ಭಾನುವಾರ, ಸೆಪ್ಟೆಂಬರ್ 1, 2013

ಕವಿತಾ ಲಂಕೇಶ್


ಕವಿತಾ ಲಂಕೇಶ್

ಇಂದಿನ ತಲೆಮಾರಿನ  ಚಿತ್ರ ನಿರ್ದೇಶಕರಲ್ಲಿ ತಮ್ಮ  ಪ್ರತಿಭೆ ಸಾಧನೆಗಳಿಂದ  ಪ್ರತಿಷ್ಟಿತ ಸ್ಥಾನ ಪಡೆದಿರುವ ಕವಿತಾ ಲಂಕೇಶ್ ಅವರ ಜನ್ಮ ದಿನ ಡಿಸೆಂಬರ್ 13.

ಕವಿತಾ ಅವರು, 1994ರಲ್ಲಿ  ಪ್ರದರ್ಶನ ಕಲೆಯ  ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಚಲನಚಿತ್ರಗಳನ್ನು, ಸಾಮಾಜಿಕ - ಸಾಂಸ್ಕೃತಿಕ ನೆಲೆಗಳ ಕಿರುಚಿತ್ರಗಳನ್ನು ಜೊತೆಗೆ ಹಲವಾರು ಸಂಸ್ಥೆಗಳಿಗೆ ಜಾಹೀರಾತು ಚಿತ್ರಗಳನ್ನೂ ನಿರ್ಮಿಸುತ್ತಾ ಗಣನೀಯ ಸಾಧನೆ ಮಾಡುತ್ತಾ ಬಂದಿದ್ದಾರೆ.  ತಮ್ಮ ಚಿತ್ರಗಳಿಗೆಲ್ಲ ಚಿತ್ರಕಥೆ ರಚನೆ ಮತ್ತು ನಿರ್ದೇಶನಗಳನ್ನೂ ಮಾಡಿದ್ದಾರೆ.

ತಮ್ಮ ಶ್ರದ್ಧೆ ಸಾಮರ್ಥ್ಯಗಳಿಂದ  ಕರ್ನಾಟಕ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲದೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಹಾ ನಿರಂತರವಾಗಿ ಪ್ರಶಸ್ತಿ, ಪುರಸ್ಕಾರ ಮತ್ತು ಮೆಚ್ಚುಗೆಗಳನ್ನು ಪಡೆಯುತ್ತಿರುವ ಕವಿತಾ ಅವರು ಕರ್ನಾಟಕ ರಾಜ್ಯ ಚಲನಚಿತ್ರ  ಪ್ರಶಸ್ತಿ ಸಮಿತಿ, ಕೇರಳ ರಾಜ್ಯದ ಪ್ರಶಸ್ತಿ ಸಮಿತಿ, ಮಕ್ಕಳ ಚಿತ್ರಗಳಿಗಾಗಿನ ಸಂಘಟನೆಯಲ್ಲಿ ಕ್ರಿಯಾಶೀಲ ಭಾಗವಹಿಕೆ ಹೀಗೆ ಹಲವು ರೀತಿಗಳಲ್ಲಿ ಗಣ್ಯತೆ ಗಳಿಸಿದ್ದಾರೆ.  

ಕವಿತಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದ ಪದವಿ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಜಾಹೀರಾತು ಅಧ್ಯಯನದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ.

ಕವಿತಾ ಅವರ ನಿರ್ದೇಶನದ ಇದುವರೆಗಿನ  ಚಿತ್ರಗಳೆಂದರೆ ದೇವೀರಿ’, ‘ಅಲೆಮಾರಿ’, ‘ಬಿಂಬ’, ‘ಪ್ರೀತಿ ಪ್ರೇಮ ಪ್ರಣಯ’, ‘ತನನಂ ತನನಂ; ‘ಅವ್ವಮತ್ತು ಕ್ರೇಜಿಲೋಕ’.  ಜೊತೆಗೆ ರಾಷ್ಟ್ರೀಯ ದೂರದರ್ಶನ ಚಾನೆಲ್ಲಿಗಾಗಿ ಮಾಲ್ಗುಡಿ ಡೇಸ್ನ ಹದಿನೈದು ಕಂತುಗಳ ಕತೆಗಳನ್ನೂ ನಿರ್ದೇಶಿಸಿದ್ದಾರೆ.  ಲಂಕೇಶರ ಅಕ್ಕಕತೆಯನ್ನು ಆಧರಿಸಿದ  ದೇವೀರಿಚಿತ್ರ 1999ರ ವರ್ಷದ ಒಂದು ಅಂತರರಾಷ್ಟ್ರೀಯ ಪ್ರಶಸ್ತಿ, ಎರಡು ರಾಷ್ಟ್ರ ಪ್ರಶಸ್ತಿ ಮತ್ತು ಒಂಬತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು.  ಬಿಂಬ’, ‘ಪ್ರೀತಿ ಪ್ರೇಮ ಪ್ರಣಯ’, ‘ಅವ್ವಚಿತ್ರಗಳು ಸಹಾ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪಡೆದರೆ ತನನಂ ತನನಂಚಿತ್ರ ಫಿಲಂಫೇರ್ ಪ್ರಶಸ್ತಿ ಗಳಿಸಿತು.  ಅವ್ವಚಿತ್ರ ಲಂಕೇಶರ ಮುಸ್ಸಂಜೆಯ ಕಥಾ ಪ್ರಸಂಗಕಥೆಯನ್ನು ಆಧರಿಸಿದೆ. ಅವರ ಪ್ರೀತಿ ಪ್ರೇಮ ಪ್ರಣಯಚಿತ್ರ ಶತದಿನೋತ್ಸವ ಆಚರಿಸಿತು.   ಈ ವರ್ಷದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯಲ್ಲಿ ಕ್ರೇಜಿ ಲವ್ಎಂಬ ಚಿತ್ರವನ್ನು ನಿರ್ದೇಶಿಸಿದರು .   ಹೀಗೆ ಸಾಮಾಜಿಕ ಖಾಳಜಿ, ಕಲಾತ್ಮಕ ಚಿತ್ರ ಮತ್ತು ಪ್ರಧಾನ ವಾಹಿನಿಯ ಚಿತ್ರ ಈ ಎಲ್ಲಾ ನೆಲೆಗಳಲ್ಲೂ ಕವಿತಾ ತಮ್ಮ ಹೆಜ್ಜೆ ಗುರುತುಗಳನ್ನು ಸಮರ್ಥವಾಗಿ ಮೂಡಿಸಿದ್ದಾರೆ.

ಪೂರ್ಣ ಪ್ರಮಾಣದ ಚಿತ್ರಗಳಲ್ಲದೆ ಕಿರುಚಿತ್ರ ನಿರ್ಮಾಣದಲ್ಲಿ ಕೂಡಾ ಸಾಕಷ್ಟು ಶ್ರಮಿಸಿರುವ ಕವಿತಾ ಲಂಕೇಶ್, ತಾವು ನಿರ್ಮಿಸಿದ  ಆದಿವಾಸಿ ಮಹಿಳೆಯ ಕುರಿತಾದ ತುಳಸಿಕಿರುಚಿತ್ರಕ್ಕೆ ಇಂದಿರಾ ಪ್ರಿಯದರ್ಶಿನಿ ರಾಷ್ಟ್ರೀಯ ಪುರಸ್ಕಾರಗಳಿಸಿದರು.  ಅವರ ಸಿದ್ಧಿಕಿರುಚಿತ್ರ, ಕರ್ನಾಟಕದಲ್ಲಿ ಇರುವ ಆಫ್ರಿಕನ್ ಮೂಲದ ಜನಾಂಗದ ಕುರಿತದ್ದಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಮತ್ತು ಬೆಂಗಳೂರು ಮಹಾನಗರ ಪಾಲಿಕೆಗಾಗಿ ನಿರ್ಮಿಸಿದ ನಗರ ನೈರ್ಮಲ್ಯೀಕರಣ ಪ್ರೇರಕ  ಕ್ಲೀನ್ ಸಿಟಿಕಿರುಚಿತ್ರಗಳು ಸಾಮಾಜಿಕ ಖಾಳಜಿಯ ಕುರಿತದ್ದಾಗಿವೆ. ಮಕ್ಕಳಿಗಾಗಿ ನೈಸರ್ಗಿಕ ಶಿಬಿರಗಳ ಕುರಿತಾದ ಭೋದಪ್ರದ ಕಿರುಚಿತ್ರ ಕೂಡ ಮಾಡಿದ್ದಾರೆ.    ಯಕ್ಷಗಾನ’, ‘ನೀನಾಸಂ’, ‘ಹಸೆ ಕಲೆ’, ‘ಆರು ಜನ ಪ್ರಶಸ್ತಿ ವಿಜೇತ ಕರ್ನಾಟಕದ ಮಹಿಳಾ ಕಲೆಗಾರರು’, ‘ಜಾನಪದ ಗಾನಕೊಗಿಲೆಗಳು’  ಇವು ಸಾಂಸ್ಕೃತಿಕ ತಳಹದಿಯ ಕಿರುಚಿತ್ರಗಳು.  ಕೇರಳ ರಾಜ್ಯಕ್ಕೆ ಸಂಬಂಧಿಸಿದಂತೆ ಅಮೇರಿಕಾದ ದೂರದರ್ಶನ ಚಾನೆಲ್ ಒಂದಕ್ಕೆ ‘Coming Full Circle’ ಎಂಬ ವಾರ್ತಾ ಚಿತ್ರವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇದಲ್ಲದೆ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ’, ‘ಹಟ್ಟಿ ಚಿನ್ನದ ಗಣಿಕುರಿತಾದ  ವಾರ್ತಾ ಚಿತ್ರಗಳನ್ನು ಕೂಡ ತಯಾರಿಸಿದ್ದಾರೆ.  ಜೊತೆಗೆ ವ್ಯಾವಹಾರಿಕವಾಗಿ ಕರ್ನಾಟಕದ ಬಹಳಷ್ಟು ಪ್ರಮುಖ ಸಂಸ್ಥೆಗಳಿಗೆ ಜಾಹೀರಾತು ಚಿತ್ರಗಳನ್ನೂ ತಯಾರಿಸಿಕೊಟ್ಟಿದ್ದಾರೆ.  ನನ್ನ ಪ್ರೀತಿಯ ಶ್ರೀಮತಿಎಂಬುದು ಇತ್ತೀಚಿನ ದಿನಗಳಲ್ಲಿ ಅವರು ಮೂಡಿಸುತ್ತಿರುವ ದೂರದರ್ಶನದ ಧಾರವಾಹಿ. 

ಕವಿತಾ ಅವರ ಮತ್ತೊಂದು ವಿಶಿಷ್ಟ ಕಾರ್ಯವೆಂದರೆ ತಮ್ಮ ತಂದೆ ಲಂಕೇಶರ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಲಂಕೇಶ್ ಚಿತ್ರ ಪ್ರಶಸ್ತಿಯನ್ನು ಸ್ಥಾಪಿಸಿ ಕಳೆದ ಏಳೆಂಟು ವರ್ಷಗಳಿಂದ ವಿಭಿನ್ನ ರಾಜ್ಯಗಳ ಮಹತ್ವಪೂರ್ಣ  ಚಿತ್ರಗಳಿಗೆ ಈ ಪ್ರಶಸ್ತಿಯನ್ನು ಸಲ್ಲುವಂತೆ ಮಾಡುತ್ತಿದ್ದಾರೆ. ಈ ಮೂಲಕ ತಾವು ಉತ್ತಮತೆ ಸಾಧಿಸುವ ನಿರಂತರ ಪ್ರಯತ್ನದ ಜೊತೆಗೆ ಇತರರ ಉತ್ತಮತೆಯನ್ನು ಗುರುತಿಸುವ ಗೌರವಾನ್ವಿತ ಕೆಲಸ ಕೂಡ ಮಾಡುತ್ತಿದ್ದಾರೆ.


ಪ್ರತಿಭಾವಂತೆ ಕವಿತಾ ಲಂಕೇಶರು ಬಹಳಷ್ಟು ಕಾಲ ಉತ್ಕೃಷ್ಟ ಸಾಧನೆ ಮಾಡುತ್ತಿರಲಿ, ಅವರಿಗೆ ಜೀವನದಲ್ಲಿ ಸುಖ ಸಂತಸ ಸಾಧನೆ ಗೆಲುವುಗಳು  ನಿರಂತರವಾಗಿ ಜೊತೆ ಇರಲಿ ಎಂದು ಹಾರೈಸೋಣ.

Tag: Kavita Lankesh

ಕಾಮೆಂಟ್‌ಗಳಿಲ್ಲ: