ಸೋಮವಾರ, ಸೆಪ್ಟೆಂಬರ್ 2, 2013

ಶಮ್ಮಿ ಕಪೂರ್

ಶಮ್ಮಿ ಕಪೂರ್

ಅಕ್ಟೋಬರ್ 21, 1931 ವಿಶಿಷ್ಟ ನಟ ಶಮ್ಮಿ ಕಪೂರ್ ಜನಿಸಿದ ದಿನ.  ‘ಚಾಹೆ  ಕೋಯಿ ಮುಝೆ ಜಂಗ್ಲಿ ಕ ಹೆ...., ಯಾಹೂ...’ ಎಂಬ ಜಂಗ್ಲಿ ಚಿತ್ರದ ಪ್ರಸಿದ್ಧ ಹಾಡನ್ನು ಕೇಳಿದಾಗ, ಹಿಂದಿನ ತಲೆಮಾರಿನ ಚಿತ್ರರಸಿಕರಿಗೆ ಶಮ್ಮಿ ಕಪೂರ್ ನೆನಪಿಗೆ ಬಾರದೇ ಇರಲಾರರು.   ಹಿಮದ ರಾಶಿಯಲ್ಲಿ ಉರುಳುತ್ತಾ, ಜಾರುತ್ತಾ ನಾಯಕಿಯನ್ನು ಛೇಡಿಸುವ ಶಮ್ಮಿಕಪೂರ್ 60ರ ದಶಕದಲ್ಲಿ ರೋಮ್ಯಾಂಟಿಕ್ ಪಾತ್ರಗಳಿಂದ ಯುವಜನತೆಯನ್ನು ಹುಚ್ಚೆಬ್ಬಿಸಿದ್ದರು. ಆದರೆ ಹಿಂದಿ ಚಿತ್ರರಂಗದಲ್ಲಿ ತನಗೊಂದು ವಿಶಿಷ್ಟವಾದ ಸ್ಥಾನವನ್ನು ಸ್ಥಾಪಿಸುವುದು ಶಮ್ಮಿಕಪೂರ್‌ಗೆ ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ.  ಅದು ದಿಲೀಪ್ ಕುಮಾರ್, ರಾಜ್ ಕಪೂರ್, ದೇವಾನಂದ್ ಅಂತಹ ಘಟಾನುಘಟಿಗಳ ಕಾಲ.  ಶಮ್ಮಿಕಪೂರ್ ಸಹೋದರ ರಾಜ್‌ಕಪೂರ್ ಆ ಕಾಲದ ಸೂಪರ್‌ಸ್ಟಾರ್ ಮಾತ್ರವಲ್ಲ ಅದ್ದೂರಿ ಚಿತ್ರಗಳ ನಿರ್ಮಾಪಕ ಸಹ ಆಗಿದ್ದರು. ಹಿಂದಿ ಚಿತ್ರರಂಗದಲ್ಲಿ ತಾನೂ ಯಶಸ್ವಿಯಾಗಬೇಕಾದರೆ, ಸೋದರ ರಾಜ್‌ಕಪೂರ್‌ಗಿಂತ ಸಾಧ್ಯವಿದ್ದಷ್ಟು ವಿಭಿನ್ನವಾದ ಇಮೇಜ್ ಸ್ಥಾಪಿಸಲೇಬೇಕೆಂಬುದನ್ನು ಅವರು ಮನಗಂಡಿದ್ದರು.

1953ರಲ್ಲಿ ಹಿಂದಿ ಚಿತ್ರರಂಗಕ್ಕೆ ಚೊಚ್ಚಲ ರಂಗ ಪ್ರವೇಶ ಮಾಡಿದ ಶಮ್ಮಿ ಕಪೂರ್ ರೈಲ್ ಕಾ ಡಿಬ್ಬಾ’, ‘ಚೋರ್ ಬಝಾರ್’, ‘ಶರ್ಮಾ ಪರ್ವಾನ’, ‘ಹಮ್ ಸಬ್ ಚೋರ್ ಹೈ’, ‘ಮೇಮ್ ಸಾಬ್ಹಾಗೂ ಮಿಸ್ ಕೋಕಾ ಕೋಲಾಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಿಂದ  ನಟಿಸಿದ್ದರಾದರೂ, ಆವ್ಯಾವುದೂ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಡುವಲ್ಲಿ ವಿಫಲವಾದವು.

ಆದರೆ 1957ರಲ್ಲಿ ತೆರೆಕಂಡ ನಸೀರ್ ಹುಸೇನ್‌ರ ತುಮ್ಸಾ ನಹೀ ದೇಖಾಚಿತ್ರದ ಮೂಲಕ ಶಮ್ಮಿಕಪೂರ್ ಯಶಸ್ಸಿನ ರುಚಿಯನ್ನು ಕಂಡರು. ಆ ದಶಕದ ಜನಪ್ರಿಯ ಹಾಲಿವುಡ್ ತಾರೆ ಜೇಮ್ಸ್ ಡೀನ್ ಹಾಗೂ ಪಾಪ್ ಗಾಯಕ ಎಲ್ವಿಸ್ ಪ್ರಿಸ್ಲಿ ಶೈಲಿಯಲ್ಲಿ ಕಪೋಲಕೇಶವನ್ನು ನುಣ್ಣಗೆ ಬೋಳಿಸಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡ ಶಮ್ಮಿ ಕಪೂರ್ ಕೊನೆಗೂ ಹಿಂದಿಚಿತ್ರರಂಗದ ಸೂಪರ್‌ಸ್ಟಾರ್ ಪಟ್ಟ ಅಲಂಕರಿಸಿದರು. ಆ ಕಾಲದಲ್ಲಿ ಹಿಂದಿ ಚಿತ್ರರಂಗದ ಅನಭಿಷಕ್ತ ಚಕ್ರವರ್ತಿಗಳೆನಿಸಿದ ರಾಜ್‌ಕಪೂರ್, ದೇವ್‌ಆನಂದ್ ಹಾಗೂ ದಿಲೀಪ್ ಕುಮಾರ್ ಸಾಲಿನಲ್ಲಿ ಶಮ್ಮಿ ಕೂಡಾ ಸ್ಥಾನ ಗಿಟ್ಟಿಸಿಕೊಂಡರು. ಜಂಗ್ಲಿ ಚಿತ್ರವಂತೂ ಶಮ್ಮಿಕಪೂರ್‌ರನ್ನು ಯಶಸ್ಸಿನ ತುತ್ತತುದಿಗೇರಿಸಿತು.

ದಿಲ್ ತೇರಾ ದಿವಾನಾ, ಪ್ರೊಫೆಸರ್, ಚೀನಾ ಟೌನ್, ರಾಜ್‌ಕುಮಾರ್, ಕಾಶ್ಮೀರ್ ಕಿ ಕಲಿ, ಜಾನ್ವರ್, ತೀಸ್ರಿ ಮಂಝಿಲ್ ಮತ್ತು ಆ್ಯನ್ ಇವ್‌ನಿಂಗ್ ಇನ್ ಪ್ಯಾರಿಸ್ ಚಿತ್ರಗಳು ಶಮ್ಮಿಕಪೂರ್‌ಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿದ್ದವು.

ಶಮ್ಮಿ ಕಪೂರ್ ಆಗಸ್ಟ್ 14, 2011ರಂದು ಈ ಲೋಕವನ್ನಗಲಿದರು. ಈ ಕಲಾವಿದ ಉಳಿಸಿ ಹೋದ ನೆನಪುಗಳು ಅಮರವಾಗಿವೆ.


ಮಾಹಿತಿ ಕೃಪೆ: ವಾರ್ತಾಭಾರತಿ

Tag: Shammi Kapoor

ಕಾಮೆಂಟ್‌ಗಳಿಲ್ಲ: