ಶುಕ್ರವಾರ, ಸೆಪ್ಟೆಂಬರ್ 20, 2013

ಚೇಳು ಕುಟುಕಿದಾಗಲೂ ಕಾಫಿ ಕೊಟ್ಟ ಕೈ


ಚೇಳು ಕುಟುಕಿದಾಗಲೂ ಕಾಫಿ ಕೊಟ್ಟ ಕೈ
- ಮಾಸ್ತಿಯವರು ಹೇಳಿದ ಒಂದು ಅನುಭವ

'ಗೋಕಾಕ್ ಸಮೀಪದ ಒಂದು ಹಳ್ಳಿ. ಅದೊಮ್ಮೆ ಕನ್ನಡದ ಕೆಲಸವನ್ನು ಆ ಹಳ್ಳಿಯ ಜನರೆಲ್ಲ ಸೇರಿ ಹಬ್ಬದಂತೆ ಸಮಾರಂಭವನ್ನು ನಡೆಸಿದರು. ಅಲ್ಲಿನ ದೇಸಾಯಿಯವರ ಮನೆಯಲ್ಲಿ ನನ್ನ (ಅಂದರೆ ಮಾಸ್ತಿಯವರ) ಬಿಡಾರ. ಸಭೆಯ ಕಲಾಪಗಳೆಲ್ಲ ಮುಗಿಯುವ ವೇಳೆಗೆ ರಾತ್ರಿ ಹತ್ತಾಗಿತ್ತು. ಗೋಕಾಕ ಮತ್ತು ಸುತ್ತಮುತ್ತಲಿನ ಊರುಗಳಿಂದ ಆ ಸಭೆಗಾಗಿ ಬಂದವರಿಗೆಲ್ಲ ಆ ರಾತ್ರಿ ದೇಸಾಯಿಯವರ ಮನೆಯಲ್ಲೇ ಅರ್ಧ ರಾತ್ರಿಯವರೆಗೂ ಅಡುಗೆ, ಊಟ ಎಲ್ಲವನ್ನೂ ದೇಸಾಯಿಯವರ ಧರ್ಮಪತ್ನಿ (ಹೆಸರು 'ಪಾರ್ವತಿಬಾಯಿ' ಅಂತ ನನ್ನ ನೆನಪು) ತಾವೇ ನಿರ್ವಹಿಸಿದರು. ಅರ್ಧ ರಾತ್ರಿ ಕಳೆದ ಮೇಲೂ ಆ ತಾಯಿ ಇನ್ನೂ ಏನೇನೋ ಕೆಲಸದಲ್ಲಿ ತೊಡಗಿದ್ದರು.

ನಾನು ಅವರ ಮನೆಯ ಅಟ್ಟದ ಮೇಲೆ ಮಲಗಿದ್ದೆ. ಬೆಳಿಗ್ಗೆ 6.30ಕ್ಕೆ ಬಸ್ ಹೊರಡುವುದಿತ್ತು. ಅದರಲ್ಲಿ ಗೋಕಾಕ ತಲುಪಬೇಕು. ಅನಂತರ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಎಂದಾಗಿತ್ತು. ಸ್ನಾನ ಮಾಡಬೇಕು ಎಂದರೆ ಮತ್ತೆ ನೀರು ಕಾಯಿಸಬೇಕು. ಅದೆಲ್ಲ ತಡವಾಗುತ್ತೆ ಎಂದು ಬೇಗ ಬೇಗನೆ ಮುಖ ತೊಳೆದು, ನನ್ನ ಚಿಕ್ಕ ಸೂಟ್‌ಕೇಸ್ ಹಿಡಿದು ಹೊರಟೆ. ಅಷ್ಟರಲ್ಲಿ ದೇಸಾಯಿಯವರು ಹೊರ ಬಂದು 'ತುಂಬಾ ಚಳಿ ಇದೆ. ಸ್ವಲ್ಪ ಕಾಫಿ ಕುಡಿದು ಹೊರಡಿ' ಎಂದರು. ರಾತ್ರಿಯೆಲ್ಲ ಆ ತಾಯಿ ಶ್ರಮಪಟ್ಟಿದ್ದಾರೆ. ಅವರಿಗೆ ನಿದ್ದೆಯೇ ಇಲ್ಲ. ಇಷ್ಟು ಬೇಗನೇ ಅವರನ್ನು ಎಬ್ಬಿಸಿ ಕಾಫಿ ಮಾಡಿಸುವುದು ಸರಿಯಲ್ಲ ಎನ್ನಿಸಿ 'ಕಾಫಿ ಬೇಡ. ಬಸ್ ತಪ್ಪಬಹುದು' ಎಂದೆ.

ನಮ್ಮ ಕಡೆಯ ಒಬ್ಬರು ಬಸ್ಸಿನ ಬಳಿಯೇ ಹೋಗಿದ್ದಾರೆ. ಇನ್ನೂ15-20 ನಿಮಿಷ ಇದೆ. ನಾವು ಹೋಗುವವರೆಗೂ ಆ ಬಸ್ಸು ಕಾಯುತ್ತೆ' ಎಂದ ದೇಸಾಯಿಯವರು ಅಡುಗೆ ಮನೆ ಕಡೆ ನಡೆದು ಕಾಫಿಗಾಗಿ ಅವಸರಿಸಿದರು. ನಾನು ಅವರ ಹಿಂದೆಯೇ ನಡೆದು 'ಏನ್ ತಾಯಿ ರಾತ್ರಿಯೆಲ್ಲ ಬಿಡುವೇ ಇಲ್ಲ. ಈಗ ಇಷ್ಟು ಬೇಗ ಎದ್ದಿದ್ದೀರಿ. ಏಕಿಷ್ಟು ತೊಂದರೆ?' ಎಂದೆ.
ಒಲೆಯ ಮುಂದೆ ಕುಳಿತಿದ್ದ ಅವರು ನನ್ನ ಕಡೆ ನೋಡಿ- 'ಏನೂ ತೊಂದರೆ ಇಲ್ಲ. ಇಗೋ ಆಯಿತು' ಎಂದರು. ಅವರ ಮುಖದಲ್ಲಿ ಏನೋ ಅಸಮಾಧಾನ, ನೋವು, ಹಿಂಸೆ ಕಾಣಿಸಿತು. ಇಷ್ಟು ಬೇಗನೇ ಕಾಫಿ ಮಾಡಬೇಕಾಗಿ ಬಂದುದರಿಂದ ಅವರಿಗೆ ಅಸಮಾಧಾನವಾಗಿರುವುದು ಆ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಹೀಗೆ ಮನಸ್ಸಿಲ್ಲದ ಮನಸ್ಸಿನಿಂದ ಮಾಡಿಕೊಟ್ಟ ಕಾಫಿಯನ್ನು ನಾನು ಕುಡಿಯಬೇಕೇ?' ಎಂದುಕೊಂಡೆ.

'ತೊಂದರೆ ಬೇಡಾ ತಾಯಿ. ಇಷ್ಟು ಬೇಗ ಕಾಫಿ ಕುಡಿಯುವ ರೂಢಿ ನನಗಿಲ್ಲ. ನಮಸ್ಕಾರ, ಹೋಗಿ ಬರುತ್ತೇನೆ' ಎಂದು ಬಾಗಿಲ ಕಡೆ ಬಂದೆ.

ದೇಸಾಯಿಯವರು ಮಾರುಗೈ ಹಾಕಿ ಬಾಗಿಲಿಗೆ ಆಡ್ಡವಾಗಿ ನಿಂತು 'ಈ ಚಳಿಯಲ್ಲಿ ಕಾಫಿ ಕೊಡದೇ ನಿಮ್ಮನ್ನು ಕಳುಹಿಸಲು ನನ್ನ ಮನಸ್ಸು ಒಪ್ಪುವುದಿಲ್ಲ. ದಯಮಾಡಿ ಒಂದು ನಿಮಿಷ ತಡೆಯಿರಿ. ನಿಮಗೆ ಬಸ್ ಅಂತೂ ತಪ್ಪುವುದಿಲ್ಲ' ಎಂದರು. ಅಷ್ಟರಲ್ಲಿ ಆ ತಾಯಿ 'ಇಗೋ ತಂದೆಬಿಟ್ಟೇ' ಎನ್ನುತ್ತ ಅಡುಗೆ ಮನೆಯಿಂದ ಹೊರ ಬಂದರು. ನಾನು ಅವರ ಕಡೆ ನೋಡಿದಾಗ ಕಾಫಿ ಲೋಟವನ್ನು ಎಡಗೈಲಿ ಹಿಡಿದಿದ್ದರು. ಮುಖದಲ್ಲಿ ಅದೇ ಅಪ್ರಸನ್ನತೆಯ ಮುದ್ರೆ ಇತ್ತು.
ನನಗಂತೂ ಆ ಕಾಫಿ ಸುತರಾಂ ಇಷ್ಟವಾಗಲಿಲ್ಲ. ಅಷ್ಟರಲ್ಲಿ ಸಮೀಪಕ್ಕೆ ಬಂದ ಆ ತಾಯಿ ಆ ಲೋಟವನ್ನು ಬಲಗೈಗೆ ತೆಗೆದುಕೊಂಡು ನನ್ನ ಕಡೆ ನೀಡಿದರು. ಗತ್ಯಂತರವಿಲ್ಲದೇ ತೆಗೆದುಕೊಂಡೆ. ಆದರೆ ಕುಡಿಯಲು ಮನಸ್ಸಿಲ್ಲ. ಒಂದು ಮಾತು ಕೇಳಬೇಕು ಎನ್ನಿಸಿ, ಕೇಳಿಯೇ ಬಿಟ್ಟೆ.

'ಏನ್ ತಾಯಿ, ನಿಮ್ಮನ್ನು ಒಂದು ಮಾತು ಕೇಳಬೇಕು ಎನ್ನಿಸುತ್ತೆ. ಕೇಳುತ್ತೇನೆ. ನೀವಂತೂ ನಿರ್ವಂಚನೆಯಿಂದ ಸತ್ಯವನ್ನೇ ನುಡಿಯಬೇಕು. ಹಾಗಿದ್ದರೆ ಮಾತ್ರ ಹೇಳುತ್ತೇನೆ' ಎಂದೆ.
ಆಕೆ ತಬ್ಬಿಬ್ಬಾಗಿ- 'ಅದೇನು ನನ್ನನ್ನು ಕೇಳುವಂತಹ ಮಾತು!?' ಎಂದರು.

ನೀವು ಒಲೆಯ ಮುಂದೆ ಕುಳಿತಾಗಲೂ ಗಮನಿಸಿದೆ. ಈಗಲೂ ನೋಡುತ್ತಿದ್ದೇನೆ. ನಿಮ್ಮ ಮುಖದಲ್ಲಿ ಎಂಥದೋ ಅಸಮಾಧಾನ, ಕಿರಿ ಕಿರಿ ಎದ್ದು ಕಾಣುತ್ತಿದೆ. ಸಾಲದ್ದಕ್ಕೆ ಎಡಗೈಲಿ ಕಾಫಿ ತಂದಿರಿ. ದಯವಿಟ್ಟು ಇದರ ಸತ್ಯ ಸಂಗತಿಯನ್ನು ತಿಳಿಸುತ್ತೀರಾ? ಎಂದೆ. ಆ ತಾಯಿ ಬಲವಂತದಿಂದ ನಗುವನ್ನು ಮುಖದ ಮೇಲೆ ಎಳೆದುಕೊಂಡು ಮಾತನಾಡಿದರು.
'ಅದೇ? ನಿಮಗೆ ಬೇಗನೇ ಕಾಫಿ ಮಾಡೋಣವೆಂದು ಅವಸರದಿಂದ ಒಲೆಯ ಬೂದಿ ತೆಗೆಯುತ್ತಿದ್ದೆ. ಬೂದಿಯಲ್ಲಿ ಅಡಗಿದ್ದ ಚೇಳು ಕುಟುಕಿ ಬಿಡ್ತು' ಎಂದು ತಮ್ಮ ಬಲಗೈಯ ತೋರು ಬೆರಳನ್ನು ತೋರಿಸಿದರು. ನನಗೆ ದಿಕ್ಕು ತಪ್ಪಿದಷ್ಟು ಆಶ್ಚರ್ಯವಾಯಿತು.

'ಏನೂ...? ನೀವು ಚೇಳು ಕುಟುಕಿಸಿಕೊಂಡು, ಆ ನೋವಿನಲ್ಲೂ ನನಗೆ ಕಾಫಿ ಮಾಡಿದಿರಾ! ನಾನೀ ಕಾಫಿಯನ್ನು ಕುಡಿಯಬಹುದೇ? ಖಂಡಿತ ಸಾಧ್ಯವಿಲ್ಲ ಕ್ಷಮಿಸಿ' ಎಂದೆ. ಅದೇ ನೋವು, ನಗುಮಿಶ್ರಿತ ಮುಖದಿಂದ ಆಕೆ, 'ನೀವು ಕಾಫಿ ಕುಡಿಯದೇ ಬಿಟ್ಟರೆ ನನ್ನ ನೋವು, ಉರಿ ವಾಸಿಯಾಗುವುದಾದರೆ ಹಾಗೇ ಮಾಡಿ' ಎಂದರು.

ಅವರ ಮಾತಿಗೆ, ಮನೋಧರ್ಮಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ. ನಾನೆಷ್ಟು ತಪ್ಪಾಗಿ ತಿಳಿದುಕೊಂಡಿದ್ದೆ. ಪೂರ್ಣವಾಗಿ ಪರಿಶೀಲಿಸಿದೇ ಒಬ್ಬರ ಬಗೆಗೆ ಹೀಗೆ ತೀರ್ಮಾನಿಸುವುದು ಎಂತಹ ಪ್ರಮಾದ ಎಂದು ನಾಚಿಕೆಯಾಯಿತು...'

(ಬೆಳಗೆರೆ ಕೃಷ್ಣಶಾಸ್ತ್ರೀ ಅವರ 'ಸಾಹಿತಿಗಳ ಸ್ಮೃತಿ' ಪುಸ್ತಕದಿಂದ ಆಯ್ದ ಬರಹ.  ಕಂಡದ್ದು: 'ಕನ್ನಡಪ್ರಭ'ದಲ್ಲಿ)


Tag: Masti Venkatesha Iyengar


ಕಾಮೆಂಟ್‌ಗಳಿಲ್ಲ: