ಶುಕ್ರವಾರ, ಸೆಪ್ಟೆಂಬರ್ 6, 2013

ಒಂದು ಮುಂಜಾವಿನಲಿ

ಒಂದು ಮುಂಜಾವಿನಲಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು.
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ....

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು.
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು.
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ....

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತಿತ್ತು.
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ....

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು.
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು.
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ....
ಉಷೆಯ ನುಣ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು.
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ.....

ಸಾಹಿತ್ಯ: ಚನ್ನವೀರ ಕಣವಿ
ಗಾಯನ: ಬಿ. ಆರ್. ಛಾಯಾ
ಸಂಗೀತ: ಸಿ. ಅಶ್ವಥ್

ಗಾಯನ: ಸಂಗೀತ ಕಟ್ಟಿ
ಸಂಗೀತ: ಸಿ. ಅಶ್ವಥ್
Tag: Ondu munjavinali tunturina sone male, ondu munjaavinali tunturina sone male

ಕಾಮೆಂಟ್‌ಗಳಿಲ್ಲ: