ಸೋಮವಾರ, ಸೆಪ್ಟೆಂಬರ್ 2, 2013

ವಿ.ಕೆ.ಮೂರ್ತಿ

ವಿ.ಕೆ.ಮೂರ್ತಿ

ವಿ. ಕೆ. ಮೂರ್ತಿ ಚಲನಚಿತ್ರರಂಗದಲ್ಲಿ ಶ್ರೇಷ್ಠ  ಛಾಯಾಗ್ರಾಹಕರೆಂದು ಹೆಸರಾಗಿದ್ದು, ಒಬ್ಬ ತಂತ್ರಜ್ಞರಾಗಿ ದಾದಾ ಫಾಲ್ಕೆ ಪ್ರಶಸ್ತಿ ಪಡೆದ ಪ್ರಪ್ರಥಮರು.  ವೆಂಕಟರಾಮ ಪಂಡಿತ ಕೃಷ್ಣಮೂರ್ತಿ 26ನೇ  ನವೆಂಬರ್ 1922ರಂದು ಮೈಸೂರಿನಲ್ಲಿ ಜನಿಸಿದರು.

ವಿ. ಕೆ. ಮೂರ್ತಿ ಅವರು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ಛಾಯಾಗ್ರಹಣ ವಿಭಾಗದ ಮೊದಲ ತಂಡದ (1943-46) ವಿದ್ಯಾರ್ಥಿಗಳಲ್ಲಿ ಒಬ್ಬರು.  ಮುಂದೆ ಮುಂಬೈಗೆ ಬಂದಿಳಿದ ಮೂರ್ತಿಯವರಿಗೆ ಅಲ್ಲಿನ ಮೈಸೂರು ಅಸೋಸಿಯೇಷನ್ ತುಂಬಾ ಪ್ರಿಯವಾಗಿತ್ತು.  ಅಲ್ಲಿ ಒಂದು ನಾಟಕಕಾರರ ಗುಂಪನ್ನು ಕಟ್ಟಿಅನೇಕ ನಾಟಕಗಳನ್ನು ನಿರ್ದೇಶಿಸಿ, ರಂಗಪ್ರದರ್ಶನ ಮಾಡಿದ್ದರು. ಮೂರ್ತಿಯವರಿಗೆ ಪಿಟೀಲು ವಾದನದಲ್ಲಿ ಕೂಡ ಉತ್ತಮ ಪರಿಶ್ರಮವಿತ್ತು.  ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಅವರು  1943ರ ವರ್ಷದಲ್ಲಿ ಸೆರೆವಾಸವನ್ನನುಭವಿಸಿದರು.

ಭಾರತದ ಪ್ರಪ್ರಥಮ ಸಿನಿಮಾಸ್ಕೋಪ್ ಚಿತ್ರ ಕಾಗಜ್ ಕಿ ಫೂಲ್ಮತ್ತು ಸಾಹಿಬ್, ಬೀಬಿ ಔರ್ ಗುಲಾಂಚಿತ್ರದ ಛಾಯಾಗ್ರಹಣಕ್ಕಾಗಿ ಮೂರ್ತಿ ಅವರು  ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು.  ಅತ್ಯಂತ ಸೂಕ್ಷ್ಮ ವಿಧಾನಗಳ  ಮೂಲಕ ಛಾಯಾಗ್ರಹಣಕ್ಕೆ ಶ್ರೀಮಂತ ಹಾಗೂ ಕಲಾತ್ಮಕ ಮೆರುಗನ್ನು ತಂದುಕೊಟ್ಟ ಹಿರಿಮೆ ವಿ.ಕೆ.ಮೂರ್ತಿ ಅವರದ್ದು.   ಚಾದ್ವಿನ್ ಕಾ ಚಾಂದ್’, ‘ಬಾಜಿ’, ‘ಜಾಲ್’’,  ‘ಪ್ಯಾಸಾ’, ‘12 ಒ ಕ್ಲಾಕ್’, ‘ಜಿದ್ದಿ’, ‘ಲವ್ ಇನ್ ಟೋಕಿಯೋ’, ಇತ್ಯಾದಿ ಚಿತ್ರಗಳಲ್ಲಿ ಮೂಡಿಬಂದ ದೃಶ್ಯ ಕಾವ್ಯಗಳು  ಮೂರ್ತಿ ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಂತಿವೆ.  ಮಹಾನ್ ಕಲಾವಿದ ಮತ್ತು ನಿರ್ದೇಶಕ ಗುರುದತ್ ಅವರು ಜೀವಿಸಿರುವವರೆಗೆ ಅವರ ಎಲ್ಲಾ ಚಿತ್ರಗಳಿಗೂ ಕಣ್ಣಾಗಿದ್ದ ಮೂರ್ತಿಯವರು, ಅವರ ನಿಧನಾನಂತರದಲ್ಲಿ  ಇತರ ಪ್ರಮುಖ ನಿರ್ದೇಶಕರ ಜೊತೆಯಲ್ಲಿ ಕೂಡ ಕೆಲಸ ಮಾಡಿದರು.   ಚಲನಚಿತ್ರಗಳಲ್ಲದೆ ಶ್ಯಾಂ ಬೆನೆಗಲ್ ಅವರ ಭಾರತ್ ಏಕ್ ಖೋಜ್ಮತ್ತು ಗೋವಿಂದ ನಿಹಲಾನಿ ಅವರ ತಮಸ್ಧಾರಾವಾಹಿಗಳಿಗೂ  ಪ್ರಧಾನ ಛಾಯಾಗ್ರಾಹಕರಾಗಿ ದುಡಿದ ಮೂರ್ತಿಯವರ ಕೆಲಸ ಬಹುಕಾಲ ನೆನೆಪಿನಲ್ಲಿ ಉಳಿಯುವಂತದ್ದಾಗಿದೆ.  ವಿಶ್ವಖ್ಯಾತಿಯ ಈ ಕನ್ನಡಿಗರು ಕನ್ನಡದಲ್ಲಿ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರ ಹೂವು ಹಣ್ಣುಚಿತ್ರದಲ್ಲಿ ಕೂಡ ಛಾಯಾಗ್ರಹಣ ಮಾಡಿದ್ದಾರೆ.

ವಕ್ತ್ ನೇ ಕಿಯಾ ಕ್ಯಾ ಹಸೀನ್ ಸಿತಮ್, ತುಮ್ ರಹೇ ನ ತುಮ್, ಹಮ್ ರಹೇ ನ ಹಮ್ಗುರುದತ್ ನಿರ್ದೇಶನದ ಕಾಗಜ್ ಕಾ ಪೂಲ್ಚಿತ್ರದ ಪ್ರಖ್ಯಾತ ಹಾಡು. ಕೈಫಿ ಆಜ್ಮಿ ಅವರ ಗೀತೆ, ಎಸ್.ಡಿ. ಬರ್ಮನ್ ಸಂಗೀತ, ಗೀತಾ ದತ್ ಅವರ ಕಂಠದಲ್ಲಿ ಮೂಡಿ ಬಂದ ಹೃದಯ ಕಲುಕುವಂಥ ಆ ಗೀತೆಗೆ ಅಷ್ಟೇ ಪರಿಣಾಮಕಾರಿಯಾಗಿ, ಮನೋಜ್ಞವಾಗಿ, ಅರ್ಥಗರ್ಭಿತವಾಗಿ ಛಾಯಾಗ್ರಹಣ ಮಾಡಿದ ಕೀರ್ತಿ  ವಿ.ಕೆ. ಮೂರ್ತಿ ಅವರಿಗೆ ಸಲ್ಲುತ್ತದೆ.

ಅವನೊಬ್ಬ ಚಿತ್ರ ನಿರ್ದೇಶಕ. ಶ್ರೀಮಂತ ಕುಟುಂಬವೊಂದರ ಹೆಣ್ಣಿನೊಂದಿಗೆ ಅವನ ವಿವಾಹ ಆಗಿರುತ್ತದೆ. ಆದರೆ, ಆ ಮನೆಯವರು ಇವನ ನಿರ್ದೇಶಕ ವೃತ್ತಿಯನ್ನು ಇಷ್ಟಪಟ್ಟಿರುವುದಿಲ್ಲ. ಹೀಗಾಗಿ ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ. ಒಂದು ಮಳೆಗಾಲದ ರಾತ್ರಿ ಶಾಂತಿ ಎಂಬಾಕೆಯನ್ನು ನಿರ್ದೇಶಕ ಸಂಧಿಸುತ್ತಾನೆ. ಅವಳಿಗೆ ತನ್ನ ಕೋಟ್ ಕೊಡುತ್ತಾನೆ. ಅದನ್ನು ಹಿಂದಿರುಗಿಸಲು ಆಕೆ ಅವನು ಚಿತ್ರೀಕರಿಸುತ್ತಿದ್ದ ಸ್ಟುಡಿಯೋಗೆ ಬರುತ್ತಾಳೆ. ಅಲ್ಲಿ ಸ್ಪಾಟ್ ಲೈಟ್ ಬಿಟ್ಟು ಉಳಿದೆಲ್ಲ ಕಡೆ ಕತ್ತಲು.  ನಿರ್ದೇಶಕ ತಾನು ತೆಗೆದ ಚಿತ್ರದ ರಷಸ್ ನೋಡುತ್ತಿರುತ್ತಾನೆ. ಇಲ್ಲಿ ಚಿತ್ರೀಕರಣ ನಡೆಯುತ್ತಿದೆ ಎನ್ನುವುದರ ಪರಿವೇ ಇಲ್ಲದೆ ಶಾಂತಿ ಮೆಲ್ಲಗೆ ಕೋಟ್‌ನೊಂದಿಗೆ ಕ್ಯಾಮೆರಾಗೆ ಇದಿರಾಗಿ ಬರುತ್ತಾಳೆ. ಆಗ, ಹಿನ್ನೆಲೆಯಲ್ಲಿ ವಕ್ತ್ ನೇ ಕಿಯಾಹಾಡು ಕೇಳಿ ಬರುತ್ತದೆ. ಕೇಳುವುದಕ್ಕೆ ತೀರಾ ಮಾಮೂಲಿ ಎನ್ನುವಂತಿರುವ ಈ ಸನ್ನಿವೇಶವನ್ನು ಮನೋಜ್ಞವಾಗಿ ಚಿತ್ರೀಕರಿಸಿದ್ದು ವಿ.ಕೆ. ಮೂರ್ತಿ ಅವರು.

1959ರಲ್ಲಿ ತೆರೆ ಕಂಡ ಕಾಗಜ್ ಕಾ ಪೂಲ್ಭಾರತದಲ್ಲೇ ಮೊದಲ ಬಾರಿಗೆ ಕಪ್ಪು ಬಿಳಿಪಿನಲ್ಲಿ ತಯಾರಾದ 75 ಎಂಎಂ ಸಿನಿಮಾ ಸ್ಕೋಪ್ ಚಿತ್ರ. ಆದರೂ ಆಗ ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಇನ್ನಿಲ್ಲದಂತೆ ನೆಲ ಕಚ್ಚಿತ್ತು. ಆದರೆ, ಅದೇ ಚಿತ್ರ 1984ರಲ್ಲಿ ಮರು ತೆರೆ ಕಂಡಾಗ ಅದನ್ನೊಂದು ಕ್ಲಾಸಿಕ್ ಚಿತ್ರವೆಂದು ಚಿತ್ರ ಪ್ರಪಂಚ ಹಾಡಿ ಹೊಗಳಿತು. ಸರ್ವ ಕಾಲಕ್ಕೂ ಸಲ್ಲುವ ಶ್ರೇಷ್ಠ ಚಿತ್ರಗಳಲ್ಲೊಂದು  ಎನ್ನುವ ಹೆಗ್ಗಳಿಕೆಗೆ ಕಾಗಜ್ ಕಾ ಪೂಲ್ಪಾತ್ರವಾಯಿತು.  2002 ರಲ್ಲಿ ಸೈಟ್ ಅಂಡ್ ಸೌಂಡ್ ನಡೆಸಿದ ಕ್ರಿಟಿಕ್ಸ್ ಅಂಡ್ ಡೈರೆಕ್ಟರ್ಸ್ ಪೋಲ್‌ನಲ್ಲಿ ಕಾಗಜ್ ಕಾ ಪೂಲ್’ 160ನೇ ಸ್ಥಾನವನ್ನು ಪಡೆದುಕೊಂಡಿತು. ಹಿಂದಿಯ ಶ್ರೇಷ್ಠ ಹತ್ತು  ಚಿತ್ರಗಳ ಪಟ್ಟಿಯಲ್ಲಿ ಕಾಗಜ್ ಕಾ ಪೂಲ್ಶಾಶ್ವತವಾದ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಇದಕ್ಕೆ ಪ್ರಮುಖ ಕಾರಣ ವಿ.ಕೆ. ಮೂರ್ತಿ ಅವರ ಕ್ಯಾಮೆರಾ ಕೈಚಳಕ ಎಂಬುದ ಚಿತ್ರವಿದ್ವಾಂಸರೆಲ್ಲರ ಅಭಿಪ್ರಾಯ.

ಗುರುದತ್ ಅವರ ಬಹುತೇಕ ಚಿತ್ರಗಳಿಗೆ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ ಮೂರ್ತಿ ಅವರದ್ದು ಅಸಾಧಾರಣ ಪ್ರತಿಭೆ. ಪ್ಯಾಸಾಚಿತ್ರದಲ್ಲಿ ನಾಯಕ ಹತಾಶೆಯಿಂದ ಬಾಗಿಲಿಗೆ ಕೈಯ್ಯೊಡ್ಡಿ ನಿಲ್ಲುವ ಒಂದು ಅಪೂರ್ವ ದೃಶ್ಯವಿದೆ. ಆ ದೃಶ್ಯವನ್ನು ಮೂರ್ತಿ ಅವರು ತೆಗೆದಿರುವ ರೀತಿ ಅನನ್ಯವಾದದ್ದು. ಆ ಸಂದರ್ಭದಲ್ಲೂ ಒಂದು ದುಃಖದ ಗೀತೆ ಕೇಳಿ ಬರುತ್ತದೆ. ಎ ದುನಿಯಾ ಅಗರ್ ಮಿಲ್ ಭಿ ಜಾಯೇ ತೊ ಕ್ಯಾ ಹೇರಫಿ ಅವರ ಕಂಠದಲ್ಲಿ ಮೂಡಿ ಬಂದ ಈ ಗೀತೆಯೂ ಕೂಡ ಬರಹಗಾರನೊಬ್ಬನ ಬದುಕಿನ ಹೃದಯ ವಿದ್ರಾವಕ ಚಿತ್ರಣವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. 1957ರಲ್ಲಿ ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರದಲ್ಲಿಯೂ ಕ್ಯಾಮೆರಾ ಕೈಚಳಕವೇ ಪ್ರಧಾನ ಭೂಮಿಕೆಯನ್ನು ಪಡೆದುಕೊಂಡಿದೆ.  ಗುರುದತ್ ಅವರ ಚಿತ್ರಗಳಿಗೆ  ಕಲಾತ್ಮಕತೆ, ಕಾವ್ಯ ಗುಣ ಲಭ್ಯವಾಗುವಲ್ಲಿ ಮೂರ್ತಿಯವರ ಕೊಡುಗೆ ಅನುಪಮವಾದದ್ದು. ಅವರು ಚಿತ್ರೀಕರಿಸಿರುವ ಪ್ರತಿಯೊಂದು ದೃಶ್ಯವೂ ಅಧ್ಯಯನ ಯೋಗ್ಯವಾಗಿದೆ.

ಮೂರ್ತಿ ಅವರು ಉಳಿದೆಲ್ಲ ಕ್ಯಾಮೆರಾಮನ್‌ಗಳಿಗಿಂತ ಭಿನ್ನವಾಗಿ ಕಾಣುವುದಕ್ಕೆ ಪ್ರಮುಖ ಕಾರಣ ಅವರು ದೃಶ್ಯವನ್ನು ಚಿತ್ರೀಕರಿಸುವಲ್ಲಿ ಹೊರಹೊಮ್ಮಿಸಿದ  ಪ್ರತಿಭಾವಂತಿಕೆ. ದೂರದರ್ಶನದಲ್ಲಿ ಮೂಡಿ ಬರುತ್ತಿದ್ದ ತಮಸ್ಧಾರಾವಾಹಿಯನ್ನು ನೋಡಿದವರಿಗೆ ಇದು ಮತ್ತಷ್ಟು ಮನದಟ್ಟಾಗುತ್ತದೆ. ಮಸೀದಿಯ ಪ್ರವೇಶ ದ್ವಾರದಲ್ಲಿ ಯಾರೋ ಕಿಡಿಗೇಡಿಗಳು ಹಂದಿಯ ಮಾಂಸದ ತುಂಡನ್ನು ಎಸೆದಿರುತ್ತಾರೆ. ಅದನ್ನು ನೋಡಿದ ವ್ಯಕ್ತಿ ಥರಥರ ನಡುಗಿ ಹೋಗುತ್ತಾನೆ. ಈ ಎರಡನ್ನೂ ಎಷ್ಟು ಪರಿಣಾಮಕಾರಿಯಾಗಿ ಮೂರ್ತಿಯವರು ಚಿತ್ರಿಸಿದ್ದಾರೆಂದರೆ, ನೋಡುಗನ ಮನಸ್ಸಿನ ಮೇಲೆ ಮುಂದಿನ ಘಟನೆಯ ಚಿತ್ರ ಅನಾವರಣಗೊಳ್ಳಬೇಕು. ಆ ರೀತಿಯ ಅನನ್ಯತೆ ಅವರ ಛಾಯಾಗ್ರಹಣದಲ್ಲಿದೆ. 

ಅಂದಿನ ದಿನಗಳಲ್ಲಿ ಕಲಾವಿದರು ಅದರಲ್ಲೂ ಸಿನಿಮಾ ನಟಿಯರು ವಿ. ಕೆ. ಮೂರ್ತಿಯವರು ತಮ್ಮ ಚಿತ್ರದ ಛಾಯಾಗ್ರಹಣ ಮಾಡಿದರೆ ತಮ್ಮ ಅದೃಷ್ಟವೆಂದು ಭಾವಿಸುತ್ತಿದ್ದರು.  ಅವರ ಚಿತ್ರಗಳಲ್ಲಿ ನೆರಳು ಬೆಳಕಿನ ಸಂಯೋಜನೆಯಿಂದ ಅವರು ಕಲಾವಿದರನ್ನು ಸುಂದರವಾಗಿ ಬಿಂಬಿಸುತ್ತಿದ್ದ ರೀತಿ ಈ ಮಾತನ್ನು ಸಾಕಷ್ಟು ಪುಷ್ಟೀಕರಿಸುತ್ತದೆ.  ಅವರ ಚಿತ್ರಗಳಲ್ಲಿ ಮಧುಬಾಲಾ, ವಹೀದಾ ರೆಹಮಾನ್ ಅಂತಹವರು ಸುಂದರವಾಗಿ ಮೂಡಿಬಂದ ರೀತಿ ಅತ್ಯಂತ ಪ್ರಸಿದ್ಧಿ ಪಡೆದಿತ್ತು.

ಇಂತಹ ಮಹಾನ್ ತಂತ್ರಜ್ಞನಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವುದು ಆ ಪ್ರಶಸ್ತಿಗೆ ಕೂಡ ವಿಶಾಲ ವ್ಯಾಪ್ತಿ ಮತ್ತು ಹಿರಿಮೆಯನ್ನು ತಂದಿದೆ ಎಂದು ಬಹುತೇಕ ಪರಿಣಿತರ ಅಭಿಪ್ರಾಯ.

ಮೂರ್ತಿ ಅವರು ಪ್ರಾರಂಭದ ದಿನಗಳಿಂದ ಸಿನಿಮಾದ ಸಹೋದ್ಯೋಗಿಗಳಿಂದ ಅತ್ಯಂತ ಸೌಹಾರ್ಧಯುತ ವ್ಯಕ್ತಿ ಎಂದು ಗೌರವ ಪಡೆದವರಾಗಿದ್ದಾರೆ.  ಗುರುದತ್ ಮತ್ತು ಅವರ ಒಡನಾಡಿತನ ನಿರಂತರವಾಗಿತ್ತು.  ಹಲವೊಮ್ಮೆ ನಿರ್ಮಾಪಕರು, ನಿರ್ದೇಶಕರು ತಮಗೆ ಕಲಾವಿದರಿಂದ ಹೆಚ್ಚಿನ ಸಮಯದ ಕೆಲಸ ಬೇಕಿದ್ದರೆ ಅದನ್ನು ಮೂರ್ತಿಯವರ ಮೂಲಕ ಪಡೆಯುತ್ತಿದ್ದರಂತೆ.  ಮಧುಬಾಲಅತ್ಯಂತ ಕಟ್ಟುನಿಟ್ಟಿನ ವ್ಯಕ್ತಿ.  ಸಮಯ ಅಂದರೆ ಸಮಯ. ನಂತರದ ವೇಳೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ.  ಒಮ್ಮೆ ನಿರ್ದೇಶಕರು ಇವತ್ತು ಇನ್ನಷ್ಟು ಕೆಲಸ ಮುಗಿಸಿಬಿಟ್ಟಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಭಾವಿಸಿದರು.  ಆದರೆ ನಾಯಕ ನಟಿ ಒಪ್ಪಬೇಕಲ್ಲ.  ನಮ್ಮ ಮೂರ್ತಿಯವರ ಆಸರೆ ಕೇಳಿದರು.  ಮೂರ್ತಿ ಅವರು ಮಧುಬಾಲಅವರ ಬಳಿ ನೀವು ಇವತ್ತು ಇನ್ನೆರಡು ಗಂಟೆಗಳ ಕೆಲಸ ಮಾಡುವುದಾದರೆ ನನಗೆ ತುಂಬಾ ಸಹಾಯವಾಗುತ್ತೆ ಎಂದು ಕೇಳಿದರು. ಸರಿನಾನು ಮನೆಗೆ ಹೋಗಿ ಇನ್ನೊಂದು ತಾಸಿನಲ್ಲಿ ಹಿಂದಿರುಗುತ್ತೇನೆ ಎಂದು ಹೇಳಿದವರೇ ಪುನಃ ಬಂದು ಹಲವು ತಾಸುಗಳವರೆಗೆ ಕೆಲಸ ಮಾಡಿದರಂತೆ.  ಯಾರೋ ಬಂದು, ಏನಿವಿತ್ತು ಎಂದು ಅಚ್ಚರಿ ತೋರಿದರೆ ಆಕೆ ಹೇಳಿದರಂತೆ, “ನಾನು ಮೂರ್ತಿ ಸಾಬ್ ಅವರಿಗಾಗಿ ಇಂದು ಕೆಲಸ ಮಾಡುತ್ತಿದ್ದೇನೆ”. ಸಿನಿಮಾರಂಗದಲ್ಲಿ ಹಲವು ಪ್ರೇಮಿಗಳ ಸಮಸ್ಯೆಗಳು ಕೂಡ ಮೂರ್ತಿಯವರ ಸಮ್ಮುಖಕ್ಕೆ ಪರಿಹಾರಕ್ಕೊಸ್ಕರ ಬರುತ್ತಿದ್ದವಂತೆ.  ಅಷ್ಟೊಂದು ಗೌರವಯುತ ಸ್ಥಾನ ಪಡೆದಿದ್ದಾತ ಮೂರ್ತಿಗಳು.  ಇತ್ತೀಚಿಗೆ ಅಮಿತಾಬ್ ಅವರು ಹೇಳಿದ ಮಾತು, “ಮೂರ್ತಿ ಸಾಬ್ ಅವರ ವ್ಯಕ್ತಿತ್ವ ಮತ್ತು ಪ್ರತಿಭೆ ಅಸಾಧಾರಣವಾದದ್ದು”.  ಮುಂಬೈನ ಮೈಸೂರು ಅಸೋಸಿಯೇಷನ್ ಮೂರ್ತಿಯವರಿಗೆ ನೀಡಿದ ಸನ್ಮಾನದಲ್ಲಿ ಶ್ಯಾಮ್ ಬೆನೆಗಾಲ್ಗೋವಿಂದ ನಿಹಲಾನಿ, ಆಶಾ ಪರೇಖ್ ಮುಂತಾದ ಮಹಾನ್ ಗಣ್ಯರ ಸಾಲು ಸಾಲೇ  ನೆರೆದಿತ್ತು.

ಇಂತಹ ಮಹಾನ್ ತಂತ್ರಜ್ಞ, ಮಹಾನ್ ಸಾಧಕ, ಮಹಾನ್ ವ್ಯಕ್ತಿತ್ವದ ವಿ.ಕೆ. ಮೂರ್ತಿಯವರು ನಮ್ಮ ಕರ್ನಾಟಕದಲ್ಲಿ ನಮ್ಮ ಕಾಲದಲ್ಲಿದ್ದದ್ದು  ಈ ನಾಡಿಗೆ ಹಿರಿಮೆ ತಂದಿದೆ.  ವಿ.ಕೆ ಮೂರ್ತಿ  ಏಪ್ರಿಲ್ 7, 2014ರಂದು ಈ ಲೋಕವನ್ನಗಲಿದರು.  ಅವರು ಉಳಿಸಿಹೋದ ಕಲಾತ್ಮಕತೆ ಅಜರಾಮರವಾದದ್ದು.  ಈ ಮಹಾನ್ ಪ್ರತಿಭಾವಂತ ಚೇತನಕ್ಕೆ ನಮೋನ್ನಮಃ


Tag: V. K. Murthy

ಕಾಮೆಂಟ್‌ಗಳಿಲ್ಲ: