ಮಂಗಳವಾರ, ಸೆಪ್ಟೆಂಬರ್ 3, 2013

ಮೋಹನ ಮುರಳಿಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ ಚಂದ್ರ ಚಂದನ,
ಬಾಹು ಬಂಧನ, ಚುಂಬನ;
ಬಯಕೆ ತೋಟದ ಬೇಲಿಯೊಳಗೆ
ಕರಣಗಳದೀ ರಿಂಗಣ;

ಒಲಿದ ಮಿದುವೆದೆ, ರಕ್ತಮಾಂಸದ 
ಬಿಸಿದುಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯಲ್ಲೋ! 
ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ
ತೇಲುನೋಟದ ಸೂಚನೆ?
ಯಾವ ಮಧುರ ಯಾತನೆ
ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ
ಎಲ್ಲೊ ಮಲಗಿದೆ ಬೇಸರ;
ಏನೊ ತೀಡಲು ಏನೊ ತಾಗಲು
ಹೊತ್ತಿ ಉರಿವುದು ಕಾತರ.

ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯದೆಲೆಗಳ ಮೂಖ ಮರ್ಮರ
ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ ಹಾಃ
ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು
ಇರದದುರೆಡೆಗೆ ತುಡಿವುದೆ ಜೀವನ?

ಯಾವ ಮೋಹನ ಮುರಳಿ ಕರೆಯಿತು
ಇದ್ದಕ್ಕಿದ್ದಲೆ ನಿನ್ನನು?
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯನು?

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು

ಸಾಹಿತ್ಯ: ಗೋಪಾಲಕೃಷ್ಣ ಅಡಿಗ

ಒಂದೆಡೆ ಲೌಕಿಕ ಸುಖದಲ್ಲಿ ತೃಪ್ತಿ ಪಡದ ಮನಸ್ಸು ಅಲೌಕಿಕದ ಸೆಳೆತವನ್ನುಪಡೆಯುವ ಬಗೆಯನ್ನು ಈ ಕವಿತೆ ಚಿತ್ರಿಸುತ್ತದೆ. ಅಂತೆಯೇ ಇನ್ನೊಂದೆಡೆ, ಇರುವುದೆಲ್ಲವ ಬಿಟ್ಟು ಇರದುದುರೆಡೆಗೆ ತುಡಿವುದೆ ಜೀವನ ಎಂಬ ಪ್ರಶ್ನೆಯ ಮೂಲಕ ಇಲ್ಲಿಯ ಬಂಧನದ ಪ್ರಿಯ ಅನುಭಾವವನ್ನು ಕೂಡ ಕವಿತೆ ಮನೋಜ್ಞವಾಗಿ ಕಟ್ಟಿ ಕೊಡುತ್ತದೆ

Photo Courtesy: www.imagekind.com


Tag: Yava mohana murali kareyitu doora teerake ninnanu

ಕಾಮೆಂಟ್‌ಗಳಿಲ್ಲ: