ಭಾನುವಾರ, ಸೆಪ್ಟೆಂಬರ್ 1, 2013

ಸರೋವರದಂತೆ ಇರೋಣ

ಸರೋವರದಂತೆ ಇರೋಣ

ಕೆಲವು ವರ್ಷಗಳ ಹಿಂದೆ  ಬದುಕಿನಲ್ಲಿ ಆಗಿನ್ನೂ ಅವಕಾಶಗಳನ್ನು ಅರಸಿ ಬಳಲಿದ್ದ  ನನ್ನ ಕಿರಿಯ ಆತ್ಮೀಯರೊಬ್ಬರಿಗೆ, ಅವರಲ್ಲಿ ಉತ್ಸಾಹವನ್ನು ತುಂಬುವ ನಿಟ್ಟಿನಲ್ಲಿ  ಹೇಳುತ್ತಿದ್ದೆ. “ನಿಮ್ಮ ಬಳಿ ಇದೀಗ ಕೇವಲ ನಾಲ್ಕಾಣೆಯ ನಾಲ್ಕು ಕಾಸುಗಳು ಮಾತ್ರ ಇವೆ ಎಂದುಕೊಳ್ಳೋಣ.  ಈಗ ಅದರಲ್ಲಿರುವ ಒಂದು ಕಾಸು ಜಜ್ಜಿ ಹೋಗಿದೆ ಎಂದುಕೊಂಡರೆ, ನಿಮಗೆ ಜೀವನದಲ್ಲಿ ಶೇಕಡಾ 25ರಷ್ಟು ತಾಪತ್ರಯವಿದೆ ಎಂದಾಯಿತು.  ಆ ತಾಪತ್ರಯವನ್ನು ನೀಗುವುದು ಹೇಗೆ.  ಈಗ ನೀವು ಹತ್ತು ರೂಪಾಯಿ ಸಂಪಾದಿಸುತ್ತೀರಿ ಎಂದುಕೊಂಡರೆ, ನಿಮ್ಮ ತಾಪತ್ರಯ ಶೇಕಡಾ 2.5 ಕ್ಕಿಂತ ಕಡಿಮೆಯದಾಗಿರುತ್ತದೆ.  ನೂರು ರೂಪಾಯಿ ಸಂಪಾದಿಸಿದರೆ ತಾಪತ್ರಯವೂ 0.25 ಕ್ಕಿಂತ ಕಡಿಮೆಯಾಯಿತು,  ಸಾವಿರ ರೂಪಾಯಿ ಸಂಪಾದಿಸಿದರೆ ಆ ಕಿಲುಬು ಕಾಸು ಏನಾಯಿತು ಎಂದು ಕೂಡಾ ನಿಮ್ಮ ಗಮನಕ್ಕೆ  ಬರುವುದಿಲ್ಲ.  ಹೀಗೆ ಬದುಕಲ್ಲಿ ತಾಪತ್ರಯ ಎಂಬುದು ನಾವು ಸೃಷ್ಟಿಸಿಕೊಂಡಿರುವ ಬದುಕಿನ ವೈಶಾಲ್ಯತೆಯನ್ನು ಅವಲಂಬಿಸಿರುತ್ತದೆ”  ಎಂಬುದು ನನ್ನ ಮಾತಾಗಿತ್ತು.  ಈ ಮಾತು ಅದು ಹೇಗೆ ನನ್ನಿಂದ ಬಂತೋ ಅರಿಯೆ.  ಆದರೆ ಈ ಮಾತನ್ನು ನೆನೆದಾಗಲೆಲ್ಲಾ  ನನ್ನನ್ನೇ ಹುರಿದುಂಬಿಸಿಕೊಂಡಂತಹ ಹೃಧ್ಬಾವಗಳು  ನನ್ನಲ್ಲಿ ತುಂಬಿಕೊಂಡಿರುವುದಂತೂ ನಿಜ..

ಇದಕ್ಕೆ ಪೂರಕವೋ ಎಂಬ ಕಥೆಯೊಂದು ಸ್ವಾಮಿ ಸುಖಬೋಧಾನಂದರ ‘ಶಬ್ದಾತೀತ ವಿವೇಕ’ ಎಂಬ ಪುಸ್ತಕದಲ್ಲಿ ನನ್ನ ಗಮನಕ್ಕೆ ಬಂತು.

ಶಿಷ್ಯನೊಬ್ಬ ತಾನು ಜೀವನದಲ್ಲಿ ಜಿಗುಪ್ಸೆ ಹೊಂದಿರುವುದಾಗಿ ಹೇಳಿದ.  ಆಗ ಗುರು ಅವನನ್ನು ಬಾ ಒಂದಷ್ಟು ದೂರ ಹೋಗಿ ಬರೋಣ ಎಂದು ಕರೆದೊಯ್ದರು.  ಹಾದಿಯಲ್ಲಿ ಒಂದೆಡೆ ಒಂದು ಲೋಟನೀರಿಗೆ  ಒಂದು ಹಿಡಿ ಉಪ್ಪು ಹಾಕಿ ಇದನ್ನು ಕುಡಿ ಎಂದರು.  ಶಿಷ್ಯ ಹಾಗೆಯೇ ಮಾಡಿದ.  ಆಗ ಗುರು ಕೇಳಿದರು: “ರುಚಿ ಹೇಗಿದ?”.  ಶಿಷ್ಯ “ಬರೀ ಕಹಿ” ಎಂದು ಮುಖ ಹಿಂಡಿದ.

ಗುರು ಮುಗುಳ್ನಕ್ಕು ತಮ್ಮ ನಡಿಗೆ ಮುಂದುವರೆಸಿದರು.  ಈಗವರು ಊರಿನ ಬದಿಯಲ್ಲಿದ್ದ ಒಂದು  ಸರೋವರವನ್ನು  ತಲುಪಿದ್ದರು.  ಗುರು ಹೇಳಿದರು.  “ಈಗ ಒಂದು ಹಿಡಿ ಉಪ್ಪನ್ನು ಸರೋವರದೊಳಗೆ ಹಾಕಿ ಕದಡಿ ನೀರು ಕುಡಿ”.  ಶಿಷ್ಯ ಹಾಗೇ ಮಾಡಿದ.  “ರುಚಿ ಹೇಗಿದೆ?”  ಗುರುವರ್ಯರು ಪ್ರಶ್ನಿಸಿದರು.

“ಸಿಹಿಯಾಗಿದೆ”  ಗುರುಗಳೇ ಎಂದ ಶಿಷ್ಯ.

ಗುರುಗಳು ನುಡಿದರು.  “ಬದುಕಿನ ನೋವುಗಳೂ ಉಪ್ಪಿನಂತೆ.  ಬೇರೇನಲ್ಲ.  ಅದರ ಕಹಿ, ಅದನ್ನು ಯಾವ ಪಾತ್ರೆಯಲ್ಲಿರಿಸಿರುವೆವೋ ಅದರ  ಗಾತ್ರದ ಮೇಲೆ ಹೊಂದಿಕೊಂಡಿದೆ.   ನಮ್ಮ ಜೀವನದಲ್ಲಿರುವ  ನೋವುಗಳನ್ನು  ಇಲ್ಲದಂತೆ  ಮಾಡಲು ಸಾಧ್ಯವಿಲ್ಲ.  ಆದರೆ ನಾವು ಅದರ ಪಾತ್ರೆಯನ್ನು ಅರ್ಥಾತ್ ಜೀವನ ದರ್ಶನವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.  ಆದ್ದರಿಂದ ನಾವು ಒಂದು ಲೋಟದಂತಿರುವುದು ಬೇಡ, ಸರೋವರದಂತಾಗೋಣ”

ಬದುಕಿನ ಕಹಿಯನ್ನು ಕಡಿಮೆಮಾಡಲು ನಾವು ನಮ್ಮ ಜೀವನವನ್ನು ವಿಸ್ತರಿಸಿಕೊಳ್ಳೋಣ.  ಸೂಕ್ಷ್ಮದೃಷ್ಟಿಯಿಂದ ಬದುಕಿನ ಸಮಗ್ರಚಿತ್ರವನ್ನು ನೋಡೋಣ.  ಚೂಪಾದ ಪೆನ್ಸಿಲ್ಲು ಸ್ಪಷ್ಟರೇಖೆಗಳನ್ನು ಎಳೆಯುತ್ತದೆ.  ಅಂತೆಯೇ ಸೂಕ್ಷ್ಮತೆಯುಳ್ಳ ಮನ್ನಸ್ಸು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತದೆ.

Tag: Sarovaradante Irona

ಕಾಮೆಂಟ್‌ಗಳಿಲ್ಲ: