ಮಂಗಳವಾರ, ಸೆಪ್ಟೆಂಬರ್ 3, 2013

ಲಾಲ್ ಕೃಷ್ಣ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿ ಅವರು ತಾವು ರಾಜಕೀಯಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ಧಿಯಲ್ಲಿರುವವರು.  “ಆಶಾವಾದಿಯಾಗಿದ್ದರೆ ಮಾತ್ರ ಸಾಧನೆ ಸಾಧ್ಯ. ಸಾಧನೆಯ ಗುರಿ ಸ್ಪಷ್ಟವಾಗಿರಬೇಕು. ಕೆಲಸದಲ್ಲಿ ಬದ್ಧತೆ ಮೈಗೂಡಿಸಿಕೊಳ್ಳಬೇಕು. ಭದ್ರ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತವನ್ನು ಮುನ್ನಡೆಸಲು ಎಲ್ಲರೂ ಪಣ ತೊಡಬೇಕು. . . “ ಇದು ಅಡ್ವಾಣಿಯವರು ಆಗಾಗ ಹೇಳುವ ಮಾತು.  ಎಂಭತ್ನಾಲ್ಕರ ವಯಸ್ಸಿನಲ್ಲೂ ಅವರ ಈ ಉತ್ಸಾಹ ತಗ್ಗಿಲ್ಲ.  ಅವರು ರಾಜಕೀಯವಾಗಿ ಸಾಧಿಸಿದ್ದು ಹೆಚ್ಚು ಅವರ ತಲೆ ಕೆಡಿಸಿಲ್ಲ.  ಅವರ ರಾಜಕೀಯದ ಸೋಲುಗಳು ಅವರನ್ನು ನಿರಾಶರನ್ನಾಗಿ ಮಾಡಿಲ್ಲ.

ನವೆಂಬರ್ 8, 1927ರಲ್ಲಿ ಅಂದಿನ ಭಾರತದ ಭಾಗವಾಗಿದ್ದ ಸಿಂದ್ ಪ್ರದೇಶದ ಗೋರೆಗಾಂವ್ ಗ್ರಾಮದಲ್ಲಿ ಜನಿಸಿದ ಅಡ್ವಾಣಿಯವರು ಕರಾಚಿಯ ಶಾಲೆಗಳಲ್ಲಿ ಓದಿ ಮುಂದೆ  ಮುಂಬೈ ವಿಶ್ವವಿದ್ಯಾಲಯದ ಪದವಿ ಪಡೆದರು.  ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಅವರು ಆರ್ ಎಸ್ ಎಸ್ ಕಾರ್ಯದರ್ಶಿಯಾಗಿದ್ದರು.  1951ರಲ್ಲಿ ಅವರು ಶ್ಯಾಮ್ ಪ್ರಕಾಶ್ ಮುಖರ್ಜಿಯವರು ಸ್ಥಾಪಿಸಿದ ಜನಸಂಘಕ್ಕೆ ಸೇರಿದರು. ಅಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿ 1975ರ ವರ್ಷದ ವೇಳೆಗೆ ಆ ಪಕ್ಷದ ಅಧ್ಯಕ್ಷರೇ ಆದರು.   ಜಯಪ್ರಕಾಶ್ ನಾರಾಯಣ್ ಅವರ ಕರೆಗೆ ಓಗೊಟ್ಟು ಜನಸಂಘ ಮುಂದೆ ಜನತಾಪಕ್ಷಕ್ಕೆ ಬಂತು.  ಜನತಾಪಕ್ಷ ಒಡೆದು ಹೋಳಾದಾಗ ಭಾರತೀಯ ಜನತಾ ಪಕ್ಷ ಸ್ಥಾಪಿಸಿದರು.

ರಾಜಕೀಯದಲ್ಲಿ ಮಂತ್ರಿಯಾಗಿ, ಉಪಪ್ರಧಾನಿಯಾಗಿ ಅಡ್ವಾಣಿ ಕಾರ್ಯ ನಿರ್ವಹಿಸಿದ್ದಾರೆ.  ಪ್ರಧಾನಿ ಆಗುತ್ತಾರೇನೋ ಎಂಬ ನಿರೀಕ್ಷೆಗಳೂ ನಿರೀಕ್ಷೆಯಾಗಿಯೇ ಉಳಿದಿದೆ.

ಒಬ್ಬ ಭಾಷಣಕಾರನಾಗಿ, ಒಬ್ಬ ಚಿಂತಕನಾಗಿ ಅವರು ನಮ್ಮ ಕಾಲದ ಯುವ ಜನರನ್ನು ಸಾಕಷ್ಟು ಗಮನ ಸೆಳೆದಿದ್ದಾರೆ.  ಅವರ ಆತ್ಮಕಥೆಯ ಹೆಸರು ‘ನನ್ನ ದೇಶ ನನ್ನ ಜೀವನ’ ಕುರಿತು ಅವರು  ಆಡುವ ಮಾತು ಹೀಗಿದೆ.   “ಆತ್ಮ ಕಥೆಗಳಲ್ಲಿ ಸಾಮಾನ್ಯವಾಗಿ ‘ನಾನು’ ಎಂಬ ಸಂಬೋಧನೆ ಹೆಚ್ಚಿರುತ್ತದೆ. ಆದರೆ, ನಾನು ದೇಶವನ್ನು ಮೊದಲ ಸ್ಥಾನದಲ್ಲಿ ಕಂಡಿದ್ದೇನೆ. ಈ ‘ನನ್ನತನ’ ವನ್ನು ನನ್ನಿಂದ ದೂರ ಮಾಡಿದ್ದು ಮತ್ತು ಎಲ್ಲಕ್ಕಿಂತ ಮೊದಲು ದೇಶ ಎಂಬ ಪ್ರೀತಿಯನ್ನು ನನ್ನಲ್ಲಿ ಹುಟ್ಟಿಸಿದ್ದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ”.  ಹೀಗೆ ಹಲವು ರೀತಿಯಲ್ಲಿ ಅವರದು ತಮ್ಮ ಹಿರಿಯ ಪರಂಪರೆಗೆ ಗೌರವ ನೀಡುವ ವ್ಯಕ್ತಿತ್ವ.  ವಾಜಪೇಯಿ ಅವರೊಂದಿಗಿನ ಅವರ ಸ್ನೇಹ ಮತ್ತು ಒಡನಾಡಿತನವೂ ಅವರಿಬ್ಬರ ರಾಜಕೀಯ ಜೀವನದಲ್ಲೂ ಮಹತ್ವದ ಅಂಶವಾಗಿದೆ.

ಅಡ್ವಾಣಿಯವರು ನಿರಂತರ ರಥಯಾತ್ರಿ, ರಾಮನಿಗೋಸ್ಕರ, ಜನಾದೇಶಕ್ಕೋಸ್ಕರ, ಸ್ವರ್ಣ ಜಯಂತಿಗಾಗಿ, ಭಾರತ ಉದಯಕ್ಕಾಗಿ, ಭಾರತ ಸುರಕ್ಷೆಗಾಗಿ,  ಜನ ಚೇತನಕ್ಕೆಹೀಗೆ ಬಗೆ ಬಗೆಯ ಹೆಸರಿನಲ್ಲಿ  ಆರು ಬಾರಿ ಇಡೀ ದೇಶವನ್ನು ಸುತ್ತಿದ್ದಾರೆ. ಹೀಗಾಗಿ ದೇಶದ ನಾಡಿ ಮಿಡಿತ ಅವರಿಗೆ ಗೊತ್ತಿದೆ.  ಇಷ್ಟೆಲ್ಲಾ ಯಾತ್ರೆ ಮಾಡಿದ್ದರೂ ರಥದ ಹಿಂದೆ ಬಂದವರೆಲ್ಲಾ, ತಮ್ಮ ಭಾಷಣಕ್ಕೆ ಬಂದವರೆಲ್ಲಾ ತಮ್ಮನ್ನು ಬೆಂಬಲಿಸುತ್ತಾರೆ ಎಂಬ ಆಶೆಯೇನೂ ಅವರಲ್ಲಿ ಮನೆ ಮಾಡದೆ ಆ ಕ್ಷಣಕ್ಕೆ ತನಗೇನು ತೋಚುತ್ತದೋ ಅದನ್ನು ಮಾಡಿಬಿಡುತ್ತಾರೆ.

ರಾಮನಿಗಾಗಿ ಅವರು ಮಾಡಿದ ಯಾತ್ರೆಯನ್ನು ಪರಧರ್ಮೀಯರು ವಿರೋಧಿಸುವುದು, ಅವರ ರಾಜಕೀಯ ಚಿಂತನೆಗಳನ್ನು ಎಡಪಕ್ಷೀಯರು – ಕಾಂಗ್ರೆಸ್ಸಿಗರು ವಿರೋಧಿಸುವುದು ಮಾತ್ರವಲ್ಲ, ಅವರ ಜಿನ್ನಾ ಕುರಿತ ಕೆಲವೊಂದು ಮಾತುಗಳು ಮತ್ತು ಹಲವು ರಾಜಕೀಯ ನಿಲುವುಗಳನ್ನು ಅವರ ಆರ್. ಎಸ್. ಎಸ್ ಮತ್ತು ಭಾರತೀಯ ಜನತಾ ಪಕ್ಷ ಕೂಡಾ ವಿರೋಧಿಸಿದ್ದುಂಟು.  ಹೀಗಾಗಿ ಅವರು ಎಲ್ಲರನ್ನೂ ಮೆಚ್ಚಿಸಲೇಬೇಕೆಂದು ಮಾತಾಡುವುದಿಲ್ಲ.  ಅವರಿಗೆ ತಮಗೆ ಅನ್ನಿಸಿದ್ದನ್ನು ನೇರವಾಗಿ ನುಡಿಯುವ ಅಂತರ್ಯವಿದೆ ಎಂದು ಅವರನ್ನು ಮೆಚ್ಚುವ ಜನ ಕೂಡಾ ಸಾಕಷ್ಟಿದ್ದಾರೆ.

ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ ಜೀವನದಲ್ಲಿ ಎಲ್ಲಾ ಆಗು ಹೋಗುಗಳನ್ನೂ ಖುದ್ದು ಕಂಡು ಅನುಭಾವಿಸಿರುವ ಅಡ್ವಾಣಿ ಅವರಿಗೆ ಅವರು ಯಾವ ಒಂದು ಶುದ್ದತೆಯನ್ನು ವಿರೋಧಪಕ್ಷದಲ್ಲಿದ್ದು ಆಡಳಿತ ಪಕ್ಷದಿಂದ ನಿರೀಕ್ಷಿಸಿದ್ದರೋ; ತಮ್ಮ ಅಧಿಕಾರಾವಧಿಯಲ್ಲಿ ಅದನ್ನು ಹೀಗೆ ಪ್ರಯತ್ನಿಸಿ ಎಂದು ತಮ್ಮ ಕಿರಿಯರಿಗೆ ಹೇಳುತ್ತಿದ್ದರೋ; ಅಂತಹ ಮಾತುಗಳು ಇಂದು ತಮ್ಮದೇ ಪಕ್ಷದ ಮುಂದಿನ ತಲೆಮಾರಿಗೆ ಹಿತವಾಗುತ್ತಿಲ್ಲ ಎಂಬ ಅರಿವು ಅಡ್ವಾಣಿ ಅವರಿಗೆ ಇಲ್ಲದಿಲ್ಲ.  ಇತ್ತೀಚೆಗೆ ಅವರು ಮಾಡಿದ ಭಾಷಣದಲ್ಲಿ “ಬೇರೆ ಪಕ್ಷದ ಭ್ರಷ್ಟಾ ಚಾರ ಮಾತ್ರವಲ್ಲ, ನಮ್ಮ ಪಕ್ಷದವರ ಭ್ರಷ್ಟಚಾರವನ್ನು ಕೂಡಾ  ನಾನು ಸಹಿಸುವುದಿಲ್ಲ” ಎಂದು ನುಡಿದದ್ದು, ಬಹುಷಃ ಅವರು ಅವರ ರಾಜಕೀಯದಲ್ಲಿ ಅವರೆಂದೂ ಆಡಲು ಕನಸದಿದ್ದ ಮಾತುಗಳಿರಬೇಕು.

ಒಮ್ಮೆ ಅಟಲ್ ಜೀ ವಾಜಪೇಯಿ ಅವರು ತೊಂಭತ್ತರ ದಶಕದಲ್ಲಿ ಹೇಳಿದ ಮಾತೊಂದು ನೆನಪಿಗೆ ಬರುತ್ತದೆ.  “ಯಾರೂ ಸರಿಯಿಲ್ಲ.  ನಮ್ಮ ಪಕ್ಷದವರೂ ಸರಿಯಿಲ್ಲ.  ಇದನ್ನೆಲ್ಲಾ ನೋಡಿದರೆ ಎಲ್ಲಾದರೂ ಓಡಿಹೋಗಬೇಕಿನಿಸುತ್ತದೆ.  ಆದರೆ ಓಡಿಹೋಗುವುದು ಎಲ್ಲಿಗೆ ಎಂಬುದೇ ಪ್ರಶ್ನೆ.”  ಈ ಪ್ರಶ್ನೆ ಅಡ್ವಾಣಿ ಅವರನ್ನೂ ಇಂದು ಸಾಕಷ್ಟು ಬಾಧಿಸಿರಬೇಕು.  ಇಂಥಹ ಯಾತನೆ ರಾಜಕೀಯದ ಪ್ರಮುಖ ನಾಯಕರಿಗೇ ಬಂದೀತೆಂದ ಮೇಲೆ ಈ ದೇಶದ ಜನಸಾಮಾನ್ಯನ ಸ್ಥಿತಿ ಏನೆಂಬುದೇ ನಮ್ಮ ಭಾರತೀಯ ಬದುಕಿನ ಕಾಲಮಾನದ ಒಂದು ಬಹು ದೊಡ್ಡ ಪ್ರಶ್ನೆಯಾಗಿ ಉಳಿದಿದ್ದು, ಬಹುಷಃ ಕಾಲವೇ ಅದನ್ನು ಉತ್ತರಿಸಬೇಕಾಗಿದೆ.

Tag: Lal Krishna Advani

ಕಾಮೆಂಟ್‌ಗಳಿಲ್ಲ: