ಭಾನುವಾರ, ಸೆಪ್ಟೆಂಬರ್ 1, 2013

ಮನೋ ಮೂರ್ತಿ

ಮನೋ ಮೂರ್ತಿ

ನಮ್ಮ ಮನೋಹರ ಮೂರ್ತಿ ಅವರು  ಹುಟ್ಟಿದ ದಿನ ಜನವರಿ 13.  ಮನೋಹರ ಮೂರ್ತಿ ಎಂಬುದಕ್ಕಿಂತ ಅವರು ಜನಪ್ರಿಯರಾಗಿರುವ ಮನೋ ಮೂರ್ತಿ ಹೆಸರಿಗೇ ಬರೋಣ.

ಬಹಳಷ್ಟು ಜನರಿಗೆ ಏನು ಮಾಡಲಿಕ್ಕೂ ಸಮಯವಿರೋಲ್ಲ.  ಆದರೆ ಕೆಲವರಿಗೆ ಸಮಯ ತಾನಾಗೆ ನಿರ್ಮಾಣವಾಗುತ್ತೆ.  ಅಮೆರಿಕದಲ್ಲಿ  ಸಾಫ್ಟ್ವೇರ್ ಇಂಜಿನಿಯರ್ ಆಗಿ, ಅನೇಕ ಐ.ಟಿ. ಕ್ಷೇತ್ರದ ಸಂಸ್ಥೆಗಳ ಸಂಸ್ಥಾಪಕರೂ ಆದ  ಮನೋ ಮೂರ್ತಿ ಅವರಿಗೆ ಯಾವಾಗ ನೋಡಿದ್ರೂ  ಕಂಪ್ಯೂಟರ್ ಜೊತೇನೆ ಮಾತಾಡೋದೇ ಜೀವನವಾಗಿ ಹೋಯ್ತಲ್ಲಜೊತೆಗೆ ಇನ್ನೇನಾದ್ರೂ ಮಾಡೋಣ ಅನ್ನಿಸಿತು.  ಚಿಕ್ಕವಯಸ್ಸಿನಲ್ಲಿ ಅಪ್ಪ ಅಮ್ಮ ಕರ್ನಾಟಕ ಸಂಗೀತೋತ್ಸವಗಳಿಗೆ ಕರೆದುಕೊಂಡು ಹೋಗುತ್ತಿದ್ದ ಮರುಕಳಿಕೆ ಮೂಡಿತು.  ಜೊತೆಗೆ ಬೆಂಗಳೂರಿನಲ್ಲಿ ಯುವಿಸಿಇನಲ್ಲಿ ಓದುವಾಗ ಗೆಳೆಯರೊಡನೆ ಪಾಪ್ ಬ್ಯಾಂಡ್ ಮಾಡಿಕೊಂಡದ್ದು, ಕನ್ನಡ ಹಾಡುಗಳಿಗೆ ಕೂಡ ಪಾಪ್ ಸಂಗೀತ ಸಂಯೋಜನೆ ಮಾಡಿದ್ದು, ಇವೆಲ್ಲ ಮತ್ತೊಮ್ಮೆ ನೆನಪಿಗೆ ಬಂತು.  ಹೀಗೆ ಹೆಚ್ಚಿನ ಸಂಗೀತಕ್ಕೆ ಕೈ ಹಾಕಿಯೇ ಬಿಟ್ಟರು.  ಸಂಗೀತದಲ್ಲಿ ಅವರ ವ್ಯಾಪ್ತಿ ಉಸ್ತಾದ್ ಜಾಕಿರ್ ಹುಸೇನ್ ಅವರ ಬಳಿ ಹಿಂದೂಸ್ಥಾನಿ ತಬಲಾ ಕಲಿಯೋದರಿಂದ ಹಿಡಿದು ಅಮೇರಿಕಾದ ಶಾಲೆಗಳಲ್ಲಿ ಪಾಪ್ ಸಂಗೀತ ಕಲಿಯೋದರ ತನಕ ಹರಡಿಕೊಂಡಿದೆ. ಕೆಲವು ವರ್ಷಗಳ ಹಿಂದೆ ನಿಮಗೆ ನಿಮ್ಮ ಕೆಲಸದ ಮಧ್ಯದಲ್ಲಿ ಇದಕ್ಕೆಲ್ಲ ಹೇಗೆ ಬಿಡುವು ಅಂದರೆ, “ನಾನು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುವಾಗ ದಿನಕ್ಕೆ ಮೂರು ನಾಲ್ಕು ಗಂಟೆ ಮಾತ್ರ ನಿದ್ದೆ ಮಾಡ್ತೇನೆಎಂದು ಹೇಳಿದ್ದರು.  ಸಾಧನೆಯ ಹಿಂದೆ ಹೊರಟವರಿಗೆ ಸಮಯ ತಾನೇ ತಾನಾಗಿ ವಿಸ್ತಾರವಾಗುತ್ತಾ ಹೋಗುತ್ತದೇನೋ!

ಅವರು ಸಂಗೀತ ಕ್ಷೇತ್ರಕ್ಕೆ ಬಂದಿದ್ದು ನಾಗತಿಹಳ್ಳಿಯವರ ಅಮೇರಿಕ ಅಮೇರಿಕಮೂಲಕ. ನೂರು ಜನ್ಮಕು ನೂರಾರು ಜನ್ಮಕು’, ‘ಆ ಆ ಆ ಅಮೇರಿಕ’, ‘ಹೇಗಿದೆ ನಂಭಾಷೆ ಹೇಗಿದೆ ನಂದೇಶ’, ‘ಯಾವ ಮೋಹನ ಮುರಳಿ ಕರೆಯಿತು’, ‘ಬಾನಲ್ಲಿ ಓಡೋ ಮೇಘಹೀಗೆ ಆ ಚಿತ್ರದಲ್ಲಿ ಎಲ್ಲೆಡೆ ಆಕ್ರಮಿಸಿಕೊಂಡು ಇಡೀ ಚಿತ್ರವನ್ನೇ ನಾಗತಿಹಳ್ಳಿಯವರ ಜೊತೆ ಕೂಡಿಕೊಂಡು ಒಂದು ದೃಶ್ಯಕಾವ್ಯವನ್ನಾಗಿ ಮೂಡಿಸಿಬಿಟ್ಟರು ಮೂರ್ತಿ.

ಮುಂದೆ ಅವರು ಚಿತ್ರ ಸಂಗೀತ ನೀಡುತ್ತಾ ಬಂದ  ಸಂಖ್ಯೆ ಬಹಳ ಕಡಿಮೆಯದು.  ಹಿಂದೆ ಎರಡು ವರ್ಷಕ್ಕೆ ಒಮ್ಮೆ ಒಂದು ಚಿತ್ರ, ನಂತರದ ದಿನಗಳಲ್ಲಿ ವರ್ಷಕ್ಕೆ ಒಂದು ಚಿತ್ರ ಹೀಗೆ ನಿಧಾನವಾಗಿ ತಮ್ಮ ಚಿತ್ರಗಳ ಸಂಖ್ಯೆಯನ್ನು ಒಂದೊಂದಾಗಿ ಪೋಣಿಸಿದವರು  ಮನೋ ಮೂರ್ತಿ.

ಮನೋ ಮೂರ್ತಿಯವರು ಸಂಗೀತವನ್ನು ಹೃದಯ ಸಂವೇದನೆಯ ಆಪ್ತತೆಯಲ್ಲಿ ಕಂಡಿರುವುದನ್ನು ಅವರ ಮುಂಗಾರು ಮಳೆಚಿತ್ರದ ಹಾಡುಗಳು ನಿವೇದಿಸುತ್ತವೆ.  ಯೋಗೇಶ್ ಭಟ್ಟರ ಜೊತೆ ಅವರು ಮಾಡಿರುವ ಈ ಚಿತ್ರದ ಕೆಲಸ  ಸ್ಮರಣೀಯವಾದುದು. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಮನೋ ಮೂರ್ತಿ, ನಾಗತಿ ಹಳ್ಳಿ ಇಂತಹ ಜನ ಒಟ್ಟಿಗೆ ಸೇರಿದರೆ ಎಷ್ಟು ಉತ್ತಮ ಸೃಜನೆ ಸಾಧ್ಯ ಎಂಬುದು ಇಂತಲ್ಲಿ ವೇದ್ಯವಾಗುತ್ತದೆ.

ನಾಗತಿಹಳ್ಳಿ ಚಂದ್ರಶೇಖರ ಒಂದು ಸಂದರ್ಶನದಲ್ಲಿ ಹೇಳಿದ್ದರು, “ನೂರು ಜನ್ಮಕು ಹಾಡಿಗೆ ಮನೋ ಮೂರ್ತಿಯವರು ಐವತ್ತು ವಿಭಿನ್ನ ಟ್ಯೂನ್ಗಳನ್ನು ತಂದಿದ್ದರುಅಂತ.  ಅಷ್ಟೊಂದು ವೈವಿಧ್ಯತೆ ಮೂರ್ತಿಯವರ ಬತ್ತಳಿಕೆಯಲ್ಲಿದೆ.  ಅಷ್ಟೇ ಅಲ್ಲ, ಯಾವುದೇ ರೀತಿಯ ಮಿಂಚಿನ ಓಟದ ಗತಿಯ  ಹಾಡುಗಳಿಗೂ ತಾವು ಸೂಕ್ತರು ಎಂಬುದನ್ನು ಕೂಡ ನನ್ನ ಪ್ರೀತಿಯ ಹುಡುಗಿಚಿತ್ರದಲ್ಲಿನ  ಕಾರ್ ಕಾರ್ ಕಾರ್’; ‘ಅಮೇರಿಕ ಅಮೇರಿಕಚಿತ್ರದ ಆ ಆ ಆ  ಅಮೇರಿಕ’; ‘ಪಂಚರಂಗಿಚಿತ್ರದ ಲೈಫು ಇಷ್ಟೇನೆಮುಂತಾದ ಹಾಡುಗಳಲ್ಲಿ ತೋರಿದ್ದಾರೆ. 


ಮೇಲೆ ಹೆಸರಿದ ಹಲವು ಚಿತ್ರಗಳಲ್ಲದೆ  ಪ್ರೇಮ ಪ್ರೀತಿ ಪ್ರಣಯ’, ‘ಅಮೃತಧಾರೆ’,  ‘ಮನಸಾರೆ’, ‘ಮಿಲನ’, ‘ಮಾತಾಡು ಮಾತಾಡು ಮಲ್ಲಿಗೆ’, ‘ಜೋಕ್ ಫಾಲ್ಸ್’, ‘ಮೊಗ್ಗಿನ ಮನಸ್ಸು’, ‘ಗೆಳೆಯ’, ‘ಚೆಲುವಿನ ಚಿತ್ತಾರ’, ‘ಒಲವೇ ಜೀವನ ಲೆಖ್ಖಾಚಾರ’, ‘ಮಿಸ್ಟರ್ ಡೂಪ್ಲಿಕೇಟ್’, ‘ಪಾರಿಜಾತ’, ‘ಅತಿ ಅಪೂರ್ವ’, ‘ಅಲೆ’, ‘ಮಳೆ ಹುಡುಗಿ’, ‘ಮಾದೇಶ’, ‘ಬೊಂಬಾಟ್’, ‘ಹಾಗೇ ಸುಮ್ನೆ’, ‘ಮಳೆ ಬರಲಿ ಮಂಜು ಇರಲಿ’, ‘ನೂರೂ ಜನ್ಮಕೂ’, ‘ಅತಿ ಅಪರೂಪ’, ‘ಅಭಿನೆತ್ರಿ’, ‘ಮಸ್ತ್ ಮಹಬ್ಬತ್’     ಹೀಗೆ ಅವರ ಸಿನಿಮಾ ಸಂಗೀತದ ಪಯಣ ವೈಶಿಷ್ಟ್ಯಪೂರ್ಣವಾಗಿ ನಡೆದಿದೆ. ಇತರ ಭಾಷಾ ಚಿತ್ರಗಳಿಗೆಸೋನು ನಿಗಮ್   ಆಲ್ಬಂಗಳಿಗೆ  ಹೀಗೆ ಅವರ ಸೇವೆ ಬೇರೆಡೆ ಕೂಡಾ ಸಂದಿದೆ.  ಅವರ ಪ್ರತಿಭೆಯನ್ನು ಸದುಪಯೋಗಕ್ಕೆ ತರುವ ಇನ್ನೂ ಉತ್ತಮ ಅವಕಾಶಗಳು ಅವರಿಗೆ ಬರಲಿ.    ಅವರ ಪಯಣ ಸುಗಮವಾಗಿರಲಿ.  ಅವರಿಂದ ಸೃಜನೆಯನ್ನು ಮೂಡಿಸುವ ಕೈಗಳು ಒಂದಾಗಲಿ. ಕನ್ನಡಿಗರು ಉತ್ತಮ ಸಂಗೀತ ಕೇಳುವಂತಾಗಲಿ ಎಂದು ಆಶಿಸಿ ಮನೋ ಮೂರ್ತಿಗಳಿಗೆ ಶುಭ ಹೇಳೋಣ.

Tag: Veena Balachander

ಕಾಮೆಂಟ್‌ಗಳಿಲ್ಲ: