ಬುಧವಾರ, ಸೆಪ್ಟೆಂಬರ್ 11, 2013

ಆಚಾರ್ಯ ವಿನೋಬಾ ಭಾವೆ

ಆಚಾರ್ಯ ವಿನೋಬಾ ಭಾವೆ

ಭೂದಾನಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು ಆಚಾರ್ಯ  ವಿನೋಬಾ ಭಾವೆ.  ವಿನೋಬಾ ಅವರು  ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋದೆ ಗ್ರಾಮದಲ್ಲಿ  ಸೆಪ್ಟೆಂಬರ್ 11, 1895ರಂದು  ಜನಿಸಿದರು.   ಅವರ ಮೂಲ ಹೆಸರು ವಿನಾಯಕ್ ನರಹರಿ ಭಾವೆ. ಬಾಲ್ಯದಲ್ಲಿಯೇ ವಿವಿಧ ಧರ್ಮಗಳ ಸಾರವನ್ನು ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು.  ಅವರಿಗೆ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು.  1916ರಲ್ಲಿ ತಮ್ಮ ಇಂಟರ್ ಮೀಡಿಯೆಟ್ ಪರೀಕ್ಷೆಗಗಾಗಿ  ಮುಂಬೈಗೆ ಹೊರಟಿದ್ದ ವಿನೋಬಾ ಭಾವೆ ಅವರಿಗೆ ಮಹಾತ್ಮ ಗಾಂಧಿಯವರ ಬರಹವೊಂದು ಕಣ್ಣಿಗೆ ಬಿದ್ದು, ತಮ್ಮ ಓದು ಬರಹದ ಪ್ರಮಾಣ ಪತ್ರಗಳಿಗೆಲ್ಲ ಬೆಂಕಿಗೆ ಹಚ್ಚಿಬಿಟ್ಟರಂತೆ.    ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ.

ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು.  1923 ರಲ್ಲಿ ಮಹಾರಾಷ್ಟ್ರ ಧರ್ಮಪತ್ರಿಕೆಯ ಸಂಪಾದಕರಾದರು.  ನಾಗಪುರದ ಧ್ವಜಸತ್ಯಾಗ್ರಹದಲ್ಲಿ ತಿಂಗಳಾನುಗಟ್ಟಲೆ ಬಂಧಿತರಾದರು ಮತ್ತು ಕೇರಳದ ವೈಕೋಮ್ ಸತ್ಯಾಗ್ರಹಕ್ಕೆ ಹೊರಟುನಿಂತರು.  ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು.   ಉಪನಿಷತ್ತುಗಳಿಗೆ ವ್ಯಾಖ್ಯಾನ ಬರೆದರು.  ತಿಂಗಳುಗಟ್ಟಲೆ ಜೈಲಿನಲ್ಲಿದ್ದಾಗ  ತಮ್ಮ ಸಹ ಖೈದಿಗಳಿಗೆಲ್ಲ ಇವುಗಳ ಬಗ್ಗೆ  ಪ್ರವಚನ ಕೊಡಾ ನೀಡುತ್ತಿದ್ದರು.  ಕುರಾನ್ ಮತ್ತು ಬೈಬಲ್ಲಿನ ಬೋಧನೆಗಳನ್ನು ಸಹಾ ಪ್ರಕಟಿಸಿದರಲ್ಲದೆ, ಶಿಕ್ಷಣ, ಸ್ವರಾಜ್ಯ ಶಾಸ್ತ್ರದ ಕುರಿತಾದ ಗ್ರಂಥ ರಚನೆಯನ್ನೂ ಮಾಡಿದರು.

ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ.  ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು. ಉಪವಾಸ ಸತ್ಯಾಗ್ರಹದಲ್ಲಿ ಎತ್ತಿದ ಕೈಯಿ.  ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು  ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ  ಸೆರೆವಾಸ ಅನುಭವಿಸಿದರು.  ಅವರ ಈ ಎಲ್ಲ  ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು.

ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು, 1960ರಲ್ಲಿ ಚಂಬಲ್  ಕಣಿವೆಯ ಡಕಾಯಿತರು, 1972ರಲ್ಲಿ ವಿವಿಧ ಭಾಗದ ನೂರಾರು ಡಕಾಯಿತರು ಅವರಿಗೆ ಶರಣುಬಂದಿದ್ದು ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಸಹವಾಸದಲ್ಲಿ ಜೀವನ ಕಳೆದರು. 1955ರಲ್ಲಿ ಭೂದಾನ ಚಳುವಳಿಗೆ ಚಾಲನೆ ನೀಡಿದ ಭಾವೆ ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು.  ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿ  ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು.  ಅವರು ಸಿರಿವಂತರಿಂದ ದಾನ ಸ್ವೀಕರಿಸಿ ಬಡಬಗ್ಗರಿಗಾಗಿ  ಹಸ್ತಾಂತರಿಸಿದ ಹಳ್ಳಿಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು.  ಅವುಗಳಲ್ಲಿ ತಮಿಳುನಾಡು ಒಂದರಲ್ಲೇ ಅವರು ಸುಮಾರು 175 ಹಳ್ಳಿಗಳನ್ನು ಸಿರಿವಂತರಿಂದ ಸ್ವೀಕರಿಸಿ ಬಡಜನರಿಗೆ ಹಸ್ತಾಂತರಿಸಿದರು. 

ಆಚಾರ್ಯ ವಿನೋಬಾ ಅವರು ಬಹುಭಾಷಾ ಪಂಡಿತರಾಗಿದ್ದು ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಕನ್ನಡ ಭಾಷೆಗಳ ಪರಿಚಯ ಅವರಿಗಿತ್ತು.  ಕನ್ನಡ ಭಾಷೆಯ ಲಿಪಿ ಅವರನ್ನು  ಮೋಡಿ ಮಾಡಿತ್ತು.  ಅವರು  ಕನ್ನಡದ ಲಿಪಿಯನ್ನು 'ಲಿಪಿಗಳ ರಾಣಿ' ಎಂದು  ಶ್ಲಾಘಿಸುತ್ತಿದ್ದರು.

1958ರಲ್ಲಿ ವಿನೋಬಾ ಅವರು  ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು.  ತುರ್ತುಪರಿಸ್ಥಿತಿ ಘೋಷಿಸಿದ್ದ ದಿನಗಳಲ್ಲೂ ಅವರು  ಇಂದಿರಾ ಗಾಂಧಿಯವರ ಆಡಳಿತಕ್ಕೆ ಬೆಂಬಲವಾಗಿ ನಿಂತದ್ದು ವಿವಾದಕ್ಕೆ ಕಾರಣವಾಗಿತ್ತು. 


1982ರ ವರ್ಷದಲ್ಲಿ ಅವರು ತೀವ್ರ ಅನಾರೋಗ್ಯದಿಂದಿದ್ದರೂ ಯಾವುದೇ ರೀತಿಯ ಔಷದೋಪಚಾರ ಸ್ವೀಕರಿಸಲು ಒಪ್ಪದೆ ನವೆಂಬರ್ 15, 1982ರಂದು ನಿಧನರಾದರು.  ಭಾರತೀಯ ಸಮಾಜದ ಸ್ವಾತಂತ್ರ್ಯ ಮತ್ತು ಒಳಿತಿಗಾಗಿ ಶ್ರಮಿಸಿದ ಆಚಾರ್ಯ ವಿನೋಬಾ ಚೇತನಕ್ಕೆ ನಮ್ಮ ನಮನ.

Tag: Acharya Vinobha Bhave