ಭಾನುವಾರ, ಸೆಪ್ಟೆಂಬರ್ 1, 2013

ಪಂಡಿತ್ ಶಿವಕುಮಾರ್ ಶರ್ಮ

ಪಂಡಿತ್ ಶಿವಕುಮಾರ್ ಶರ್ಮ
-ರವೀಂದ್ರ ಮಾವಖಂಡ

ದೇಶದ ಪ್ರಸಿದ್ಧ ಸಂಗೀತಗಾರರು ಯಾರೆಂದು ಕೇಳಿದರೆ ಮೊದಲ ಹತ್ತರಲ್ಲಿ ತಪ್ಪದೇ ಬರುವ ಹೆಸರು ಪಂಡಿತ್ ಶಿವಕುಮಾರ್ ಶರ್ಮ.  ಸಂತೂರ್ ವಾದನದಲ್ಲಿ ಯಾರು ಎಂದರಂತೂ ಬರುವ ಮೊದಲ ಹೆಸರೇ ಅವರದ್ದು. ಕಾಶ್ಮೀರದ ಜನಪದ ವಾದ್ಯವಾಗಿದ್ದ ಸಂತೂರ್ ಗೆ ಅಂತರರಾಷ್ತ್ರೀಯ ಮನ್ನಣೆ ತಂದುಕೊಟ್ಟವರು ಅವರು.  ಅದು ಎಷ್ಟರಮಟ್ಟಿಗೆಂದರೆ ಸಂತೂರ್ ವಾದ್ಯವನ್ನೇ ಶಿವಕುಮಾರ್ ಶರ್ಮ ಎಂದು ಕರೆಯುವಷ್ಟು.  ಇಂದು ಈ ಸಂತೂರ್ ಸಂತರು 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಸಿತಾರ್ ಸರೋದ್, ಸಾರಂಗಿ, ವೈಲಿನ್ ವೀಣೆಯಂಥ ತಂತಿವಾದ್ಯಗಳ ನಡುವೆ ತನ್ನದೇ ಆದ ಸುನಾದದಿಂದ ಮನಸೆಳೆಯುವ ವಾದ್ಯ ಸಂತೂರ್.  ಕಾಶ್ಮೀರದಲ್ಲಿ ಉಗಮವಾದ ಈ ವಾದ್ಯಕ್ಕ್ತೆ ಶತತಂತ್ರಿ ವೀಣೆ ಎಂಬ ಹೆಸರೂ ಇತ್ತು.  ಇದು ಸೂಫಿ ಹಾಗೂ ಜನಪದ ಸಂಗೀತಕ್ಕೆ ಸಾಥಿಯಾಗಿ ಬಳಕೆಯಾಗುತ್ತಿತ್ತು.  ಈ ಕಾಶ್ಮೀರಿ ಜಾನಪದ ವಾದ್ಯವನ್ನು ಕೊಂಚ ಮಾರ್ಪಡಿಸಿ ಸಂಗೀತದಲ್ಲಿ ಜನಪ್ರಿಯಗೊಳಿಸಿದವರು ಪಂ. ಶಿವಕುಮಾರ್ ಶರ್ಮ.   ಅವರ ತಂದೆ ಪಂ. ಉಮಾದತ್ತ ಶರ್ಮ ಹೆಸರಾಂತ ಗಾಯಕರು.  ಜೊತೆಗೆ ತಬಲಾ ಮತ್ತು ಹಾರ್ಮೋನಿಯಂ ವಾದಕರೂ ಆಗಿದ್ದರು.  ಅವರು ಒಮ್ಮೆ ಕಾಶ್ಮೀರಕ್ಕೆ ಹೋದಾಗ ಅಲ್ಲಿ ಸಂತೂರ್ ವಾದ್ಯವನ್ನು ನೋಡಿದರು. ಅದನ್ನು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸುವ ಪ್ರಯತ್ನ ಮಾಡಿದರು.  ಇದರಲ್ಲಿ ಸ್ವಲ್ಪಮಟ್ಟಿನ ಯಸಸ್ಸು ಸಿಕ್ಕಿದ್ದರಿಂದ ಸಂತೂರ್ ವಾದನವನ್ನು ತಮ್ಮ ಮಗನಿಗೂ ಕಲಿಸಿದರು.

ಕಾಲೇಜಿನಲ್ಲಿದ್ದಾಗ ತಬಲಾ ವಾದನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲಸ್ಥಾನ ಪಡೆದವರು ಶಿವಕುಮಾರ್ ಶರ್ಮ.  ಹೀಗೆ ಪ್ರಭುತ್ವ ಸಾಧಿಸಿದ್ದ ಜನಪ್ರಿಯ ವಾದ್ಯವನ್ನೂ ಬಿಟ್ಟು, ಅಷ್ಟೇನೂ ಜನಪ್ರಿಯವಲ್ಲದ ವಾದ್ಯದ ಹಿಂದೆ ಹೊರಟಾಗ ಹೀಗಳೆದವರೇ ಹೆಚ್ಚು.  ಆದರೆ ಶಿವಕುಮಾರ್ ಶರ್ಮ ಅವರು ತಂದೆಯ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ.  1955ರಲ್ಲಿ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಮೊದಲ ಬಾರಿಗೆ ಶಾಸ್ತ್ರೀಯವಾಗಿ ಸಂತೂರ್ ವಾದನವನ್ನು ಪ್ರಸ್ತುತಗೊಳಿಸಿ ಸೈ ಎನಿಸಿಕೊಂಡರು.  ನಂತರದ 10 ವರ್ಷಗಳ ಕಾಲ ಸಂತೂರ್ ವಾದ್ಯವನ್ನು ನಾನಾ ರೀತಿಯಲ್ಲಿ ಪರಿಷ್ಕರಿಸಿ, ಇದರಲ್ಲಿದ್ದ ನೂರು ತಂತಿಗಳಲ್ಲಿ ಕೆಲವನ್ನು ಕಡಿತಗೊಳಿಸಿದರು.  ಹಿಂದೂಸ್ಥಾನಿ ಸಂಗೀತಕ್ಕೆ ಅಗತ್ಯವಾದ ಗಮಕಗಳನ್ನು ನುಡಿಸುವ ಸಾಮರ್ಥ್ಯ ಈ ವಾದ್ಯದಲ್ಲಿರಲಿಲ್ಲ.  ವಾದ್ಯದ ರಚನೆಯ ಜೊತೆಗೆ ಅದನ್ನು ನುಡಿಸುವ ತಂತ್ರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿದ ಶರ್ಮ, ಈ ವಾದ್ಯದಲ್ಲಿ ಗಮಕಗಳನ್ನು ನುಡಿಸುವ ಸಾಮರ್ಥ್ಯವನ್ನೂ ತಂದು, ಶಾಸ್ತ್ರೀಯ ಸಂಗೀತದ ಮುಖ್ಯವಾಹಿನಿಗೆ ಬರುವಂತೆ ಮಾಡಿದರು.

ಸದಾ ಹೊಸದರತ್ತ ತುಡಿಯುವವರು ಶಿವಕುಮಾರ್ ಶರ್ಮ.  ಅವರಿಗೆ ಕಲೆಯ ಯಾವ ವಿಭಾಗಗಳೂ ವರ್ಜ್ಯವಲ್ಲ.  ಹೀಗಾಗಿ ಹೆಸರಾಂತ ಕೊಳಲು ವಾದಕ ಪಂ. ಹರಿಪ್ರಸಾದ್ ಚೌರಾಸಿಯಾ ಅವರ ಜೊತೆಗೂಡಿ ‘ಶಿವ-ಹರಿ’ ಹೆಸರಿನಲ್ಲಿ, ಸಿಲ್ ಸಿಲಾ, ಫಾಸ್ಲೆ, ಚಾಂದನಿ, ಲಮ್ಹೆ, ಡರ್ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದರು.  ಚೌರಾಸಿಯಾ ಹಾಗೂ ಬ್ರಿಜ್ ಭೂಷಣ್ ಕಾಬ್ರಾ (ಕಾಬ್ರಾ, ಗಿಟಾರ್ ನಲ್ಲಿ ಹಿಂದೂಸ್ಥಾನಿ ಸಂಗೀತವನ್ನು ನುಡಿಸಿದ ಮೊದಲ ಕಲಾವಿದ) ಅವರ ಜೊತೆ ಸೇರಿ ಹೊರತಂದ ಮ್ಯೂಸಿಕ್ ಆಲ್ಬಂ ‘ಕಾಲ್ ಆಫ್ ದಿ ವ್ಯಾಲಿ’ ಅತಿ ಹೆಚ್ಚು ಮಾರಾಟವಾಗಿ ಪ್ಲಾಟಿನಂ ಡಿಸ್ಕ್ ಮನ್ನಣೆಯನ್ನೂ ಪಡೆಯಿತು.  ಇದರ ಜೊತೆಗೆ ಅವರು ದೇಶವಿದೇಶಗಳಲ್ಲಿ ನೀಡಿದ ಕಚೇರಿಗಳು, ಹೊರತಂದ ಆಲ್ಬಂಗಳು ಅಸಂಖ್ಯ.  ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಸಂತೂರ್ ಗಾಗಿಯೇ ತಮ್ಮ ಸಂಗೀತ ಜೀವನ ಮೀಸಲಿಟ್ಟ ಶಿವಕುಮಾರ್ ಶರ್ಮ, ಅದನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು.  ಅವರ ಮೂಲಕ ಮನ್ನಣೆ ಪಡೆದ ಸಂತೂರ್ ವಾದನ ಪರಂಪರೆ ಅವರ ಶಿಷ್ಯರಾದ ಸತೀಶ್ ವ್ಯಾಸ್, ಉಲ್ಲಾಸ್ ಬಾಪಟ್, ಧನಂಜಯ್ ದೈತಣ್ಕರ್, ರಾಹುಲ್ ಶರ್ಮ, ಶ್ರುತಿ ಅಧಿಕಾರಿ ಮುಂತಾದವರಿಂದ ಮುಂದುವರೆಯುತ್ತಿದೆ.

ಪಂಡಿತ್ ಶಿವಕುಮಾರ್ ಶರ್ಮರನ್ನು ಅರಸಿಕೊಂಡು ಬಂದ ಮನ್ನಣೆಗಳು ಹಲವಾರು.  ಕೆಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ, ಅಮೆರಿಕದ ಬಾಲ್ಟಿಮೋರ್ ನಗರದ ಗೌರವಪ್ರಜೆಯಾಗಿ ದೊರೆತ ಸನ್ಮಾನ, ಜಮ್ಮು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ತಾನ್ ಸೇನ್ ಸನ್ಮಾನ, ವಿಶ್ವಬ್ಯಾಂಕ್ ನ ಅಂತರರಾಷ್ತ್ರೀಯ ರಾಯಭಾರಿ ಗೌರವ ಇವು ಅವುಗಳಲ್ಲಿ ಪ್ರಮುಖವಾದವು.  ಇಂದು ಎಪ್ಪತ್ತೈದನೆಯ ವರ್ಷಕ್ಕೆ ಕಾಲಿಡುತ್ತಿರುವ ಈ ಮಹಾನ್ ಸಂಗೀತಗಾರರಿಗೆ ಗೌರವಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸೋಣ.

ಕೃಪೆ: ವಿಜಯವಾಣಿ

Tag: Pandit Shivkumar Sharma

ಕಾಮೆಂಟ್‌ಗಳಿಲ್ಲ: