೆಯಲ್ಲಿದ್ದ ವಿಷ್ಣುವಿನ ಕತ್ತನ್ನು ಕೊಯ್ದಿತು.

ವಿಷ್ಣುವಿನ ಕತ್ತೇ ಇಲ್ಲದಂತಹ ಪರಿಸ್ಥಿತಿ ದೇವತೆಗಳನ್ನು ಕಂಗಾಲಾಗಿಸಿಬಿಟ್ಟಿತು.  ಇದೀಗ ಸಹಾಯಕ್ಕೆ ಬಂದದ್ದು ಮಹಾಮಾಯೆ ದೇವಿಯಾದ ದುರ್ಗೆ. ತಾನು ಅಸುರ ಹಯಗ್ರೀವನಿಗಿತ್ತ ವರವನ್ನು ಪಾಲಿಸಲು ನಾನು ಹೂಡಿದ ಮಾಯೆಯಿದು ಎಂದು ದೇವತೆಗಳಿಗೆ ಭರವಸೆಯಿತ್ತ ತಾಯಿ ದುರ್ಗೆಯು,  ಶ್ವೇತ ಹಯದ ಮುಖವೊಂದನ್ನು  ವಿಷ್ಣುವಿನ ದೇಹಕ್ಕೆ ಅಂಟಿಸಲು ಬ್ರಹ್ಮದೇವನಿಗೆ ಆಣತಿಯಿತ್ತಳು. ತದನಂತರ ಯೋಗನಿದ್ರೆಯಿಂದ ಹೊರ ಬಂದ ವಿಷ್ಣು , ಅಸುರ ಹಯಗ್ರೀವನನ್ನು ಸಂಹರಿಸಿ  ಹಯಗ್ರೀವದೇವನಾದನು.

ಹೀಗೆ ಮೂಡಿಬಂದ ಹಯಗ್ರೀವ ಅವತಾರ  ಬರೀ ಹಿಂದೂಗಳಿಗೇ ಮಾತ್ರವಲ್ಲದೆ  ಬೌದ್ಧರಿಗೂ ಪ್ರಿಯನಾಗಿದ್ದಾನೆ ಎಂಬ ಮಾತಿದೆ. ಈತ  ಜ್ಞಾನಾರ್ಜನೆಯ ಮಾರ್ಗದಲ್ಲಿ ಬರುವ ತೊಡಕುಗಳನ್ನು ನಿವಾರಣೆ ಮಾಡುವವನು.

ವೈಷ್ಣವ ಗುರು ಶ್ರೀ ರಾಮಾನುಜರು ಒಮ್ಮೆ ತಮ್ಮ ಬ್ರಹ್ಮಸೂತ್ರ ಭಾಷ್ಯವನ್ನು ಸರಸ್ವತೀದೇವಿಯ ದೇಗುಲದಲ್ಲಿ ದೇವರ ಎದುರು ಮಂಡಿಸಿದರಂತೆ. ಇವರ ಈ ಮಹಾ ಭಾಷ್ಯವನ್ನು ಕೇಳಿ ಸಂಪ್ರೀತಗೊಂಡ ಮಾತೆ ಅದಕ್ಕೆ ಅದಕ್ಕೆ "ಶ್ರೀಭಾಷ್ಯಂ" ಎಂದು ಹೆಸರಿಸಿ, ಯತಿರಾಜರಿಗೆ ಚತುರ್ಭುಜ ಭೂಷಿತನಾದ, ಶ್ವೇತವಸ್ತ್ರಧಾರಿ, ಶ್ವೇತಾಶ್ವಮುಖಿ, ಬಿಳಿಯ ಕಮಲ ಪುಷ್ಪದಲ್ಲಿ, ಕಾಲಿಗೆ ಗೆಜ್ಜೆಕಟ್ಟಿ, ಎರಡು ಕೈಯಲ್ಲಿ ಶಂಕು, ಚಕ್ರ, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಜಪಮಾಲೆ ಧರಿಸಿ, ಪತ್ನಿ ಲಕುಮಿಯೊಡನೆ ಆಸೀನನಾದ ಹಯಗ್ರೀವ ಮೂರ್ತಿಯನ್ನಿತ್ತಳಂತೆ.

ಮತ್ತೋರ್ವ ಶ್ರೀವೈಷ್ಣವ ಆಚಾರ್ಯರಾದ ವೇದಾಂತ  ದೇಶಿಕರು  ತೀರ್ಥಯಾತ್ರೆ ಮುಗಿಸಿ ಕಂಚಿಗೆ ವಾಪಸ್ಸಾಗುತ್ತಿದ್ದರು. ರಾತ್ರಿ ಪಯಣ ಬೇಡವೆಂದು ಮಾರ್ಗ ಮಧ್ಯದಲ್ಲಿ ಶ್ರೀಮಂತ ಧಾನ್ಯ ವ್ಯಾಪಾರಿಯೋರ್ವರ ಮನೆಯಲ್ಲಿ ವಿಶ್ರಮಿಸಿದರು. ಅದೇಕೋ ಅಂದು ಅವರಿಗೆ ಹಯಗ್ರೀವನಿಗೆ ನೈವೇದ್ಯ ಮಾಡಲು ಹಣ್ಣು ಹಂಪಲು ಸಿಗಲಿಲ್ಲ. ಬರಿ ನೀರನ್ನೇ ನೈವೇದ್ಯ ಮಾಡಿದ ಅತೃಪ್ತಭಾವದಿಂದ ಮಲಗಿದರು.  ಮಧ್ಯರಾತ್ರಿಯಲ್ಲಿ ದೇಶಿಕರನ್ನು ಎಬ್ಬಿಸಿದ ಶ್ರೀಮಂತ “ನಿಮ್ಮ ಬಿಳೀ ಕುದುರೆ ನನ್ನ ಉಗ್ರಾಣದಲ್ಲಿದ್ದ ಕಡಲೆ, ಹೆಸರು, ಹುರುಳಿ ಕಾಳುಗಳನ್ನು ತಿಂದುಹಾಕುತ್ತಿದೆ.   ದಯವಿಟ್ಟು ಬಂದು ಅದನ್ನು ಕಟ್ಟಿ ಹಾಕಿ ಎಂದು ಎಬ್ಬಿಸಿದನಂತೆ. ಆಶ್ಚರ್ಯಗೊಂಡ ದೇಶಿಕರು  ತಕ್ಷಣ ಉಗ್ರಾಣಕ್ಕೆ ಹೋಗಿ ನೋಡಿದಾಗ  ಒಂದು ದಿವ್ಯ ಜ್ಯೋತಿಕಂಡು ಬಂತು.  ಕುದುರೆ  ತಿಂದ ಧಾನ್ಯದ ಚೀಲದ ತುಂಬಾ ಚಿನ್ನ ತುಂಬಿತ್ತು.  ಅಂದಿನಿಂದ ಹಯಗ್ರೀವನಿಗೆ  ಕಡಲೆ ಹುರುಳಿ ಜೊತೆಗೆ ಬೆಲ್ಲವೇ ಪ್ರಸಾದವೆನಿಸಿತು ಎಂಬ ಕಥೆ ಇದೆ..

ಉಡುಪಿಯ ಒಬ್ಬ ಅಕ್ಕಸಾಲಿಗ, ಚಿನ್ನದ ಗಣೇಶನ ಮೂರ್ತಿಯನ್ನು ಮಾಡುತ್ತಿದ್ದನಂತೆ. ಏನೇ ಮಾಡಿದರೂ ಗಣೇಶನ ಮುಖ ಆನೆಮೊಗವಾಗದೆ ಕುದುರೆ ಮುಖವಾಗುತ್ತಿತ್ತಂತೆ. ಕಡೆಗೆ ಬೇಸರಗೊಂಡ ಅಕ್ಕಸಾಲಿಗ ಆ ಮೂರ್ತಿಯನ್ನು ಕಸದಬುಟ್ಟಿಗೆ ಹಾಕಿಬಿಟ್ಟನಂತೆ.   ಅದೇ ದಿನ ರಾತ್ರಿ ಉಡುಪಿಯ ವಾದಿರಾಜಮಠವನ್ನು ಸ್ಥಾಪಿಸಿದ ವಾದಿರಾಜರ ಕನಸಿನಲ್ಲಿ  ವಿಷ್ಣು ಪ್ರತ್ಯಕ್ಷನಾಗಿ. ``ನೋಡು ವಾದಿರಾಜ, ಕುದುರೆಮುಖನಾದ ನನ್ನನ್ನು ಅಕ್ಕಸಾಲಿಗ ಧೂಳಿನಲ್ಲಿ ಬಿಸಾಕಿ ನಿರ್ಲಕ್ಷಿಸಿಬಿಟ್ಟಿದ್ದಾನೆ, ನೀನು ನನ್ನ ಈ ವಿಗ್ರಹಕ್ಕೆ ಸೂಕ್ತ ವ್ಯವಸ್ಥೆ ಒದಗಿಸು" ಎಂದು  ಆದೇಶಿಸಿದನಂತೆ.  ಭಗವಾನರ  ಮಾತಿನಂತೆ  ಈ ಹಯಗ್ರೀವ ಮೂರ್ತಿಯನ್ನು ಕಂಡ ವಾದೀರಾಜರು ಆನಂದಭರಿತರಾಗಿ ಈ ಮೂರ್ತಿಯ ಆರಾಧನೆ ಕೈಗೊಳ್ಳತೊಡಗಿದರು.  ಈ  ದೇವರು  ಮಠಕ್ಕೆ ಆಗಮಿಸಿದ  ಮೇಲೆ ವಾದಿರಾಜರು ದಿನಾ  ಕಡಲೆ, ಬೆಲ್ಲ, ತೆಂಗಿನಕಾಯಿ ಪ್ರಸಾದವನ್ನು ದೊಡ್ಡ ಹರಿವಾಣದಲ್ಲಿ ಬೆರೆಸಿ, ಭಕ್ತಿಯಿಂದ  ತಮ್ಮ ತಲೆಯ ಮೇಲಿಟ್ಟುಕೊಳ್ಳುತ್ತಿದ್ದರಂತೆ. ಸ್ವಯಂ ಹಯಗ್ರೀವ ದೇವರು ಕುದುರೆಯಾಗಿ ಬಂದು ತಮ್ಮೆರಡೂ ಕಾಲುಗಳನ್ನು ವಾದಿರಾಜರ ಭುಜದ ಮೇಲಿಟ್ಟು ಪ್ರಸಾದವನ್ನು ಸ್ವೀಕರಿಸುತ್ತಿದ್ದನಂತೆ.  ಇಂಥಹ ಚಿತ್ರಪಟಗಳನ್ನು ನಾವು ಹಲವಾರು ದೇಗುಲಗಳಲ್ಲಿ ಕಾಣುತ್ತೇವೆ..

ಹೀಗೆ ವಿವಿಧ ರೂಪಗಳಲ್ಲಿ ಹಯಗ್ರೀವ ದೇವರ ಚರಿತ್ರೆ ನಮ್ಮ ಜನಮಾನಸದಲ್ಲಿ ಭಕ್ತಿ ಕಥಾನಕಗಳ ಹೊಳೆ ಹರಿಸಿದೆ.  ಕತ್ತಲೆಂಬ ಮಾಯೆ ದಿನೇ ದಿನೇ ಹೆಚ್ಚು ಕವಿಯುತ್ತಿರುವ ಈ ವಿಶ್ವದಲ್ಲಿ ಹಯಗ್ರೀವ ದೇವರ ನಿರ್ಮಲ ಸ್ಪಟಿಕಾಕೃತಿ ಎಂಬ ದಿವ್ಯ ಜ್ಞಾನದ ಬೆಳಕು ಈ ಎಲ್ಲ ಕತ್ತಲೆಗಳನ್ನೂ ಕಳೆದು, ಈ  ಲೋಕದಲ್ಲಿನ ಬಾಳುಗಳಿಗೆ ಭವ್ಯತೆ ತುಂಬಲಿ ಎಂದು ಪ್ರಾರ್ಥಿಸೋಣ.

ನ ಹಯಗ್ರೀವಾತ್ ಪರಂ ಅಸ್ತಿ ಮಂಗಳಂ
ನ ಹಯಗ್ರೀವಾತ ಪರಂ ಆಸ್ತಿ ಪಾವನಂ
ನ ಹಯಗ್ರೀವಾತ್ ಪರಮ ಅಸ್ತಿ ಧೈವತಂ
ನ ಹಯಗ್ರೀವಂ ಪ್ರಣಿಪತ್ಯ ಸೀಧತಿ

ಎಂಬ ವಾದಿರಾಜತೀರ್ಥರ ವರ್ಣನೆ ಹೇಳುತ್ತದೆ:

ಹಯಗ್ರೀವರಿಗಿಂತ ಹಿರಿದಾದ ಮಂಗಳವಿಲ್ಲ,
ಹಯಗ್ರೀವರಿಗಿಂತ ಪಾಪಗಳಿಂದ ಮುಕ್ತಿ ಹೊಂದುವ ಪಾವನತ್ವ ಮತ್ತೊಂದಿಲ್ಲ,
ಹಯಗ್ರೀವರಿಗಿಂತ ಹಿರಿದಾದ ದೈವವಿಲ್ಲ
ಹಯಗ್ರೀವರಲ್ಲಿ ಶರಣಾದವರಿಗೆ ದುಃಖವೇ ಇಲ್ಲ.

ಶ್ರೀ ಲಕ್ಷ್ಮೀ ಹಯಗ್ರೀವ ದೇವರ ಕೃಪೆ ಸಕಲರಿಗೂ ಶುಭ ತರಲಿ.

Tag: Hayagriva, Hayagreeva

ಕಾಮೆಂಟ್‌ಗಳಿಲ್ಲ: