ಬುಧವಾರ, ಸೆಪ್ಟೆಂಬರ್ 25, 2013

ದೇವಾನಂದ್

ದೇವಾನಂದ್

ಚಲನಚಿತ್ರರಂಗದ ಚಿರಯೌವನಿಗರೆಂದು ಪ್ರಖ್ಯಾತರಾದವರು ದೇವಾನಂದ್.  ಅವರು ಜನಿಸಿದ ದಿನ ಸೆಪ್ಟೆಂಬರ್ 26, 1923.

ಮೈ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾಎಂಬ ಹಮ್ ದೋನೋಚಿತ್ರದ ಹಾಡನ್ನೇ ತಮ್ಮ ಬದುಕಿನ ತತ್ವವಾಗಿಸಿಕೊಂಡ ದೇವಾನಂದ್ ಚಿರನಾಯಕ’ (ಎವರ್‌ಗ್ರೀನ್ ಹೀರೋ) ಎನಿಸಿಕೊಂಡವರು. 1960ರಲ್ಲಿ ಸಾಹಿರ್ ಲೂಧಿಯಾನ್ವಿ ತಮ್ಮ ಗೆಳೆಯ ದೇವಾನಂದ್‌ಗಾಗಿ ಬರೆದ ಹಾಡದು. ಒಡಕೊಡಕಾಗಿ ಸಂಭಾಷಣೆ ಹೇಳುತ್ತಾ, ತಲೆ ಅಲ್ಲಾಡಿಸುತ್ತಾ ತಮ್ಮದೇ ಶೈಲಿಯ ನಟನೆಯ ಛಾಪು ಮೂಡಿಸಿದ ಅವರ ನೆನಪಿನಂಗಳ ವಿಶಾಲ.

ದೇವಾನಂದ್ ಬದುಕು ಸಿನಿಮಾದಷ್ಟೇ ರೋಚಕ. ಲಾಹೋರಿನ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಿಂದ ಇಂಗ್ಲಿಷ್ ಪದವಿ ಪಡೆದು 1940ರ ದಶಕದಲ್ಲಿ ಸಿನಿಮಾ ಲೋಕಕ್ಕೆ ಅವರು ಕಾಲಿಟ್ಟದ್ದು ಕನಸುಗಳ ಮೂಟೆ ಹೊತ್ತು. ಮಿಲಿಟರಿ ಅಂಚೆ ಕಚೇರಿಯಲ್ಲಿ ಸಿಕ್ಕಿದ 165 ರೂಪಾಯಿ ಪಗಾರ ತರುವ ಸೆನ್ಸಾರ್ಕೆಲಸಕ್ಕೆ ಸಲಾಮು ಹೊಡೆದದ್ದೂ ಸಿನಿಮಾ ಪ್ರೀತಿಯಿಂದಲೇ. ಅಣ್ಣ ಚೇತನ್ ಆನಂದ್ ಕೂಡ ಸಿನಿಮಾ ಕ್ಷೇತ್ರದಲ್ಲಿ ಅದಾಗಲೇ ಇದ್ದದ್ದರಿಂದ ದಾರಿ ಸಲೀಸಾಗಿ ಕಂಡಿತು. ಪುಣೆಯ ಪ್ರಭಾತ್ ಸ್ಟುಡಿಯೋ ಕದ ತೆರೆಯಿತು.

ನಿರ್ದೇಶಕ ಪಿ.ಎಲ್.ಸಂತೋಷಿ ಸ್ಕ್ರೀನ್ ಟೆಸ್ಟ್ ಮಾಡಿ ತಮ್ಮ ಹಮ್ ಏಕ್ ಹೈಚಿತ್ರದಲ್ಲಿ ಅವಕಾಶ ಕೊಟ್ಟರು. ಆದರೆ, ಆ ಸಿನಿಮಾ ಹೆಚ್ಚು ಜನರ ಗಮನಕ್ಕೆ ಬಾರದೇಹೋಯಿತು. ಆಗ ಸಹಾಯಕ ನೃತ್ಯ ನಿರ್ದೇಶಕರಾಗಿದ್ದ ಗುರುದತ್ ಗೆಳೆತನ ಸಿಕ್ಕಿದ್ದು ದೇವಾನಂದ್ ಬದುಕಿನ ಮುಖ್ಯ ತಿರುವು. ಯಾಕೆಂದರೆ,  ‘ಬಾಜಿಚಿತ್ರ ನಿರ್ದೇಶಿಸಲು ಗುರುದತ್ ಆಗ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಗಾಯಕಿ-ನಟಿ ಸುರಯ್ಯಾ ಜೊತೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ದೇವಾನಂದ್‌ಗೆ ಅಷ್ಟು ಹೊತ್ತಿಗೆ ಅವಕಾಶ ಸಿಕ್ಕಿತ್ತು. 1948-51ರ ಅವಧಿಯಲ್ಲಿ  ವಿದ್ಯಾ’,  ‘ಜೀತ್’,  ‘ಶಾಯರ್’, ‘ಅಫ್ಸರ್’,  ‘ನೀಲಿ’,  ‘ದೋ ಸಿತಾರೆಚಿತ್ರಗಳಲ್ಲಿ ಇಬ್ಬರೂ ನಟಿಸಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆಂಬ ಸುದ್ದಿಯೂ ಇತ್ತು. ಆ ರಸಗಳಿಗೆಯಲ್ಲೇ ದೇವಾನಂದ್ ನವಕೇತನ್ಎಂಬ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಕಟ್ಟಿದ್ದು. ಬಾಜಿ’, ‘ಟ್ಯಾಕ್ಸಿ ಡ್ರೈವರ್’, ‘ಕಾಲಾಪಾನಿ’, ‘ನೌ ದೋ ಗ್ಯಾರಾ’, ‘ಹಮ್ ದೋನೋ’, ‘ಗೈಡ್’, ‘ಜ್ಯುಯೆಲ್ ತೀಫ್’, ‘ಹರೇ ರಾಮ ಹರೇಕೃಷ್ಣಮೊದಲಾದ ಆಧುನಿಕ ಸಂವೇದನೆಗಳನ್ನು ಒಗ್ಗೂಡಿಸಿಕೊಂಡ ದೂರದೃಷ್ಟಿಯ ಚಿತ್ರಗಳನ್ನು ದೇವಾನಂದ್ ನಿರ್ಮಿಸಿದರು. ಮಹಿಳಾ ಸ್ವಾತಂತ್ರ್ಯದ ಸೂಕ್ಷ್ಮಗಳನ್ನು ಅಡಗಿಸಿಟ್ಟುಕೊಂಡ ಗೈಡ್ಅಂತೂ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲೊಂದು.

ದೇವಾನಂದ್ ರೊಮ್ಯಾಂಟಿಕ್ ಸ್ವಭಾವದವರು. ಕನ್ನಡದಲ್ಲಿ ಪ್ರಣಯರಾಜ ಎನ್ನಬಹುದು. ಸುರಯ್ಯಾ, ಮಧುಬಾಲಾ, ಗೀತಾಬಾಲಿ ಹೀಗೆ ಎಲ್ಲಾ ನಟಿಯರ ಜೊತೆಗೆ ತಾವು ಕಳೆದ ಮಧುರ ಕ್ಷಣಗಳನ್ನು ಅವರು ಮುಜುಗರವಿಲ್ಲದೆ ಚಿತ್ರವತ್ತಾಗಿ ಬಣ್ಣಿಸಿದ್ದಿದೆ. 2007ರಲ್ಲಿ ಅವರು ಬರೆದ ರೊಮ್ಯಾನ್ಸಿಂಗ್ ವಿತ್ ಲೈಫ್ಆತ್ಮಕಥೆಯಲ್ಲಿ ಜೀನತ್ ಅಮಾನ್‌ಗೆ ಪ್ರೇಮ ನಿವೇದನೆ ಮಾಡಲು ಹೋದ ಸಂದರ್ಭವನ್ನು ಪುಟ್ಟ ಪುಟ್ಟ  ವಿವರಗಳ ಸಮೇತವಾಗಿ  ಬರೆದುಕೊಂಡಿದ್ದಾರೆ. ರಾಜ್‌ಕಪೂರ್ ತೆಕ್ಕೆಯಲ್ಲಿ ಜೀನತ್ ಇದ್ದುದನ್ನು ನೋಡಿ ತಮ್ಮ ಹೃದಯ ಒಡೆದು ಛಿದ್ರವಾಯಿತುಎಂಬ ಸಾಲೂ ಅದರಲ್ಲಿದೆ.

ನವಕೇತನ್ನಿರ್ಮಾಣ ಸಂಸ್ಥೆಯು ಪರಿಚಯಿಸಿದ ಪ್ರತಿಭಾವಂತರ ಪಟ್ಟಿ ಉದ್ದವಿದೆ. ಕಲ್ಪನಾ ಕಾರ್ತಿಕ್, ಜೀನತ್ ಅಮಾನ್, ಟೀನಾ ಮುನಿಮ್, ಎಸ್.ಡಿ.ಬರ್ಮನ್, ಸಾಹಿರ್ ಲೂಧಿಯಾನ್ವಿ, ಗುರುದತ್, ಜಾನಿ ವಾಕರ್ ಇವರೆಲ್ಲರಿಗೆ ಚಿಮ್ಮುಹಲಗೆ ಹಾಕಿದ್ದು ದೇವಾನಂದ್ ಕಟ್ಟಿದ ಅದೇ ಸಂಸ್ಥೆ.

ಬಾಕ್ಸ್ ಆಫೀಸ್ ಕೂಡ ದೇವಾನಂದ್ ಚಿರನಾಯಕಎಂಬುದನ್ನು ಪದೇಪದೇ ಸಮರ್ಥಿಸಿದೆ. 1950ರ ದಶಕದಲ್ಲಿ ದಿಲೀಪ್ ಕುಮಾರ್ ಹಾಗೂ ರಾಜ್‌ಕಪೂರ್ ಒಡ್ಡಿದ ಸ್ಪರ್ಧೆ ಎದುರಿಸಿದ ಅವರು 60ರ ದಶಕದಲ್ಲಿ ಶಮ್ಮಿ ಕಪೂರ್, ರಾಜೇಂದ್ರ ಕುಮಾರ್ ತರಹದ ನಟರ ಪೋಟಿಗೆ ಎದೆಗೊಟ್ಟರು. 70ರ ದಶಕದಲ್ಲಿ ವಯಸ್ಸು 50 ದಾಟಿದಾಗಲೂ ರಾಜೇಶ್ ಖನ್ನಾ ತರಹದ ನಟರಿಗೆ ಸರಿಸಾಟಿಯಾಗಿ ಬಣ್ಣಹಚ್ಚಿದರು. 1978ರಲ್ಲಿ ಇಪ್ಪತ್ತು ವರ್ಷ ವಯಸ್ಸಿನ ಟೀನಾ ಮುನಿಮ್ ಅವರನ್ನು ಪರಿಚಯಿಸಿ, ತಾವೇ ನಿರ್ದೇಶಿಸಿ, ನಟಿಸಿದ ದೇಸ್ ಪರದೇಸ್ಚಿತ್ರ ಯಶಸ್ವಿಯಾದಾಗ ಚಿರನಾಯಕಎಂಬ ಗುಣವಿಶೇಷಣ ದೇವಾನಂದ್‌ಗೆ ಅಂಟಿಕೊಂಡಿತು.

1990ರ ನಂತರ ದೇವಾನಂದ್ ನಿರ್ದೇಶಿಸಿದ ಚಿತ್ರಗಳಲ್ಲಿ ಅವ್ವಲ್ ನಂಬರ್ಹೊರತುಪಡಿಸಿ ಬೇರಾವುದೂ ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಗೆಲ್ಲಲಿಲ್ಲ. 1983ರಲ್ಲಿ ಸ್ವಾಮಿ ದಾದಾಚಿತ್ರದಲ್ಲಿ ಪದ್ಮಿನಿ ಕೊಲ್ಹಾಪುರೆ ಜೊತೆಯಲ್ಲಿ ಅಭಿನಯಿಸಿದಾಗ ದೇವಾನಂದ್‌ಗೆ ಅರುವತ್ತು ದಾಟಿತ್ತು. ಸೋಲಿನಿಂದ ಖಿನ್ನರಾಗದೆ ಚಿತ್ರ ನಿರ್ಮಾಣ, ನಿರ್ದೇಶನವನ್ನು ಅವರು ಮುಂದುವರಿಸಿದರು. ಅವರು ಒಟ್ಟು 19 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 31 ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಒಟ್ಟು 25 ಚಿತ್ರಗಳು ಕಮರ್ಷಿಯಲ್ ದೃಷ್ಟಿಯಿಂದ ಯಶಸ್ವಿಯಾಗಿವೆ. 13 ಚಿತ್ರಗಳಿಗೆ ಅವರು ಕಥೆ ಬರೆದಿದ್ದಾರೆನ್ನುವುದು ವಿಶೇಷ. 

ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ಅದನ್ನು ಚಿತ್ರರಂಗದ ಕೆಲವು ಗೆಳೆಯರನ್ನು ಕಟ್ಟಿಕೊಂಡು ವಿರೋಧಿಸಿದ್ದ ದೇವಾನಂದ್ ನ್ಯಾಷನಲ್ ಪಾರ್ಟಿ ಆಫ್ ಇಂಡಿಯಾಎಂಬ ಪಕ್ಷ ಕೂಡ ಕಟ್ಟಿದರು. ವೈಯಕ್ತಿಕ ಕಾರಣಗಳಿಂದ ಆಮೇಲೆ ಅದರಿಂದ ಕಳಚಿಕೊಂಡರು. ಅವರೆಂದೂ ತಮ್ಮ ಮೊಬೈಲನ್ನು ಸಹಾಯಕರ ಕೈಗೆ ಕೊಡುತ್ತಿರಲಿಲ್ಲ. ಗೊತ್ತಿಲ್ಲದವರು ಫೋನ್ ಮಾಡಿದರೂ ಉತ್ತರಿಸುವ ಸೌಜನ್ಯ ಅವರದ್ದು. ಅಭಿಮಾನಿಗಳು ಮನೆಗೆ ಬಂದರೆ ಅವರೊಡನೆ ಎರಡು ಮಾತಾಡುವಷ್ಟು ವ್ಯವಧಾನವೂ ಇತ್ತು.

ನೌ ದೋ ಗ್ಯಾರಾ’, ‘ಟ್ಯಾಕ್ಸಿ ಡ್ರೈವರ್ಚಿತ್ರಗಳಲ್ಲಿ ತಮ್ಮ ಜೋಡಿಯಾಗಿದ್ದ ನಟಿ ಕಲ್ಪನಾ ಅವರನ್ನೇ ಪ್ರೀತಿಸಿ ಸದ್ದಿಲ್ಲದೆ  1954ರಲ್ಲಿ ಮದುವೆಯಾದ ದೇವಾನಂದರಿಗೆ ಸುನಿಲ್ ಎಂಬ ಒಬ್ಬನೇ ಮಗ. ಕೊನೆಯುಸಿರೆಳೆಯುವಾಗ ಲಂಡನ್‌ನಲ್ಲಿ ಅಪ್ಪನ ಜೊತೆ ಅವರೇ ಇದ್ದದ್ದು. ಕೊನೆಯುಸಿರು ಇರುವವರೆಗೆ ಸಿನಿಮಾ ಮಾಡುತ್ತಲೇ ಇರುತ್ತೇನೆ ಎಂದು ಲೆಕ್ಕವಿಲ್ಲದಷ್ಟು ಸಲ ಹೇಳಿದ್ದ ನಟ ದೇವಾನಂದ್ ಬದುಕಿನ ಆ್ಯಕ್ಷನ್’  2011ರ ವರ್ಷಾಂತ್ಯದಲ್ಲಿ  ಕಟ್ಎನಿಸಿತು! ನುಡಿದಂತೆಯೇ ಕೊನೆವರೆಗೂ ಸಿನಿಮಾಗಳಿಗಾಗಿಯೇ ಜೀವಿಸಿದ ಅವರ  ಉಸಿರು ಡಿಸೆಂಬರ್ 3, 2011ರ ಭಾನುವಾರದ  ನಸುಕಿನಲ್ಲಿ ಶಾಶ್ವತವಾಗಿ ನಿಂತುಹೋಯಿತು. ಲಂಡನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಹೋಗಿದ್ದ ಅವರು ಹೃದಯಾಘಾತದಿಂದ ನಿಧನರಾದರು.

ದೇವಾನಂದ್ ಸಾಧನೆಗೆ ಸಂದ ಪ್ರಶಸ್ತಿಗಳು ಹಲವು. 2001ರಲ್ಲಿ ಪದ್ಮಭೂಷಣ, 2002ರಲ್ಲಿ ದಾದಾ ಸಾಹೇಬ್ ಫಾಲ್ಕೆ ಗರಿ ಮೂಡಿತು. ಎರಡು ಸಲ ಫಿಲಂಫೇರ್ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು.

2011ರ ಸೆಪ್ಟೆಂಬರ್‌ನಲ್ಲಿ 88ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ ನನ್ನ ಚಾರ್ಜ್ ಶೀಟ್ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ. ಕೊನೆಯವರೆಗೂ ಸಿನಿಮಾ ಮಾಡುತ್ತಲೇ ಇರುವುದು ನನ್ನ ಕನಸು. ನಾನಿನ್ನೂ 88ರ ಹುಡುಗಎಂದಿದ್ದರು. ಚಾರ್ಜ್‌ಶೀಟ್ಬಿಡುಗಡೆಯಾಗುವ ಮೊದಲೇ ದೇವಾನಂದ್ ಬದುಕಿನ ಆ್ಯಕ್ಷನ್ ಮುಗಿಯಿತು. ಆದರೆ, ಅವರ ಚಿತ್ರಗಳ ಆಯುಸ್ಸು ಮುಗಿಯಲಿಲ್ಲ. ಪೇಯಿಂಗ್ ಗೆಸ್ಟ್’, ‘ಜಾನಿ ಮೇರಾ ನಾಮ್’, ‘ಜ್ಯುಯೆಲ್ ತೀಫ್’, ‘ಅಮೀರ್ ಗರೀಬ್’, ‘ಗೈಡ್’, ‘ವಾರೆಂಟ್’, ‘ಹರೇ ರಾಮ ಹರೇ ಕೃಷ್ಣಮೊದಲಾದ ಚಿತ್ರಗಳ ಶೋ ಮುಂದುವರಿದೇ ಇದೆ.

ಈ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.

(ಆಧಾರ: ನಟ ಅನುಪಮ್ ಖೇರ್ ಅವರ ಅನುವಾದಿತ ಲೇಖನವನ್ನು ಈ ಬರಹ ಆಧರಿಸಿದೆ)


Tag: Devanand

1 ಕಾಮೆಂಟ್‌:

mudgal venkatesh ಹೇಳಿದರು...

"Dil Pukare Aare Aajare" a melodious song of Dev Saheb's Jewel Thief is just unforgettable. Super article