ಸೋಮವಾರ, ಆಗಸ್ಟ್ 26, 2013

ಸುಧಾರಾಣಿ


ಸುಧಾರಾಣಿ

ಸುಧಾರಾಣಿಕನ್ನಡ ಚಿತ್ರರಂಗದ ಉತ್ತಮ ಅಭಿನೇತ್ರಿಯರ ಸಾಲಿನಲ್ಲಿ ಕಂಗೊಳಿಸುವವರು.  ಆಗಸ್ಟ್ 14, ಸುಧಾರಾಣಿ ಅವರ ಜನ್ಮದಿನ.  ಸಣ್ಣ ವಯಸ್ಸಿನಲ್ಲೇ ನೃತ್ಯ ಕಲಿಯತೊಡಗಿ ಯಾವಾಗಲೂ ಕುಣಿಕುಣಿದು ಓಡಿಯಾಡುತ್ತಿದ್ದ ಸುಧಾರಾಣಿ ಕಿಲಾಡಿ ಕಿಟ್ಟು’, ‘ಕುಳ್ಳ ಕುಳ್ಳಿ’,ರಂಗನಾಯಕಿ, ‘ಅನುಪಮಾ’, ‘ಭಾಗ್ಯವಂತ’ ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.  ಮುಂದೆ ಕೇವಲ ಹನ್ನೆರಡು ಹದಿಮೂರರ ಹುಡುಗಿ ಸುಧಾರಾಣಿರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ  ಆನಂದ್ಚಿತ್ರಕ್ಕೆ ನಾಯಕಿಯಾದರು.

ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ ಸುಧಾರಾಣಿ, ತಮ್ಮ ಸಹಜ ನಗೆಮೊಗ, ಸುಂದರ ಅಭಿವ್ಯಕ್ತಿ ಮತ್ತು ಭಾವಾಭಿನಯಗಳಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಪ್ರತಿಭಾವಂತೆ. ಹಲವಾರು  ತಮಿಳು, ಮಲಯಾಳಂ  ಚಿತ್ರಗಳಲ್ಲೂ  ಅವರು  ನಟಿಸಿದ್ದಾರೆ.   ಇತ್ತೀಚಿನ  ವರ್ಷದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಪಿ. ಶೇಷಾದ್ರಿಯವರ ಭಾರತ್ ಸ್ಟೋರ್ಸ್ಚಿತ್ರ ಸುಧಾರಾಣಿ ಅವರ ವರ್ಣರಂಜಿತ ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ.


ಕನ್ನಡ ಚಿತ್ರರಂಗದ ಸಮಕಾಲೀನ ಯುವನಟರಾಗಿದ್ದ ಶಿವರಾಜ್ ಕುಮಾರ್, ರಮೇಶ್, ರವಿಚಂದ್ರನ್, ಕುಮಾರ್ ಬಂಗಾರಪ್ಪ, ಕುಮಾರ್ ಗೋವಿಂದು, ರಾಮ್ ಕುಮಾರ್, ಬಾಲರಾಜ್  ಅಲ್ಲದೆ ಹಿರಿಯನಟರಾದ ರಾಜ್ ಕುಮಾರ್, ವಿಷ್ಣುವರ್ಧನ, ಅಂಬರೀಶ್, ಅನಂತನಾಗ್  ಅವರೊಂದಿಗೆ ಕೂಡಾ ಅಭಿನಯಿಸಿ ಜನಮೆಚ್ಚುಗೆ ಪಡೆದ ಕೀರ್ತಿ ಸುಧಾರಾಣಿ ಅವರದ್ದು.  ಅನುರಾಗ ಸಂಗಮದಲ್ಲಿ ಕಣ್ಣಿಲ್ಲದ ಹುಡುಗಿಯಾಗಿ, ಕೆ. ಎಸ್. ನರಸಿಂಹ ಸ್ವಾಮಿಗಳ ಪ್ರಖ್ಯಾತ ಮೈಸೂರು ಮಲ್ಲಿಗೆಯ ನಗೆ ಮಲ್ಲಿಗೆಯನ್ನು  ಚೆಲ್ಲಿದ ಪ್ರೇಮದ ಹುಡುಗಿಯಾಗಿ, ಪಂಚಮ ವೇದ, ಅವನೇ ನನ್ನ ಗಂಡ, ಶ್ರೀಗಂಧ ಅಂತಹ ವಿಭಿನ್ನ ಕಥೆಗಳ ನಾಯಕಿಯಾಗಿ, ನಿನ್ನಂಥ ಅಪ್ಪ ಇಲ್ಲ ಎನ್ನುತ್ತಾ ರಾಜ್ ಅಂತಹ ಹಿರಿಯ ನಟರಿಗೆ ಸರಿಸಮಾನವಾಗಿ  ಸುಧಾರಾಣಿ ಹಾಕಿದ ಹೆಜ್ಜೆ ಮುದ ನೀಡುವಂತದ್ದು. 

‘ಪಂಚಮ ವೇದ’ ಮತ್ತು  ‘ಮೈಸೂರು  ಮಲ್ಲಿಗೆ’ ಚಿತ್ರಗಳ  ಅಭಿನಯಕ್ಕೆ  ಕರ್ನಾಟಕ  ರಾಜ್ಯ  ಪ್ರಶಸ್ತಿ ಮತ್ತು  ಫಿಲಂ ಫೇರ್ ಪ್ರಶಸ್ತಿ ಹಾಗೂ  ಇತ್ತೀಚೆಗೆ  ‘ವಾಸ್ತು ಪ್ರಕಾರ’  ಚಿತ್ರದಲ್ಲಿನ  ಪೋಷಕ  ಪಾತ್ರಕ್ಕೆ  ಸಂದ  ಫಿಲಂ ಫೇರ್  ಪ್ರಶಸ್ತಿಗಳು  ಸುಧಾರಾಣಿ ಅವರ  ವೈವಿಧ್ಯಮಯ  ಸಾಧನೆಗಳಲ್ಲಿ  ಸೇರಿವೆ. 


ಸುಧಾರಾಣಿ ಅವರ ಸುಂದರವಾದ  ನಗೆ ಅವರೊಂದಿಗೆ ನಿರಂತರವಾಗಿರಲಿ, ಇತ್ತೀಚಿನ ದಿನಗಳಲ್ಲಿ ಸೀಮಿತ  ಚಿತ್ರಗಳಲ್ಲಿ  ಕಾಣಿಸಿಕೊಳ್ಳುತ್ತಿರುವ ಅವರಿಂದ ವಿಭಿನ್ನ ರೀತಿಯ ಕಲಾವಂತಿಕೆ ಹೊರಸೂಸುವ ಪಾತ್ರಗಳು ಹೊರಹೊಮ್ಮಲಿ ಎಂದು ಆಶಿಸುತ್ತಾ ಅವರಿಗ ಹುಟ್ಟು ಹಬ್ಬದ ಶುಭ ಹಾರೈಸೋಣ.

Tag: Sudharani

ಕಾಮೆಂಟ್‌ಗಳಿಲ್ಲ: