ಭಾನುವಾರ, ಸೆಪ್ಟೆಂಬರ್ 1, 2013

ಗಿರಿಜಾ ಲೋಕೇಶ್

ಗಿರಿಜಾ ಲೋಕೇಶ್

ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಜನ್ಮದಿನ ಜನವರಿ 10.  ಕನ್ನಡ ರಂಗಭೂಮಿಯಲ್ಲಿ ಅಭಿನಯಿಸಲು ಪ್ರಾರಂಭಿಸಿದ ಗಿರಿಜಾ ಅವರು ಎಪ್ಪತ್ತರ ದಶಕದಲ್ಲಿ ಅವರ ಸಹೋದ್ಯೋಗಿಯಾಗಿದ್ದ ಲೋಕೇಶ್ ಅವರೊಡನೆ ವಿವಾಹವಾದರು.  ಮುಂದೆ ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಅಪಾರ ಹೆಸರು ಮಾಡಿದರು. 

ಲೋಕೇಶ್ ಮತ್ತು ಗಿರಿಜಾ ಇಬ್ಬರೂ ಒಟ್ಟಿಗೆ ನಟಿಸಿದ ಪ್ರಥಮ ಚಿತ್ರ ಕಾಕನಕೋಟೆಎನಿಸುತ್ತದೆ.  ಆ ಚಿತ್ರದಲ್ಲಿ ಇವರಿಬ್ಬರೂ ಅದ್ಭುತವಾಗಿ ನಟಿಸಿದ್ದನ್ನು ನೋಡಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.  ಲೋಕೇಶ್ ಅವರು ಬೂತಯ್ಯನ ಮಗ ಅಯ್ಯು ಚಿತ್ರದ ಅದ್ಭುತ ಅಭಿನಯ ಮತ್ತು ಆ ಚಿತ್ರದ ಯಶಸ್ಸಿನಿಂದ ಹಲವಾರು ವರ್ಷಗಳ ಕಾಲ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದರು.  ಗಿರಿಜಾ ಲೋಕೇಶ್ ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಅಪಾರ ಕೆಲಸ ಮಾಡುತ್ತಿದ್ದಾರೆ.  ಗಿರಿಜಾ ಲೋಕೇಶ್ ತಾವು ಅಭಿನಯಿಸುವ ಪಾತ್ರಗಳಿಗೆಲ್ಲಾ ಜೀವ ತುಂಬುವ ರೀತಿ ಮನೋಜ್ಞವಾದದ್ದು.

ಗಿರಿಜಾ ಲೋಕೇಶ್ ಮತ್ತು ಲೋಕೇಶ್ ಇವರಿಬ್ಬರೂ ನಟಿಸಿದ ಭುಜಯ್ಯಂಗಯ್ಯನ ದಶಾವತಾರ ಚಿತ್ರ ಕೂಡ ನೆನಪಿನಲ್ಲಿ ಉಳಿಯುವಂತದ್ದು.  ಲೋಕೇಶ್ ಅವರು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವಿಭಿನ್ನ ಭಾವನೆಗಳನ್ನು ವ್ಯಕ್ತಪಡಿಸುವ ಹೆಣ್ಣಾಗಿ ಗಿರಿಜಾ ಲೋಕೇಶ್ ಅಭಿನಯಿಸಿರುವ ರೀತಿ ಚಿರಸ್ಮರಣೀಯ.  ದೂರದರ್ಶನ ಧಾರವಾಹಿಗಳಲ್ಲಿ ಸಹಾ ಪೋಷಕ ಪಾತ್ರಗಳಲ್ಲಿ ಗಿರಿಜಾ ಲೋಕೇಶ್ ಅವರು ಮನಸೆಳೆಯುವ ಅಭಿನಯ ನೀಡುತ್ತಾ ಮುಂದುವರೆದಿದ್ದಾರೆ. 

ಅವರ ಪುತ್ರಿ ಮತ್ತು ಪುತ್ರ ಕೂಡ ಅಭಿನಯ ಕ್ಷೇತ್ರದಲ್ಲಿದ್ದಾರೆ.  ನಟ ಲೋಕೇಶ್ ಅವರು ನಿಧನರಾದ ನಂತರದಲ್ಲಿ ತಮ್ಮ ಮಕ್ಕಳು ಮತ್ತು ಅಭಿನಯದ ಜೊತೆ ಮುಂದುವರೆದಿರುವ ಗಿರಿಜಾ ಲೋಕೇಶ್ ಅವರ ಬದುಕು ಸುಖಮಯವಾಗಿರಲಿ ಎಂದು ಹಾರೈಸೋಣ.

Tag: Girija Lokesh

ಕಾಮೆಂಟ್‌ಗಳಿಲ್ಲ: