ಶನಿವಾರ, ಆಗಸ್ಟ್ 31, 2013

ಥಾಮಸ್ ವಾಟ್ಸನ್ ಸೀನಿಯರ್

ಥಾಮಸ್ ವಾಟ್ಸನ್ ಸೀನಿಯರ್

ಥಾಮಸ್ ಜಾನ್ ವಾಟ್ಸನ್ ಎಂಬ ಹುಡುಗ ಅಮೆರಿಕದ  ಊರೊಂದರಲ್ಲಿ  ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ.  ಮೊದಲು ವಾರಕ್ಕೆ ಐದು ಹತ್ತು ಡಾಲರ್ ಗಳಿಕೆಗೆ ಅದೂ ಇದೂ ಮಾರುತ್ತಿದ್ದ ಹುಡುಗ ಪಟ್ಟಣಕ್ಕೆ ಬಂದು ಆ ಕೆಲಸದಲ್ಲಿ ತೊಡಗಿದರೆ ವಾರಕ್ಕೆ ಕಮಿಷನ್ ರೂಪದಲ್ಲಿ ಎಪ್ಪತ್ತು ಡಾಲರ್ ವರೆಗೆ ಸಂಪಾದಿಸಬಹುದು ಎಂದು ವೀಲರ್ ಮತ್ತು ವಿಲ್ಕಾಕ್ಸ್ ಸಂಸ್ಥೆಯ ಹೊಲಿಗೆ ಯಂತ್ರಗಳ ಸೇಲ್ಸ್ಮನ್ ಆಗಿ ಕೆಲಸ ಮಾಡಲಾರಂಭಿಸಿದ.  ಅದೃಷ್ಟಕ್ಕೆ ಬಂದ ಕೆಲವು ದಿನದಲ್ಲೇ ವ್ಯವಹಾರ ಕುದುರಿತು.  ತಾನು ನಿರ್ವಹಿಸಿದ ದೊಡ್ಡ ಗಾತ್ರದ ವಹಿವಾಟನ್ನು ಸಂತೋಷದಿಂದ ಆಚರಿಸಬೇಕೆಂದು ಹೋಟೆಲ್ ಒಂದಕ್ಕೆ ಬಂದು ಚೆನ್ನಾಗಿ ಕುಡಿದು ತೇಗಿದ.  ಕುಡಿದ ನಶೆ ಇಳಿದಾಗ ಆತನ ನಶೆಯ ಮಬ್ಬೆಲ್ಲವೂ ಕಳೆದು ಹೋಗುವಂತೆ ಆತನ ಕುದುರೆ, ಆತನ ಮಾರಾಟಕ್ಕೆ ಸಂಬಂಧಿತ ಕಿಟ್, ಅದರಲ್ಲಿದ್ದ ವಸ್ತುಗಳು, ಕಾಗದ ಪತ್ರಗಳು ಎಲ್ಲವೂ ನಾಪತ್ತೆಯಾಗಿದ್ದವು.  ಕೆಲಸ ಕಳೆದುಕೊಂಡದ್ದು ಮಾತ್ರವಲ್ಲದೆ ಈತನ ಈ ಅಪಕೀರ್ತಿ ಇಡೀ ಸುತ್ತಮುತ್ತಲಿನ ಊರಿಗೇ ಹಬ್ಬಿ ಆತನಿಗೆ ಯಾವ ಸಂಸ್ಥೆಯೂ ಕೆಲಸ ಕೊಡಲಿಲ್ಲ.  ಕಾಲಚಕ್ರದ ಉರುಳಿನಲ್ಲಿ ಮುಂದೆ ಈತ ವಿಶ್ವದಲ್ಲೇ ಪ್ರಖ್ಯಾತವಾದ ಐಬಿಎಮ್ ಸಂಸ್ಥೆಯ ಚುಕ್ಕಾಣಿ ಹಿಡಿಯುವಂತಾದ.  ಮಹತ್ತರವಾದದ್ದನ್ನೂ ಸಾಧಿಸಿದ.  ತಾನು ಕಲಿತ ಪಾಠವನ್ನು ಮರೆಯಲಿಲ್ಲ.   ತನ್ನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವವರು ಕೆಲಸಕ್ಕೆ ಸಂಬಂಧಪಟ್ಟಂತೆ ಇರಲಿ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಯಾರೂ ಕುಡಿತದ ಚಟಕ್ಕೆ ಬೀಳಬಾರದೆಂದು ತನ್ನ ಸಂಸ್ಥೆಯ ಪ್ರತಿಯೋರ್ವನನ್ನೂ ಮನವೊಲಿಸಲು ತನ್ನ ಜೀವನಪರ್ಯಂತ ಶ್ರಮಿಸಿದ.

ಥಾಮಸ್ ಜಾನ್ ವಾಟ್ಸನ್ ಫೆಬ್ರುವರಿ 17, 1874ರಲ್ಲಿ ಅಮೆರಿಕದ ಗ್ರಾಮವೊಂದರಲ್ಲಿ ಜನಿಸಿದ.  ಕಾಲೇಜಿನಲ್ಲಿ ಓದು ಮುಗಿಸಿ ಒಂದು ದಿನದ ಮಟ್ಟಿಗೆ ಅಧ್ಯಾಪಕನಾದವನಿಗೆ ಆ ಕೆಲಸ ರುಚಿಸಲಿಲ್ಲ.  ಹಲವು ಚಿಕ್ಕ ಪುಟ್ಟ ಸಂಸ್ಥೆಯಲ್ಲಿ ಮಾರಾಟಗಾರನಾಗಿ, ಮುಂದೆ ಮೇಲ್ಕಂಡ ಘಟನೆಯಲ್ಲಿ ಕೆಲಸ ಕಳೆದುಕೊಂಡು  ಎಲ್ಲೂ ಕೆಲಸ ಸಿಕ್ಕದೆ ತಾನೇ ಮಾಂಸದ ಅಂಗಡಿ ತೆರೆದಿದ್ದ.  ಆ ಕೆಲಸ ಲಾಭದಾಯಕವಾಗಿರಲಿಲ್ಲ.  ತನ್ನ ಅಂಗಡಿಯಲ್ಲಿ  ಸ್ವಯಂಚಾಲಿತ ಹಣಕಾಸು ಲೆಖ್ಖ ಇಡುವ ಯಂತ್ರ ಇಟ್ಟುಕೊಂಡಿದ್ದ.  ಅದನ್ನು ಮಾರಾಟ ಮಾಡುತ್ತಿದ್ದ ಎನ್.ಸಿ.ಆರ್ ಸಂಸ್ಥೆಯ ಅಧಿಕಾರಿಗೆ ಗಂಟು ಬಿದ್ದು ಆ ಸಂಸ್ಥೆಯಲ್ಲಿ ಕೆಲಸ ಸಂಪಾದಿಸಿದ.  ಮಾತ್ರವಲ್ಲ ತನ್ನ ಮಾರಾಟ ಚಾತುರ್ಯದಿಂದ ಒಂದು ದಿನ ಆ ಸಂಸ್ಥೆಗೆ ಯಾವುದೇ ಪ್ರತಿಸ್ಪರ್ಧಿಯೇ ಇಲ್ಲದಿರುವಂತೆ ಮಾಡಿಬಿಟ್ಟ.  ಈತ ವ್ಯಾಪಾರದಲ್ಲಿ ಅನುಸರಿಸಿದ ಈ ಮಾರ್ಗ ನ್ಯಾಯಸಮ್ಮತವಲ್ಲ ಎಂದು ಸರ್ಕಾರ ಶಿಕ್ಷೆ ವಿಧಿಸಹೊರಟಿತು.  ನ್ಯಾಯಾಲಯದಲ್ಲಿ ಹಲವು ಕಾಲ ಶ್ರಮಪಟ್ಟು ಬಿಡುಗಡೆಗೊಂಡ.

ಒಂದಂತೂ ನಿಜ.  ಎಲ್ಲಾ ಯಶಸ್ವೀ ಮಾರಾಟಗಾರರನ್ನೂ ಕಾನೂನು ಅಪರಾಧಿಗಳಾಗಿ ಕಾಣುತ್ತದೆ.    ಬಿಲ್ ಗೇಟ್ಸ್, ಅಂಬಾನಿ ಇವರುಗಳೆಲ್ಲಾ ನಿರಂತರವಾಗಿ ಇಂತಹ ಕಾನೂನು ಎದುರಿಸಿದವರೇ.  ಆದರೆ ವ್ಯಾಪಾರ ಅಂತಹ ಚಾಣಾಕ್ಷರನ್ನೇ ಅಪೇಕ್ಷಿಸುತ್ತದೆ.   Computing Tabulating Recording Corporation (CTR) ಎಂದು ಪ್ರಖ್ಯಾತವಾಗಿದ್ದ ಸಂಸ್ಥೆ  ಥಾಮಸ್ ಜಾನ್ ವಾಟ್ಸನ್ನನ್ನು ಹಿರಿಯ ಅಧಿಕಾರಿ ಸ್ಥಾನಕ್ಕೆ ಆಹ್ವಾನಿಸಿತು.  ಮುಂದೆ ಈತ ಈ ಸಂಸ್ಥೆಯ ಹೆಸರನ್ನು ಈಗಿನ ಪ್ರಖ್ಯಾತ ಹೆಸರಾದ ‘Internation Business Machines’ ಅಥವ IBM ಎಂದು ಬದಲಿಸಿದ.  ಈತ ಐಬಿಎಮ್ ಸೇರಿದಾಗ ಅದು 1300 ಕೆಲಸಗಾರರ  ಒಂದು ಸಂಸ್ಥೆಯಾಗಿ 9 ಮಿಲಿಯನ್ ಡಾಲರ್ ವಹಿವಾಟು ನಡೆಸುತ್ತಿತ್ತು.  1956ರಲ್ಲಿ ವಾಟ್ಸನ್ ಅಲ್ಲಿಂದ ಹೊರಬಂದಾಗ  ಐಬಿಎಮ್ ಸಂಸ್ಥೆ 72500 ಕೆಲಸಗಾರರ 897 ಮಿಲಿಯನ್ ಡಾಲರ್ ವಾರ್ಷಿಕ ವಹಿವಾಟಿನ ಬೃಹತ್  ಸಂಸ್ಥೆಯಾಗಿ ಬೆಳೆದಿತ್ತು.  ಆ ಕಾಲದಲ್ಲಿ ಅಮೆರಿಕದಲ್ಲಿ ಉಪಯೋಗಿಸಲ್ಪಡುತ್ತಿದ್ದ ಗಣಕ ಯಂತ್ರಗಳಲ್ಲಿ ಶೇಕಡಾ 90ರಷ್ಟು ಗಣಕ ಯಂತ್ರಗಳು ಐಬಿಎಮ್ ಸಂಸ್ಥೆಯ ಸೃಷ್ಟಿಯಾಗಿದ್ದವು.  ಐಬಿಎಮ್ ಸಂಸ್ಥೆ ತಯಾರಿಸುತ್ತಿದ್ದ ಗಣಕ ಯಂತ್ರಗಳು ಮಿಲಿಟರಿ ಉಪಯೋಗಕ್ಕೆ ಅತ್ಯಂತ ಅವಶ್ಯಕವಿದ್ದ ಹಿನ್ನಲೆಯಲ್ಲಿ ತನ್ನ ದೇಶದ ಹಿತಕ್ಕಾಗಿ ವಾಟ್ಸನ್ ತಾನು ಸರ್ಕಾರಕ್ಕೆ ಮಾರಾಟ ಮಾಡುವ ಗಣಕ ಯಂತ್ರಗಳ ಮೇಲೆ ಕೇವಲ ಶೇಕಡಾ ಒಂದರಷ್ಟು ಮಾತ್ರ ಲಾಭ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದ್ದ.

1937ರ ವರ್ಷದಲ್ಲಿ ಥಾಮಸ್ ವಾಟ್ಸನ್ ಅಂತರಾಷ್ಟ್ರೀಯ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಅಧ್ಯಕ್ಷನಾಗಿದ್ದ.  ‘ಅಂತರರಾಷ್ಟ್ರೀಯ ವ್ಯಾಪಾರದಿಂದ ಅಂತರರಾಷ್ಟ್ರೀಯ ಶಾಂತಿಸೌಹಾರ್ಧ’ ಎಂಬುದು ಆತನ ಘೋಷಣೆಯಾಗಿತ್ತು.  ತನ್ನ ಊರಾದ  ಬಿಂಗ್ ಹ್ಯಾಮ್  ಟೌನ್ ಪ್ರದೇಶದಲ್ಲಿ ಅದೇ ಹೆಸರಿನ ಸುಸಜ್ಜಿತ ವಿಶ್ವವಿದ್ಯಾಲಯ ಮೂಡಿಸಿದ.  ಅಧ್ಯಕ್ಷ ರೂಸ್ವೆಲ್ಟ್ ಅವರ ಜೊತೆ ಈತನ ಸಂಪರ್ಕ ಎಷ್ಟಿತ್ತೆಂದರೆ ‘ಥಾಮಸ್ ವಾಟ್ಸನ್ ರೂಸ್ವೆಲ್ಟರ ಅಘೋಷಿತ ರಾಯಭಾರಿ’ ಎಂದು ಪ್ರಸಿದ್ಧನಾಗುವಷ್ಟು.  ಯುದ್ಧಕಾಲದಲ್ಲಿ ಐಬಿಎಮ್ ಸಂಸ್ಥೆಯ ಅಂಗಸಂಸ್ಥೆಯಾದ ಡೆಹೋಮಾಗ್ ಎಂಬ ಸಂಸ್ಥೆ ಜರ್ಮನಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.  ಯುದ್ಧಕಾಲದಲ್ಲಿ ಈ ಸಂಸ್ಥೆಯ ಮೂಲಕ ಒದಗಿದ ತಂತ್ರಜ್ಞಾನಕ್ಕೆ ಪುರಸ್ಕಾರವಾಗಿ ಆಗಿನ ಜರ್ಮನಿ ಸರ್ಕಾರ ಥಾಮಸ್ ಜಾನ್ ವಾಟ್ಸನ್ಗೆ ಪ್ರತಿಷ್ಠಿತ ಈಗಲ್ ಸ್ಟಾರ್ ಗೌರವ ಪ್ರಕಟಿಸಿತು.  ಥಾಮಸ್ ವಾಟ್ಸನ್ ಅದನ್ನು ತಿರಸ್ಕರಿಸಿ ಹಿಟ್ಲರ್ ಕೆಂಗಣ್ಣಿಗೆ ಗುರಿಯಾದ.

‘Think’ ಎಂಬುದು ಥಾಮಸ್ ಜೆ. ವಾಟ್ಸನ್ ತನ್ನ ಸಹೋದ್ಯೋಗಿಗಳಿಗೆ ನೀಡಿದ  ಕರೆ.  ನಾವು ನಮ್ಮ ಭಾಷೆಯಲ್ಲಿ ನೋಡಿದಾಗ, ಆಲೋಚನೆ, ಯೋಚನೆ, ಯೋಜನೆ ಹೀಗೆ ಸೃಜನೆಗೆ ಮೂಲಭೂತವಾದ ಅನೇಕ ಪ್ರೇರಣೆಗಳು ಈ ಪದದಲ್ಲಿ ಅಡಗಿವೆ.  ಥಾಮಸ್ ಜೆ ವಾಟ್ಸನ್ ಬದುಕು ಮತ್ತು ಸಾಧನೆಗಳನ್ನು ಅವಲೋಕಿಸಿದಾಗ ಇವೆಲ್ಲವುಗಳೂ ಸಮಗ್ರ ತಾಳಿದ ಒಂದು ಸ್ವರೂಪ ಕಣ್ಣಿಗೆ ಕಟ್ಟುತ್ತದೆ.  ‘THINK’ ಎಂಬುದು ಐಬಿಎಮ್ ಸಂಸ್ಥೆಯ  ನೋಂದಾಯಿತ ಟ್ರೇಡ್ ಮಾರ್ಕ್ ಕೂಡಾ ಹೌದು.  ಹೀಗಾಗಿ ಮುಂದೆ ಐಬಿಎಮ್ ಸಂಸ್ಥೆಯಿಂದ ಬಿಡುಗಡೆಯಾದ ‘ಐಬಿಎಮ್ ಥಿಂಕ್ ಪ್ಯಾಡ್’ ಅಂತಹ ಪ್ರಸಿದ್ಧ ವಸ್ತುಗಳಲ್ಲಿ ಈ ಹೆಸರು ಕೂಡಾ ಅಡಕವಾಗಿದೆ.  ಐಬಿಎಮ್ ಮಧ್ಯ ಅಮೆರಿಕಾ ನೌಕರರ ಒಕ್ಕೂಟವು ತನ್ನ ಬ್ಯಾಂಕಿಗೆ ‘ಥಿಂಕ್ ಮ್ಯೂಚುಯಲ್ ಬ್ಯಾಂಕ್’ ಎಂಬ ಹೆಸರನ್ನಿಟ್ಟಿದೆ.

ಐಬಿಎಮ್ ಸಂಸ್ಥೆಯನ್ನು ಎಲ್ಲ ರೀತಿಯಲ್ಲೂ ಮುಂಚೂಣಿಯಲ್ಲಿರಿಸಿದ ಥಾಮಸ್ ಜಾನ್ ವಾಟ್ಸನ್ 1956ರಲ್ಲಿ ತನ್ನ ಮರಣಕ್ಕೆ ಒಂದು ತಿಂಗಳ ಮುಂಚೆ ಆ ಸಂಸ್ಥೆಯ ಅಧಿಕಾರವನ್ನು ತನ್ನ ಹಿರಿಯಮಗ ಥಾಮಸ್ ಜೆ ವಾಟ್ಸನ್ ಜೂನಿಯರ್ಗೆ ವಹಿಸಿಕೊಟ್ಟು ಹೊರಬಂದ.  ಜೂನ್ 19, 1956ರಲ್ಲಿ ಥಾಮಸ್ ಜೆ ವಾಟ್ಸನ್ ಸೀನಿಯರ್ ತನ್ನ ಎಂಭತ್ತೆರಡನೆಯ ವಯಸ್ಸಿನಲ್ಲಿ ನಿಧನನಾದ.

Tag: Thomas Watson Senior

ಕಾಮೆಂಟ್‌ಗಳಿಲ್ಲ: