ಗುರುವಾರ, ಆಗಸ್ಟ್ 29, 2013

ಡಾ. ದೇವಿ ಪ್ರಸಾದ್ ಶೆಟ್ಟಿ

ಡಾ. ದೇವಿ ಪ್ರಸಾದ್ ಶೆಟ್ಟಿ

ನಮ್ಮ ಹೃದಯಗಳನ್ನು ಕುರಿತು ಜ್ಞಾನಿಸುವಾಗಲೆಲ್ಲಾ ಅಲ್ಲೊಬ್ಬ ಹೃದಯ ತಜ್ಞರು ಆಗಾಗ ನೆನಪಾಗುತ್ತಾರೆ.  ಅನೇಕ ದೈಹಿಕವಾಗಿ ದುರ್ಬಲಗೊಂಡ ಹೃದಯಗಳಿಗೆ ಹೆಚ್ಚಿನ ಹಣ ನೀಡಬೇಕಾದ ಹಾರ್ಟ್ ಅಟ್ಯಾಕ್ ಆಗದಂತೆ ಜಾಗ್ರತೆ ವಹಿಸಿ, ಉತ್ತಮ ರೀತಿಯ ಶಸ್ತ್ರಚಿಕಿತ್ಸೆ ದೊರಕಿಸಿಕೊಡುವುದರ ಮೂಲಕ ಹೃದಯವಂತಿಕೆ ಮೆರೆದ ವಿಶಾಲ ಹೃದಯಿ ಡಾ. ದೇವಿ ಪ್ರಸಾದ್ ಶೆಟ್ಟಿ.  ಹೀಗಾಗಿ ಅವರ ಶುಶ್ರೂಷಾಧಾಮ ಜನಗಳ ಪಾಲಿಗೆ ‘ನಾರಾಯಣ ಹೃದಯಾಲಯ’ವೇ ಆಗಿದೆ.

ದೇವಿ ಶೆಟ್ಟಿಯವರು ಮೇ 8, 1953ರಂದು ಜನಿಸಿದರು.  ದಕ್ಷಿಣ ಕನ್ನಡದ ಕಿನ್ನಿಗೋಳಿ ಅವರ ಊರು.  ಒಂಬತ್ತು ಮಕ್ಕಳ ದೊಡ್ಡ ಕುಟುಂಬದಲ್ಲಿ ದೇವಿ ಶೆಟ್ಟಿ ಎಂಟನೆಯವರು. ದುರ್ಗಾಪರಮೇಶ್ವರಿ ದೇವಿಯ ಭಕ್ತರಾದ ಅವರ ತಾಯಿ,  ದುರ್ಗಾ ಪರಮೇಶ್ವರಿ ದೇವಿಯ ಕಾರುಣ್ಯ  ತಮ್ಮ ಕರುಳಕುಡಿಯ ಮೇಲಿರಲೆಂದು ಮಗನಿಗೆ ‘ದೇವಿ ಪ್ರಸಾದ’ ಎಂದು ಹೆಸರಿಟ್ಟರು. ಬಾಲ್ಯದಲ್ಲಿ ದೇವಿ ಪ್ರಸಾದರು  ಓದಿನಲ್ಲಿ ತುಂಬಾ ಜಾಣ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಅದರಲ್ಲೂ ಗಣಿತವೆಂದರೆ ಅವರಿಗೆ ಕಬ್ಬಿಣದ ಕಡಲೆಯಾಗಿತ್ತಂತೆ. ಶಾಲೆಯಲ್ಲಿನ ಡ್ರಾಯಿಂಗ್ ಟೀಚರ್ ಒಬ್ಬರಿಗೆ ದೇವಿ ಶೆಟ್ಟಿ ಬಗ್ಗೆ ವಿಶೇಷ ಅಕ್ಕರೆ. ಅವರು ಈ ಹುಡುಗನ ಮೇಲಿನ ಪ್ರೀತಿಯಿಂದ ತಮ್ಮ ಮನೆಯಲ್ಲಿ ಗಣಿತ ಹೇಳಿಕೊಡುತ್ತಿದ್ದರಂತೆ.

ಚಿಕ್ಕಂದಿನಲ್ಲಿ ದೇವಿ ಪ್ರಸಾದರ ಬದುಕಿನಲ್ಲಿ ಹೀಗೊಂದು ಘಟನೆ ನಡೆಯಿತು. ಅದನ್ನು ದೇವಿ ಶೆಟ್ಟಿ ಹೀಗೆ ಬಣ್ಣಿಸುತ್ತಾರೆ.    “ಅದೊಂದು ಶನಿವಾರ ಮಧ್ಯಾಹ್ನ ಎನ್ನುವುದು ನನ್ನ ನೆನಪು. ಬೆಂಕಿಪೊಟ್ಟಣಗಳು ಹಾಗೂ ಕಡ್ಡಿಗಳಿಂದ ನಾನು ಕಾರು ತಯಾರಿಸಲು ಪ್ರಯತ್ನಿಸುತ್ತಿದ್ದೆ. ಹಳ್ಳಿಯಲ್ಲಿನ ಉಳಿದ ಮಕ್ಕಳೂ ಇಂಥ ಆಟವನ್ನೇ ಆಡುತ್ತಿದ್ದರು. ಬಾಂಬೆಯಲ್ಲಿದ್ದ ದೂರದ ಸಂಬಂಧಿಯೊಬ್ಬರೊಂದಿಗೆ ನನ್ನ ತಾಯಿ ಮಾತನಾಡುತ್ತಿದ್ದರು. ತಾನು ನೀಡಿದ ಚಿಕಿತ್ಸೆಗೆ ಯಾವುದೇ ಶುಲ್ಕ ಪಡೆಯದೆ, ತನ್ನ ಮಗುವನ್ನು ಉಳಿಸಿಕೊಟ್ಟ ಸರ್ಜನ್ ಒಬ್ಬರ ಬಗ್ಗೆ ಆಕೆ ನನ್ನ ತಾಯಿಗೆ ಹೇಳುತ್ತಿದ್ದಳು. ಅಂಥ ಅದ್ಭುತ ವ್ಯಕ್ತಿಗೆ ಜನ್ಮ ಕೊಟ್ಟ ತಾಯಿಯ ಉದರ ತಣ್ಣಗಿರಲೆಂದು ನನ್ನ ತಾಯಿ ಹಾರೈಸಿದ್ದು ನನ್ನ ಕಿವಿಗೆ ಬಿತ್ತು. ಅಂಥ ವ್ಯಕ್ತಿಗಳ ಕಾರಣದಿಂದಲೇ ಈ ಜಗತ್ತು ಇನ್ನೂ ಸುಂದರವಾಗಿದೆ ಎಂದು ಅಮ್ಮ ಹೇಳುತ್ತಿದ್ದಳು. ಆ ಸಮಯದಲ್ಲೇ ನನ್ನ ಬದುಕಿನ ಅರ್ಥ ಏನೆನ್ನುವುದನ್ನು ಕಂಡುಕೊಂಡೆ.”

ಮತ್ತೊಂದು ಘಟನೆ. 1967ನೇ ಇಸವಿ. ದಕ್ಷಿಣ ಆಫ್ರಿಕಾದ ಕ್ರಿಸ್ಟಿಯಾನ್ ಬರ್ನಾರ್ಡ್ ಮೊದಲ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಮಾಡಿದ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆ ಸುದ್ದಿಯನ್ನು ಶಾಲೆಯಲ್ಲಿ ಶಿಕ್ಷಕರೊಬ್ಬರು ಓದಿದಾಗ ಬಾಲಕ ದೇವಿ ಪ್ರಸಾದನಿಗೆ ಮೈ ಜುಂ ಎಂದಿತು.  ವೈದ್ಯನಾದರೆ, ಬರ್ನಾರ್ಡ್ ಅವರಂತೆ ಹಾರ್ಟ್ ಸರ್ಜನ್ ಆಗಬೇಕು ಎಂದು ಹುಡುಗನಿಗೆ ಅನ್ನಿಸಿತು.

1969ರಲ್ಲಿ ಮಂಗಳೂರಿನ ಸೇಂಟ್ ಅಲೋಯಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ದೇವಿ ಶೆಟ್ಟಿ, ವೈದ್ಯಕೀಯ ಶಿಕ್ಷಣಕ್ಕಾಗಿ ಮಂಗಳೂರಿನ ಕಸ್ತೂರ್‌ಬಾ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಯಾದರು. ವೈದ್ಯಕೀಯ ಪದವಿ ಹಾಗೂ ಜನರಲ್ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದದ್ದು ಅಲ್ಲಿಯೇ. ಹೃದಯ ತಜ್ಞನಾಗಬೇಕು ಎನ್ನುವ ಆಸೆ ಬಾಲ್ಯದಲ್ಲೇ ಸ್ಪಷ್ಟವಾಗಿತ್ತು. ಆದರೆ ಹೃದಯ ಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತದಲ್ಲಿ ಕಲಿಕೆಯ ಅವಕಾಶಗಳು ಸೀಮಿತವಾಗಿದ್ದವು. ಆ ಕಾರಣದಿಂದಾಗಿ ದೇವಿ ಶೆಟ್ಟಿ ಅವರ ಗಮನ ಇಂಗ್ಲೆಂಡ್‌ನತ್ತ ಹೊರಳಿತು.

ಸೋದರನೊಬ್ಬ ಅಲ್ಲಿ ನೆಲೆಸಿದ್ದುದು ಕೂಡ ಅವರ ಆಸೆಗೆ ಪೂರಕವಾಗಿತ್ತು. ವೆಸ್ಟ್ ಮಿಡ್‌ಲ್ಯಾಂಡ್ಸ್ ಕಾರ್ಡಿಯೊ-ಥೊರಾಸಿಕ್ ರೊಟೇಷನ್ ಕಾರ್ಯಕ್ರಮದಡಿ ವಾಲ್ಸ್‌ಗ್ರೇವ್ ಆಸ್ಪತ್ರೆ ಹಾಗೂ ಬರ್ಮಿಂಗ್‌ಹ್ಯಾಂ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಸರ್ಜನ್ ಆಗಿ ತರಬೇತಿ ಪಡೆದರು. ಆನಂತರ ಲಂಡನ್‌ನ ಗೈಸ್ ಹಾಸ್ಪಿಟಲ್‌ನ ಕಾರ್ಡಿಯೊ ಥೊರಾಸಿಕ್ ವಿಭಾಗದಲ್ಲಿ ಸೇರಿಕೊಂಡು (1983-89) ಹೃದಯದ ಪದರಗಳ ಬಿಡಿಸತೊಡಗಿದರು.

‘ಗೈಸ್ ಹಾಸ್ಪಿಟಲ್’ನಲ್ಲಿ ದೇವಿ ಶೆಟ್ಟಿ ಕಾರ್ಯಕ್ಷಮತೆ ಎಷ್ಟು ಜನಪ್ರಿಯವಾಗಿತ್ತೆಂದರೆ, ಸಹೋದ್ಯೋಗಿ ಗೆಳೆಯರು ಅವರನ್ನು ‘ಆಪರೇಟಿಂಗ್ ಮೆನ್’ ಎಂದು ಕರೆಯುತ್ತಿದ್ದರು. ಅಲ್ಲವರು ವಾರದಲ್ಲಿ ಏಳು ದಿನವೂ ಮುಂಜಾನೆಯಿಂದ ರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರು. ಒಮ್ಮೆ ದೇವಿ ಶೆಟ್ಟಿ ತಮ್ಮ ಪತ್ನಿಯನ್ನು ಆಸ್ಪತ್ರೆಯಲ್ಲಿನ ಹಿರಿಯ ತಜ್ಞರಿಗೆ ಪರಿಚಯಿಸಿದರು. ಅವರು ದೇವಿ ಶೆಟ್ಟಿ ಅವರ ಪತ್ನಿಗೆ ಹೇಳಿದ್ದು: ‘ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ!’.

ದೇವಿ ಶೆಟ್ಟಿ ಅವರು ಲಂಡನ್‌ನಲ್ಲಿಯೇ ಉಳಿಯಬಹುದಿತ್ತು. ಪರಿಣಿತ ವೈದ್ಯರಿಗೆ ಅಲ್ಲಿ ವಿಪರೀತ ಬೇಡಿಕೆಯಿದೆ. ಆದರೆ, ‘ನಾನು ಭಾರತಕ್ಕೆ ಸೇರಿದವನು’ ಎನ್ನುವ ಪ್ರಜ್ಞೆ ದೇವಿ ಶೆಟ್ಟಿ ಅವರ ಮನಸ್ಸಿನಲ್ಲಿ ಸದಾ ಜಾಗೃತವಾಗಿತ್ತು. ಸ್ವದೇಶದತ್ತ ಅವರ ಮನಸ್ಸು ತುಡಿಯುತ್ತಿತ್ತು. ಲಂಡನ್‌ನಿಂದ ಭಾರತಕ್ಕೆ ಹಿಂತಿರುಗಿದ ಮೇಲೆಯೂ ಅವರು ‘ಆಪರೇಟಿಂಗ್ ಮೆನ್‌’ನಂತೆಯೇ ಕೆಲಸ ಮಾಡಿದ್ದು ವಿಶೇಷ.

ಭಾರತಕ್ಕೆ ಮರಳಿದ ದೇವಿ ಶೆಟ್ಟಿ ಅವರ ವೃತ್ತಿ ಆರಂಭಗೊಂಡಿದ್ದು ಕೋಲ್ಕತ್ತಾದಲ್ಲಿ. ಅಲ್ಲಿನ ಅನುಭವ ಅವರಿಗೆ ಬೇರೆಯದೇ ಲೋಕವೊಂದನ್ನು ಪರಿಚಯಿಸಿತು. ಅವರಿಗೆ ಕಾಣಿಸಿದ್ದು ದಾರುಣ ಬಡತನದ ಕಟು ವಾಸ್ತವ. ಜನಸಾಮಾನ್ಯರ ಕಷ್ಟ ಅವರಿಗೆ ಅರ್ಥವಾದದ್ದು ಆಗಲೇ.

‘ಪ್ರತಿ ಹಳ್ಳಿಯಲ್ಲೂ ಒಬ್ಬ ಶ್ರಿಮಂತ ವ್ಯಕ್ತಿ ಇರುತ್ತಾನೆ. ಆತನದ್ದು ದೊಡ್ಡ ಮನೆ. ಊರಿನಲ್ಲಿ ಉಳಿದವರದ್ದೆಲ್ಲ ಸಣ್ಣ ಸಣ್ಣ ಮನೆಗಳು. ಆದರೆ ಶ್ರಿಮಂತನಾಗಲೀ ಬಡವರಾಗಲೀ ತಿನ್ನುವುದು ಒಂದೇ ಬಗೆಯ ಆಹಾರವನ್ನು; ಪ್ರಮಾಣದಲ್ಲಿ ಕೊಂಚ ಹೆಚ್ಚುಕಡಿಮೆ ಇರಬಹುದು ಅಷ್ಟೇ. ಜಾನಪದ ಹಾಡು-ಕುಣಿತಗಳ ಪ್ರದರ್ಶನದ ಸಂದರ್ಭದಲ್ಲಿ ಶ್ರಿಮಂತ ಕುರ್ಚಿಯ ಮೇಲೆ ಕೂರುತ್ತಿದ್ದ, ಬಡವ ನೆಲದ ಮೇಲೆ ಕೂರುತ್ತಿದ್ದ. ಆದರೆ ಇಬ್ಬರಿಗೂ ದೊರೆಯುತ್ತಿದ್ದ ಮನರಂಜನೆ ಒಂದೇ ಬಗೆಯದಾಗಿತ್ತು. ದೊಡ್ಡ ಕಾಯಿಲೆಯೊಂದು ಬಂದಾಗ ಬಡವ ಮತ್ತು ಬಲ್ಲಿದ ಇಬ್ಬರೂ ಸಾಯುತ್ತಿದ್ದರು. ಅವರ ಬದುಕು ಹಾಗೂ ಸಾವಿನಲ್ಲಿ ಒಂದೇ ರೀತಿಯ ಸಮಾನತೆಯಿತ್ತು. ಆದರೆ ಈಗ? ಕೆಲವೇ ಸಾವಿರ ರೂಪಾಯಿಗಳು ತಮ್ಮಲ್ಲಿ ಇಲ್ಲದ ಕಾರಣ ಎಷ್ಟೊಂದು ಮಂದಿ ತಮ್ಮ ಇಷ್ಟಪಾತ್ರರನ್ನು ಕಳಕೊಂಡಿಲ್ಲ?’. ಇಂಥ ಅಸಹಾಯಕರಿಗೆ ನೆರವಾಗುವುದರಲ್ಲಿ ದೇವಿ ಶೆಟ್ಟಿ ತಮ್ಮ ಬದುಕಿನ ಸಾರ್ಥಕತೆ ಕಾಣುತ್ತಿದ್ದಾರೆ.

ಲಂಡನ್‌ನಿಂದ 1989ರಲ್ಲಿ ಭಾರತಕ್ಕೆ ಹಿಂತಿರುಗಿದ ದೇವಿಶೆಟ್ಟಿ, ವಿದೇಶದಲ್ಲಿನ ತಮ್ಮ ಅನುಭವವನ್ನು ಇಲ್ಲಿ ಸಂಸ್ಥೆಯೊಂದರ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು. ಇದರ ಫಲವಾಗಿ ರೂಪುಗೊಂಡಿದ್ದು ಕೋಲ್ಕತ್ತಾದ ಬಿ. ಎಂ. ಬಿರ್ಲಾ ಆಸ್ಪತ್ರೆ. ಭಾರತದಲ್ಲಿ ನವಜಾತ ಶಿಶುವಿನ (ಒಂಬತ್ತು ದಿನಗಳ ಹಸುಳೆ) ಮೊದಲ ಶಸ್ತ್ರಚಿಕಿತ್ಸೆಯನ್ನು ಡಾ. ದೇವಿ ಶೆಟ್ಟಿ ನೆರವೇರಿಸಿದ್ದು ಇಲ್ಲಿಯೇ. ಕೋಲ್ಕತ್ತಾದಲ್ಲಿದ್ದಾಗ ಮದರ್ ತೆರೇಸಾ ಅವರಿಗೆ ಚಿಕಿತ್ಸೆ ನೀಡಲು ಅವಕಾಶ ದೊರಕಿತ್ತು.  ದೇವಿ ಶೆಟ್ಟಿ ಅವರ ಅನುಭವ ಬುತ್ತಿಯಲ್ಲಿನ ಸವಿನೆನಪುಗಳಲ್ಲೊಂದು. ತೆರೇಸಾ ಕೊನೆಯುಸಿರೆಳೆದದ್ದು ದೇವಿ ಶೆಟ್ಟಿ ಅವರ ಕಾಳಜಿಯ ಕಣ್ಣಳತೆಯಲ್ಲೇ.

ಕೋಲ್ಕತ್ತಾದಲ್ಲಿದ್ದಾಗಲೇ ಬಡಜನರಿಗಾಗಿ ಹೃದ್ರೋಗ ಆಸ್ಪತ್ರೆಯೊಂದನ್ನು ರೂಪಿಸುವ ಹಂಬಲ ದೇವಿ ಶೆಟ್ಟಿ ಅವರಲ್ಲಿ ಮೊಳೆತಿತ್ತು. ಅವರ ಮನಸ್ಸು ಬೆಂಗಳೂರಿನತ್ತ ಹೊರಳಿತು. ಬೆಂಗಳೂರಿಗೆ ಬಂದಮೇಲೆ ಅವರು ಮೊದಲಿಗೆ ಕೆಲಸ ಮಾಡಿದ್ದು ಮಣಿಪಾಲ್ ಸಮೂಹಕ್ಕಾಗಿ. ದೇವಿ ಶೆಟ್ಟಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದ್ರೋಗ ಕೇಂದ್ರ ಆರಂಭವಾಯಿತು. ಆದರೆ, ಸ್ವಂತವಾಗಿ ಏನನ್ನಾದರೂ ಸಾಧಿಸಬೇಕು ಎನ್ನುವ ಹಂಬಲ ಅವರೊಳಗೆ ಮನೆಮಾಡಿತ್ತು. ಈ ಹಂಬಲ ನನಸಾಗಿ ಹೊರಹೊಮ್ಮಿದ್ದು  ‘ನಾರಾಯಣ ಹೃದಯಾಲಯ’ದ ರೂಪದಲ್ಲಿ. ಮಣಿಪಾಲ್ ಹಾರ್ಟ್ ಫೌಂಡೇಶನ್‌ನಿಂದ ಹೊರಬಂದ ಅವರು ಬೆಂಗಳೂರಿನ ಹೊಸೂರು ರಸ್ತೆಯ ಬೊಮ್ಮಸಂದ್ರದ ಸಮೀಪ ‘ನಾರಾಯಣ ಹೃದಯಾಲಯ’ ಎನ್ನುವ ಬೃಹತ್ ಆಸ್ಪತ್ರೆ ನಿರ್ಮಿಸಿದರು.

2001ರಲ್ಲಿ ಆರಂಭವಾದ ‘ನಾರಾಯಣ ಹೃದಯಾಲಯ’ ಪಾಕಿಸ್ತಾನದ ಹಸುಳೆ ನೂರ್ ಫಾತಿಮಾಳ ಶಸ್ತ್ರಚಿಕಿತ್ಸೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಪ್ರಸ್ತುತ ವಿಶ್ವದ ಅತ್ಯುತ್ತಮ ಹೃದಯ ಚಿಕಿತ್ಸಾ ಕೇಂದ್ರಗಳಲ್ಲೊಂದಾಗಿ ಅದು ಪ್ರಸಿದ್ಧಿ ಹೊಂದಿದೆ.

ಡಾ|| ದೇವಿ ಶೆಟ್ಟರು ಕೇವಲ ಉತ್ತಮ ಹೃದಯ ಶಸ್ತ್ರ ಚಿಕಿತ್ಸಕರಷ್ಟೇ ಅಲ್ಲ. ಒಬ್ಬ ಮಾನವತಾವಾದಿ, ಸಂವೇದನ ಶೀಲರೂ ಹೌದು. ಹಲವು ಪ್ರಥಮಗಳ ಕೀರ್ತಿಗೆ ಕೂಡ ಶೆಟ್ಟರು ಭಾಜನರಾಗಿದ್ದಾರೆ. ಹೃದಯ ಶಸ್ತ್ರ ಚಿಕಿತ್ಸೆಯಲ್ಲೇ ಅಪರೂಪದ ತಂತ್ರವಾದ ನಿಯೋ ನಾಟಲ್ ಓಪನ್ ಹಾರ್ಟ್ ಸರ್ಜರಿಯನ್ನು ಭಾರತದಲ್ಲಿ ಪ್ರಥಮವಾಗಿ ಮಾಡಿದವರು ಡಾ|| ದೇವಿ ಪ್ರಸಾದ್ ಶೆಟ್ಟಿ ಅವರು.  ಮೈಕ್ರೋಚಿಪ್ ಕ್ಯಾಮೆರಾವನ್ನು ಉಪಯೋಗಿಸಿಕೊಂಡು ತೆರೆದ ಹೃದಯ ಶಸ್ತ್ರ ಚಿಕಿತ್ಸೆಯ ಮೂಲಕ ಹೃದಯದ ರಂದ್ರಕ್ಕೆ ತೇಪೆ ಹಾಕುವ ಶಸ್ತ್ರ ಚಿಕಿತ್ಸೆ ಮಾಡಿದ ಪೈಕಿ ಪ್ರಪಂಚದಲ್ಲೇ ಇವರು ಮೊದಲಿಗರು. ಸಾಮಾನ್ಯವಾಗಿ ತೊಡೆಯ ಭಾಗದಿಂದ ರಕ್ತನಾಳವನ್ನು ತೆಗೆದುಕೊಂಡು ಬೈಪಾಸ್ ಸರ್ಜರಿಯನ್ನು ಮಾಡುತ್ತಾರೆ. ಆದರೆ ಮೊದಲ ಬಾರಿಗೆ ಕೃತಕ ಹೃದಯದ ಯಂತ್ರವನ್ನಿಟ್ಟುಕೊಂಡು ಹೊಟ್ಟೆಯ ಭಾಗದ ರಕ್ತನಾಳವನ್ನೇ ಉಪಯೋಗಿಸಿ ಬೈಪಾಸ್ ಶಸ್ತ್ರ ಚಿಕಿತ್ಸೆಮಾಡಿ ಯಶಕಂಡವರು ಶೆಟ್ಟರು. ಇಡೀ ಏಷ್ಯಾ ಖಂಡದಲ್ಲೇ ಪ್ರಥಮ ಬಾರಿಗೆ ಕಾರ್ಡಿಯೋ ಮಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಿದವರೂ ಇವರೇ.

ಡಾ. ದೇವಿ ಶೆಟ್ಟಿ ಅವರ ‘ನಾರಾಯಣ ಹೃದಯಾಲಯ’ ಬೆಂಗಳೂರು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಮೈಸೂರಿಗೂ ಆಗಮಿಸಿದೆ.  ದೇಶದ ವಿವಿದೆಡೆಗಳಲ್ಲಿ ಉನ್ನತ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ನಿರ್ಮಿಸಲು ತೊಡಗಿದೆ.

ಇಂದಿನ ದಿನಗಳಲ್ಲಿ ಹಿಂದೆಂದೂ ಕಾಣದಂತಹ ದೊಡ್ಡ ದೊಡ್ಡ ಆಸ್ಪತ್ರೆಗಳು ನಿರ್ಮಾಣವಾಗುತ್ತಿದೆ ಎಂಬುದೇನೋ ನಿಜ.  ಆದರೆ ಆ ಆಸ್ಪತ್ರೆಗಳಿಗೆ ಕಾಲಿಡುವ ಜನಕ್ಕೆ ತಮ್ಮ ಆರೋಗ್ಯ ಉತ್ತಮವಾಗುವ ನಿರೀಕ್ಷೆಗಿಂತ ತಮ್ಮನ್ನು ಭಿಕಾರಿ ಮಾಡಿಬಿಡುವ ಬಿಲ್ಲುಗಳ ಬಗ್ಗೆಯೇ ಹೆಚ್ಚು ದಿಗಿಲು.  ಈ ನಿಟ್ಟಿನಲ್ಲಿ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ದೇವಿ ಶೆಟ್ಟಿಯವರ ಚಿಂತನೆಯಾದ ಬಡವರ ಪಾಲಿನ ವಿಮೆ ‘ಯಶಸ್ವಿನಿ ಆರೋಗ್ಯ ಯೋಜನೆ’ ಪ್ರಸಿದ್ದಿಯಾಗಿದೆ.  ಈ ಚಿಂತನೆ ದೇಶದೆಲ್ಲೆಡೆ ಹಬ್ಬಿ ಆಡಳಿತ ಮತ್ತು ಜನಸ್ತೋಮದಲ್ಲಿ ಒಂದಷ್ಟು ಜಾಗೃತಿ ಮೂಡಿಸಿರುವುದು ಆರೋಗ್ಯ ಕ್ಷೇತ್ರದಲ್ಲಿ ಒಂದು ಮಹತ್ವದ ಬದಲಾವಣೆ ಎನಿಸಿಕೊಂಡಿದೆ.

ಡಾ. ದೇವಿ ಪ್ರಸಾದ್ ಶೆಟ್ಟಿ ಅವರನ್ನು ಹಲವಾರು ಶ್ರೇಷ್ಠ ಗೌರವಗಳು ಅರಸಿ ಬಂದಿವೆ.  ಕಳೆದ ವರ್ಷಾಂತ್ಯದಲ್ಲಿ ಅವರಿಗೆ ಸಿ ಎನ್ ಎನ್ ಐ ಬಿ ಎನ್ ವಾಹಿನಿಯ ಶ್ರೇಷ್ಠ ಭಾರತೀಯರೆಂಬ ಗೌರವ ಸಂದಿತು.   2011ರ ವರ್ಷದಲ್ಲಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಸಂದಿತು.  2012ರ ವರ್ಷದಲ್ಲಿ ಅವರು ಭಾರತ ಸರ್ಕಾರದ ‘ಪದ್ಮವಿಭೂಷಣ’ ಗೌರವವನ್ನು ಸ್ವೀಕರಿಸಿದ್ದಾರೆ.  ಇವೆಲ್ಲಕ್ಕೂ ಮಿಗಿಲಾಗಿ ಅನೇಕ ಹೃದಯಗಳನ್ನು ಶ್ರದ್ಧೆ, ಪ್ರೀತಿ, ಸಹಾನುಭೂತಿಗಳಿಂದ  ಸರಿಪಡಿಸುವ ಕಾಯಕದ ಮೂಲಕ ಅವರು ಭಾರತೀಯ ಹೃದಯಗಳನ್ನು ನಿರಂತರವಾಗಿ ಮಿಡಿಯುತ್ತಿದ್ದಾರೆ.

ಈ ಹೃದಯವಂತ ಹೃದಯತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಹೃದಯಪೂರ್ವಕವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

Tag: Dr. Devi Prasad Shetty, Dr. Devi Shetty, Dr. Deviprasad Shetty

ಕಾಮೆಂಟ್‌ಗಳಿಲ್ಲ: