ಬುಧವಾರ, ಸೆಪ್ಟೆಂಬರ್ 4, 2013

ಕಾಣಿಕೆ

ಕಾಣಿಕೆ

ಯಾವ ಕಾಣಿಕೆ ಕೊಡಲಿ ನಿನಗೆ ನಾನಿಂದು?
ಓ ನನ್ನ ಪ್ರಿಯನಾಡೆ ಜನ್ಮ ದಿನವೆಂದು

ಮಲೆನಾಡ ಕಣಿವೆಗಳ ಹಸಿರು ಮೌನದೊಳಿರುವ
ನಿನಗಾಗಿ ನಾನೊಂದು ಗಿಳಿಯ ತರಲೆ?
ಸಾಗರದ ಅಲೆಗಳಿಗೆ ಉಯ್ಯಾಲೆಯಾಡಿರುವ
ನಿನಗೆ ಕಾಮನಬಿಲ್ಲು ಬಲೆಯ ಕೊಡಲೆ?

ಹಲವು ಹೊಳೆಗಳ ಜೊತೆಗೆ ಸ್ವರವೆತ್ತಿ ಪಾಡಿರುವ
ನಿನಗೆ ಮಂದಾನಿಲದ ವೀಣೆ ತರಲೆ?
ಮುತ್ತಿನ ತೆನೆಯಿತ್ತು ಮಮತೆಯಲಿ ಸಲಹಿರುವ 
ನಿನಗೆ ಕಲ್ಪವೃಕ್ಷ ಸಸಿಯ ನೆಡಲೆ?

ಹಲವು ಲಾಂಛನ ಹೊತ್ತು ಅರಸುಕುಲ ಮೆರೆಸಿರುವ
ನಿನಗಾಗಿ ಪಲ್ಲಕ್ಕಿಯೊಂದು ತರಲೆ?
ಮಣ್ಣಿನಲಿ ನೀರಿನಲಿ ಬದುಕು ಬೆಳಕನು ಕೊಟ್ಟ
ನಿನಗಾಗಿ ಚಾಮರವ ಬೀಸಿ ಬರಲೆ?

ಏನೇನು ನೀಡಿದರೂ ನಿನ್ನ ಋಣ ತೀರದು
ನನ್ನೊಳೇನೂ ಇಲ್ಲ ನನ್ನದೆಂದು 
ಓ ನನ್ನ ಪ್ರಿಯನಾಡೆ ಅಂತೆಯೆ ಸ್ವೀಕರಿಸು
ಪ್ರೀತಿಯೆಸಳಿನ ನನ್ನ ಹಾಡನೊಂದು

ಸಾಹಿತ್ಯ: ಸುಬ್ಬಣ್ಣ ರಂಗನಾಥ ಎಕ್ಕುಂಡಿ

Tag: Kaanike, Kanike, Yava kaanike kodali

ಕಾಮೆಂಟ್‌ಗಳಿಲ್ಲ: