ಬುಧವಾರ, ಆಗಸ್ಟ್ 28, 2013

ಕೋಮಲ್ ಕುಮಾರ್

ಕೋಮಲ್ ಕುಮಾರ್

ಇಂದು ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರಲ್ಲಿ ಪ್ರಧಾನವಾಗಿ ಗಮನ ಸೆಳೆಯುತ್ತಿರುವವರು ಕೋಮಲ್ ಕುಮಾರ್.   ಕೋಮಲ್ ಕುಮಾರ್ ಹುಟ್ಟಿದ ಹಬ್ಬ ಜುಲೈ 4ರಂದು.  ನಟ ಜಗ್ಗೇಶರ ತಮ್ಮ.  ಇವರಿಬ್ಬರೂ ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರೆಂದು ಕನ್ನಡ ಚಿತ್ರರಂಗದಲ್ಲಿ ಸಾಬೀತು ಪಡಿಸಿದ್ದಾರೆ. 

ಕೋಮಲ್ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ದುಡಿಯುತ್ತಿದ್ದರೂ ಕಣ್ಣಿಗೆ ಬಿದ್ದದ್ದು ಕಳೆದ ಕೆಲವೊಂದು ವರ್ಷಗಳಲ್ಲಿ.  ದಾರಿ ಹುಡುಕಿ ಹುಡುಕಿ ತಮ್ಮ ನಕ್ಷೆಯನ್ನು ತಾವೇ ಬಿಡಿಸಿಕೊಂಡು ನಡೆಯುತ್ತಿರುವ ಧೀಮಂತನೀತ.  ಅಲ್ಲಲ್ಲಿ ಕೆಲವೊಂದು ಪಾತ್ರಗಳಲ್ಲಿ ನಟಿಸಿದ್ದು, ವಿತರಕನಾಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದು ಇವೆಲ್ಲಾ ಈತನಿಗೆ ಹಲವಾರು ತಪ್ಪಿದ ದಾರಿಗಳಲ್ಲಿ ಕೊಂಡೊಯ್ದಿದೆ.  ಚಿತ್ರರಂಗದಲ್ಲಿ ಹಣಕಾಸಿನ ನಷ್ಟ ಅಂದ್ರೆ ಅದೊಂದು ಪ್ರಪಾತ ಎಂಬುದು ಅಲ್ಲಿಯ ಜನರಿಗೆ ಮಾತ್ರ ಅರ್ಥವಾಗುವ ವಿಚಾರ.  ಹೀಗೆ ಕೋಮಲ್ ಈ ಪ್ರಪಾತಗಳಲ್ಲಿ ಬಿದ್ದು ಒದ್ದಾಡುತ್ತಾ ಸಾಫ್ಟ್ ವೇರ್ ಉದ್ಯೋಗದಲ್ಲಿರುವ ಅವರ ಪತ್ನಿ, ಪುರಾಣದಲ್ಲಿ  ಸಾವಿತ್ರಿ ಸತ್ಯವಾನನ್ನು ಸಲಹಿದಂತೆ ಈತನನ್ನು ಸಾಲ ವಿಮುಕ್ತಿ ಮಾಡಿದ್ದರಿಂದ ಇವರು  ಜೀವನದ ಪ್ರಮುಖ ವಾಹಿನಿಗೆ ಬಂದರು.  ಹಾಗಾಗಿ ಕೋಮಲ್ ತಮಗೆ  ಹೆಂಡತಿ ಒಬ್ಬರೇ ಇದ್ದರೂ ಹೆಂಡತಿ ಸಂತತಿ ಸಾವಿರವಾಗಲಿ ಎಂದು ಹೇಳುತ್ತಾ  ತಮ್ಮ ಪತ್ನಿಯ ಬಗ್ಗೆ ಕೋಮಲ ಭಾವನೆಯಲ್ಲಿ ಕೃತಜ್ಞತೆಯ ಮಾತಾಡುತ್ತಾರೆ.  ಅಂದ ಹಾಗೆ ಕೋಮಲ್ ಪ್ರಖ್ಯಾತನಾಗಿದ್ದು ಕೂಡಾ ಸಾವಿತ್ರಿಯಿಂದ.  ಅಂದರೆ, ಅವರು ತಿಪ್ಪೇಗೌಡ ಪಾತ್ರದಲ್ಲಿ ಮಿಂಚಿದ ಸತ್ಯವಾನ್ ಸಾವಿತ್ರಿಚಿತ್ರದಿಂದ.

ಕೋಮಲ್ ಹಾಗೆ ನೋಡಿದರೆ ಚಿತ್ರರಂಗಕ್ಕೆ ಬಂದು ಕಷ್ಟಪಡುವ ದೆಸೆಯಿರಲಿಲ್ಲ.  ಅವರು ಕಾನೂನು ಪದವಿಯನ್ನು ಉನ್ನತ ದರ್ಜೆಯಲ್ಲಿ ಪಾಸುಮಾಡಿದಾತ.  ತಮ್ಮನ ಬಗ್ಗೆ ಹಮ್ಮೆಯಿಂದ ಹೇಳುವ ಜಗ್ಗೇಶ್ ಹೇಳುತ್ತಾರೆ, “ಕೋಮಲ್ ನಮ್ಮ ಮನೆಯಲ್ಲಿ ಮಗುವಿನಂತೆ.  ನಮಗೆಲ್ಲರಿಗೂ ಪ್ರೀತಿಪಾತ್ರ.  ತುಂಬಾ ಬುದ್ಧಿವಂತ.  ನನ್ನಂತೆ ಓದದವನಲ್ಲಅಂತ.  ಆದರೆ ಅವರು ಚಿತ್ರರಂಗಕ್ಕೆ ಬಂದರು.  ಅವರು ಬರದಿದ್ರೆ ನಾವು ಇಂದು  ಖುಷಿಪಟ್ಟಿರುವ  ಸತ್ಯವಾನ್ ಸಾವಿತ್ರಿ’, ‘ಹುಡುಗಾಟ’, ‘ಚೆಲುವಿನ ಚಿತ್ತಾರ’, ‘ತಮಾಷೆಗಾಗಿ’, ‘ನಿನಗೋಸ್ಕರ’, ‘ಅಣ್ಣ ತಂಗಿ’, ‘ಮಿಲ್ಟ್ರಿ ಮಾವ’, ‘ಐಶ್ವರ್ಯ’, ‘ತೆನಾಲಿ ರಾಮ’, ‘ಸಂತ’, ‘ದತ್ತ’, ‘ವರ್ಷ’, ‘ಶ್ರೀ’, ಚೆಲ್ಲಾಟ’, ‘ಕತ್ತೆಗಳು ಸಾರ್, ಕತ್ತೆಗಳು’, ‘ಆಪ್ತರಕ್ಷಕ’, ‘ಮಿಸ್ಟರ್ ಗರಗಸ’, ‘’ಚಮ್ಕಾಯ್ಸಿ ಚಿಂದಿ ಉಡಾಯ್ಸಿ’, ‘ಕಳ್ ಮಂಜ’, ‘ಓಂ ಗೋವಿಂದಾಯ ನಮಃ’  ಮುಂತಾದ ಚಿತ್ರಗಳಲ್ಲಿನ ಅವರ ಹಾಸ್ಯದ ಕೊಡುಗೆಗಳನ್ನು ನಾವು ಸವಿಯಲಾಗುತ್ತಿರಲಿಲ್ಲ.   ಆ ಪಾತ್ರಗಳಲ್ಲಿ ಕೋಮಲ್ ಪರಕಾಯ ಪ್ರವೇಶ ಮಾಡಿ ಸಂಭಾಷಣೆ  ಹೇಳುವ ಪರಿ ಮಾತ್ರ ಅದ್ಭುತ.  ಅದೂ ಕೋಮಲ್ ಆ ಪಾತ್ರಗಳಲ್ಲಿ ಮೂಡಿಸುವ ಕನ್ನಡತನ, ಅವರ ಮಾತು ಮತ್ತು ಶಾರೀರಿಕ ಅಭಿನಯಗಳಲ್ಲಿನ ಕ್ಷಿಪ್ರ ಹೊಂದಾಣಿಕೆ ಇವೆಲ್ಲಾ ಖಂಡಿತವಾಗಿ ಮನೋಲ್ಲಾಸ ಉಂಟುಮಾಡುವಂತದ್ದು.  ಇಂತಹ ಸಾಮರ್ಥ್ಯ ಇರುವ ಮತ್ತೊಬ್ಬ ನಟ ಅಂದರೆ ಅವರ ಸಹೋದರ ಜಗ್ಗೇಶ್ ಮಾತ್ರ.  ಈ ಜೋಡಿ ಹಲವು ಚಿತ್ರಗಳಲ್ಲಿ ಸಖತ್ ಮೋಡಿ ಮಾಡಿದ್ದಾರೆ.  ಇನ್ನೂ ಹೆಚ್ಚಿನ ಸಾಧ್ಯತೆಗಳಿವೆ ಅನಿಸುತ್ತದೆ.  

ಕೋಮಲ್ ಅವರಿಗೆ ಇತರ ಭಾಷೆಗಳಿಂದ ಕೂಡಾ ಬೇಡಿಕೆಗಳು ಬಂದಿವೆ.  ಕನ್ನಡಿಗರಿರಾ ಹುಷಾರ್ರಪ್ಪೋ ನಮ್ಮ ಹಕ್ಕಿಗೆ ಬೇರೆ ಭಾಷೆಯ ಕೈಗಳು ಬಲೆ ಬೀಸ್ತಾ ಇವೆ!

ಒಬ್ಬ ಪೋಷಕ ನಟ, ಖಳ ನಟ, ಹಾಸ್ಯ ನಟ ಇವರೆಲ್ಲಾ ಹೀರೋ ಆಗೋದು ಎಷ್ಟು ಸರಿ ಎಂಬ ಪ್ರಶ್ನೆಗಳು ಆಗಾಗ ಕನ್ನಡದಲ್ಲಿ ಕೇಳಿ ಬಂದಿದ್ದಿದೆ.  ಕೋಮಲ್ ವಿಚಾರದಲ್ಲೂ ಅಂತಹ ಮಾತುಗಳು ಬಂದಿವೆ.  ಯಾವುದೇ ಒಬ್ಬ ವ್ಯಕ್ತಿಗೆ ತಾನಿರುವ ಪರಿಧಿಯಿಂದ ತನ್ನನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಿಕೊಳ್ಳಬೇಕು ಎಂದು ಅನಿಸುವುದು ಸಹಜ.  ಆ ಪರಿಧಿಯಿಂದ ಹೊರಗೆ ಹೋಗುವಾಗ ತಾನು ಪ್ರಪಾತದ ಸಮೀಪದಲ್ಲಿಲ್ಲವಷ್ಟೇ ಎಂಬುದರ ಬಗ್ಗೆ  ಅವರವರುಗಳು  ತಮ್ಮಷ್ಟಕ್ಕೇ ವಿಚಾರಶೀಲರಾಗಬೇಕಷ್ಟೇ.  ಇದೇ ಅಭಿಪ್ರಾಯವನ್ನು ಕೋಮಲ್ ಅವರ ಸಂದರ್ಶನಗಳಲ್ಲಿ ಸಹಾ ಓದಿದ್ದೇವೆ.  ಹಾಗಾಗಿ ಅವರಿಗೆ ತಾವು ಏನು ಮಾಡಬೇಕೆಂಬುದರ ಅರಿವಿದೆ ಎಂಬುದು ತಿಳಿಯುತ್ತದೆ.   ಒಂದು ಚಿತ್ರದಲ್ಲಿ ಎಡವಿದರೂ ಎರಡನೇ ಚಿತ್ರದಲ್ಲಿ ಯಶಸ್ಸು ಕಂಡ ಕೋಮಲ್ ಇದನ್ನು ಕೃತಿರೂಪದಲ್ಲೂ ತೋರಿದ್ದಾರೆ. ಕಳೆದ ವರ್ಷ ಅವರ  ಗೋವಿಂದಾಯ ನಮಃಯಶಸ್ಸು ಕಂಡಿದೆ ಎಂಬುದು ಕೂಡಾ ಮೆಚ್ಚಬೇಕಾದ  ಅಂಶ.     ಅಂತೆಯೇ ಈ ವರ್ಷ ಅವರ ನಂದೀಶಯಶಸ್ಸು ಕಾಣಲಿಲ್ಲ ಎಂಬ ಮಾತಿದೆ.   ಕೋಮಲ್ ಅವರು  ತಮ್ಮ ಪ್ರಿಯ ಪ್ರೇಕ್ಷಕರ ಅನಿಸಿಕೆಗಳಿಗೆ ಹೊರತಾಗದೆ ಸ್ವಯಂ ಜಾಗರೂಕತೆ, ಕಲಾತ್ಮಕ ಜವಾಬ್ಧಾರಿ ಮತ್ತು ಪ್ರೇಕ್ಷಕನ ಕುರಿತಾದ ಪ್ರೀತಿಗಳಿಂದ ಮುಂದೆ ನಡೆಯುತ್ತಾರೆ ಎಂಬುದು ಕನ್ನಡ ಸಿನಿಮಾ ಪ್ರೇಕ್ಷಕನ ನಿರೀಕ್ಷೆ.  'ಇನ್ನೂ ಒಂದು ವಿಚಾರ ಪ್ರತಿಭೆ, ಮುಖಾರವಿಂದ ಎರಡೂ ಇಲ್ಲದೆ ಇರುವ ಹೀರೋಗಳೇ ಹೆಚ್ಚಾಗುತ್ತಿರುವ ದಿನಗಳಲ್ಲಿ ಸ್ವಲ್ಪ ಚಟುವಟಿಕೆಯಿಂದ ಇದ್ದು, ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಟಿಸುವ ಕೋಮಲ್ ಅಂತಹ ಕಲಾವಿದರಿಗೆ ಹೆಚ್ಚಿನ ಪಾತ್ರ, ಹೆಚ್ಚಿನ ಯಶಸ್ಸು ಬರುವಂತಹ ಚಿತ್ರಗಳು ಯಾಕಾಗಬಾರದು!'.  ಹಾಗಂತ ಕೋಮಲ್ ಅವರೆ, ನೀವೂ ಕೂಡಾ ಕೆಟ್ಟ ಕೆಟ್ಟದಾಗಿ ನೃತ್ಯ ಮಾಡಿ, ಪ್ರೇಮ ಗೀತೆ ಹಾಡಿ, ಮೈ ಕೈ ತಿರುಗಿಸುವ ಫೈಟ್ ಮಾಡುತ್ತಾ ಪ್ರೇಕ್ಷಕರ ಅಭಿರುಚಿ ಕೆಡಿಸುವ ಮಟ್ಟಕ್ಕೆ ಹೋಗದಿರುವಂತಾಗಲಿ.

ಸದ್ಯಕ್ಕಂತೂ ಕೋಮಲ್ ಕುಮಾರ್ ಅವರ ಜನಪ್ರಿಯತೆ ಸಾರಲೋ ಎಂಬಂತೆ ಅವರು ಹಲವಾರು ಚಿತ್ರಗಳಲ್ಲಿ ನಟಿಸುತ್ತಿರುವ, ನಟಿಸಲಿರುವ ಸುದ್ಧಿಗಳು ಸಿನಿಮಾ ಪತ್ರಿಕೆಗಳಲ್ಲಿ ರಾರಾಜಿಸುತ್ತಿವೆ.  ಹೀಗಾಗಿ ಅವರಿಗೆ ಚಲನಚಿತ್ರರಂಗದಲ್ಲಿ  ಅಪಾರ ಬೇಡಿಕೆ ಇದೆ.  ಬೃಹತ್ ಬೇಡಿಕೆ, ದೈತ್ಯ ಪ್ರತಿಭೆ, ಅಪಾರ ಜನಪ್ರಿಯತೆ ಇವೆಲ್ಲವುಗಳ ಜೊತೆಗೆ ಇವರ ದೇಹದ ತೂಕವೂ ಅಪಾರವಾಗಿ ಕಾಣುತ್ತಿದೆ ಎಂಬುದು ಸ್ವಯಂ ಕೋಮಲರ ಅರಿವಿಗೂ ಬಂದಿದೆ ಎಂಬುದು ಅವರ ಅಭಿಮಾನಿಗಳ ಆಶಯ!

ಕೋಮಲ್ ವಿವಿಧಮುಖಗಳ ಪ್ರತಿಭಾವಂತ.  ಆತ ಬರಹದಲ್ಲೂ ಪರಿಣತ ಎಂಬುದು ಅವರ ನಗೆನಗಾರಿ ಬ್ಲಾಗ್ ಸ್ಪಾಟ್ ಲೇಖನಗಳಿಗೆ ಇಣುಕಿದರೆ ತಿಳಿಯುತ್ತದೆ.  ಹೀಗಾಗಿ ಅವರು ಚಿತ್ರರಂಗ ನಿರಂತರವಾಗಿ ಬರ ಅನುಭವಿಸುತ್ತಿರುವ ಚಿತ್ರಸಾಹಿತ್ಯದಂತಹ ಕ್ಷೇತ್ರದಲ್ಲಿ ಸಹಾ ಉತ್ತಮ ಕಥೆಗಳನ್ನು ರೂಪಿಸುವಂತಾಗಲಿ ಎಂದು ಹಾರೈಸೋಣ.

ಕೋಮಲ್ ಉತ್ತಮ ಚಿತ್ರಗಳಲ್ಲಿ ನಟಿಸಲಿ, ಯಶಸ್ಸು ಗಳಿಸಲಿ, ಸೋಲಿಗೊಳಗಾಗದಂತಹ ಸಾಹಸಗಳು ಅವರಿಗೆ ಕೈಗೂಡಲಿ, ಅವರ ಚಿತ್ರರಂಗ ಮತ್ತು ಕೌಟುಂಬಿಕ ಬದುಕು ಸುಂದರವಾಗಿರಲಿ, ಅವರಿಂದ ಕನ್ನಡ ಪ್ರೇಕ್ಷಕ ಕನ್ನಡ ಚಿತ್ರಗಳಿಗೆ ಬರುವ ಆಸಕ್ತಿಯನ್ನು ಹೊಂದುವಂತಾಗುವ ಸುಂದರ ಚಿತ್ರಗಳು ಮೂಡಿಬರುತ್ತಿರಲಿ  ಎಂದು ಹಾರೈಸೋಣ. 

ಹುಟ್ಟಿದ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು ಕೋಮಲ್.

Tag: Komal Kumar

ಕಾಮೆಂಟ್‌ಗಳಿಲ್ಲ: