ಮಂಗಳವಾರ, ಸೆಪ್ಟೆಂಬರ್ 3, 2013

ಲೋಕನಾಯಕ ಜಯಪ್ರಕಾಶ್ ನಾರಾಯಣ್

ಲೋಕನಾಯಕ ಜಯಪ್ರಕಾಶ್ ನಾರಾಯಣ್


ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ದಿನಾಂಕ  ಅಕ್ಟೋಬರ್ 11, 1902ರಂದು ಬಿಹಾರದ ಸಿತಾಬ್ದಿಯಾರ ಎಂಬ ಗ್ರಾಮದಲ್ಲಿ ಜನಿಸಿದರು.  ಪುಟ್ಟ ವಯಸ್ಸಿನಲ್ಲಿ ಜಯಪ್ರಕಾಶರಿಗೆ ಮನೆಯ ಸುತ್ತಮುತ್ತಲಿದ್ದ ಪ್ರಾಣಿಗಳ ಕುರಿತು ಬಹಳ ಪ್ರೀತಿ.  ತನ್ನ ಪ್ರೀತಿಯ ಪಾರಿವಾಳವೊಂದು  ಅಸುನೀಗಿದ ದುಃಖದಲ್ಲಿ ಅವರು ಎರಡು ದಿನ ಊಟ ಮಾಡಿರಲಿಲ್ಲವಂತೆ.  ಇಂತಹ ಮೃದು ಹೃದಯ ತಾನೇ ಬುದ್ಧ ಭಗವಾನರಿಗೂ ಇದ್ದದ್ದು.  ಬುದ್ಧ ಭಗವಾನರಿಗೂ  ಅಷ್ಟೇ, ಅವರ ಹೃದಯ ಎಷ್ಟೇ ಮೃದುವಾಗಿದ್ದರೂ ಸತ್ಯವನ್ನು ಆಪ್ತವಾಗಿಸಿಕೊಳ್ಳುವ; ಹಿಂಸೆ, ದಬ್ಬಾಳಿಕೆ, ಅಧಿಕಾರ ಶಾಹಿಯನ್ನು ಪ್ರಶ್ನಿಸುವ ಧೀರತ್ವ ಅವರಲ್ಲಿ ಎಂದೂ ಕನಿಷ್ಟವಾಗಿರಲಿಲ್ಲ.   ಜಯಪ್ರಕಾಶ್ ನಾರಾಯಣರು ತಮ್ಮ  ಒಳ್ಳೆಯತನದ ಮುಸುಕಿನಲ್ಲಿ ಎಲ್ಲೋ ಮೂಲೆ ಹಿಡಿದು ಸುಮ್ಮನೆ  ಕುಳಿತಿರಲಿಲ್ಲ.  ಪ್ರಜಾಪ್ರಭುತ್ವ, ಮಾರ್ಕ್ಸ್ ವಾದ, ಸಮಾಜವಾದ, ಗಾಂಧೀವಾದಗಳು ಅವರಿಗೆ ಕಾಲನುಕ್ರಮದಲ್ಲಿ ಆಕರ್ಷಣೀಯವೆನಿಸಿದ್ದರೂ ಅವೆಂದೂ ಕೇವಲ ಬುದ್ಧಿವಂತಿಕೆಯ ಪ್ರತಿಪಾದನೆಯ ಬೋಳೇತನದಲ್ಲಿ ಪರ್ಯಾವಸನಗೊಂಡಿರಲಿಲ್ಲ.  ತಮ್ಮ ಚಿಂತನೆಗಳೆಲ್ಲವನ್ನೂ ಮಾನವೀಯತೆಯ ಕಾಯಕಲ್ಪಕ್ಕೆ ಒಟ್ಟುಗೂಡುವ ಜಾಗ್ರತಿಯ ವಿಜಯ ಜಯಪ್ರಕಾಶರದಾಗಿತ್ತು.

ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರತಿಭಾತರಾಗಿದ್ದ ಜಯಪ್ರಕಾಶರು ವಿದ್ಯಾರ್ಥಿ ವೇತನ ಪಡೆದು ಪದವಿ ಗಳಿಸಿದರು.  ಮಹಾತ್ಮ ಗಾಂಧಿಯವರ ಮಿತ್ರ, ಅನುಯಾಯಿ ಡಾ. ಅನುಗ್ರಹ ನಾರಾಯಣ ಸಿನ್ಹರು ಜಯಪ್ರಕಾಶರ ಗುರುಗಳಾಗಿದ್ದರು.  ಮಾರ್ಕ್ಸಿಸ್ಟ್ ತತ್ವಗಳಿಗೆ ಬದ್ಧರಾಗಿದ್ದರೂ ಜಯಪ್ರಕಾಶರಿಗೆ ಸ್ವಾತಂತ್ರ ಚಳುವಳಿಯಲ್ಲಿ ಕೈಜೋಡಿಸದ ಮಾರ್ಕ್ಸ್ ವಾದಿಗಳ ಮಡಿತನದ ಬುದ್ಧಿವಂತಿಕೆಯ ಸೋಗು  ಇಷ್ಟವಾಗಲಿಲ್ಲ.  ಹೀಗಾಗಿ ಅವರು 1929ರಲ್ಲಿ ಜವಾಹರಲಾಲ್ ನೆಹರೂ ಅವರ ಆಹ್ವಾನದ ಮೇರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು.  ಮಹಾತ್ಮಾ ಗಾಂಧೀಜಿಯವರು ಅವರಿಗೆ ಆದರ್ಶವಾದರು.  ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಬ್ರಿಟಿಷರಿಂದ ಹಲವಾರು ಬಾರಿ ಬಂಧಿಸಲ್ಪಟ್ಟರು.  ಹಿಂಸೆಗೊಳಗಾದರು. 

1932ರ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ನಾಸಿಕ್ ಸೆರೆಮನೆಯಲ್ಲಿದ್ದಾಗ ಜಯಪ್ರಕಾಶರು ರಾಮ್ ಮನೋಹರ್ ಲೋಹಿಯಾ, ಅಚ್ಯುತ ಪಟವರ್ಧನ್, ಅಶೋಕ್ ಮೆಹ್ತಾ, ಯೂಸುಫ್ ದೇಸಾಯಿ ಮುಂತಾದ ಗಣ್ಯರ ಗೆಳೆಯರಾದರು.   ಸೇರೆಮನೆಯಿಂದ ಹೊರಬಂದ ಈ ಸಮಾಜವಾದಿ ಗೆಳೆಯರು ಕಾಂಗ್ರೆಸ್ಸಿನ ಅಂಗಪಕ್ಷವಾಗಿ ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವನ್ನು ರಚಿಸಿ ಆಚಾರ್ಯ ನರೇಂದ್ರ ದೇವರನ್ನು ಅಧ್ಯಕ್ಷರನ್ನಾಗಿಯೂ, ಜಯಪ್ರಕಾಶ ನಾರಾಯಣರನ್ನು ಕಾರ್ಯದರ್ಶಿಯನ್ನಾಗಿಯೂ ನೇಮಿಸಿಕೊಂಡರು. 

1942ಬ್ರಿಟಿಷರೇ ಭಾರತ ಬಿಟ್ಟು ತೊಲಗಿಹೋರಾಟದಲ್ಲಿ ಪ್ರಮುಖ ನೆತಾರರೆಲ್ಲಾ ಸೆರೆಮನೆ ಸೇರಿದ್ದ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ ಲೋಹಿಯಾ, ಬಸಾವನ್ ಸಿನ್ಹಾ ಅವರು ಚಳುವಳಿಯ ಮುಂಚೂಣಿಯಲ್ಲಿದ್ದರು.  ಜಯಪ್ರಕಾಶ್ ನಾರಾಯಣ್ ಮತ್ತು ಅರುಣ್ ಅಸಫ್ ಆಲಿ ಮುಂತಾದ ನಾಯಕರನ್ನು ಮಹಾತ್ಮ ಗಾಂಧಿಯವರ ರಾಜಕೀಯದ ಮಕ್ಕಳು ಆದರೆ ಮಾರ್ಕ್ಸ್ ವಾದದ ಹೊಸ ವಿದ್ಯಾರ್ಥಿಗಳುಎಂಬ ಗೌರವಗಳಿಂದ ಬಣ್ಣಿಸಲಾಯಿತು.  ಜಯಪ್ರಕಾಶ್ ಅವರು ಬದುಕಿನಲ್ಲಿ ಸಾಮರಸ್ಯ ಮೂಡಿಸುವ ಸಹಜೀವನತತ್ವದ ಪ್ರಮುಖ ಪ್ರತಿಪಾದಕರೆನಿಸಿದ್ದರು.

ಪ್ರಾರಂಭದಲ್ಲಿ  ಬಲ ಪ್ರದರ್ಶನದ ಹೋರಾಟದಲ್ಲಿ ನಂಬಿಕೆ ಹೊಂದಿದ್ದ ಜಯಪ್ರಕಾಶರು ಕ್ರಮೇಣವಾಗಿ ಮಹಾತ್ಮರ ಅಹಿಂಸಾ ವಾದಕ್ಕೆ ಮನಸೋತರು.  ಪ್ರಜಾಪ್ರಭುತ್ವದಲ್ಲಿ  ಸಮಾಜ ಕಲ್ಯಾಣವನ್ನು ಸಾಧಿಸಲು  ಸತ್ಯಾಗ್ರಹವೇ ಶ್ರೇಷ್ಠ ಮಾರ್ಗ ಎಂಬ ಸಿದ್ಧಾಂತವನ್ನು ಅರಿತುಕೊಂಡರು.  ನೆಹರೂ ನಾಯಕತ್ವದ  ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸಮಾಜವಾದದ ಸದಾಶಯ  ಮೌಲ್ಯಗಳು ಮಣ್ಣುಮುಕ್ಕಿದ ಬಗ್ಗೆ ಜಯಪ್ರಕಾಶರಿಗೆ ಭ್ರಮನಿರಸನ ತಂದಿತ್ತು.

ಹೀಗಾಗಿ ಮಹಾತ್ಮರ ನಿಧನಾನಂತರದಲ್ಲಿ ಜಯಪ್ರಕಾಶ್ ನಾರಾಯಣ್, ಆಚಾರ್ಯ ನರೇಂದ್ರ ದೇವ ಮತ್ತು ಬಸಾವಾನ್ ಸಿನ್ಹ ಮುಂತಾದ ಗೆಳೆಯರು ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವನ್ನು ಕಾಂಗ್ರೆಸ್ಸಿನಿಂದ ಹೊರತಂದು ಸೋಷಿಯಲಿಸ್ಟ್ ಪಾರ್ಟಿಯ ರೂಪದಲ್ಲಿ ವಿರೋಧಪಕ್ಷವಾಗಿ  ನಿಂತರು.  ಮುಂದೆ ಅದು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಎನಿಸಿತು.  ಆದರೆ ಈ ಪಕ್ಷ ಜಾತಿ ಆಧಾರದ ಮೇಲೆ ಚುನಾವಣೆಯ ಟಿಕೆಟ್ಟುಗಳನ್ನು ಹಂಚತೊಡಗಿದಾಗ ಸರ್ವಸಮಾನತಾ ಮನೋಭಾವನೆಯ ಜಯಪ್ರಕಾಶರು ಆ ನೀತಿಯನ್ನು ವಿರೋಧಿಸಿ, ‘ಸರ್ವೋದಯ ಮತ್ತು ಲೋಕನೀತಿನನ್ನ ಮಾರ್ಗ ಎಂದು ಸ್ಪಷ್ಟಪಡಿಸಿದರು.  ಕಡೆಗೊಂದು ದಿನ  ನನಗೆ ಲೋಕನೀತಿ ಮುಖ್ಯ, ನಿಮ್ಮ ರಾಜನೀತಿಯಲ್ಲಎಂದು ಹೊರಬಂದರು.

1954ರ ವರ್ಷದಲ್ಲಿ ಜಯಪ್ರಕಾಶ ನಾರಾಯಣರು ತಮ್ಮ ಜೀವನವನ್ನು ವಿನೋಬಾ ಭಾವೆಯವರ ಸರ್ವೋದಯ’  ಮತ್ತು ಭೂದಾನಅಂದೋಲನದ ಮಹದುದ್ದೇಶಗಳಿಗೆ ಮುಡಿಪಾಗಿಟ್ಟಿರುವುದಾಗಿ ಘೋಷಿಸಿ, ತಮಗಿದ್ದ ಭೂಮಿಯನ್ನೆಲ್ಲ ಬಡಬಗ್ಗರಿಗಾಗಿ ಧಾರೆ ಎರೆದರು.  ತಮಗಾಗಿ ಹಜಾರಿಬಾಗ್ ಎಂಬಲ್ಲಿ ಆಶ್ರಮರೂಪದ ಕುಟೀರವೊಂದನ್ನು ನಿರ್ಮಿಸಿಕೊಂಡು ಹಳ್ಳಿಗರ ಜೀವನದ ಔನ್ನತ್ಯಕ್ಕಾಗಿ ಕೆಲಸ ಮಾಡತೊಡಗಿದರು.

ಭಾರತದಲ್ಲಿ ರಾಜ್ಯಗಳು ಒಟ್ಟುಗೂಡಿರುವುದು ಬಲಪ್ರದರ್ಶನದಿಂದಲೇ ವಿನಃ ನಾವೆಲ್ಲರೂ ಒಂದೇ ಎಂಬ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವ ಕಾಯಕದಿಂದ ಆಗಿಲ್ಲ.  ಇದು ಭಾರತೀಯತೆ ಎಂಬ ಹೃದ್ಭಾವದಲ್ಲಿನ ಒಂದು ಕಪ್ಪು ಚುಕ್ಕೆ ಎಂದು ನಿರ್ಭಿಡತೆಯಿಂದ ಅವರು ಪ್ರತಿಪಾದಿಸಿದ್ದರು.  ಅಷ್ಟೇ ಅಲ್ಲದೆ, 1964ರ ವರ್ಷದಲ್ಲಿ  ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯಲ್ಲಿನ ತಮ್ಮ ಬರಹಗಳಲ್ಲಿ   ಜಮ್ಮು ಮತ್ತು ಕಾಶ್ಮೀರದ ಜನತೆಗೆ ಸ್ವಯಂ ನಿರ್ಣಯವನ್ನು ಕೈಗೊಳ್ಳುವ ಹಕ್ಕನ್ನು ನೀಡುವುದು ನಮ್ಮ ಜವಾಬ್ಧಾರಿಯಾಗಿದೆ ಎಂದು ಕೂಡಾ ಪ್ರತಿಪಾದಿಸಿದ್ದರು.  ಹಾಗೆ ಮಾಡುವುದರಿಂದ ದೇಶದ ಏಕಾಗ್ರತೆ ಧಕ್ಕೆ ಬರುತ್ತದೆ ಎಂಬ ವಾದಗಳನ್ನು ಜಯಪ್ರಕಾಶರು ತಿರಸ್ಕರಿಸಿದ್ದರು.

1974ರ ವರ್ಷದಲ್ಲಿ ಜಯಪ್ರಕಾಶ ನಾರಾಯಣರು ವಿದ್ಯಾರ್ಥಿಗಳ ಚಳುವಳಿಯ ನೇತ್ರತ್ವ ವಹಿಸಿದರು.  ಕ್ರಮೇಣವಾಗಿ ಅದು ಸಾರ್ವಜನಿಕರ ಚಳುವಳಿಯಾಗಿ ರೂಪುಗೊಂಡು ಬಿಹಾರ್ ಆಂದೋಲನಎಂದು ಪ್ರಸಿದ್ಧವಾಯಿತು.  ವಿ ಎಂ ತಾರ್ಕುಂಡೆ ಅವರೊಡಗೂಡಿ 1974ರ ವರ್ಷದಲ್ಲಿ  ಪ್ರಜಾಪ್ರಭುತ್ವಕ್ಕಾಗಿ ಸಾರ್ವಜನಿಕರು’(Citizens for Democracy) ಮತ್ತು 1976ರ ವರ್ಷದಲ್ಲಿ ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ಜನರ ಒಕ್ಕೂಟ’(People’s Union for Civil Liberties) ಎಂಬ ಸರ್ಕಾರೇತರ ಒಕ್ಕೂಟ(NGO)ಗಳನ್ನು ಹುಟ್ಟು ಹಾಕಿ ಸಾರ್ವಜನಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಎತ್ತಿಹಿಡಿದರು.

 ಅಲಹಾಬಾದ್ ಉಚ್ಚ ನ್ಯಾಯಾಲಯವು ಇಂದಿರಾ ಗಾಂಧಿ ಅವರನ್ನು ಚುನಾವಣಾ ಕಾನೂನು ಉಲ್ಲಂಘನೆಯ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಘೋಷಿಸಿದಾಗ, ಜಯಪ್ರಕಾಶರು ಇಂದಿರಾ ಗಾಂಧಿಯವರು ರಾಜೀನಾಮೆ ನೀಡಬೇಕೆಂದು ಒತ್ತಾಯಪಡಿಸಿ, ಇಡೀ ಭಾರತೀಯ ಸಮಾಜವನ್ನು ಪರಿವರ್ತನೆಗೊಳಿಸುವ ಆಶಯವುಳ್ಳ ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟರು.  ತನ್ನನ್ನು ಬಿಟ್ಟರೆ ಬೇರಿಲ್ಲ ಎಂಬ ಅಧಿಕಾರ ವ್ಯಾಮೋಹಿಯಾಗಿದ್ದ ಇಂದಿರಾ ಗಾಂಧೀ ಜೂನ್ 25, 1975ರ ಮಧ್ಯರಾತ್ರಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು.  ಇದರ ವಿರುದ್ಧ ಖಾರವಾದ ಪ್ರತಿಕ್ರಿಯೆ ನೀಡಿದ ಜಯಪ್ರಕಾಶರು, ಪ್ರಧಾನಿ ಇಂದಿರಾ ಗಾಂಧಿಯವರು ರಾಜೀನಾಮೆ ನೀಡಲೇಬೇಕು, ಸೈನ್ಯ ಮತ್ತು ಪೊಲೀಸ್ ಒಳಗೊಂಡಂತೆ ಎಲ್ಲಾ ಸರ್ಕಾರೀ ನೌಕರರೂಇಂದಿರಾ ಗಾಂಧೀ ಮತ್ತು ಆಕೆಯ ಸರ್ಕಾರದ  ಎಲ್ಲಾ ನೀತಿಬಾಹಿರ, ಅಸಂವಿಧಾನಾತ್ಮಕ ಆದೇಶಗಳನ್ನು ತಿರಸ್ಕರಿಸುವಂತೆ ಕರೆಕೊಟ್ಟರು.  ಜಯಪ್ರಕಾಶ್ ನಾರಾಯಣ್, ಎಲ್ಲಾ ವಿರೋಧ ಪಕ್ಷದ ನಾಯಕರುಗಳು ಮತ್ತು ಯಂಗ್ ಟರ್ಕ್ಸ್ಎಂಬ ಖ್ಯಾತಿ ಪಡೆದಿದ್ದ ಕಾಂಗ್ರೆಸ್ಸಿನಲ್ಲಿದ್ದ ತನ್ನ ನೀತಿಯನ್ನು ವಿರೋಧಿಸಿದ ಎಲ್ಲಾ ನಾಯಕರನ್ನು ಬಂಧಿಸುವಂತೆ  ಇಂದಿರಾಗಾಂಧಿ  ಅಣತಿ ಇತ್ತರು. 

ಜಯಪ್ರಾಕಾಶ್ ನಾರಾಯಣರು  ರಾಮಲೀಲಾ ಮೈದಾನದಲ್ಲಿ ನಡೆಸಿದ  ಸಭೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸಿತ್ತು.  ಈ ಜನಸ್ತೋಮ ಭಾವಯುಕ್ತವಾಗಿ ಸಿಂಹಾಸನವನ್ನು ಖಾಲಿ ಮಾಡಿ, ಜನತೆ ಬರುತ್ತಿದೆಎಂಬ ಭಾವಾರ್ಥದ ರಾಮಧಾರಿ ಸಿಂಗ್ ದಿನಕರರ ಗೀತೆಯನ್ನು ಒಂದೇ ಧ್ವನಿಯಲ್ಲಿ ಹಾಡಿತು

ಜಯಪ್ರಕಾಶ್ ನಾರಾಯಣ್ ಅವರನ್ನು ಚಂಡೀಗಢದ ಕಾರಾಗ್ರಹದಲ್ಲಿರಿಸಿಲಾಯಿತು.  ಬಿಹಾರದ ಪ್ರವಾಹ ವಿಕೋಪದಲ್ಲಿ ನೊಂದವರಿಗಾಗಿ  ಪರಿಹಾರ ಕಾರ್ಯ ನಡೆಸುವುದಕ್ಕಾಗಿ ಒಂದು ತಿಂಗಳ ಮಟ್ಟಿಗೆ ಅವಕಾಶ ಕೊಡಿ ಎಂಬ ಜಯಪ್ರಕಾಶರ ಜನಪರ ಕಳಕಳಿಗೂ ಸರ್ಕಾರ ಮನ್ನಿಸಲಿಲ್ಲ.  ಅಕ್ಟೋಬರ್ 24ರಂದು ಅವರ ದೇಹ ಪರಿಸ್ಥಿತಿ ಕಾರಾಗ್ರಹದಲ್ಲಿ ಗಂಭೀರವಾಯಿತು. ಜೆಪಿ ಅವರನ್ನು ಮುಕ್ತಗೊಳಿಸಿಎಂಬ ಹೋರಾಟವನ್ನು ಯುನೈಟೆಡ್ ಕಿಂಗ್ಡಂ ದೇಶದಲ್ಲಿ ಸುರೂರ್ ಹೋಡಾ, ನೋಬಲ್ ಪ್ರಶಸ್ತಿ ವಿಜೇತ ನೋಯಲ್ ಬೇಕರ್ ಮುಂತಾದ ಮಹಾನ್ ಗಣ್ಯರು ಆರಂಭಿಸಿದರು.  ಇಷ್ಟಿದ್ದರೂ ನವೆಂಬರ್ 12ರವರೆಗೆ ಜೆ ಪಿ ಅವರನ್ನು ಸೆರೆಮನೆಯಿಂದ ಬಿಡುಗಡೆ ಮಾಡಲಿಲ್ಲ.  ಜಸ್ಲೋಕ್ ಆಸ್ಪತ್ರೆಯಲ್ಲಿ ಅವರಿಗೆ ಮೂತ್ರಕೋಶದ ತೊಂದರೆ ಇದ್ದು, ಮುಂದೆ ಡಯಾಲಿಸಿಸ್ ಅವರ ಬದುಕಿನ ನಿರಂತರ ಅವಶ್ಯಕತೆಯಾಗಿ ಪರಿಣಮಿಸಿದೆ ಎಂದೂ ತಿಳಿಸಲಾಯಿತು. 

1977ರಲ್ಲಿ ಇಂದಿರಾ ಗಾಂಧೀ ಚುನಾವಣೆಗಳನ್ನು ಘೋಷಿಸಿದಾಗ ಜಯಪ್ರಕಾಶ್ ನಾರಾಯಣರ ಮಾರ್ಗದರ್ಶನದಲ್ಲಿ ಜನತಾ ಪಕ್ಷ ಅಸ್ತಿತ್ವಕ್ಕೆ ಬಂತು.  ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಮೂಡಿ ಬಂದ ಕಾಂಗ್ರೆಸ್, ಮಹಾತ್ಮರ ಆಶಯದಂತೆ ಬಾಳಲಿಲ್ಲ.  ಜಯಪ್ರಕಾಶ್ ನಾರಾಯಣರ ಮಾರ್ಗದರ್ಶನದಲ್ಲಿ ಮೂಡಿ ಬಂದ ಜನತಾ ಪಕ್ಷ ಕೂಡಾ ಇದಕ್ಕೆ ಹೊರತಾಗಲಿಲ್ಲ.  ಅನೇಕ ಪ್ರಬುದ್ಧ ನಾಯಕರು ಒಟ್ಟಿಗೆ ಇದ್ದೂ, ಕೆಲವೊಂದು ಸಮರ್ಥರು ಉತ್ತಮ ಕೆಲಸ ಮಾಡಿಯೂ ಜನತಾ ಪಕ್ಷವು ಜಯಪ್ರಕಾಶರ ಅಂತರಾತ್ಮದ ಧ್ವನಿಗೆ ಒಗ್ಗೂಡಲಿಲ್ಲ. 

ಹಾಗೆ ನೋಡಿದರೆ ಜಯಪ್ರಕಾಶರಿಗೆ ಇಂದಿರಾ ಗಾಂಧಿಯನ್ನು ಬದಲಿಸಿ ಒಂದು ಪರ್ಯಾಯ ಸರ್ಕಾರವನ್ನು ನಿರ್ಮಿಸುವುದೇ ಬದುಕಿನ ಆಶಯವಾಗಿರಲಿಲ್ಲ.  ಅವರ ಸೆರೆಮನೆಯ ದಿನಚರಿಓದಿದವರಿಗೆ ಈ ವಾಕ್ಯಗಳು ಸದಾ ನೆನಪಿನಲ್ಲಿರುತ್ತವೆ:  ಒಂದು ಸರ್ಕಾರವನ್ನು ಬದಲಿಸಿ ಮತ್ತೊಂದನ್ನು ಸ್ತಾಪಿಸುವುದರಿಂದ ಮಾತ್ರ ಸರ್ವೋದಯವಾಗಿಬಿಡುತ್ತದೆ ಎಂಬ ಭ್ರಮೆ ನನ್ನಲ್ಲಿಲ್ಲಇದು ಜಯಪ್ರಕಾಶರು ಸೆರೆಮನೆಯಲ್ಲಿದ್ದಾಗ ಜನತಾಪಕ್ಷ ಇನ್ನೂ ಹುಟ್ಟುವ ಮುಂಚೆಯೇ ಬರೆದ ಮಾತುಗಳು ಎಂಬುದು ಗಮನಾರ್ಹವಾದದ್ದು. 
  
ಜಯಪ್ರಕಾಶರು ಇನ್ನೂ ಉಸಿರಿನಲ್ಲಿದ್ದಾಗಲೇ ತಪ್ಪು ಮಾಹಿತಿಯಿಂದ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಪಾರ್ಲಿಮೆಂಟಿನಲ್ಲಿ ಜಯಪ್ರಕಾಶ್ ನಾರಾಯಣರು ಅಸುನೀಗಿದರು ಎಂಬ ಸುದ್ಧಿ ಪ್ರಕಟಿಸಿ ದೇಶವೆಲ್ಲಾ ಶೋಕ ಆಚರಿಸುವ ಮಟ್ಟಿಗೆ ದೇಶ ಭ್ರಮಾತೀತವಾಗಿ ಹೋಗಿತ್ತು.  ಒಂದು ರೀತಿಯಲ್ಲಿ ಮಹಾತ್ಮರಿದ್ದಾಗಲೇ ದೇಶವನ್ನು ವಿಭಜಿಸಿ ಮಹಾತ್ಮರನ್ನು  ಕೊಂದಿದ್ದಹಾಗೆ, ಜೆ ಪಿ ಅವರು ಉಸಿರು ಹಿಡಿದುಕೊಂಡಿರುವಾಗಲೇ ಜನತಾ ಪಕ್ಷದ ಛಿದ್ರ ಛಿದ್ರತೆ ಬೀದಿ ರಂಪವಾಗತೊಡಗಿತ್ತು.  ಒಂದಿಷ್ಟು ಗುಣಮುಖರಾಗಿದ್ದ ಜಯಪ್ರಕಾಶರ ಬಳಿ ನೀವು ಸತ್ತ ಸುದ್ಧಿ ಪ್ರಕಟವಾಗಿಬಿಟ್ಟಿತ್ತಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಬದುಕಿನ ನಿಜ ಸಂತರಾದ ಜಯಪ್ರಕಾಶರು ಅದಕ್ಕೆ ಸುಂದರವಾಗಿ ಮುಗುಳ್ನಕ್ಕರಂತೆ” 

ಜಯಪ್ರಕಾಶ್ ನಾರಾಯಣರು ಅಕ್ಟೋಬರ್ 8, 1979ರಲ್ಲಿ ನಿಧನರಾದರು.  ಜಯಪ್ರಕಾಶರ ದಿವ್ಯ ಚೇತನವನ್ನು ನೆನೆದಾಗ ಸಂಸ್ಕೃತದ ಈ ಶ್ಲೋಕ ನೆನಪಾಗುತ್ತದೆ. 

ಜಯಂತಿ ಯೇ ಸುಕೃತಿನಃ ರಸಸಿದ್ಧಾಃ ಕವೀಶ್ವರಾಹ
ನಾಸ್ತಿ ತೇಷಾಂ ಯಶಃ ಕಾಯೇ ಜರಾ-ಮರಣಜಂ ಭಯಂ

ತಮ್ಮ ಕಾಯಕವೆಂಬ ಹೃದ್ಭಾವದ ನುಡಿಗಳನ್ನು ತಮ್ಮ ಭಾವಗಳಲ್ಲಿ ತುಂಬಿಕೊಂಡ ಕವೀಶ್ವರರು ತಮ್ಮ ಪ್ರತೀ ಉಸಿರಿನಲ್ಲೂ ಜಯವನ್ನೇ ಹೊಂದಿದವರಾಗಿರುತ್ತಾರೆ.  ಅವರದೇ ಆದ ಸ್ವಂತ ಯಶದ ಕಾಯ ಅವರೊಂದಿಗೆ ಸದಾ ಜಾಗೃತವಿದ್ದು, ಅವರು ಮುಪ್ಪಿಗಾಗಲಿ ಸಾವಿಗಾಗಲೀ ನಿರ್ಭೀತರಾಗಿರುತ್ತಾರೆ. 


ಗಾಂಧೀಜಿ ಅಂತಹ ಮಹಾತ್ಮ ನಾವು ಹುಟ್ಟುವುದಕ್ಕೆ ಒಂದೆರಡು ದಶಕಗಳ  ಹಿಂದೆಯೇ ಹೋಗಿಬಿಟ್ಟರು ಎಂಬುದರ ವ್ಯಥೆಯನ್ನು ಬಹುಮಟ್ಟಿಗೆ ಹೋಗಲಾಡಿಸಿದ ಜೀವ ಜಯಪ್ರಕಾಶ್ ನಾರಾಯಣರದ್ದು.  ಈ ಮಹಾತ್ಮನ ಬದುಕಿನ ಶ್ರೇಷ್ಠ ದಿನಗಳಲ್ಲಿ ನಮ್ಮ ಉಸಿರನ್ನೂ ಈ ಭೂಮಿಯಲ್ಲಿ ಹರಿಸಿ ಈ ಲೋಕದಲ್ಲಿ ಒಂದಾಗಿಸಿದ್ದ ನಾವು ಧನ್ಯರೇ ಸರಿ.  ಈ  ಮಹಾತ್ಮರ ಚೇತನಕ್ಕೆ ನಮ್ಮ ಪಾದಾಭಿವಂದನಗಳು.  ನಿತ್ಯಪ್ರಕಾಶಿತರಾದ ಜಯಪ್ರಕಾಶ  ನಾರಾಯಣರೇ ನಿಮ್ಮ ಚೇತನ ನಮ್ಮ ಈ ಭುವಿಯಲ್ಲಿ   ಪುನರುತ್ಥಾನಿಸಿ ನಮ್ಮನ್ನು ನಮ್ಮ ದೇಶದ ಕುರಿತಾದ ಜವಾಬ್ಧಾರಿಗಳತ್ತ ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯಲು ಪ್ರೇರೇಪಿಸಲಿ”  ಎಂದು ಪ್ರಾರ್ಥಿಸುತ್ತೇವೆ.

Tag: Lokanayaka Jayaprakash Narayan

ಕಾಮೆಂಟ್‌ಗಳಿಲ್ಲ: