ಮಂಗಳವಾರ, ಸೆಪ್ಟೆಂಬರ್ 3, 2013

ಮಹಾನ್ ಛಾಯಾಗ್ರಾಹಕ ಎಸ್ ರಾಮಚಂದ್ರ

ಮಹಾನ್ ಛಾಯಾಗ್ರಾಹಕ ಎಸ್ ರಾಮಚಂದ್ರ 

ಚಿತ್ರರಂಗದ ಅಪ್ರತಿಮ ಛಾಯಾಗ್ರಾಹಕರು ಎಸ್. ರಾಮಚಂದ್ರ ಐತಾಳ್.  ಮೂಲತಃ ಕುಂದಾಪುರದವರಾದ ರಾಮಚಂದ್ರರು ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನಿಂದ ಮೂಡಿಬಂದ  ಪ್ರತಿಭೆ.  ಎಪ್ಪತ್ತರ ದಶಕದಿಂದ ಪ್ರಾರಂಭಗೊಂಡಂತೆ ಕನ್ನಡ ಚಿತ್ರರಂಗವು ರಾಷ್ಟೀಯ ಮಟ್ಟದ ಪ್ರಶಸ್ತಿಗಳಲ್ಲಿ ನಿರಂತರವಾಗಿ ಹೆಸರು ಮಾಡುತ್ತಾ ಇನ್ನಿತರ ಶಕ್ತಿಶಾಲಿ ಭಾಷಾ ಚಿತ್ರರಂಗಗಳಿಗೆ ಸವಾಲೊಡ್ಡುತ್ತಾ ನಡೆದಿದೆ.  ಚಿತ್ರಗಳಿಗೆ ಪ್ರಶಸ್ತಿ ಬರುವುದು ಚಿತ್ರಗಳಲ್ಲಿನ ಕಥಾಶಕ್ತಿಯಿಂದ, ನಿರ್ದೇಶಕನ ಜಾಣ್ಮೆಯಿಂದ, ಕಲಾವಿದರ ಅಭಿನಯ  ಕೌಶಲ್ಯದಿಂದ ಇವೆಲ್ಲವೂ ನಿಜ.  ಆದರೆ ಅವಕ್ಕೆಲ್ಲಾ ಸಿನೀಮಯ ಸಂವಹನ ಸೃಷ್ಟಿಯಾಗುವುದು ಒಬ್ಬ ಛಾಯಾಗ್ರಾಹಕರು  ಸೃಷ್ಟಿಸುವ ದೃಶ್ಯರೂಪಕವಾದ ಸಂಪರ್ಕಾಭಿವ್ಯಕ್ತಿಯಿಂದ ಎಂಬುದು ಮಾತ್ರ ಅಷ್ಟೇ ನಿಜ.  ಇಂತಹ  ಮಹಾನ್ ಛಾಯಾಗ್ರಾಹಕರನ್ನು ಭಾರತೀಯ ಚಲನಚಿತ್ರರಂಗ ಕಂಡಿದೆ.  ಆ ಸಾಲಿನಲ್ಲಿ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆ ಎಸ್. ರಾಮಚಂದ್ರ ಐತಾಳರು.

ಕನ್ನಡ ಚಿತ್ರರಂಗ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸಿಂಹಪಾಲು ಚಿತ್ರಗಳಲ್ಲಿ ಎಸ್ ರಾಮಚಂದ್ರರ ಛಾಯಾಗ್ರಹಣವಿದೆ ಎಂಬುದು ನಮ್ಮ ನೆನಪನ್ನು ತುಂಬುವ ಮಹತ್ವದ ಅಂಶ.  ರಾಮಚಂದ್ರ ಅವರು ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಅಪೂರ್ವ ಚಿತ್ರ ಗಿರೀಶ್ ಕಾಸರವಳ್ಳಿಯವರ  'ಘಟಶ್ರಾದ್ಧ'. ಇದು ಅವರಿಗೆ ಭಾರೀ ಹೆಸರು ತಂದು ಕೊಟ್ಟಿತ್ತು. ಸತ್ಯಜಿತ್ ರೇ ಅವರ ಸಿನಿಮಾಗಳ ಖಾಯಂ ಛಾಯಾಗ್ರಾಹಕ ಸುಬ್ರತೋ ಮಿತ್ರಾ ಅವರಿಂದ ಪ್ರಭಾವಿತರಾಗಿದ್ದ ರಾಮಚಂದ್ರರದ್ದು ನೈಜ ಶೈಲಿ.

1971ರ ಸಮಯಕ್ಕೆ ಬಂದ ‘ವಂಶವೃಕ್ಷ’ ಚಿತ್ರದಲ್ಲಿ ರಾಮಚಂದ್ರರು ಸಹಾಯಕ ಛಾಯಾಗ್ರಾಹಕರಾಗಿದ್ದರು.  1972ರಲ್ಲಿ ತೆರೆಕಂಡ ನಂಜರಾಜ ಅರಸ್ ಅವರ ‘ಸಂಕಲ್ಪ’ ರಾಮಚಂದ್ರರು ಸ್ವತಂತ್ರರಾಗಿ ಛಾಯಾಗ್ರಾಹಣ ಮಾಡಿದ ಪ್ರಥಮ ಚಿತ್ರ.  1977ರಲ್ಲಿ ತೆರೆಕಂಡ ‘ಋಷ್ಯಶೃಂಗ’ಚಿತ್ರಕ್ಕೆ ರಾಮಚಂದ್ರರಿಗೆ ರಾಷ್ಟ್ರಪ್ರಶಸ್ತಿ ಸಂದಿತು.  ಮುಂದೆ ‘ಸಾವಿತ್ರಿ’, ‘ಚೋಮನದುಡಿ’, ‘ಘಟಶ್ರಾದ್ಧ’. ‘ಅನ್ವೇಷಣೆ’, ‘ಪಲ್ಲವಿ’,  ‘ಮನೆ’, ‘ಗೀಜಗನಗೂಡು’, ‘ಗ್ರಹಣ’, 'ಆಕ್ರಮಣ', ‘ಸಂತ ಶಿಶುನಾಳ ಶರೀಫ’, ‘ಪರಸಂಗದ ಗೆಂಡೆತಿಮ್ಮ’, ‘ಹೊಂಬಿಸಿಲು’, ‘ಬಂಗಾರದ ಜಿಂಕೆ’, 'ಎಲ್ಲಿಂದಲೋ ಬಂದವರು', 'ಭುಜಂಗಯ್ಯನ ದಶಾವತಾರ', 'ಸಂಗೀತ',  ‘ಅವಸ್ಥೆ’,  ‘ದೇವೀರಿ’, ‘ನಾಯಿ ನೆರಳು’,  'ಮಲೆಯ ಮಕ್ಕಳು', 'ವಿಮುಕ್ತಿ', 'ಮುಖಪುಟ', 'ಕ್ರೌರ್ಯ', ‘ಬೇರು’, 'ಹಸೀನಾ', 'ಗುಲಾಬಿ ಟಾಕೀಸ್‌', 'ಬ್ಯಾಂಕರ್ ಮಾರ್ಗಯ್ಯ',  'ಮುದುಡಿದ ತಾವರೆ ಅರಳಿತು',  'ಉಂಡುಹೋದ ಕೊಂಡು ಹೋದ', 'ಗಂಧರ್ವಗಿರಿ', 'ಅಲೆಮಾರಿ', 'ವಾತ್ಸಲ್ಯಪಥ', 'ಕಾಡ ಬೆಳದಿಂಗಳು'   ಹೀಗೆ ರಾಮಚಂದ್ರರು ಸುಮಾರು 75 ಚಿತ್ರಗಳಲ್ಲಿ ಛಾಯಾಗ್ರಹಣ ಮಾಡಿದ್ದಾರೆ.  ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ವಿಶೇಷವೆಂಬಂತಹ  ಆಹ್ವಾನಗಳು ಬಂದಾಗ ಇತರ ಭಾಷೆಗಳಲ್ಲೂ  ಅದ್ಬುತ ಕಾರ್ಯ ಮಾಡಿಬಂದಿದ್ದಾರೆ.  ಹಿಂದಿಯ ಜನಪ್ರಿಯ  ‘ಯಾದೇ’ ಚಿತ್ರದಲ್ಲಿನ  ಛಾಯಾಗ್ರಹಣ ಅವರ ಅಪೂರ್ವ ರೀತಿಯ ಕೆಲಸಕ್ಕೆ ಮತ್ತೊಂದು ಸಾಕ್ಷಿಯಂತಿದೆ.  ಶಂಕರ್‌ನಾಗ್‌ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್‌' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು.

ತಮ್ಮ ಕಾಯಕದಲ್ಲಿ ಅರ್ಥಪೂರ್ಣತೆಯನ್ನು ಅರಸುತ್ತಿದ್ದ ರಾಮಚಂದ್ರರು ತಮ್ಮ ಪ್ರವೃತ್ತಿಗನುಗುಣವಾಗಿ ಹೆಚ್ಚು ಕಲಾತ್ಮಕ ಚಿತ್ರಗಳಲ್ಲೇ ಕಾರ್ಯನಿರ್ವಹಿಸಿದರು.  ವ್ಯಾಪಾರೀ ಚಿತ್ರಗಳಲ್ಲಿ ಕೆಲಸ ನಿರ್ವಹಿಸಿದರೂ ಅಲ್ಲೂ ತಮ್ಮ ಕಾಯಕದ ವಿಶೇಷ ಮುದ್ರೆಯನ್ನು ಉಳಿಸಿದ್ದಾರೆ.     ‘ಋಷ್ಯಶೃಂಗ’ ಚಿತ್ರಕ್ಕೆ ಸಂದ ರಾಷ್ಟ್ರಪ್ರಶಸ್ತಿ,  ಮಾಲ್ಗುಡಿ ಡೇಸ್ ಧಾರಾವಾಹಿಗೆ ಸಂದ ಪ್ರಶಸ್ತಿಯೇ ಅಲ್ಲದೆ ನಾಲ್ಕು ಚಿತ್ರಗಳಿಗೆ ರಾಜ್ಯಪ್ರಶಸ್ತಿ, ಜೀವಮಾನ ಸಾಧನೆಯ ಪ್ರಶಸ್ತಿ  ಮುಂತಾದ ಹಲವಾರು ಗೌರವಗಳು ರಾಮಚಂದ್ರರಿಗೆ ಸಂದಿವೆ.

ಚಿತ್ರರಂಗವೆಂದರೆ ಆದ ಹಣಕಾಸು ಮಾತನಾಡುವ  ವ್ಯವಹಾರದ ತಾಣ ಎಂಬುದು ನಮಗೆಲ್ಲಾ ಮೂಡುವ ಪ್ರಾಥಮಿಕ ಅನಿಸಿಕೆ.  ರಾಮಚಂದ್ರರು ಇದಕ್ಕೊಂದು ಅಪವಾದವೆಂಬಂತೆ ಇದ್ದರು.   ಎಸ್. ರಾಮಚಂದ್ರರು ಎಷ್ಟು ಸಹಾನುಭೂತಿ ಅಂತಃಕರಣಪೂರ್ಣ ವ್ಯಕ್ತಿ ಎಂಬುದಕ್ಕೆ ಪಿ. ಶೇಷಾದ್ರಿ ಅವರ ಈ ಮಾತುಗಳು  ಸಾಕ್ಷಿಯಾಗಿವೆ.  ಆಗಿನ್ನೂ ಒಂದೆರಡು ಚಿತ್ರ  ನಿರ್ದೇಶಿಸಿದ್ದ ಪಿ. ಶೇಷಾದ್ರಿಯವರು ರಾಮಚಂದ್ರರನ್ನು ತಮ್ಮ ‘ಬೇರು’ ಚಿತ್ರಕ್ಕೆ ಛಾಯಾಗ್ರಹಣ ಮಾಡಬೇಕು  ದತ್ತಣ್ಣನವರ ಮುಖೇನ ಕೇಳಿಕೊಂಡಾಗ ಅದನ್ನು ಒಪ್ಪಿಕೊಂಡ ರಾಮಚಂದ್ರರು  “ನನಗೆ ಈ ಕೆಲಸಕ್ಕೆ  ಹನ್ನೊಂದು ಸಾವಿರ ಕೊಟ್ಟರೆ ಸಾಕು” ಎಂದರಂತೆ. ಈ ಕುರಿತು ಶೇಷಾದ್ರಿ ಹೇಳುತ್ತಾರೆ “ಹನ್ನೊಂದು! ಇದೇನಿದು? ನಾನೂ ದತ್ತಣ್ಣ ಮುಖ ಮುಖ ನೋಡಿಕೊಂಡೆವು. ‘ಇದೇನಯ್ಯಾ, ಬರೀ ಹನ್ನೊಂದು ಸಾವಿರ ಮಾತ್ರ ಕೇಳುತ್ತಿದ್ದೀಯ? ಹನ್ನೊಂದು ನಿನ್ನ ಲಕ್ಕೀ ನಂಬರ್ ಏನು?’ ಎಂದು ದತ್ತಣ್ಣ ಅವರನ್ನು ಕೇಳಿದರು. ಆಗ ರಾಮಚಂದ್ರ ನನ್ನತ್ತ ದೃಷ್ಟಿ ಬೀರಿ, ‘ಇವರು ಸಹಕಾರಿ ತತ್ವದಲ್ಲಿ ಹಿಂದಿನ ಎರಡು ಚಿತ್ರ ಮಾಡಿರುವುದು ನನಗೆ ಗೊತ್ತಿದೆ. ಈ ಕಲಾತ್ಮಕ ಚಿತ್ರಗಳ ಕಷ್ಟ-ನಷ್ಟದ ಅರಿವೂ ನನಗಿದೆ. ಈಗ ನನ್ನನ್ನು ಪ್ರೀತಿಯಿಂದ ಕೆಲಸ ಮಾಡಲು ಕರೆದಿದ್ದಾರೆ. ಬೇರೆ ಚಿತ್ರಗಳನ್ನು ನೋಡಿದಂತೆ ನಾನು ಇದನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಿಲ್ಲ. ಈ ಚಿತ್ರಕ್ಕೆ ನನಗೆ ಸಂಭಾವನೆ ಬೇಡ. ಹನ್ನೊಂದು ಸಾವಿರದಲ್ಲಿ ಹತ್ತು ಸಾವಿರ ನನ್ನ ಸಹಾಯಕನ ಸಂಭಾವನೆ. ಇನ್ನು ಒಂದು ಸಾವಿರ ಚಿತ್ರವೊಂದಕ್ಕೆ ನಾನು ನಮ್ಮ ಛಾಯಾಗ್ರಾಹಕರ ಸಂಘಕ್ಕೆ ಕಟ್ಟುವ ಶುಲ್ಕ ಅಷ್ಟೇ…’ ಎಂದರು. ಅವರ ಔದಾರ್ಯ ನಮ್ಮನ್ನ ಚಕಿತಗೊಳಿಸಿತು. ಚಿತ್ರೀಕರಣ ಮುಗಿದ ಮೇಲೆ ನಾನು ಅವರ ಸಂಭಾವನೆಯನ್ನೂ ಕೊಟ್ಟೆ ಎಂಬುದು ಬೇರೆ ಮಾತು.”

ಈ ಮಹಾನ್ ಛಾಯಾಗ್ರಾಹಕ, ಮಾನವೀಯ ವ್ಯಕ್ತಿ ಎಸ್. ರಾಮಚಂದ್ರರು ಜನವರಿ 10, 2011ರಂದು ಈ ಲೋಕವನ್ನಗಲಿದರು.  ಅವರು ಉಳಿಸಿ ಹೋದ ಚಿತ್ರಮಾಧ್ಯಮದಲ್ಲಿನ  ಛಾಯೆಗಳು ಮಾತ್ರಾ ಅವಿಸ್ಮರಣೀಯ.

Tag: S. Ramachandra

ಕಾಮೆಂಟ್‌ಗಳಿಲ್ಲ: