ಭಾನುವಾರ, ಸೆಪ್ಟೆಂಬರ್ 1, 2013

ಎಲ್ ಆರ್ ಈಶ್ವರಿ

ಎಲ್ ಆರ್ ಈಶ್ವರಿ


ಕೆಲವೊಂದು ಗಾಯಕರ ದ್ವನಿಯಲ್ಲಿ ಒಂದು ರೀತಿಯ ವಿಶಿಷ್ಟ ಹೊಳಹು ಇರುತ್ತದೆ.  ಆ ದ್ವನಿ ಅಂತರಾಳವನ್ನು ತಟ್ಟುವ ಮಾದಕತೆಯ ಮೋಡಿ ಅವರ್ಣನೀಯವಾದದ್ದು.  ಅಂತಹ ದ್ವನಿ ಹೊಂದಿದವರು ಬಹಳ ಬಹಳ ಅಪರೂಪ.  ಅಂತಹ ಅಪರೂಪದ ದ್ವನಿ ಎಲ್. ಆರ್. ಈಶ್ವರಿ. 

ಎಲ್ ಆರ್. ಈಶ್ವರಿ ಅವರು ಚೆನ್ನೈನ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಡಿಸೆಂಬರ್ 7, 1939ರಂದು ಜನಿಸಿದರು.  ಅವರ ತಂದೆ ಅಂತೋನಿ ದೇವರಾಜ್ ಮತ್ತು ತಾಯಿ ರೆಗೀನಾ ಮೇರಿ ನಿರ್ಮಲ.   ಅವರ ವಂಶಸ್ಥರು ಮಧುರೈ ಬಳಿಯ ಪರಮಕುಡಿ ಗ್ರಾಮಕ್ಕೆ ಸೇರಿದವರು.  ಎಲ್. ಆರ್. ಈಶ್ವರಿ ಅವರ ಪೂರ್ಣ ಹೆಸರು ಲೋರ್ಡಿ ಮೇರಿ ರಾಜೇಶ್ವರಿ.  ಅಂದಿನ ಕಾಲದಲ್ಲಿ ಎಂ. ಎಸ್. ರಾಜೇಶ್ವರಿ ಎಂಬ ಪ್ರಸಿದ್ಧ ಗಾಯಕಿ ಒಬ್ಬರು ಇದ್ದುದರಿಂದ ಇವರು ತಮ್ಮ ಹೆಸರನ್ನು ಎಲ್. ಆರ್. ಈಶ್ವರಿ ಎಂದ ಕಿರಿದು ಮಾಡಿಕೊಂಡರು. 


ಎಲ್ ಆರ್. ಈಶ್ವರಿ ಅವರಿಗೆ ಸಾಂಪ್ರದಾಯಿಕ ಸಂಗೀತದ ಶಿಕ್ಷಣ ಪಾಠವೇನೂ ದಕ್ಕಲಿಲ್ಲ.  ಅವರ ತಾಯಿ ಚಲನಚಿತ್ರರಂಗದಲ್ಲಿ ವೃಂದ ಗಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.  ತಮ್ಮ ತಾಯಿಯೊಡನೆ ಸ್ಟುಡಿಯೋಗೆ ಹೋಗುತ್ತಿದ್ದ ಈಶ್ವರಿ ತಾವೂ ವೃಂದ ಗಾಯಕಿಯಾದರೂ ಶೀಘ್ರದಲ್ಲಿ ಪ್ರಮುಖ ಗಾಯಕಿಯಾಗಿ ಹೊರಹೊಮ್ಮಿದರು.  ಅವರಿಗೆ ಎಂ. ಎಸ್. ವಿಶ್ವನಾಥನ್ ಅವರು ೧೯೫೮ರ ವರ್ಷದಲ್ಲಿ 'ನಲ್ಲ ಎಡತ್ತು ಸಂಬಂಧಂ' ಎಂಬ ತಮಿಳು ಚಿತ್ರದಲ್ಲಿ ಅವಕಾಶ ನೀಡಿದರು.  ೧೯೬೧ರಲ್ಲಿ ತೆರೆಕಂಡ ಪ್ರಸಿದ್ಧ ತಮಿಳು ಚಿತ್ರ 'ಪಾಸ ಮಲರ್'ನಲ್ಲಿ  ವಿಶ್ವನಾಥನ್ - ರಾಮಮೂರ್ತಿ ಅವರ ನಿರ್ದೇಶನದಲ್ಲಿ ಮೂಡಿಬಂದ  'ವಾರಾಯಿ ಎನ್ ತೋಯಿ ವಾರಾಯೋ' ಎಂಬ ಗೀತೆ ಬಹಳ ಜನಪ್ರಿಯವಾಯಿತು.  ಮುಂದೆ ಅವರು ಸುಮಾರು ಎರಡು ದಶಕಗಳ ಕಾಲ ಜನಪ್ರಿಯ ಗಾಯಕಿಯಾಗಿ ಚಿತ್ರರಂಗದಲ್ಲಿ ವಿಜ್ರಂಭಿಸಿದರು.

ಎಲ್. ಆರ್ ಈಶ್ವರಿ ಎಂದರೆ ತಕ್ಷಣ ನೆನಪಿಗೆ ಬರುವ ಹಾಡೆಂದರೆ ಜೋಕೆ, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು’.  ಈ ಸಾಧಾರಣ ವಾಕ್ಯ ಅಥವಾ ಒಂದು ಸಿನಿಮಾ ಹಾಡಿನ ಚರಣದಲ್ಲಿ ಅಂತಹ ವಿಶೇಷ ಏನೂ ಇಲ್ಲ.  ಆದರೆ ಎಲ್. ಆರ್. ಈಶ್ವರಿ ಅವರ ದ್ವನಿಯಲ್ಲಿ, ಇಲ್ಲಿರುವ ಜೋಕೆ’, ‘ನಾನು’, ‘ಮಿಂಚು’, ‘ಕತ್ತಿಯ ಅಂಚುಇವೆಲ್ಲ ಪಡೆಯುವ ಮಿನುಗುಗಳು ಯಾವುದೇ ಒಬ್ಬ ಕವಿಯ, ಸಂಗೀತ ನಿರ್ದೇಶಕನ ಸಾಧ್ಯತೆಗಳನ್ನು ಮೀರಿದಂತಹ ವಿಸ್ಮಯ ಪ್ರಪಂಚಕ್ಕೆ ಸೇರಿದವು.  ಅದನ್ನು ಯಾವುದೇ ವಾಕ್ಯಗಳೂ ಬಣ್ಣಿಸಲಾರವು.  ಆ ಪ್ರಪಂಚಕ್ಕೆ ಪ್ರವೇಶಿಸುವ ಸಾಧ್ಯತೆ ಇರುವುದು ಕೇವಲ ರಸಿಕನ ಅಂತರಾಳಕ್ಕೆ ಸೇರಿದ ವಾಂಛೆ, ಉನ್ಮಾದ ಮತ್ತು ಪ್ರೀತಿಗಳಿಗೆ ಮಾತ್ರ. 

ಎಲ್. ಆರ್. ಈಶ್ವರಿ ಎಂದರೆ ಬಹಳಷ್ಟು ಜನ ತಪ್ಪು ವ್ಯಾಖ್ಯಾನಕ್ಕೆ ಇಳಿದು ಬಿಡುತ್ತಾರೆ.  ಎಲ್ ಆರ್ ಈಶ್ವರಿ ಎಂದರೆ  ಜ್ಯೋತಿಲಕ್ಷ್ಮಿ, ಹಲಂ ಇಂತಹ ನರ್ತಕಿಯರ ಹಾಡಿಗೆ ಹಾಡುತ್ತಿದ್ದ ಹಾಡುಗಾರ್ತಿ ಎಂದು ಮಾತಿಗೆ ಮುಂಚೆಯೇ ವ್ಯಾಖ್ಯಾನಕ್ಕೆ ಬರುವ ಜನರನ್ನು ಸಾಕಷ್ಟು ನೋಡುತ್ತೇವೆ.  ಆಕೆಯ ಗಾಯನವನ್ನು ಅಂತಹ ಹಾಡುಗಳಲ್ಲಿ ಸುಲಭವಾಗಿ ಬಳಸಬಹುದಿತ್ತು ಎಂಬುದು ಮಾತ್ರ ನಿಜ.  ಹಾಗೆ ನೋಡಿದರೆ, ಇಂದಿನ ಸಿನಿಮಾ ನಾಯಕಿಯರು ಜ್ಯೋತಿಲಕ್ಷ್ಮಿ, ಹಲಂ ಅವರಂತಹ ನರ್ತಕಿಯರನ್ನು ಪ್ರದರ್ಶನಗಳ ದೃಷ್ಟಿಯಿಂದ ಬಹಳ ಹಿಂದೆ ಹಾಕಿ ಬಿಟ್ಟಿದ್ದಾರೆ!  ಇಂದಿನ ಸಿನಿ ನರ್ತನವೆಂಬ ಕೆಟ್ಟ ಉದ್ದೇಶದ ಹಾಡುಗಳಿಗೆ ಅಂತಹ ಉತ್ತಮ ಗಾಯನದ ಅವಶ್ಯಕತೆ ಬೇಕಾಗುವುದೂ ಇಲ್ಲ!

ಎಲ್. ಆರ್. ಈಶ್ವರಿ ಅವರ ದ್ವನಿಯಲ್ಲಿರುವ ಸೊಬಗನ್ನು ಅರ್ಥೈಸಲು ಇದಕ್ಕಿಂತ ವಿಭಿನ್ನ ಚಿಂತನೆ ಬೇಕಾಗುತ್ತದೆ.  ಅವರ ದ್ವನಿಯಲ್ಲಿ ಮೂಡಿದ ಆದಿ ದೇವ, ಆದಿ ಮೂಲ, ಆದಿ ಬ್ರಹ್ಮ ಜೋ ಜೋ, ಪರಮ ಪುರುಷ ಪರಬ್ರಹ್ಮ ಪುರುಷೋತ್ತಮ ಜೋ ಜೋಎಂಬ ಹಾಡು ಒಮ್ಮೆ ಕೇಳಿದರೆ ಅದು ಹುಡುಕುವ ಪರಮಾತ್ಮ ಎಂಬ ನೆಲೆ ಅವರ್ಣನೀಯವಾಗಿರುವುದು ಅರಿವಿಗೆ ಬರುತ್ತದೆ.  ಇದೇ ರೀತಿಯ ನೆಲೆಯಲ್ಲೇ, ‘ಜೋಕೆ ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು, ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚುಎಂಬ ಹಾಡಿನ ಅರ್ಥಗಳ ಆಳದ ಸೆಳೆತ ಕೂಡಾ ವಿಶಿಷ್ಟವೇ.  ಆ ಹಾಡಿಗೆ ಯಾರು ಹೇಗೆ ಕುಣಿದರು ಎಂಬುದನ್ನು ಮೀರಿದ್ದು ಆ ದ್ವನಿ ತನ್ನ ಮೂಲದಲ್ಲಿ ಹೊರಡಿಸಿದ ಮಾರ್ದನಿ.

ಕೌಬಾಯ್ ಕುಳ್ಳ ಎಂಬ ಚಿತ್ರದಲ್ಲಿ ಸಿಂಗಾಪುರಿಂದ ಬಂದೆ ಬಂಗಾರ ಹೊತ್ತು ತಂದೆ, ಸಂಗಾತಿ ನೀ ಇಲ್ಲಿ ಬಾ ಬಾಎಂಬಲ್ಲಿನ ತುಂಟಾಟದ ಹಾಡು ಆಲಿಸುವ  ಕಿವಿಗಳಿಗೆ ಹುಟ್ಟಿಸುವ ಸಂತೋಷ ಅಪ್ರತಿಮವಾದದ್ದು.  ಸಿಟ್ಯಾಕೋ ಸಿಡುಕ್ಯಾಕೋ ನೆಲೆ ಜಾಣ’, ಇಟ್ಟಾಯ್ತೋ ನಿನಮೇಲೆ ನನ ಪ್ರಾಣ’, ‘ದೂರದಿಂದ ಬಂದಂತ ಸುಂದರಾಂಗ ಜಾಣ’,  ‘ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ’, ‘ನಮ್ಮೂರ್ ನಾಗ್ ನಾನೊಬ್ನೆ ಜಾಣ’, ‘ಭಾಮ, ಭಾಮಾ ನೀನರಿಯೆ ಮನದ ಮರ್ಮ’, ‘ರಸಿಕ, ರಸಿಕ, ನೀ ಮೆಲ್ಲನೆ ಓಲಾಡು, ರಸದ ನಿಮಿಷ’, ‘ಸುಮ ಬಾಲೆಯ ಪ್ರೇಮದ ಸಿರಿಯೆ’, ‘ದೂರದಿಂದ ಬಂದವರೇ, ಬಾಗಿಲಲಿ ನಿಂದವರೆ, ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ’, ‘ಅಯ್ಯಯ್ಯಯ್ಯೋ ಹಳ್ಳೀಮುಖ, ಯಾವಾಗ್ ಬಂದೆ ಬೆಂಗಳೂರ್ ಬಕ’, ‘ಆಶಾವಿಲಾಸಿ ಈ ರೂಪರಾಶಿ’, ‘ಮಾಡರ್ನ್ ಲೇಡಿಯ ನೋಡಿ ನೀವು ಕಣ್ ಕಣ್ ಬಿಡಬೇಡಿ’  ಹೀಗೆ ಅವರ ಹಾಡುಗಳು ಒಂದಕ್ಕಿಂತ ಒಂದು ಸಂಗೀತ ಪ್ರಿಯರನ್ನೂ ಬಹಳ ಹಲವು ದಶಕಗಳಿಂದ ಹಿಡಿದಿಟ್ಟಿದೆ.  ಅಂತೆಯೇ ದಕ್ಷಿಣ ಭಾರತದ ಪ್ರೇಕ್ಷಕರಿಗೆಲ್ಲ ಮೋಡಿ ಮಾಡಿದ ಮರೋಚರಿತ್ರದ ಭಲೆ ಭಲೇ ಮಗಾಡಿ ಓಯ್’, ತಮಿಳಿನ ಮನ್ಮಥ ಲೀಲೈ ಚಿತ್ರದ ಹಲೋ ಮೈ ಡಿಯರ್ ರಾಂಗ್ ನಂಬರ್ಇವೆಲ್ಲ ಹುಟ್ಟಿಸಿದ ಜನಪ್ರೀತಿ ಅಸಾಧಾರಣವಾದದ್ದು. 

ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ದ್ವನಿ ಮೂಡಿಸಿದ ಎಲ್ ಆರ್ ಈಶ್ವರಿ ಹಾಡಿದ ಸಂಖ್ಯೆಗಳಿಗೆ ಲೆಖ್ಖವೇ ಇಲ್ಲ.  ಅಷ್ಟೊಂದು ಹಾಡುಗಳು ಅವರ ದ್ವನಿಯಲ್ಲಿ ಮೂಡಿಬಂದಿವೆ.  ಚಲನಚಿತ್ರಗಳಲ್ಲಿ ಮಾದಕ, ತುಂಟಾಟದ ಹಾಡುಗಳನ್ನು ಎಷ್ಟು ಹಾಡಿದ್ದಾರೋ ಅದಕ್ಕೆ ಸರಿಸಮವಾಗಿ ಭಕ್ತಿಗೀತೆಗಳನ್ನೂ ಹಾಡಿದ್ದಾರೆ.  ಶೀಘ್ರಗತಿಯಲ್ಲಿ ಸಾಗುವ ಹಾಡುಗಳಿಗೆ ಅವರಷ್ಟು ಸರಿಹೊಂದುವ ದ್ವನಿ ಇಲ್ಲವೇ ಇಲ್ಲ ಎಂದರೂ ಸರಿಯೇ. 

ತನಗೆ ಮಾತು ತಿಳಿಯಿತು ಎಂದು ಅರಿವಿಗೆ ಬಂದಂದಿನಿಂದ ನಾನು ಹಾಡುತ್ತಲೇ ಇರುವೆ ಎನ್ನುತ್ತಾರೆ  ಎಲ್. ಆರ್. ಈಶ್ವರಿ. ಅವರ ಬಗ್ಗೆ ಅವರ ತಾತ ಮತ್ತು ಅವರ ತಾಯಿ, ‘ಈಕೆ ಹಾಡಲೆಂದೇ ಹುಟ್ಟಿದ್ದಾಳೆಎಂದು ಕೇಳಿದ ಮಾತೇ ಆಕೆಗೆ ಅದು ನಿಜ ಎಂಬ ಭಾವ ಹುಟ್ಟಿಸಿ ಅಂತೆಯೇ ಹಾಡುತ್ತಲೇ ಬಂದೆ ಎನ್ನುತ್ತಾರೆ ಅವರು. 

ನಿತ್ಯ ಶುದ್ಧ ಹಸನ್ಮುಖ, ದೈವ ಶ್ರದ್ಧೆಗಳಿಂದ ರಾರಾಜಿಸುವ ಎಲ್ ಆರ್ ಈಶ್ವರಿ ಈ ಇಳಿವಯಸ್ಸಿನಲ್ಲೂ ದೂರದರ್ಶನ ಮತ್ತು ಸಮಾರಂಭಗಳಲ್ಲಿ ಹಾಡುವ ಸೊಬಗನ್ನು ಕಂಡರೆ ಅವರಿಗಿರುವ ಗಾನಸಾಮರ್ಥ್ಯದ ಬಗ್ಗೆ ಅಚ್ಚರಿಹುಟ್ಟುತ್ತದೆ. 


ನಾನು ಎಲ್ಲಾರ್ ಈಶ್ವರಿ ಎಲ್ಲರ ಈಶ್ವರಿಎಂದು ಹೇಳುವ ಎಲ್ ಆರ್ ಈಶ್ವರಿ ಸಮಸ್ತ ಸಂಗೀತ ರಸಿಕರಿಗೂ ಇಷ್ಟವಾಗುವವರು.  ಈ ಮಹಾನ್ ಕಲಾವಿದೆ ತಮ್ಮ ಬದುಕಿನಲ್ಲಿ ನಿರಂತರ ಶುಭವಸಂತಗಳನ್ನು ಕಾಣಲಿ ಎಂದು ಹಾರೈಸೋಣ.

Tag: L. R. Eswari, L. R. Eshwari

ಕಾಮೆಂಟ್‌ಗಳಿಲ್ಲ: