ಸೋಮವಾರ, ಸೆಪ್ಟೆಂಬರ್ 2, 2013

ಮೇಡಮ್ ಕಾಮಾ

ಮೇಡಮ್  ಭಿಕಾಜಿ ಕಾಮಾ

ಭಾರತ ಸ್ವಾತಂತ್ರ್ಯದ ಅಪ್ರತಿಮ ಹೋರಾಟಗಾರ್ತಿ ಭಿಕಾಜಿ ರುಸ್ತುಂ ಕಾಮಾ ಅವರು 1861ರ ವರ್ಷದ ಸೆಪ್ಟೆಂಬರ್ 24ರಂದು ಮುಂಬೈನ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು.  ಆಕೆಯ ತಂದೆ ಫ್ರೇಂಜಿ ಸೊರಾಬ್ಜಿ ಪಟೇಲರು ಮುಂಬೈನ ಪ್ರಸಿದ್ಧ ವರ್ತಕರಾಗಿದ್ದರು.  ಮುಂಬೈನ ಅಲೆಕ್ಸಾಂಡ್ರಾ ಪಾರ್ಸೀ ಹೆಣ್ಣು ಮಕ್ಕಳ ಶಾಲೆಯಲ್ಲಿ ಓದಿದ ಆಕೆ ಆ ಕಾಲದ ಪ್ರಸಿದ್ಧ ಸಾಲಿಸಿಟರ್ ಆಗಿದ್ದ ಕೆ. ಆರ್. ಕಾಮಾ ಅವರನ್ನು ವಿವಾಹವಾದರು. 

1897ರಲ್ಲಿ ಮುಂಬೈ ಪ್ರಾಂತ್ಯದಲ್ಲಿ ಪ್ಲೇಗ್ ಮಾರಿ ಕಾಣಿಸಿಕೊಂಡಾಗ ಮೇಡಮ್ ಕಾಮಾ ಅವರು ಪ್ರಥಮ ಬಾರಿಗೆ ಸಾರ್ವಜನಿಕ ಸೇವೆಗೆ ಮುಂದಾದರು.    ಆಕೆ ತಮ್ಮ ವೈಯಕ್ತಿಕ ಸ್ಥಾನಮಾನಗಳೆಲ್ಲವನ್ನೂ ಬದಿಗಿಟ್ಟು, ತಮ್ಮ  ಜೀವದ ಹಂಗನ್ನೂ ತೊರೆದು  ಹಗಲಿರುಳೂ ರೋಗಿಗಳ ಶುಶ್ರೂಷೆ ಮಾಡಿ ಸಾಮಾನ್ಯ ಜನರ ಕಣ್ಣಿಗೆ ದೇವತೆಯಂತೆಯೇ ಕಂಡು ಬಂದರು.  ಅಂದಿನ ದಿನದಲ್ಲಿ ಬಾಲ ಗಂಗಾಧರ ತಿಲಕ್ ಅವರ ಮಾರ್ಗದರ್ಶನದಲ್ಲಿ  ನೂರಾರು ಜನರನ್ನು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡುವುದಕ್ಕಾಗಿ ಪ್ರೇರೇಪಿಸಿದರು.  ಪ್ಲೇಗ್ ರೋಗಿಗಳ ಶುಶ್ರೂಷೆ ಮಾಡ ತೊಡಗಿದ ಮೇಡಮ್ ಕಾಮಾ ಅವರು ಸ್ವಯಂ ಅನಾರೋಗ್ಯಕ್ಕೆ ಸಿಲುಕಿದಾಗ ಅವರ ಕುಟುಂಬದವರು ಮತ್ತು ಶ್ರೇಯೋಭಿಲಾಶಿಗಳು ಅವರ ಆರೋಗ್ಯ ಸುಧಾರಿಸಲಿಕ್ಕಾಗಿ ಅವರನ್ನು  ಇಂಗ್ಲೆಂಡಿಗೆ ಕಳುಹಿಸಿಕೊಟ್ಟರು. 

ಇಂಗ್ಲೆಂಡಿಗೆ ಬಂದಾಗ ಮೇಡಮ್ ಕಾಮಾ ಅವರು ದಾದಾಬಾಯ್ ನವರೋಜಿ ಅವರ ಕಾರ್ಯದರ್ಶಿಗಳಾದರು.  ದಾದಾ ಬಾಯಿ ನವರೋಜಿ ಬ್ರಿಟಿಷ್ ಹೌಸ್ ಆಫ್ ಕಾಮಾನ್ಸ್ಗೆ ಆಯ್ಕೆಯಾದ ಪ್ರಥಮ ಭಾರತೀಯರೆಂಬ ಖ್ಯಾತಿ ಪಡೆದಿದ್ದವರು.  ನವರೋಜಿಯವರ ಪ್ರಭಾವ ಮತ್ತು ಶ್ಯಾಮಜಿ ಕೃಷ್ಣವರ್ಮ, ವೀರ ಸಾವರ್ಕರ್ ಮುಂತಾದವರ  ಸಹಚರ್ಯಗಳಿಂದ ಪ್ರೇರಿತರಾದ  ಮೇಡಮ್ ಕಾಮಾ ಅವರು ಭಾರತದಲ್ಲಿನ ಆಡಳಿತದಲ್ಲಿ ಬ್ರಿಟಿಷರ ದೌರ್ಜನ್ಯದ ಕುರಿತು ಸಾರ್ವಜನಿಕವಾಗಿ ಮಾತನಾಡಲಾರಂಭಿಸಿದರು. 

ಮೇಡಮ್ ಕಾಮಾ ಅವರ ಪ್ರಸಿದ್ಧಿಯಿಂದ ದಿಗಿಲುಗೊಂಡಿದ್ದ ಬ್ರಿಟಿಷ್ ಸರ್ಕಾರ ಆಕೆಯ ಹತ್ಯೆ ಗೈಯುವ ಸಂಚನ್ನು ರೂಪಿಸತೊಡಗಿತ್ತು.  ಇದರ ಸುಳಿವು ದೊರೆತ ಮೇಡಮ್ ಕಾಮಾ ಇಂಗ್ಲಿಷ್ ಕಡಲ್ಗಾಲುವೆಯ ಮೂಲಕ ಫ್ರಾನ್ಸ್ ದೇಶಕ್ಕೆ ಪಲಾಯನ ಮಾಡಿದರು.  ಅವರ ಫ್ರೆಂಚ್ ಮನೆ ಅನೇಕ ಕ್ರಾಂತಿಕಾರಿಗಳ ರಕ್ಷಣಾ ಗೃಹವಾಯಿತು.  ಐರಿಶ್ ಮತ್ತು ರಷ್ಯಾ ದೇಶೀಯರಿಗೆ ಪಿಸ್ತೂಲುಗಳಂತಹ  ಉಡುಗೊರೆ ನೀಡುವುದರ ಮೂಲಕ ಸ್ನೇಹ ಗಳಿಸಿದ್ದರು.   ಅವರ ಪ್ರಖ್ಯಾತಿಯಿಂದ ದಿಗಿಲುಗೊಂಡ ಬ್ರಿಟಿಷ್ ಸರ್ಕಾರ ಆಕೆಯನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಫ್ರಾನ್ಸ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿತು.   ಆ ಮನವಿಯನ್ನು ಫ್ರಾನ್ಸ್ ತಿರಸ್ಕರಿಸಿದಾಗ ಬ್ರಿಟಿಷ್ ಸರ್ಕಾರ ಆಕೆಯನ್ನು ಗಡೀಪಾರು ಮಾಡುವ ಆಜ್ಞೆ ಹೊರಡಿಸಿ ಆಕೆಯ ವಂಶಪಾರಂಪರ್ಯ ಆಸ್ತಿಗಳನ್ನೆಲ್ಲಾ ಮುಟ್ಟುಗೋಲು ಹಾಕಿಕೊಂಡಿತು.

ಅಪ್ರತಿಮ ಧೈರ್ಯ, ಭಯರಾಹಿತ್ಯ, ನಿಷ್ಠೆ ಮತ್ತು ಸ್ವಾತಂತ್ರ್ಯದ ಅಭಿಲಾಷೆ ತುಂಬಿಕೊಂಡಿದ್ದ ಮೇಡಮ್ ಕಾಮಾ ಅವರು ಭಾರತದ ಸ್ವಾತಂತ್ಯಕ್ಕಾಗಿ ವಿದೇಶಿ ನೆಲದಿಂದ ಹೋರಾಡಿದವರಲ್ಲಿ ಮಹತ್ವದವರೆನಿಸಿದ್ದಾರೆ.  ತಮ್ಮ ದೇಶದ ಮೇಲಿನ ಪ್ರೀತಿಯಿಂದಾಗಿ ಅವರು ತಮ್ಮ ಸಂಸಾರ ಸುಖವೆಲ್ಲವನ್ನೂ ತ್ಯಜಿಸಬೇಕಾಗಿ ಬಂತು.   ಬ್ರಿಟಿಷರು ಅವರ ವಿರುದ್ಧ ನಡೆಸಿದ ಎಲ್ಲಾ ಕಾರ್ಯಚಟುವಟಿಕೆಗಳನ್ನೂ ಮೀರಿ ಕಿಂಚಿತ್ತೂ ಕಂಗೆಡದ ಮೇಡಮ್ ಕಾಮಾ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಹೋರಾಟವನ್ನು ಹಗಲಿರುಳೂ ನಡೆಸಿದರು.  1905ರಲ್ಲಿ ಮೇಡಮ್ ಕಾಮಾ ಅವರು ತಮ್ಮ ಅನೇಕ ರಾಷ್ಟ್ರ ಪ್ರಿಯ ಕಾರ್ಯಕರ್ತರೊಡಗೂಡಿ ಭಾರತದ ಪ್ರಪ್ರಥಮ ತ್ರಿವರ್ಣದ್ವಜವನ್ನು ರೂಪಿಸಿದರು.  ಈ ದ್ವಜವು ಹಸಿರು, ಕೇಸರಿ ಮತ್ತು ಕೆಂಪು ಪಟ್ಟಿಗಳನ್ನು ಹೊಂದಿತ್ತು.  35 ವರ್ಷಗಳ ಸುದೀರ್ಘ ಕಾಲ ಯೂರೋಪಿನಲ್ಲಿದ್ದು ಪ್ರಭಾವಯುತ ಇಂಗ್ಲಿಷ್ ರೂಢಿಸಿಕೊಂಡಿದ್ದರೂ  ಹಿಂದಿ ಭಾಷೆಯನ್ನು ಭಾರತದ ರಾಷ್ಟ್ರಭಾಷೆಯಾಗಿ ರೂಪಿಸಬೇಕೆಂಬುದು ಅವರ ಕನಸಾಗಿತ್ತು. 

21 ಆಗಸ್ಟ್ 1907ರಂದು  ಜರ್ಮನಿಯ ಸ್ಟೂಟ್‌ಗಾರ್ಟ್ ಎಂಬ ನಗರದಲ್ಲಿ ಅಂತಾರಾಷ್ಟ್ರೀಯ ಸಮಾಜವಾದಿ ಪರಿಷತ್ತುಸೇರಿತ್ತು. ಈ ಪರಿಷತ್ತಿಗಾಗಿ ಜಗತ್ತಿನೆಲ್ಲೆಡೆಯಿಂದ   ಸಾವಿರಾರು ಪ್ರತಿನಿಧಿಗಳು  ಆಗಮಿಸಿದ್ದರು. ಹಿಂದೂಸ್ಥಾನದ ಪ್ರತಿನಿಧಿಯ ಸಮಯ ಬಂದಾಗ ಅಪಾರ ಆತ್ಮ ವಿಶ್ವಾಸದ ಜೊತೆಗೆ ರಾಜಮನೆತನದ ಗಾಂಭೀರ್ಯ  ತುಂಬಿ ತುಳುಕುವಂತಿದ್ದ ಮೇಡಮ್ ಕಾಮಾ ಅವರು ವೇದಿಕೆಯ ಮೇಲೆ ಬಂದು  ಹಿಂದೂಸ್ಥಾನದಲ್ಲಿ ಬ್ರಿಟೀಷರ ರಾಜ್ಯವಿದೆ, ಅದು ಮುಂದುವರಿಯುವುದು ಭಾರತೀಯ  ಜನರ ಹಿತಕ್ಕೆ ಅತ್ಯಂತ ಬಾಧಕವಿದೆ ಮತ್ತು ಆತಂಕದ ವಿಷಯವಾಗಿದೆ.  ಆದರ್ಶ ಸಾಮಾಜಿಕ ವ್ಯವಸ್ಥೆಯ ದೃಷ್ಟಿಯಿಂದ ಯಾವುದೇ ಜನರ ಮೇಲೆ ಸರ್ವಾಧಿಕಾರ ಅಥವಾ ಹಿಂಸಾತ್ಮಕ ಆಡಳಿತವಿರಬಾರದು; ಆದುದರಿಂದ ಜಗತ್ತಿನ ಸ್ವಾತಂತ್ರ್ಯದ ಎಲ್ಲ ಪ್ರೇರಕರು ಆ ಬಳಲಿದ ದೇಶದಲ್ಲಿರುವ ಎಲ್ಲ ಮಾನವೀ ಜನಸಂಖ್ಯೆಯ ಒಂದನೇ ಐದಂಶದ ಜನರನ್ನು ಪಾರತಂತ್ರದಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ಸಹಾಯ ಮಾಡಬೇಕು!ಎಂಬ ಠರಾವನ್ನು ಮಂಡಿಸಿದರು. ಈ ಠರಾವನ್ನು ಮಂಡಿಸಿದ ನಂತರ ಆಕೆ  ತಾನು ತಂದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದರು. ಕಠೋರ ಧ್ವನಿಯಲ್ಲಿ ಆಂಗ್ಲ ಭಾಷೆಯಲ್ಲಿ ಅವರು, ‘ಇದು ಹಿಂದೂಸ್ಥಾನದ ಸ್ವಾತಂತ್ರ್ಯದ ಧ್ವಜವಾಗಿದೆ. ನೋಡಿ, ನೋಡಿ! ಈಗ ಇದರ ಜನ್ಮವಾಗಿದೆ. ಸಭ್ಯ ಗೃಹಸ್ಥರೇ, ಎದ್ದೇಳಿ ಮತ್ತು ಈ ಧ್ವಜಕ್ಕೆ ನಮಸ್ಕರಿಸಿಎಂದು ನಾನು ನಿಮಗೆ ಕರೆ ಕೊಡುತ್ತಿದ್ದೇನೆ ಎಂದು ಭಾವಪರವಶರಾಗಿ ನುಡಿದರು. ಈ ಘಟನೆಯಿಂದ ಮೂಕವಿಸ್ಮಿತರಾದ  ಎಲ್ಲ ಪ್ರತಿನಿಧಿಗಳೂ ಎದ್ದು ನಿಂತು ಹಿಂದೂಸ್ಥಾನದ ಪ್ರಥಮ ಸ್ವತಂತ್ರ ರಾಷ್ಟ್ರಧ್ವಜಕ್ಕೆ ನಮಸ್ಕರಿಸಿದರು.  ಮೇಡಮ್ ಕಾಮಾ ಅವರ ಮಾತುಗಳು ಜರ್ಮನಿಯ ಪ್ರಮುಖ ಪತ್ರಿಕೆಗಳಲ್ಲಿ ಪ್ರತಿಧ್ವನಿತಗೊಂಡವು.

ವಿದೇಶಿ ನೆಲದಲ್ಲಿ ಅಪೂರ್ವ ರೀತಿಯಲ್ಲಿ ಕ್ರಾಂತಿಕಾರಕ ಚಟುವಟಿಕೆ ನಡೆಸಿದ ಮದನ್ ಲಾಲ್ ಧಿಂಗ್ರ ಅಂತಹ ಯುವಕರು ಮೇಡಮ್ ಕಾಮಾ ಅವರಿಂದ ಅಪರಿಮಿತ ಸ್ಫೂರ್ತಿ ಪಡೆದಿದ್ದರು.  1914ರಲ್ಲಿ ಪ್ರಥಮ ಮಹಾ ವಿಶ್ವಯುದ್ಧ ಪಾರಂಭಗೊಂಡಾಗ ಮೇಡಮ್ ಕಾಮಾ ಅವರು ಭಾರತದ ಪರವಾಗಿ ಬ್ರಿಟಿಷರ ವಿರುದ್ಧ ವಿದೇಶಿ ಸೈನ್ಯಗಳ ಸಹಕಾರ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದರು.  ವಂದೇ ಮಾತರಂ ಮತ್ತು ಮದನ್ಸ್ ತೆಲ್ವಾರ್ (ಮದನ್ ಲಾಲ್ ಧಿಂಗ್ರ ಗೌರವಾರ್ತ ಹೊರತಂದ ಪತ್ರಿಕೆ)  ಎಂಬ ಎರಡು ಪತ್ರಿಕೆಗಳನ್ನು ಹುಟ್ಟುಹಾಕಿದರು.

ಮೇಡಮ್ ಕಾಮಾ ಅವರು ಅಮೆರಿಕ ಒಳಗೊಂಡಂತೆ ಬಹುತೇಕ ದೇಶಗಳಿಗೆ ಪ್ರಯಾಣ ಮಾಡಿ ಭಾರತದ ಪರವಾಗಿ ಸ್ವಾತಂತ್ರ್ಯದ ಪ್ರತಿಪಾದನೆ ಕೈಗೊಂಡರು. 


1931ರಲ್ಲಿ ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಭಾರತಕ್ಕೆ ಹಿಂದಿರುಗಿದ ಮೇಡಮ್ ಕಾಮಾ ಅವರು ಆಗಸ್ಟ್ 13, 1936ರಂದು ನಿಧನರಾದರು.  ದೇಶ ನಿರ್ಮಾಣ ಕಾರ್ಯದಲ್ಲಿ ಮಹಿಳೆಯ ಪಾತ್ರವನ್ನು ಮರೆಯದಿರಿಎಂದು ಹೇಳುತ್ತಿದ್ದ ಮೇಡಮ್ ಕಾಮಾ ಅವರು ಮರೆಯಲಾಗದಂತಹ ಮಹಾನ್ ಕಾರ್ಯವನ್ನು ಮಾಡಿಹೋದರು.  ಈ ಮಹಾನ್ ತಾಯಿಗೆ ನಮ್ಮ ನಮನ.

Tag: Madam Cama,  Bhikaji Cama

ಕಾಮೆಂಟ್‌ಗಳಿಲ್ಲ: