ಬುಧವಾರ, ಸೆಪ್ಟೆಂಬರ್ 4, 2013

ಪ್ರಾತಃಕಾಲ


ಪ್ರಾತಃಕಾಲ

ಆಹಾ! ಪ್ರಾತಃಕಾಲದ ಸ್ಪರ್ಶಕೆ
ನೆಲದೆದೆ ಜುಮ್ಮನೆ ಪುಲಕಿಸಿದೆ
ಮಿಲನ ಮುಹೂರ್ತದ ಹರ್ಷೋತ್ಕರ್ಷಕೆ
ಗಾಳಿಯೊ ಉಸಿರಂತೇದುತಿದೆ

ಮೋಹಕ ವರ್ಣದ ಚೆಲುವಿನ ತೊಟ್ಟಿಲು
ಲೋಕದ ಹಸುಳೆಯ ತೂಗುತಿದೆ.
ಸುರ ಸಮ್ಮೋಹಕ ಮೂಡಲ ಬಟ್ಟಲು;
ಮುಂಬೆಳಗಿನ ರಸವುಕ್ಕುತಿದೆ.
ಆಹಾ! ಪ್ರಾತಃಕಾಲದ ಸ್ಪರ್ಶಕೆ....

ಹಕ್ಕಿಯ ಕೊರಳಿನ ಬೆಸುಗೆಯು ಬಿಚ್ಚಲು
ಬೆಚ್ಚನೆ ಚಿಲಿಪಿಲಿ ಜಾರುತಿವೆ;
ಲೋಕವೆ ಮರುಳಿನ ಕನಸಿನ ಕೆಚ್ಚಲು-
ಕಿವಿ, ಮನ ದಣಿಯದೆ ಹೀರುತಿವೆ-
ಆಹಾ! ಪ್ರಾತಃಕಾಲದ ಸ್ಪರ್ಶಕೆ.....

ಸ್ವರ್ಗವೆ ಇಲ್ಲಿದೆ, ನಿಸರ್ಗದಲ್ಲಿ-
ನೆಮ್ಮದಿ, ಮನಸಿನ ಉಲ್ಲಾಸ;
ಅನಂತವಡಗಿದೆ ಈ ಕ್ಷಣದಲ್ಲಿ-
ಭುವಿಗವತರಿಸಿದೆ ಕೈಲಾಸ.
ಆಹಾ! ಪ್ರಾತಃಕಾಲದ ಸ್ಪರ್ಶಕೆ....

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್


Tag: Praatah Kala, Aaha Pratahkalada sparshake

ಕಾಮೆಂಟ್‌ಗಳಿಲ್ಲ: