ಸೋಮವಾರ, ಸೆಪ್ಟೆಂಬರ್ 2, 2013

ಮಳವಳ್ಳಿ ಸುಂದರಮ್ಮ

ಮಳವಳ್ಳಿ ಸುಂದರಮ್ಮ

ವೃತ್ತಿ ರಂಗಭೂಮಿಗೆ ಹೇಳಿ ಮಾಡಿಸಿದಂತಹ ಶಾರೀರ, ಶರೀರ ಎರಡೂ ಕೂಡಿ ಅಪ್ರತಿಮ ಕಲಾವಿದೆ ಎನಿಸಿದ್ದ ಮಳವಳ್ಳಿ ಸುಂದರಮ್ಮನವರು ಸೆಪ್ಟೆಂಬರ್ 12, 1905ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಪಿಟೀಲು ವಿದ್ವಾಂಸರಾಗಿದ್ದ ಮಳವಳ್ಳಿ ಸುಬ್ಬಣ್ಣನವರು. ತಾಯಿ ಲಕ್ಷ್ಮೀದೇವಮ್ಮನವರು. ಸುಂದರಮ್ಮನವರು ತಂದೆಯಿಂದಲೇ ಹಲವು ವರ್ಷ ಕರ್ನಾಟಕ ಸಂಗೀತದ ಪಾಠ ಕಲಿತರು.

ಏಳನೆಯ ವಯಸ್ಸಿಗೇ ರಂಗಭೂಮಿ ಪ್ರವೇಶಿಸಿದ ಸುಂದರಮ್ಮನವರು ತಮ್ಮ ತಂದೆಯವರು ನಡೆಸಲು ಪ್ರಾರಂಭಿಸಿದ ಶ್ರೀಕೃಷ್ಣ ವಿಲಾಸ ನಾಟಕ ಸಭಾ ಮಂಡಲಿಯ ನಾಟಕಗಳಾದ ಪಾಂಡುವಿಜಯ, ಸದಾರಮೆ, ಗುಲೇಬಕಾವಲಿ, ಚೋರಕಥೆ, ಸಾರಂಗಧರ, ವಸಂತ ಮಿತ್ರವಿಜಯ, ಮುಂತಾದ ನಾಟಕಗಳಲ್ಲಿ ಬಾಲನಟಿ ಪಾತ್ರ ನಿರ್ವಹಿಸಿದರು. ವಿರಾಟಪರ್ವದ ದ್ರೌಪದಿ, ಸುಭದ್ರಾ ಪರಿಣಯದ ಸುಭದ್ರೆ ಮುಂತಾದ ಪಾತ್ರಗಳು ಅವರಿಗೆ  ಬಹು ಹೆಸರು ತಂದು ಕೊಟ್ಟ ನಾಟಕಗಳು. ಕೊಟ್ಟೂರಪ್ಪ, ಜಿ. ನಾಗೇಶರಾಯರು, ಬಿ.ಎ. ಗುರುಮೂರ್ತಪ್ಪ, ಚಿಕ್ಕಬಸವರಾಜು ಮುಂತಾದ ನಟ ಭಯಂಕರರೊಡನೆ ನಾಯಕಿಯಾಗಿ ಗಳಿಸಿದ ಖ್ಯಾತಿ ಸುಂದರಮ್ಮನವರದು.

ಮಳವಳ್ಳಿ ಸುಂದರಮ್ಮನವರು ಮೈಸೂರು ವಾಸುದೇವಾಚಾರ್ಯರು ಮತ್ತು ಪಿಟೀಲು ತಾಯಪ್ಪನವರು ಮುಂತಾದ ಮಹಾನ್ ಸಂಗೀತ ದಿಗ್ಗಜರ ಬಳಿ  ಸಂಗೀತಾಭ್ಯಾಸ ನಡೆಸಿದರು.  ಅವರು ತಮ್ಮ 18ನೆ ವಯಸ್ಸಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಮುಂದೆ ನಾಟಕದಲ್ಲಿ ಪಾತ್ರವಹಿಸಿದ್ದಲ್ಲದೆ ಬೇಸಿಗೆ ಅರಮನೆಯಲ್ಲಿ ಸಂಗೀತ ಕಚೇರಿನಡೆಸಿಕೊಟ್ಟರು. ಮದರಾಸಿನ ಓಡಿಯನ್‌ ಕಂಪನಿಯಿಂದ ಅವರ ರಂಗ ಗೀತೆಗಳ ಧ್ವನಿಮುದ್ರಿಕೆ ಹೊರಬಂತು.  ಮಾರ್ಕಂಡೇಯ ಚಲನಚಿತ್ರದಲ್ಲಿ ಪಾತ್ರಧಾರಿಯಾಗಿದ್ದರು.  ಇದಲ್ಲದೆ  ಚಾಮುಂಡೇಶ್ವರಿ ನಾಟಕಸಭಾ ಆಡಳಿತ ವಹಿಸಿಕೊಂಡು ರಾಜ್ಯದ ಹಲವಾರು ಕಡೆ ಅನೇಕ ನಾಟಕಗಳ ಪ್ರದರ್ಶನ ಇವೆಲ್ಲಾ ಸುಂದರಮ್ಮನವರ ಬಹುಮುಖ ಸಾಧನೆಗಳು. 

ಸುಂದರಮ್ಮನವರು ತಾವು ಸಂಪಾದಿಸಿದ ಅಂದಿನ ಕಾಲದ ಸಹಸ್ರಾರು ರೂಪಾಯಿಗಳನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ಮಾಡಿದರು. 1962ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಸುಂದರಮ್ಮನವರಿಗೆ  ಪ್ರಶಸ್ತಿ ಸಂದಿತು.  ಅವರ ಜೀವನ ಚರಿತ್ರೆ ಅಭಿನಯ ಶಾರದೆ ಪ್ರಕಟಗೊಂಡಿದೆ.

ಮಳವಳ್ಳಿ ಸುಂದರಮ್ಮನವರು ಅಕ್ಟೋಬರ್ 11, 1995ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ: ಕಣಜ

Tag: Malavalli Sundramma

ಕಾಮೆಂಟ್‌ಗಳಿಲ್ಲ: