ಭಾನುವಾರ, ಸೆಪ್ಟೆಂಬರ್ 1, 2013

ದಿಲೀಪ್ ಕುಮಾರ್

ದಿಲೀಪ್ ಕುಮಾರ್

ಭಾರತೀಯ ಚಿತ್ರರಂಗದ ಮೇರುನಟರಲ್ಲೊಬ್ಬರಾದ ದಿಲೀಪ್ ಕುಮಾರ್ ಡಿಸೆಂಬರ್ 11, 1922ರಲ್ಲಿ ಜನಿಸಿದರು.  ದುರಂತ ಪಾತ್ರಗಳು, ಐತಿಹಾಸಿಕ ಮತ್ತು ಜನಸಾಮಾನ್ಯನ ಪಾತ್ರಗಳಲ್ಲಿ ಅವರ ತೆರೆಯ ಮೇಲೆ ಕಳೆಕಟ್ಟಿದ್ದ ರೀತಿ ಮನನೀಯವಾದುದು.  ಒಂದು ರೀತಿಯಲ್ಲಿ ಅಂದಿನ ಕಾಲದ ನಾಯಕರುಗಳಲ್ಲಿ ಕಾಣುತ್ತಿದ್ದ ಅತಿಯಾದ ನಾಟಕೀಯತೆ, ಕತ್ತಿವರಸೆ ಮುಂತಾದ ಅತೀ ರಂಜನೀಯ ಗುಣಗಳಿಂದ ಹೊರಬಂದು ಸಹಜತೆಗೆ ಸಮೀಪವಿದ್ದ ಅಭಿನೇತೃಗಳ ಸಾಲಿನಲ್ಲಿ ದಿಲೀಪ್ ವಿಜ್ರಂಭಿಸುತ್ತಾರೆ.  1944ರ ಅವಧಿಯಿಂದ 1996ರ ಅವಧಿಯಲ್ಲಿ ಅವರು ನಟಿಸಿದ ಚಿತ್ರಗಳು ಸುಮಾರು 60 ಮಾತ್ರ.

ದಿಲೀಪ್ ಕುಮಾರರ ಹುಟ್ಟು ಹೆಸರು ಮಹಮ್ಮದ್ ಯೂಸುಫ್ ಖಾನ್. ಈಗಿನ  ಪಾಕಿಸ್ತಾನದಲ್ಲಿರುವ ಪೇಶಾವರದ ಕಿಸ್ಸಾ ಖ್ವಾನಿ ಬಜಾರಿನ ಮೊಹಲ್ಲಾ ಖುದಾದಾದದಲ್ಲಿ ಇವರು ಜನಿಸಿದ್ದು.  ತಂದೆ ಲಾಲಾ ಘುಲಾಮ್ ಸರ್ವಾರ್ ಹಣ್ಣಿನ ಬೆಳೆಗಾರರೂ ವ್ಯಾಪಾರಿಯೂ ಆಗಿದ್ದರು.  1930ರ ದಶಕದಲ್ಲಿ ಅವರ ಕುಟುಂಬ ಮುಂಬೈಗೆ ಬಂದು ನೆಲೆಸಿತು. ಹದಿಹರೆಯದ ಯುವಕ ಯೂಸುಫ್ ಖಾನ್ ಪುಣೆಯಲ್ಲಿ ಕ್ಯಾಂಟೀನ್ ಉದ್ಯಮದಲ್ಲಿ ತೊಡಗಿ, ಜತೆಯಲ್ಲೇ ಒಣಹಣ್ಣುಗಳ ಸರಬರಾಜಿನ ವ್ಯಾಪಾರವನ್ನಾರಂಭಿಸಿದರು.

ಅಂದಿನ ಹಿಂದೀ ಚಿತ್ರರಂಗದ ಖ್ಯಾತ ನಿರ್ಮಾಪಕರೂ ಬಾಂಬೇ ಟಾಕೀಸ್ ಸ್ಟೂಡಿಯೊ ಮಾಲಿಕರೂ ಆಗಿದ್ದ ಹಿಮಾಂಶು ರಾಯ್ ಅವರ ಪತ್ನಿ ದೇವಿಕಾ ರಾಣಿಯವರು ಹಿಂದೀ ಚಿತ್ರ ರಂಗವನ್ನು ಪ್ರವೇಶಿಸಲು ಯೂಸುಫ್ ಖಾನರಿಗೆ ಸಹಾಯ ಮಾಡಿದರು.  1944ರಲ್ಲಿ ಭಗವತೀ ಚರಣ ವರ್ಮಾರವರು ತಮ್ಮ ಜ್ವಾರ್ ಭಾಟಾಚಿತ್ರದಲ್ಲಿ ಇವರಿಗೆ  ನಾಯಕನ ಪಾತ್ರವನ್ನಿತ್ತು ದಿಲೀಪ್ ಕುಮಾರ್ ಎಂದು ಹೆಸರಿಟ್ಟರು.

1947ರಲ್ಲಿ ಬಿಡುಗಡೆಯಾದ ಜುಗ್ನು ಚಿತ್ರ ಜನಪ್ರಿಯತೆ ಪಡೆಯಿತು. ಬಳಿಕ ಅಂದಾಜ್, ದೀದಾರ್, ಆನ್, ಅಮರ್, ಆಜಾದ್, ದೇವದಾಸ್, ಮುಸಾಫಿರ್, ಮಧುಮತಿ ಮತ್ತು ಮುಘಲ್ ಎ ಆಜಮ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವನ್ನು ಪಡೆಯಿತಲ್ಲದೆ, ದಿಲೀಪ್ ಕುಮಾರರು ಚಿತ್ರರಂಗದಲ್ಲಿ ಅಮೋಘ ಖ್ಯಾತಿಯನ್ನು ಪಡೆದರು. ಅಂದಾಜ್, ದೀದಾರ್, ಅಮರ್, ದೇವದಾಸ್, ಮಧುಮತಿ, ಇತ್ಯಾದಿ ಚಿತ್ರಗಳಲ್ಲಿನ ಅಭಿನಯದಿಂದ  ದಿಲೀಪ್ ಕುಮಾರರು ದುರಂತ ನಾಯಕನೆಂಬ ಬಿರುದನ್ನು ಪಡೆದರು.

ಭಾರತದ ಮುಘಲ್ ಇತಿಹಾಸದಿಂದಾಯ್ದ ಕತೆಯಿರುವ ಮುಘಲ್ ಎ ಆಜಮ್ ಆಗಿನ ಕಾಲದ ಶ್ರೀಮಂತ ಚಿತ್ರವಾಗಿದ್ದು, ಭಾರೀ ಜಯಗಳಿಸಿತ್ತು. ಉತ್ತರಾರ್ಧ ವರ್ಣದಲ್ಲಿದ್ದು ಕಪ್ಪು-ಬಿಳುಪಿನ ಈ ಚಿತ್ರ 2008ರಲ್ಲಿ ಕಂಪ್ಯೂಟರ್ ಸಹಾಯದಿಂದ ವರ್ಣರಂಜಿತಗೊಂಡು ಪ್ರದರ್ಶನಗೊಂಡಾಗ ಮತ್ತೆ ಆಗಿನಷ್ಟೇ ಜನಮೆಚ್ಚುಗೆಯನ್ನು ಪಡೆಯಿತು. 1961ರಲ್ಲಿ ಬಿಡುಗಡೆಯಾದ ಗಂಗಾ ಜಮುನಾ ದಿಲೀಪ್ ಕುಮಾರರ ಮೊದಲ ಪೂರ್ಣ ವರ್ಣ ಚಿತ್ರ. ಇದು ಅವರ ಸ್ವಂತ ನಿರ್ಮಾಣದ ಚಿತ್ರವೂ ಆಗಿತ್ತು. ಇದರಲ್ಲಿ ಅವರ ನಿಜ ಜೀವನದ ತಮ್ಮ ನಾಸಿರ್ ಖಾನ್ ತಮ್ಮನಾಗಿಯೇ ಅಭಿನಯಿಸಿದ್ದಾರೆ.  1966ರಲ್ಲಿ ಅಂದಿನ ಚಿತ್ರರಂಗದ ಸುಂದರಿ ಸಾಯಿರಾ ಬಾನು ದಿಲೀಪ್ ಕುಮಾರರನ್ನು ವಿವಾಹವಾದರು. 

1976ರವರೆಗೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ದಿಲೀಪ್ ಕುಮಾರರು 1981ರವರೆಗೆ ಚಿತ್ರರಂಗದಿಂದ ದೂರವಿದ್ದರು. ಆ ನಂತರ ಹಿರಿತನದ  ಪಾತ್ರಗಳಲ್ಲಿ ಅಭಿನಯಿಸಲಾರಂಭಿಸಿದರು. ಈ ಕಾಲಪರ್ವದಲ್ಲಿ ಬೆಳಕುಕಂಡ ಕ್ರಾಂತಿ, ಶಕ್ತಿ, ವಿಧಾತಾ, ಮಶಾಲ್, ಕರ್ಮ, ಸೌದಾಗರ್  ಮುಂತಾದ ಇವರ ಚಿತ್ರಗಳು ಜನಪ್ರಿಯವಾದವು. 1996ರ ವರ್ಷದ ಕಿಲಾ’  ಅವರು ಅಭಿನಯಿಸಿದ ಕಡೆಯ ಚಿತ್ರ.

ಉನ್ನತ ದರ್ಜೆಯ ಉರ್ದುವಿನಲ್ಲಿ ಮೆದುವಾಗಿ ಸಂಭಾಷಿಸುವ  ದಿಲೀಪ್ ಕುಮಾರ್ ಸುಸಂಸ್ಕೃತ ವ್ಯಕ್ತಿ. ಎಲ್ಲರೊಡನೆಯೂ ಅತ್ಯಂತ ಗೌರವದಿಂದ ವರ್ತಿಸುವ ಅಚ್ಚುಕಟ್ಟಾದ ಪೋಷಾಕಿನಲ್ಲಿ ಕಾಣಿಸಿಕೊಳ್ಳುವ ಹಿರಿಯರು.  ಶ್ರೇಷ್ಠ ಅಭಿನಯಕ್ಕೆ ಎಂಟು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದ ದಿಲೀಪ್ ಕುಮಾರರಿಗೆ ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿಯನ್ನು 1993ರಲ್ಲಿ ನೀಡಲಾಯಿತು. 1994ರಲ್ಲಿ ದಾದಾ ಸಾಹೆಬ್ ಪ್ರಶಸ್ತಿಯನ್ನು ಭಾರತ ಸರ್ಕಾರ ಇತ್ತು ಸನ್ಮಾನಿಸಿತು.  1991ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.

ಪಾಕಿಸ್ತಾನ ಸರ್ಕಾರವು ದಿಲೀಪ್ ಕುಮಾರರಿಗೆ 1997ರಲ್ಲಿ ನಿಶಾನ್ ಎ ಇಮ್ತಿಯಾಜ್ ಪ್ರಸ್ತಿಯನ್ನಿತ್ತು ಗೌರವಿಸಿತು. ಅದೇ ವರ್ಷ ಎನ್ ಟಿ ಆರ್ ರಾಷ್ಟ್ರೀಯ ಪುರಸ್ಕಾರವೂ ಲಭಿಸಿತು.  2009ರಲ್ಲಿ ಸಿ ಎನ್ ಎನ್-ಐ ಬಿ ಎನ್ ಇಂಡಿಯನ್ ಆಫ್ ದ ಯಿಯರ್ ಪುರಸ್ಕಾರವನ್ನು ಗಳಿಸಿದರು.  1980ರಲ್ಲಿ ಮುಂಬೈಯ ಶರೀಫ್ ಪದವಿಯನ್ನೀಯಲಾಯಿತು. ರಾಜ್ಯ ಸಭೆಯ ಸದಸ್ಯರೂ ಆಗಿದ್ದರು.


ಇದೀಗ 91ರ ಹಿರಿತನದಲ್ಲಿರುವ ದಿಲೀಪ್ ಕುಮಾರ್ ಅವರ ಬದುಕು ಸ್ವಾಸ್ಥ್ಯ ಸಮರಸತೆಗಳಿಂದ ಕೂಡಿ ಸುಂದರವಾಗಿರಲಿ ಎಂದು ಆಶಿಸುತ್ತಾ ಈ ಹಿರಿಯರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

Tag: Dilip Kumar

ಕಾಮೆಂಟ್‌ಗಳಿಲ್ಲ: