ಭಾನುವಾರ, ಸೆಪ್ಟೆಂಬರ್ 1, 2013

ಮದನ ಮೋಹನ ಮಾಳವೀಯ

ಪಂಡಿತ್ ಮದನ ಮೋಹನ ಮಾಳವೀಯ

ಡಿಸೆಂಬರ್ 25, 1861 ಪಂಡಿತ ಮದನ ಮೋಹನ್ ಮಾಳವೀಯರು ಜನಿಸಿದ ದಿನ. ಉತ್ತರಪ್ರದೇಶದ ಅಹಿಯಾಪುರದಲ್ಲಿ ಜನಿಸಿದ ಮದನ ಮೋಹನ್ ಮಾಳವೀಯರು ಮಹಾನ್ ದೇಶಭಕ್ತರು.  ಅವರು ಮಾಡಿದ ಮಹತ್ಸಾದನೆಗಾಗಿ ಅವರು ಜನಿಸಿದ ಈ ಅಹಿಯಾಪುರವನ್ನು ಮಾಳವೀಯನಗರವೆಂದು ಹೆಸರಿಸಲಾಗಿದೆ.  ದೇಶದ ಸಾಂಸ್ಕೃತಿಕ ನೆಲೆಯಲ್ಲಿ ವಿದ್ಯಾಭ್ಯಾಸದ ಪೋಷಣೆಗಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಮಹನೀಯರು ಮಾಳವೀಯರು.  2014 ವರ್ಷ ಈ ಮಹನೀಯರ ಗೌರವಾರ್ಥವಾಗಿ  ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನೂ ಅರ್ಪಿಸಿದೆ.

1916ರಲ್ಲಿ ಸ್ಥಾಪನೆಯಾದ ಬನಾರಸ್ ವಿಶ್ವವಿದ್ಯಾನಿಲಯದಲ್ಲಿ 12,000 ವಿದ್ಯಾರ್ಥಿಗಳಿದ್ದರು. ಇಂತಹ ವಿದ್ಯಾದೇಗುಲವನ್ನು ಕಟ್ಟಲು ಬೇಕಾದ ಸಂಪನ್ಮೂಲ ಮಾಳವೀಯ ಅವರಲ್ಲಿ ಇರಲಿಲ್ಲ. ಆದರೂ ಅವರು ಊರೂರು  ಅಲೆದು ಅನೇಕ ಜನರಿಂದ ದೇಣಿಗೆ ಸಂಗ್ರಹಿಸಿ ವಿಶ್ವವಿದ್ಯಾಲಯ ಕಟ್ಟುವ ತಮ್ಮ ಕನಸನ್ನು ನನಸಾಗಿಸಿದರು.  ಅಂದುಕೊಂಡಿದ್ದನ್ನು ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನ ಇದ್ದಾಗ ಇದೆಲ್ಲವೂ ಕೈಗೂಡುವುದು ಸಾಧ್ಯವಾಗುತ್ತದೆ ಎಂಬುದಕ್ಕೆ ಮಾಳವೀಯರ  ಬದುಕೇ ಒಂದು ನಿದರ್ಶನ.  ಆದರೆ ಈ ಹಾದಿಯಲ್ಲಿ ಅವರು ಪಟ್ಟ ಕಷ್ಟ, ಶ್ರಮ, ಅವಮಾನ ಒಂದೆರಡಲ್ಲ. ಎಲ್ಲವನ್ನು ಅವಡುಗಚ್ಚಿ ಸಹಿಸಿ ಮುನ್ನಡೆದದ್ದು ಅವರ ಹಿರಿತನ.

ಸ್ವಾತಂತ್ರ್ಯ ಹೋರಾಟಗಾರ, ಕವಿ-ಸಾಹಿತಿ, ಪತ್ರಿಕೆಗಳನ್ನು ಕಟ್ಟಿಬೆಳೆಸಿದ ಧೀಮಂತ, ವಿದ್ಯಾಧಾತ ಮತ್ತು ಭಾರತೀಯ ಮೌಲ್ಯಗಳ ಹಿತಚಿಂತಕ; ಮೌಢ್ಯ, ಜಾತೀವಾದಗಳನ್ನು ಪೋಷಿಸದ ಮನೋಭಾವನೆ  ಹೊಂದಿದ್ದ ಮಾಳವೀಯರು ಪಂಡಿತರೆಂದೇ ಹೆಸರುವಾಸಿ.  ಈಗ ನಾಡಿನೆಲ್ಲೆಡೆ ಜನಜನಿತವಾಗಿರುವ "ಸತ್ಯಮೇವಜಯತೇ" ಎಂಬ ವೇದವಾಕ್ಯವನ್ನು ಸಾರ್ವಜನಿಕ ಬದುಕಿನಲ್ಲಿ ಬಳಕೆಗೆ ತಂದದ್ದು ಮಾಳವೀಯರೆ.  ವಿಶ್ವವಿದ್ಯಾನಿಲಯ ಕಟ್ಟಬೇಕೆಂಬ  ಅದಮ್ಯ ಉತ್ಸಾಹ ಮತ್ತು ಇಚ್ಚಾಶಕ್ತಿ ಹೊಂದಿದ್ದ ಮಾಳವೀಯರು ಸಂಪನ್ಮೂಲ ಒಟ್ಟುಗೂಡಿಸಲು ಊರಿಂದೂರಿಗೆ  ಪಯಣಿಸಿ, ಎಲ್ಲರಿಂದ ದೇಣಿಗೆ ಸಂಗ್ರಹಿಸುತ್ತಿದ್ದರು. ಈ ಅಭಿಯಾನದ ಯಾತ್ರೆಯಲ್ಲಿ ಒಮ್ಮೆ ಅವರು ಹೈದರಾಬಾದಿನ ನಿಜಾಮನ ಅರಮನೆಗೆ ಬಂದರು. ಹೈದರಾಬಾದಿನ  ನಿಜಾಮ ಆಗ ವಿಶ್ವದಲ್ಲಿಯೇ ಅತೀ ದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ.

ಮದನ್ ಮೋಹನ ಮಾಳವೀಯರು ಹಿಂದೂ ವಿಶ್ವವಿದ್ಯಾಲಯ ಕಟ್ಟಲು ತಮ್ಮಲ್ಲಿ ದೇಣಿಗೆ ಕೇಳಿದಾಗ, ನಿಜಾಮ ಸಿಟ್ಟಿಗೆದ್ದ. ನನ್ನ  ಬಳಿ ಬಂದು ಹಿಂದೂ ಯುನಿವರ್ಸಿಟಿ ಕಟ್ಟಲು ಹಣ ಕೇಳಲು ನಿಮಗೆಷ್ಟು ಧೈರ್ಯ, ಎಂದು ತನ್ನ ಕಾಲಲ್ಲಿದ್ದ ಚಪ್ಪಲಿಯನ್ನು ಮಾಳವೀಯರತ್ತ ಕೋಪದಿಂದ ಎಸೆದನಂತೆ. ಮಾಳವೀಯರು ಕಿಂಚಿತ್ತೂ ಸಿಟ್ಟಾಗಲಿಲ್ಲ.  ತನ್ನತ್ತ ತೂರಿ ಬಂದ ನಿಜಾಮನ ಚಪ್ಪಲಿಯನ್ನು ಎತ್ತಿಕೊಂಡು ಸದ್ದಿಲ್ಲದೆ ಹೊರಬಂದರು.   ನಡೆದ ವಿಷಯವನ್ನು ಯಾರೊಡನೆಯೂ ಹೇಳಲಿಲ್ಲ.  ಬದಲಾಗಿ ಹೈದರಾಬಾದಿನ ಒಂದು ಆಯಕಟ್ಟಿನ ಸ್ಥಳದಲ್ಲಿ, ನಿಜಾಮನ ಚಪ್ಪಲಿ ಮಾರಾಟಕ್ಕಿದೆ, ಹರಾಜಿನಲ್ಲಿ ಅತೀ ಹೆಚ್ಚು ಬೆಲೆ ಕೂಗುವವರಿಗೆ ಕೊಡಲಾಗುವುದು ಎಂಬ ಘೋಷಣೆ ಹೊರಡಿಸಿ, ಹರಾಜಿಗೆ ದಿನ ನಿಗದಿ ಪಡಿಸಿದರು. ಖ್ಯಾತನಾಮರು ಉಂಡುಟ್ಟು ಎಸೆದ ತ್ಯಾಜ್ಯವಸ್ತುಗಳನ್ನು ದೊಡ್ಡಬೆಲೆ ತೆತ್ತು ಕೊಳ್ಳುವ ಹುಂಬರು ಅಂದೂ ಇದ್ದರು.  ಹಾಗೆಂದ ಮೇಲೆ ನಿಜಾಮನ ಚಪ್ಪಲಿ ಕೊಳ್ಳಲು ಸಿರಿವಂತ ಜನ ಮುಗಿಬೀಳದೇ ಇರುತ್ತಾರೆಯೇ?.  ವಿಷಯ ನಿಜಾಮನ ಕಿವಿಗೂ ತಲುಪಿತು. ತನ್ನ ಪಾದರಕ್ಷೆ ಅತೀ ಕಡಿಮೆ ಬೆಲೆಗೇನಾದರು  ಹರಾಜಿನಲ್ಲಿ ವಿಕ್ರಯವಾದರೆ ಅದು ತನಗೆ ಅಪಮಾನ, ಹಾಗಾಗಲು ಬಿಡಬಾರದು ಎಂಬುದು ನಿಜಾಮನ ಆತಂಕ. ತನ್ನ ದೂತನೊಬ್ಬನನ್ನು ಹರಾಜು ಸ್ಥಳಕ್ಕೆ ಕಳುಹಿಸಿ, ಆ ಪಾದರಕ್ಷೆಯನ್ನು ಎಷ್ಟಾದರೂ ಸರಿ ಕೊಂಡುತಾ ಎಂದು ನಿಜಾಮ ಆದೇಶಿಸಿದ. ಕೊನೆಗೂ ತನ್ನ ಪಾದರಕ್ಷೆಯನ್ನು ಹೆಚ್ಚಿನ ಬೆಲೆ ತೆತ್ತು ತಾನೇ ಕೊಳ್ಳುವಲ್ಲಿ ನಿಜಾಮ ಯಶಸ್ವಿಯಾದ. ಮಾಳವೀಯರ ಉದ್ದೇಶವೂ ಈಡೇರಿತು. ಅವರಿಗೆ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಒಂದಷ್ಟು ಆರ್ಥಿಕ ಸಂಪನ್ಮೂಲವೂ ದೊರಕಿತು.

ಸಂದರ್ಭೋಚಿತವಾಗಿ ಮಾಳವೀಯರು ನಡೆದುಕೊಂಡ ರೀತಿ, ಮತ್ತು ಅವರು ತಮಗೆ ಅಪಮಾನವಾದಾಗಲೂ ನಿರ್ವಿಕಾರ ಮನೋಭಾವದಿಂದ ಅದನ್ನು ಸ್ವೀಕರಿಸಿ  ಘನ ಉದ್ದೇಶವೊಂದರ ಸಾಧನೆಗಾಗಿ ನಡೆದುಕೊಂಡ ಬಗೆ  ಅಪರೂಪದ್ದು.

ಶಿಕ್ಷಣ ಕ್ಷೇತ್ರವೇ ಅಲ್ಲದೆ ದೇಶದ ಸ್ವಾತಂತ್ರ ಚಳುವಳಿ, ಜಾತಿಪದ್ಧತಿ ನಿರ್ಮೂಲನೆಯಂತಹ ಸಾರ್ವಜನಿಕ ಸೇವೆ, ಹಿಂದೂಸ್ಥಾನ್ ಟೈಮ್ಸ್ ಅಂತಹ ಪತ್ರಿಕೆಗಳ ಮುಂದಾಳತ್ವ ಮುಂತಾದ ಹಲವು ಕ್ಷೇತ್ರಗಳಲ್ಲಿ ಮಾಳವೀಯರು ಅನನ್ಯ ಸೇವೆ ಸಲ್ಲಿಸಿದರು.  ಎರಡು ಬಾರಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ  ಅಧ್ಯಕ್ಷತೆ ವಹಿಸಿದ್ದರು.

ಮದನ್ ಮೋಹನ್ ಮಾಳವೀಯರು 1946ರ ವರ್ಷದಲ್ಲಿ ಈ ಲೋಕವನ್ನಗಲಿದರು. 2014 ವರ್ಷ  ಅವರಿಗೆ ಭಾರತರತ್ನ ಪ್ರಶಸ್ತಿ ಪ್ರಕಟಿಸಿದಾಗ  ಹಿಂದೆ ಇಂತಹ ಪ್ರಶಸ್ತಿ ನಿರ್ಣಯಗಳಾದಾಗ ಕೇಳಿ ಬಂದ  ಟೀಕೆಗಳು ಕೇಳಿ ಬರದೆ ಇಂತಹ ಮಹಾತ್ಮನನ್ನು ನಮ್ಮ ದೇಶದ ಸರ್ಕಾರ  ಈಗಲಾದರೂ ಅರಿಯಿತಲ್ಲಾ ಎಂದು ಜನಸಾಮಾನ್ಯ ಪಂಡಿತರೆಲ್ಲರೂ ಸಂತಸಪಟ್ಟರು.  ಪಂಡಿತ್ ಮದನ ಮೋಹನ್ ಮಾಳವೀಯರು ಈ ನಾಡಿಗೆ ಸಲ್ಲಿಸಿದ ಅಮೂಲ್ಯ  ಸೇವೆಯಿಂದಾಗಿ ಭಾರತೀಯ ಹೃನ್ಮನಗಳಲ್ಲಿ   ಅಮರರಾಗಿ ವಿರಾಜಿಸಿದ್ದಾರೆ.


Tag: Madan Mohan Malaviya

ಕಾಮೆಂಟ್‌ಗಳಿಲ್ಲ: