ಸೋಮವಾರ, ಸೆಪ್ಟೆಂಬರ್ 2, 2013

ಸತೀಶ್ ಧವನ್

ಸತೀಶ್ ಧವನ್

ಭಾರತೀಯ ಬಾಹ್ಯಾಕಾಶ ಯುಗದಲ್ಲಿ ಸತೀಶ್ ಧವನ್ ಅವರ ಹೆಸರು ಪ್ರಮುಖವಾಗಿ ಕಂಗೊಳಿಸುವಂತದ್ದು.  ಏರೋಸ್ಪೇಸ್ ತಂತ್ರಜ್ಞರಾದ ಸತೀಶ್ ಧವನ್ ಅವರನ್ನು  ಭಾರತೀಯ  ಫ್ಲೂಯಿಡ್ ಡೈನಾಮಿಕ್ಸ್ ಸಂಶೋಧನೆಯ ಪಿತಾಮಹರೆಂದು ಪರಿಗಣಿಸಲಾಗಿದೆ.

ಸತೀಶ್ ಧವನ್ ಅವರು ಸೆಪ್ಟೆಂಬರ್ 25, 1920ರಂದು ಶ್ರೀನಗರದಲ್ಲಿ ಜನಿಸಿದರು.  ಭಾರತ ಮತ್ತು ಅಮೆರಿಕಗಳಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಿದ  ಧವನ್ನರು ಟರ್ಬ್ಯುಲೆನ್ಸ್ ಮತ್ತು ಬೌಂಡರಿ ಲೇಯರ್ಸ್ ಕ್ಷೇತ್ರಗಳಲ್ಲಿ ಮಹತ್ವದ  ಸಂಶೋಧನೆಗಳಲ್ಲಿ ಪಾಲ್ಗೊಂಡರು.  ಹೀಗೆ ಅವರು ಗಳಿಸಿದ ಪ್ರಾವೀಣ್ಯತೆ ಭಾರತವು ಸ್ವತಂತ್ರವಾಗಿ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯವಿದ್ದ ಸಮರ್ಥ ನಾಯಕತ್ವವನ್ನು ಒದಗಿಸುವಲ್ಲಿ ನೆರವಾದವು.  ಪ್ರಾರಂಭಿಕ ಅಧ್ಯಕ್ಷರಾದ ವಿಕ್ರಂ ಸಾರಾಭಾಯಿ ಅವರ ನಂತರ 1972ರ ವರ್ಷದಲ್ಲಿ ಸತೀಶ್ ಧವನ್ನರು  ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಲಾಹೋರಿನಲ್ಲಿದ್ದು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಲೆ ಮತ್ತು ಭೌತಶಾಸ್ತ್ರಗಳೆರಡರಲ್ಲೂ ಪದವಿ ಪಡೆದ ಸತೀಶ್ ಧವನ್ ಅದೇ ವಿಶ್ವವಿದ್ಯಾಲಯದಿಂದ ಗಣಿತ ಶಾಸ್ತ್ರ  ಸ್ನಾತಕೋತ್ತರ ಪದವಿಯನ್ನೂ ಪಡೆದರು.  1943ರಲ್ಲಿ ಉನ್ನತವ್ಯಾಸಂಗಕ್ಕಾಗಿ ಅಮೆರಿಕೆಗೆ ತೆರಳಿದ ಅವರು, 1947ರ ವರ್ಷದಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ  ಏರೋಸ್ಪೇಸ್ ತಂತ್ರಜ್ಞಾನದ ಸ್ನಾತಕೋತ್ತರ ಪದವಿಯ ಜೊತೆಗೆ  1951ರ ವರ್ಷದ ವೇಳೆಗೆ ಡಾ. ಹ್ಯಾನ್ಸ್ ಡಬ್ಲ್ಯೂ ಲೀಪ್ಮ್ಯಾನ್ ಅವರ ಮಾರ್ಗದರ್ಶನದಲ್ಲಿ ಗಣಿತ ಮತ್ತು ಏರೋಸ್ಪೇಸ್ ತಂತ್ರಜ್ಞಾನಗಳೆರಡರಲ್ಲೂ ಪಿ.ಎಚ್.ಡಿ ಪದವಿ ಗಳಿಸಿದರು.  

ಭಾರತೀಯ ಸ್ಪೇಸ್ ಕಮಿಷನ್ನಿನ ಅಧ್ಯಕ್ಷರಾಗಿ ಮತ್ತು ಭಾರತೀಯ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳಾಗಿ ಅಧಿಕಾರ ವಹಿಸಿಕೊಂಡ ಸತೀಶ್ ಧವನ್ ತಮ್ಮ ನಿರ್ದೇಶನದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಪ್ರತಿಮ ಮುನ್ನಡೆ ಒದಗಿಸಿಕೊಟ್ಟರು.  ತಾವು ಬಾಹ್ಯಾಕಾಶ ತಂತ್ರಜ್ಞರಾಗಿದ್ದರೂ ಬೌಂಡರಿ ಲೇಯರ್ ಸಂಶೋಧನೆಗಳಲ್ಲೂ ಧವನ್  ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಂಡರು.  ಈ ಕ್ಷೇತ್ರದಲ್ಲಿನ ಅವರ ಅಪರಿಮಿತ ಸಾಧನೆಗಳು ಪ್ರಖ್ಯಾತ ಬರಹಗಾರ ಹರ್ಮನ್ ಸ್ಕಿಲ್ಚಿಂಗ್ ಅವರ ಪ್ರಸಿದ್ಧ ಪುಸ್ತಕವಾದ ಬೌಂಡರಿ ಲೇಯರ್ ಥಿಯರಿ ಎಂಬ ಗ್ರಂಥದಲ್ಲಿ ಸುದೀರ್ಘವಾಗಿ ಪ್ರಸ್ತಾಪಗೊಂಡಿವೆ.  ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಪ್ರಾಧ್ಯಾಪಕರಾಗಿದ್ದ ಸತೀಶ್ ಧವನರು ಅಲ್ಲಿ ಪ್ರಪ್ರಥಮ ಸೂಪರ್ ಸಾನಿಕ್ ವಿಂಡ್ ಟನೆಲ್ ಅನ್ನು ಸಂಸ್ಥಾಪಿಸಿದರಲ್ಲದೆ ಅನೇಕ ಮಹತ್ವಪೂರ್ಣ ಸಂಶೋಧನೆಗಳಿಗೂ ಅನುವುಮಾಡಿಕೊಟ್ಟರು. 

ಭಾರತದಲ್ಲಿನ ಗ್ರಾಮೀಣ ವಿದ್ಯಾಭ್ಯಾಸ ಅಭಿವೃದ್ಧಿಗಾಗಿ ಧವನ್ ವಿಶೇಷ ಕಾಳಜಿಗಳಿಂದ ಪ್ರಯೋಗಗಳನ್ನು ಕೈಗೊಂಡರು.  ದೂರ ದೂರದಲ್ಲಿರುವ ಪ್ರದೇಶಗಳನ್ನು ಅಭ್ಯಸಿಸಲು ನೆರವಾಗುವಂತೆ ಸೂಕ್ಷ್ಮಗ್ರಾಹಿ ವ್ಯವಸ್ಥೆಗಳ ನಿರ್ಮಾಣ ಮತ್ತು ಉಪಗ್ರಹ ಸಂಪರ್ಕ ವ್ಯವಸ್ಥೆಗಳ ನಿರ್ಮಾಣಕ್ಕೆ ಅವರು ವಿಶೇಷ ನಿಗಾ ವಹಿಸಿದರು.   ಅವರ ದೂರದರ್ಶಿತ್ವ ಮತ್ತು ಅಹರ್ನಿಶಿ ದುಡಿತದಿಂದಾಗಿ ಭಾರತವು ಇನ್ಸಾಟ್ ದೂರಸಂಪರ್ಕ ವ್ಯವಸ್ಥೆ, ಐ ಆರ್ ಎಸ್ ಸೂಕ್ಷ್ಮಗ್ರಾಹಿ ಉಪಗ್ರಹ  ವ್ಯವಸ್ಥೆ ಮತ್ತು ಪಿ ಎಸ್ ಎಲ್ ವಿ ಉಡ್ಡಯನ ವ್ಯವಸ್ಥೆಗಳಂತಹ  ಮಹತ್ವದ ಸಾಧನೆಗಳಿಗೆ ಅಡಿಪಾಯ ಹಾಕಿದವು.  

2002ರ ವರ್ಷದಲ್ಲಿ ನಿಧನರಾದ ಸತೀಶ್ ಧವನ್ ಅವರ ಗೌರವಾರ್ಥ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವೆಂದು ಹೆಸರಿಸಲಾಗಿದೆ.  ಸತೀಶ್ ಧವನ್ನರಿಗೆ ಭಾರತದ ಪದ್ಮಭೂಷಣ ಪ್ರಶಸ್ತಿ, ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಗಳಲ್ಲದೆ, ಭಾರತೀಯ ವಿಜ್ಞಾನ ಮಂದಿರದ ಪ್ರತಿಷ್ಟಿತ ಅಲ್ಯುಮ್ನಸ್ ಗೌರವ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಲ್ಯುಮ್ನಸ್ ಗೌರವ ಮುಂತಾದ ಅನೇಕ ಅಂತರರಾಷ್ಟ್ರೀಯ ಮಟ್ಟದ ಗೌರವಗಳು ಸಂದಿವೆ.


ಈ ಮಹಾನ್ ಸಂಶೋಧಕ, ವಿಜ್ಞಾನಿ ಮತ್ತು ಅಪ್ರತಿಮ ಸಾಧಕರಿಗೆ ನಮ್ಮ ಅನಂತ ಗೌರವಪೂರ್ವಕ ನಮನಗಳು.

Tag: Satish Dhavan


ಕಾಮೆಂಟ್‌ಗಳಿಲ್ಲ: