ಮಂಗಳವಾರ, ಸೆಪ್ಟೆಂಬರ್ 3, 2013

ಉಮರ್ ಖಯ್ಯಾಮ್

ಉಮರ್ ಖಯ್ಯಾಮ್

ಇಷ್ಟಪೂರ್ತಿಯನರಿತ ಮೊಗದೆಸಕಮದೆ ನಾಕ
ಕಷ್ಟವೆಂದಳುವವನ ನೆಳಲದುವೆ ನರಕ.

ಇದು ಉಮರ್ ಖಯ್ಯಾಮ್ ಅವರ ಒಂದು ಕವಿತೆಯ ಕುರಿತು ಡಿ ವಿ ಜಿ ಅವರ ಮಹಾನ್ ಕೃತಿ ‘ಉಮರನ ಒಸಗೆ’ಯಲ್ಲಿನ ಅನುವಾದ.
ಜೀವನದ ಸೊದೆಯ ಸವಿಯಲ್ಕಿರುವುದೀ ನಿಮಿಷ;
ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು;
ರವಿ ಶಶಿಗಳೋಡುತಿಹರೆಲ್ಲ ಶೂನ್ಯೋದಯಕೆ;
ಸಾಗುತಿಹರಟಕ! ಬಾ, ಸೊದೆಯುಣುವ ಬೇಗ.

ಇದು ಉಮರನ ಒಸಗೆಯ ಒಂದು ರುಬೈಯಾತ್. ಹೀಗೆ ಇಡೀ ಜಗತ್ತಿಗೇ ಬದುಕಿನ ಬಗ್ಗೆ ಬರೆದ ಮಹಾ ತತ್ವಜ್ಞಾನಿ ಉಮರ್ ಖಯ್ಯಾಮ್ (ಪೂರ್ಣ ಹೆಸರು: ಘಿಯಾತ್ ಅಲ್-ದಿನ್ ಅಬುಲ್ ಫಥಹ್ ಉಮರ್ ಇಬ್ನ್ ಇಬ್ರಾಹಿಮ್ ಅಲ್-ನಿಶಾಪುರಿ ಅಲ್-ಖಯ್ಯಾಮಿ ) ಒಬ್ಬ ಶ್ರೇಷ್ಠ ಗಣಿತಜ್ಞನೂ ಆಗಿದ್ದರು.  ಉಮರ್ ಖಯ್ಯಾಮ್ ಕ್ರಿ. ಶ. 1048ರ ವರ್ಷದ ಮೇ ತಿಂಗಳ 18ರಂದು ಈಗಿನ ಇರಾನಿನಲ್ಲಿರುವ ಅಂದಿನ ಪರ್ಷಿಯಾ ದೇಶದ ನಿಷಾಪುರ್ ಎಂಬಲ್ಲಿ  ಜನಿಸಿದರು. (ಈ ನಿಷಾಪುರದಲ್ಲಿನ ‘ಪುರ’ ಎಂಬುದು ಭಾರತೀಯ ಉಚ್ಛಾರದಂತಿದೆ ಅಲ್ಲವೆ!)

ಪರ್ಷಿಯಾ ದೇಶವೂ ಭಾರತದ ಗಣಿತಜ್ಞರ ಸಂಶೋಧನೆಗಳನ್ನು ಅದಾಗಲೇ ತಿಳಿದುಕೊಂಡಿದ್ದ ಕಾಲ. ಭಾರತದ ಗಣಿತವನ್ನೂ ಗಣನೆಗೆ ತೆಗೆದುಕೊಂಡು, ಯೂಕ್ಲಿಡನ ಗಣಿತದ ಸಿದ್ಧಾಂತಗಳನ್ನೂ ಅರಗಿಸಿಕೊಂಡು ಉಮರ್ ಖಯ್ಯಾಮ್ ಬರೆದ ಗಣಿತದ ಪುಸ್ತಕಗಳು ಜಗತ್ತಿನ ಪ್ರಮುಖ ಗಣಿತ ಗ್ರಂಥಗಳೆಂದು ಹೆಸರಾಗಿವೆ.

Treatise on Demonstration of Problems of Algebra  ಇದು ಉಮರ್ ಖಯ್ಯಾಮರ ಗಣಿತದ ಮೇಲಿನ ಮಹಾನ್  ಗ್ರಂಥ. ಮಧ್ಯಯುಗದ ಮಹಾನ್ ಗಣಿತಜ್ಞರಲ್ಲಿ ಒಬ್ಬರೆಂದು ಪ್ರಖ್ಯಾತರಾದ ಖಯ್ಯಾಮ್ ಈ ಗ್ರಂಥದಲ್ಲಿ ಹೈಪರ್‌ಬೋಲಾವನ್ನು ವೃತ್ತದಿಂದ ಕತ್ತರಿಸಿ ಕ್ಯೂಬಿಕ್ ಸಮೀಕರಣಗಳನ್ನು ಪರಿಹರಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. x2+200x=20x2+2000  ಕ್ಯೂಬಿಕ್ ಸಮೀಕರಣವನ್ನು ಪರಿಹರಿಸಿದವರು  ಉಮರ್. ಈ ಸಮಸ್ಯೆಯ ಪರಿಹಾರವನ್ನು ರೂಲರ್ ಮತ್ತು ಕಂಪಾಸ್‌ಗಳಿಂದ ಹುಡುಕಲು ಅಸಾಧ್ಯ. ಹೀಗಾಗಿ  ಈ ವಿಷಯವನ್ನು 750ವರ್ಷಗಳ ನಂತರ ಅರಿಯಲಾಯಿತು!  ಮತ್ತೊಮ್ಮೆ ಇದು ನಾವು ಏನೇನನ್ನು ಇಂದು ಬುದ್ಧಿವಂತಿಕೆಯಿಂದ ಮಾತಿನ ರೂಪದಲ್ಲಿ ವಿಶ್ವದಲ್ಲಿ ನಿರೂಪಿಸುತ್ತಿದ್ದೇವೆಯೋ ಇದೆಲ್ಲಾ ಮಾನವನ ಅಂತರಚಕ್ಷುವಿಗೆ ಹೊಳೆಯದ ವಿಚಾರವೇನಲ್ಲ ಎಂಬ ಭಾರತೀಯ ಋಷಿಮುನಿಗಳು ಪ್ರಸ್ತುತಪಡಿಸಿದ ಸತ್ಯವನ್ನೇ ಸುಸ್ಪಷ್ಟವಾಗಿ ತಿಳಿಸುತ್ತಿದೆ.

ಇದಲ್ಲದೆ ಉಮರ್ ಮತ್ತು ಆ ಕಾಲದ ಅರಬ್ ಗಣಿತಜ್ಞರು ಅಂಕಗಣಿತದಲ್ಲಿ ಸ್ಕ್ವೇರ್ ರೂಟ್, ಕ್ಯೂಬ್‌ರೂಟ್‌ಗಳನ್ನು ಕಂಡುಹಿಡಿಯುವ ಗಣಿತಕ್ಕಿಂತ ಮುಂದೆ ಹೋಗಿ ಐದು ಮತ್ತು ಆರನೆಯ ರೂಟ್‌ಗಳನ್ನು ಹುಡುಕುವ ವಿಧಾನಗಳನ್ನು ಸಹಾ ರೂಪಿಸಿದ್ದರು. ಪ್ಯಾಸ್ಕಲ್‌ನ ತ್ರಿಕೋನ ಎಂಬ ಪ್ರಖ್ಯಾತ ಗಣಿತ ಸಂಗತಿಯನ್ನೂ ಉಮರ್ ಹನ್ನೊಂದನೇ ಶತಮಾನದಲ್ಲೇ ಪ್ರತಿಪಾದಿಸಿದ್ದರು ಎಂದು ವಿದ್ವಾಂಸರ ಅಭಿಪ್ರಾಯವಿದೆ.  ಇದೆಲ್ಲವನ್ನೂ ಆರ್ಯಭಟರೂ ಇದಕ್ಕೆ ಮುಂಚೆಯೇ ತಿಳಿಸಿದ್ದರು ಎಂಬುದು ಭಾರತೀಯ ಚಿಂತನೆಗಳಲ್ಲಿದೆ.  

ಉಮರ ಖಯ್ಯಾಮರ ಮನೆಯವರು ಗುಡಾರ (ಟೆಂಟ್) ನಿರ್ಮಿಸುವ ವೃತ್ತಿಯವರು. ಅಲ್ ಖಯ್ಯಾಮ್ ಎಂದರೆ ಟೆಂಟ್ ಮೇಕರ್ ಎಂದೇ ಅರ್ಥ. ತನ್ನ ಈ ಹಿನ್ನೆಲೆಯನ್ನೇ ಖಯ್ಯಾಮ್ ಒಂದು ರುಬೈಯಾತ್‌ನಲ್ಲಿ ಹೀಗೆ ಹೇಳಿದ್ದಾರೆ:

ವಿಜ್ಞಾನದ ಗುಡಾರವ ಹೊಲೆದ ಖಯ್ಯಾಮ್
ಯಾತನೆಯ ತಿದಿಯೊಳಗೆ ಬಿದ್ದಿರುವನು; ಹಠಾತ್ತನೆ ಸುಟ್ಟುಹೋಗಿರುವನು
ಅವನ ಬದುಕಿನ ಗುಡಾರದ ಹಗ್ಗಗಳನ್ನು ವಿಧಿಯಲುಗು ಕತ್ತರಿಸಿರುವುದು
ಆಸೆಗಳ ದಲ್ಲಾಳಿಯು ಅವನನ್ನು ಕಾಸಿಲ್ಲದೆ ಮಾರಿರುವನು!

ಯುವ ವಯಸ್ಸಿನಲ್ಲೇ ಸಮರಖಂಡಕ್ಕೆ ಹೋಗಿ ಶಿಕ್ಷಣ ಪಡೆದ ಖಯ್ಯಾಮ್ ನಂತರ ಬುಖಾರಾಗೆ ಹೋಗಿ ನೆಲೆಸಿ ವಿಶ್ವಖ್ಯಾತ ಗಣಿತಜ್ಞ, ಖಗೋಳಶಾಸ್ತ್ರಜ್ಞ ಎಂದೇ ಪ್ರಸಿದ್ಧರಾದರು. ಹಲವು ದಶಕಗಳ ಕಾಲ ತತ್ವಶಾಸ್ತ್ರವನ್ನು ಬೋಧಿಸಿದ ಖಯ್ಯಾಮ್‌ ಅವರ  ಸಮಾಧಿಸ್ಥಳವು ಈಗ ವಿಶ್ವಖ್ಯಾತ ವಾಸ್ತುಶಿಲ್ಪದ ಅದ್ಭುತವೆಂದೇ ಪ್ರಸಿದ್ಧವಾಗಿದೆ. ಪ್ರತಿವರ್ಷವೂ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ.

ಉಮರರ ಬದುಕಿನಲ್ಲಿ 11ನೇ ಶತಮಾನದ ರಾಜಕೀಯ ಸ್ಥಿತ್ಯಂತರಗಳು ಭಾರೀ ಪ್ರಭಾವ ಬೀರಿದವು. ಅಂದಿನ ಚಿತ್ರ ವಿಚಿತ್ರ ರಾಜಕೀಯ ಘಟನೆಗಳ ಸಮಯದಲ್ಲಿ ತಮಗೆ  ಎದುರಾದ ಎಲ್ಲ ಕಷ್ಟಗಳನ್ನೂ ಉಮರರು  ಬೀಜಗಣಿತದ ಪುಸ್ತಕದಲ್ಲಿ ಬರೆಡಿದ್ದಾರೆ. 25ರ ಹರೆಯದ ಹೊತ್ತಿಗೇ ಅಂಕಗಣಿತ, ಬೀಜಗಣಿತ ಮತ್ತು ಸಂಗೀತದ ಮೇಲೆ ಪುಸ್ತಕಗಳನ್ನು ಬರೆದಿದ್ದ ಉಮರ್ 1070ರಲ್ಲಿ ಉಜ್ ಬೆಕಿಸ್ತಾನದ ಸಮರಖಂಡಕ್ಕೆ ಹೋದರು. ಇದು ಮಧ್ಯ ಏಷ್ಯಾದ ಅತಿ ಪ್ರಾಚೀನ ನಗರ. ಅಲ್ಲೇ ಉಮರರು ಬೀಜಗಣಿತದ ಮಹಾಗ್ರಂಥವನ್ನು ಬರೆದಿದ್ದು.

ಆ ದೇಶದ ಅಂದಿನ ರಾಜ ಉಮರರಿಗೆ ಆಹ್ವಾನ ನೀಡಿ ಅಲ್ಲಿ ಒಂದು ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಲು ಕೇಳಿಕೊಂಡರು. ಅಲ್ಲಿ ಎಂಟು ವರ್ಷಗಳ ಕಾಲ ತನ್ನ ಸಹ ವಿಜ್ಞಾನಿಗಳೊಂದಿಗೆ ಸಂಶೋಧನೆ ನಡೆಸಿದ ಉಮರ್ ಒಂದು ವರ್ಷ ಎಂದರೆ ಇಷ್ಟೇ ದಿನಗಳು ಎಂಬ ಕರಾರುವಾಕ್ ಲೆಕ್ಕವನ್ನು ಹಾಕಿ ತೋರಿಸಿದರು. ಗಣಿತಜ್ಞನಾಗುವುರ ಜೊತೆಗೆ ಖಗೋಳಶಾಸ್ತ್ರಜ್ಞರಾಗಿದ್ದ ಉಮರ್ ಒಂದು ಸೌರ ವರ್ಷ ಎಂದರೆ 365.24219858156 ದಿನಗಳು ಎಂದು ಘೋಷಿಸಿದರು. 500ವರ್ಷಗಳ ನಂತರ ಬಂದ ಗ್ರೆಗೊರಿಯನ್ ಕ್ಯಾಲೆಂಡರಿಗಿಂತ ಖಯ್ಯಾಮರ ಕ್ಯಾಲೆಂಡರ್ ಹೆಚ್ಚು ಖಚಿತವಾಗಿತ್ತು. ಈಗಲೂ ಮುಸ್ಲಿಮರು ಉಮರ್ ರೂಪಿಸಿದ ಕ್ಯಾಲೆಂಡರನ್ನೇ ಜಲಾಲಿ ಶಕೆ ಎಂದು ಕರೆದು ಬಳಸುತ್ತಿದ್ದಾರೆ.

ಕವಿಯಾಗಿ ಖಯ್ಯಾಮ್ ಸುಮಾರು ಒಂದು ಸಾವಿರ ರುಬೈಯಾತ್‌ಗಳನ್ನು ಬರೆದಿದ್ದಾರೆ. ಅವರ ಕಾವ್ಯವೇ ಈಗ ಅವರ ಗಣಿತದ ಸಂಶೋಧನೆಗಳಿಗಿಂತ ಹೆಚ್ಚು ಪ್ರಸಿದ್ಧ!

ಖಯ್ಯಾಮ್ ಸಂಗೀತಜ್ಞರೂ ಆಗಿದ್ದರು. ಸಂಗೀತದ ಕುರಿತೂ ಅವರು ಗ್ರಂಥ ರಚಿಸಿದ್ದಾರೆ.  ಮುಂದೆ ವಿಶ್ವಕಂಡ ಯಾಂತ್ರಿಕ ಶಾಸ್ತ್ರದ ಪರಿಧಿಗೆ ಬರುವ ‘ಜ್ಞಾನದ ಸಮತೋಲನ’ದ ಕುರಿತಾಗಿ ಸಹಾ ಅವರು  ಗ್ರಂಥ ರಚಿಸಿದ್ದರು.

`ದಿ ಜೀನಿಯಸ್ ಆಫ್ ಉಮರ್ ಖಯ್ಯಾಮ್’ ಎಂಬ ಡಾಕ್ಯುಮೆಂಟರಿಯನ್ನು ಬಿಬಿಸಿಯು ರೂಪಿಸಿದೆ. ಉಮರರ ಬದುಕಿನ ಆಳಗಳನ್ನು  ಈ ವಾರ್ತಾಚಿತ್ರವು ದಾಖಲಿಸಿದೆ. ಉಮರರ ಕಾವ್ಯದಷ್ಟೇ ಗಟ್ಟಿಯಾದ ಅವರ ವಿಜ್ಞಾನ ಸಂಶೋಧನೆಗಳ ಬಗ್ಗೆ ಈ ಡಾಕ್ಯುಮೆಂಟರಿ ವಿವರ ನೀಡುತ್ತದೆ. ಎಡ್ವರ್ಡ್ ಫಿಟ್‌ಜೆರಾಲ್ಡ್ ಅವರು ಉಮರರ ಒಸಗೆಯನ್ನು ಇಂಗ್ಲಿಷಿನಲ್ಲಿ ಪ್ರಕಟಿಸಿದಾಗ ಅದನ್ನು ಯಾರೂ ಕಣ್ಣೆತ್ತಿಯೂ ನೋಡಲಿಲ್ಲವಂತೆ.

ಆದರೆ ಮುಂದಿನ ದಿನಗಳಲ್ಲಿ ಉಮರರ ಒಸಗೆಗಳ ಪ್ರಭಾವ ಎಷ್ಟಿತ್ತೆಂದರೆ ಅಮೆರಿಕಾ, ಇಂಗ್ಲೆಂಡುಗಳಲ್ಲಿ ಈಗಲೂ ನೂರು ವರ್ಷ, ಎಂಬತ್ತು ವರ್ಷ ದಾಟಿದ ಉಮರ್ ಖಯ್ಯಾಮ್ ಕ್ಲಬ್‌ಗಳಿವೆ. ಈ ಕ್ಲಬ್‌ಗಳಿಗೆ ಥಾಮಸ್ ಹಾರ್ಡಿಯಿಂದ ಹಿಡಿದು, ಅರ್ ಆರ್ಥರ್ ಕಾನನ್ ಡಾಯಲ್‌ ಅವರವರೆಗೆ ಹಲವು ಪ್ರಸಿದ್ಧರು ಸದಸ್ಯರಾಗಿದ್ದರು.  1957ರಲ್ಲಿ ಉಮರ್ ಖಯ್ಯಾಮ್ ಎಂಬ ಹಾಲಿವುಡ್ ಸಿನೆಮಾ ಕೂಡ ಬಂದಿದೆ.

ಕವಿಯಾಗಿ ಬದುಕಿನ ನಶ್ವರತೆ ಮತ್ತು ಸಾಫಲ್ಯದ ಬಗ್ಗೆ ತತ್ವಪೂರ್ಣವಾದ ಪದ್ಯಗಳನ್ನು ಬರೆದ ಉಮರ್ ಖಯ್ಯಾಮ್ ವಿಜ್ಞಾನಿಯಾಗಿ, ಗಣಿತಜ್ಞನಾಗಿ ಮನುಕುಲಕ್ಕೆ ನೀಡಿದ ಕೊಡುಗೆಯೂ ಅತ್ಯಪೂರ್ವ.

ಮಾಹಿತಿ ಕೃಪೆ:  ಬೇಳೂರು ಸುದರ್ಶನ.  ಕೃಪೆ: http://mitramaadhyama.co.in

Tag: Umar Khayyam

ಕಾಮೆಂಟ್‌ಗಳಿಲ್ಲ: