ಮಂಗಳವಾರ, ಸೆಪ್ಟೆಂಬರ್ 3, 2013

ರೋಹನ್ ಬೋಪಣ್ಣ


ರೋಹನ್ ಬೋಪಣ್ಣ

ಭಾರತೀಯ ಟೆನ್ನಿಸ್ ಕ್ರೀಡೆಯ ತಾರೆ ನಮ್ಮ ಕೊಡಗಿನ ರೋಹನ್ ಬೋಪಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ ಬನ್ನಿ.  ರೋಹನ್ ಬೋಪಣ್ಣ ಹುಟ್ಟಿದ್ದು 4ನೆ ಮಾರ್ಚ್ 1980ರಲ್ಲಿ.

ಕಳೆದ ಹಲವು ವರ್ಷಗಳಿಂದ ನಮ್ಮ ಬೋಪಣ್ಣ ಪಾಕಿಸ್ಥಾನದ ಆತನ ಗೆಳೆಯ ಆಯಿಸಂ ಉಲ್ ಹಕ್ ಖುರೇಷಿ ಜೊತೆಗೂಡಿ ವಿಶ್ವ ಟೆನ್ನಿಸ್ ಡಬಲ್ಸ್ ಕ್ರೀಡೆಯಲ್ಲಿ ಪ್ರತಿಷ್ಟಿತ ಸಾಧನೆ ಮಾಡಿದ್ದಾರೆ.  ಈ ಮೂಲಕ ಈ ಭಾರತ ಪಾಕ್ ಅಪೂರ್ವ ಜೋಡಿ 'ಇಂಡೋ ಪಾಕ್ ಎಕ್ಸ್ ಪ್ರೆಸ್' ಎಂದು ಹೆಸರು ಮಾಡಿದ್ದಾರೆ. 

ನಮ್ಮ ಬೋಪಣ್ಣ ಮತ್ತು ಆಯಿಸಂ ಜೋಡಿ ಕಳೆದ ಐದು  ವರ್ಷಗಳಲ್ಲಿ ನಾಲ್ಕು ಬಾರಿ ಚಾಲೆಂಜರ್ ಟ್ರೋಫಿ ಗೆದ್ದಿರುವುದಲ್ಲದೆ, 2010 ವರ್ಷದ ಯು ಎಸ್ ಓಪನ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ, 2010 ವಿಂಬಲ್ಡನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, 2011 ಫ್ರೆಂಚ್ ಓಪನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, ಹಲವಾರು ವಿಶ್ವ ಎ.ಟಿ.ಪಿ ಪ್ರತಿಷ್ಟಿತ ಫೈನಲ್ ಪ್ರವೇಶಗಳಲ್ಲಿ ಜೋಹಾನ್ಸ್ ಬರ್ಗ್ ಟ್ರೋಫಿ, ಸ್ಟಾಕ್ ಹೊಂ ಪ್ರಶಸ್ತಿ , ವೆನಿಸ್ ಪ್ರಶಸ್ತಿ ಮುಂತಾದ ವಿಜಯದ ಸಾಧನೆಗಳನ್ನೂ ಮಾಡಿದ್ದಾರೆ.   ಇತ್ತೀಚೆಗೆ ದುಬೈ ಓಪನ್ ಟೂರ್ನಿ ಪ್ರಶಸ್ತಿಯನ್ನು ಸಹಾ ಈ ಜೋಡಿ ಗೆದ್ದು ಕೊಂಡಿದೆ.  2013ರ ಒಲಿಂಪಿಕ್ಸ್ನಲ್ಲಿ ಬೋಪಣ್ಣ ಎಡ್ವರ್ಡ್ ರೋಜರ್ ವ್ಯಾಸೆಲಿನ್ ಅವರೊಂದಿಗೆ ಸೆಮಿಫೈನಲ್ ಡಬ್ಬಲ್ಸ್ ಸಾಧನೆ ಮಾಡಿದರು.  ಈ ಎಲ್ಲಾ ಸಾಧನೆಗಳಿಂದ ಅವರು ಇತ್ತೀಚಿನ ವಿಶ್ವದ ಡಬಲ್ಸ್ ಆಟಗಾರರ ಶ್ರೇಯಾಂಕ ಪಟ್ಟಿಯಲ್ಲಿ ಪ್ರತಿಷ್ಠಿತ 12ನೇ ಸ್ಥಾನವನ್ನು ಅಲಂಕರಿಸಿದ್ದಾರೆ.  ಬೋಪಣ್ಣ ಭಾರತ ತಂಡದ ಡೇವಿಸ್ ಕಪ್ ಸಾಧನೆಯಲ್ಲೂ ತಮ್ಮ ಮಹತ್ವದ ಕೊಡುಗೆ  ನೀಡಿದ್ದಾರೆ.  

ನಮ್ಮ ಬೋಪಣ್ಣನಿಗೆ ಪ್ರಖ್ಯಾತ ಆಟಗಾರ ಆರ್ಥರ್ ಐಶ್ ಹೆಸರಿನಲ್ಲಿ ನೀಡಲಾಗುವ 'ಆರ್ಥರ್ ಐಶ್ ಮಾನವತಾ ಪ್ರಶಸ್ತಿ' ಕೂಡಾ ಲಭಿಸಿದೆ.  ಹನ್ನೊಂದನೆಯ ವರ್ಷದಿಂದ ಟೆನ್ನಿಸ್ ಆಡುತ್ತಿರುವ ಬೋಪಣ್ಣ ಪ್ರತಿಷ್ಟಿತ ಹೋಟೆಲ್ ಒಂದರ ಒಡೆಯ ಕೂಡ.  ಕೊಡಗಿನ ಅಂಗವಿಕಲ ಮಕ್ಕಳಿಗಾಗಿ ನಿರ್ಮಿತವಾಗಿರುವ ಆಪರ್ಚುನಿಟಿ ಶಾಲೆಗಾಗಿ ಧನ ಸಂಗ್ರಹದ ಕೆಲಸ ಸಹಾ ಮಾಡಿಕೊಟ್ಟ ಹೃದಯವಂತ. 


ನಮ್ಮ ರೋಹನ್ ಬೋಪಣ್ಣ ಟೆನ್ನಿಸ್ ಕ್ರೀಡೆಯ ಮತ್ತು ಬದುಕಿನ ಎಲ್ಲಾ ಸಾಧನೆಗಳನ್ನೂ ಮಾಡಿ ಸುಖವಾಗಿ ಬದುಕುವಂತಾಗಲಿ ಎಂದು ಹಾರೈಸುತ್ತಾ ನಮ್ಮ ಈ ಹುಡುಗ ನಮ್ಮೆಲ್ಲರ ಹೆಮ್ಮೆ ಎಂದು ಭಾವಿಸುತ್ತಾ, ಈ ಹುಡುಗನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.

Tag: Rohan Bopanna

ಕಾಮೆಂಟ್‌ಗಳಿಲ್ಲ: