ಮಂಗಳವಾರ, ಸೆಪ್ಟೆಂಬರ್ 3, 2013

ಒಪ್ಪಿಡಿ ಅವಲಕ್ಕಿಯ

ಒಪ್ಪಿಡಿ ಅವಲಕ್ಕಿಯ....


ಕೃಷ್ಣ ಜನ್ಮಾಷ್ಟಮಿಯ ದಿನ, ನಾವು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಇಮಾಮರಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬಂತ ಪ್ರಶ್ನೆಯ ತೆರದಲ್ಲಿ ದುಬೈನ ವಾತಾವರಣದಲ್ಲಿ ದಿನದ ಕೆಲಸ ಮುಗಿಸಿಬಂದು ಕೃಷ್ಣಸ್ಮರಣೆಗೆ ತೊಡಗೋಣ ಎಂದು ಮನಸ್ಸಾಗುವ ವೇಳೆಗೆ ಯಾಕೋ ನಾನು ಈ ಸ್ಮರಣೆಗೆ ತಯಾರಾಗಿಲ್ಲದ ಯಾಂತ್ರಿಕತೆಯಲ್ಲಿ ನಾನು ಕಳೆದುಹೊಗಿರುವಂತೆ ಅನಿಸತೊಡಗಿತು.

ಫೇಸ್ಬುಕ್ಕಿನಲ್ಲಿ ಹರಟುವಷ್ಟು, ದೇಶದ – ಸಮಾಜದ – ಮತ್ತೊಬ್ಬರ ಓರೆಕೋರೆಗಳನ್ನು  ಕುರಿತು ಧ್ಯಾನಿಸುವಷ್ಟು; ಕೆಲಸ ಕಾರ್ಯ, ಬದುಕಿನ ಹಲವಾರು ದ್ವಂದ್ವಗಳಲ್ಲಿ ಕಳೆದುಹೋಗುವಷ್ಟು ಕೃಷ್ಣಪ್ರಜ್ಞೆಯಲ್ಲಿ ಮನಸ್ಸು ನೆಲೆಸುವುದಿರಲಿ ಅದರ ಸಮೀಪವಾದರೂ ಸುಳಿಯಲಿಕ್ಕೆ ಸಾಧ್ಯವೇ ಎನಿಸಿತು.

ಪುಟ್ಟ ವಯಸ್ಸಿನಲ್ಲಿ ಮಾರುಕಟ್ಟೆಯಲ್ಲಿ ನಮಗೆ ಸಾಧ್ಯವಿದ್ದ ಹಲವು ಹಣ್ಣು, ಹೂವು ಪತ್ರೆ ತಂದು, ಮನೆಯಲ್ಲಿ ಕೆಲವು ದಿನದಿಂದ ಒಂದೊಂದೇ ಅಮ್ಮ ಪೋಣಿಸಿ ಮಡಿ ಎಂದು ಮೇಲೆ ತೆಗೆದಿಡುತ್ತಿದ್ದ ತಿಂಡಿಗಳು, ಬೆಳಗಿನಿಂದ ರಾತ್ರಿಯವರೆಗೆ ಎಷ್ಟು ಅಲಂಕಾರ ಮಾಡಿದರೂ ಮುಗಿಯದ, ಒಂದು ಹತ್ತಿದರೆ ಇನ್ನೊಂದು ಕೈ ಕೊಡುತ್ತಿದ್ದ ಬಡತನದ ಸೀರಿಯಲ್ ಲೈಟುಗಳ ವ್ಯವಸ್ಥೆ, ಹಬ್ಬ ಮುಗಿದು ಹಲವಾರು ದಿನ ಕಳೆದರೂ ಮುಗಿಯದ ತಿಂಡಿಗಳ ವಿನಿಮಯ ಇವೆಲ್ಲಾ ನೆನಪಿಗೆ ಬಂದು ಯಾಕೋ ಬಿಕೋ ಅನ್ನಿಸತೊಡಗಿತು.  ಬದುಕೋ, ಮನಸ್ಸೋ ಅರ್ಥವಾಗಲಿಲ್ಲ!

ಇಂದು ದಿನ ಬೆಳಗಾದರೆ ಅಂತಹ ತಿಂಡಿಗಳು, ವೈಭೋಗಗಳು ಎಲ್ಲೆಲ್ಲೂ ಕಾಣುವಂತಿದ್ದು ರೆಡಿಮೇಡ್ ಸಿಗುವ ಹಾಗಿದೆ.  ಯಾವುದಕ್ಕೂ ಕಷ್ಟವಿಲ್ಲ.  ಯಾವುದನ್ನೂ ಮಾಡುವ ಅಭ್ಯಾಸಗಳು ಕಳಚಿ ಹೋಗುತ್ತಿವೆ.  ಇನ್ನು ಅನುಭಾವ ಎಲ್ಲಿ ತಾನೇ ಸಿಗಬೇಕು.  ಮಥುರಾಗೆ ಹೋದರೆ ಕೃಷ್ಣ ಜನ್ಮಸ್ಥಾನ ಎಲ್ಲಿದೆ ಅಂತ ಹುಡುಕಬೇಕು.  ಗೋಕುಲದಲ್ಲಿ ಹೋದರೆ ಅಲ್ಲಿ ಕೃಷ್ಣನ ಜೊತೆ  ಇದ್ದ ಎಲ್ಲಾ ಸೌಂದರ್ಯಗಳೂ ಕೃಷ್ಣನ ಹಿಂದೆಯೇ ಹೊರಟು ಹೋದವೇ, ಇಲ್ಲಿ ಕೃಷ್ಣ ಇದ್ದ ಎಂಬ ಸಾಕ್ಷಿಗೆ ನಂದನವನ ಇಲ್ಲದಿದ್ದರೆ ಬೇಡ ಒಂದು ಸುಂದರವಾದ ಪಾರ್ಕ್ ಆದರೂ ಕಣ್ಣಿಗೆ ಬೀಳಬಾರದೆ ಎಂಬ ಕೊರಗು ಕಂಡೀತು.  ಅದೇನೋ ರಾಧೇ ರಾಧೇ ಅಂತ ಕಿತ್ತು ಹೋದ ಟೇಪ್ ರೆಕಾರ್ಡುಗಳು ಬಡಕೊಂಡಿದ್ದೂ ಬಡಕೊಂಡಿದ್ದೇ.  ಕೃಷ್ಣ ನಮ್ಮ ದೇಶದಲ್ಲಿ ಇದ್ದ ಆ ಆಕರ್ಷಣಾ ಶಕ್ತಿಯ ಪ್ರತೀಕವಾದ 'ಸೌಂದರ್ಯ' ಲಹರಿಯಾಗಲಿ, 'ಪ್ರೇಮ' ಭಾವವಾಗಲೀ, 'ಆನಂದ'ವೆಂಬ ಅನುಭಾವವಾಗಲೀ ಅದು ಹೇಗೆ ನಮ್ಮ ಬದುಕಿನಿಂದ ಓಡಿ ಹೋಗುತ್ತಿದೆ.

"ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ತಾನಮ ಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ.  ಪರಿತ್ರಾಣಾಯ ಸಾಧೂನಾಂ, ವಿನಾಶಾಯ ಚ ದುಷ್ಕೃತಾಮ್, ಧರ್ಮ ಸಂಸ್ಥಾಪನಾರ್ಥಾಯಾಂ ಸಂಭವಾಮಿ ಯುಗೇ ಯುಗೇ" ಅಂತ ಭಗವಾನರು ನುಡಿದರು.  ಧರ್ಮಕ್ಕೆ ಗ್ಲಾನಿಬರುತ್ತಲೇ ಇದೆ.  ನಾವು ಅದರಲ್ಲಿ ಭಾಗವಾಗುತ್ತಲೇ ನಡೆದಿದ್ದೇವೆ.  ಪರಮಾತ್ಮನನ್ನು ನಾವು, ಬಂದು ಕಾಪಾಡು ಎಂದು ಬಯಸುತ್ತಿದ್ದೇವೆಯೇ!  "ನಮಗೆ ಏನು ಗೊತ್ತಿದೆಯೋ, ಅದು ಬೇರೆಯವರಿಗೆ ಗೊತ್ತಿರಬಾರದು. ಬೇರೆಯವರಿಗೇನು, ಪರಮಾತ್ಮನಿಗೂ ಗೊತ್ತಿರಬಾರದು.  ಪರಮಾತ್ಮನು  ನಾವು ಏನು ಹೇಳುತ್ತೇವೋ ಅದು ತಂದು ಕೊಡುವ ಮಾಣಿ ಆಗಿರಬೇಕು.  ಎಷ್ಟೊಂದು ಸತ್ಯವಂತರು ಇಂದೂ ಅಲ್ಲಲ್ಲಿ ಕಾಣುತ್ತಿದ್ದಾರೆ.  ಅವರನ್ನೆಲ್ಲಾ ನಾವು ಎಲ್ಲೋ ಸಂದೇಹದಿಂದ ನೋಡುತ್ತಿಲ್ಲವೇ.  ಪರಮಾತ್ಮನೇ ಬಂದರೂ ಅವನನ್ನು ಗುರುತಿಸುವ ಆಂತರ್ಯದ ಆಳಕ್ಕೆ ನಾವು ತಲುಪಬಲ್ಲವೇ!".

"ತೇಷಾಂ ಸತತ ಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಂ,
ದದಾಮಿ ಬುದ್ಧಿಯೋಗಂ ತಮ್ ಏನ್ ಮಾಮುಪಯಂತಿತೆ"

ಭಗವದ್ಗೀತೆಯಲ್ಲಿ ಎಂದೋ ತಿರುವಿ ಹಾಕಿದ್ದ ಪರಮಾತ್ಮನ ನುಡಿ ನೆನಪಾಗುತ್ತಿದೆ.  "ಯಾರು ನನ್ನನ್ನು ಪ್ರೀತಿ ಪೂರ್ವಕವಾಗಿ ಚಿಂತಿಸುತ್ತಾರೋ, ಅವರಿಗೆ ನನ್ನನ್ನೇ ಸೇರಬಹುದಾದ ಜ್ಞಾನಯೋಗವನ್ನು ನೀಡುತ್ತೇನೆ". ಪರಮಾತ್ಮನ ಈ ಕೊಡುಗೆ ಪಡೆಯಲಿಕ್ಕೆ  ನಮ್ಮಲ್ಲಿ ಸಮಯವಿದೆಯೇ, ವ್ಯವಧಾನ ಉಳಿದಿದೆಯೇ!

"ಒಪ್ಪಿಡಿ ಅವಲಕ್ಕಿಯ ಕೃಷ್ಣಯ್ಯಾ ನೀ ಕೂಟ್ಟವಗೆ ನೀ ಒಲಿದೆ".  ಪರಮಾತ್ಮ ಆ ಒಪ್ಪಿಡಿ ಅವಲಕ್ಕಿಯ ಸಾಮಾನ್ಯತೆಯ ಸೌಂದರ್ಯಕ್ಕೆ ಕೈಹಿಡಿದು ನಡೆಸಿ ನನ್ನನ್ನು ನಿನ್ನಲೊಂದುಮಾಡಿಕೊ ಸ್ವಾಮಿ.  "ನಾನೇನು ಮಾಡುತ್ತಿರುವೆನೋ ನಾನರಿಯೆ, ನೀ ಎನ್ನ ಸಲಹಬೇಕೋ....."

ಎಲ್ಲರಿಗೂ ಪರಮಾತ್ಮನ ಕೃಪೆಯಿಂದ ಒಳಿತಾಗಲಿ.   ಪರಮಾತ್ಮನ ಕೃಪೆಗೆ ಸನಿಹವಾಗುವ ಹೃದಯ ದೊರಕಲಿ.

(ಬರೆದದ್ದು ೨೦೧೦ರ ವರ್ಷದಲ್ಲಿ ದುಬೈನಲ್ಲಿ ವಾಸವಿದ್ದಾಗ)


Tag: Oppidi Avalakkiya 

ಕಾಮೆಂಟ್‌ಗಳಿಲ್ಲ: