ಬುಧವಾರ, ಸೆಪ್ಟೆಂಬರ್ 11, 2013

ವಿಶ್ವಧರ್ಮ ಸಮ್ಮೇಳನದಲ್ಲಿ ಉಪನ್ಯಾಸ

ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ 
ಸ್ವಾಮಿ ವಿವೇಕಾನಂದರು

ಸೆಪ್ಟೆಂಬರ್ 11 ಭಾರತೀಯರಿಗೆ ಮಹತ್ವದ ದಿನ.  ಸೆಪ್ಟೆಂಬರ್ 11, 1893ರಂದು ಸ್ವಾಮಿ ವಿವೇಕಾನಂದರು ಭಾರತದ ಜ್ಯೋತಿಯನ್ನು ಇಡೀ ವಿಶ್ವಕ್ಕೆ ಪಸರಿಸಿದ ಮಹತ್ವದ ದಿನ.  ಸ್ವಾಮಿ ವಿವೇಕಾನಂದರ ಈ ಮಹತ್ಕಾರ್ಯದ ಕುರಿತು ಸೋದರಿ ನಿವೇದಿತಾ ಹೀಗೆ ಹೇಳಿದ್ದಾರೆ:

ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ನೀಡಿದ ಉಪನ್ಯಾಸಗಳ ಸ್ವರೂಪವನ್ನು ಹೀಗೆ ಸಂಕ್ಷೇಪಿಸಬಹುದು:  ಪ್ರಾರಂಭದಲ್ಲಿ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಕುರಿತು ಹೇಳಹೊರಟರು.  ಆದರೆ ಅವರು ತಮ್ಮ ಉಪನ್ಯಾಸ ಮುಗಿಸಿದಾಗ ಹಿಂದೂ ಧರ್ಮ ಪುನರ್ಸೃಷ್ಟಿಗೊಂಡಿತ್ತು.

ಏಕೆಂದರೆ ಸ್ವಾಮಿ ವಿವೇಕಾನಂದರು ತಮ್ಮ ಸ್ವಂತ ಅನುಭವವನ್ನು ನಿರೂಪಿಸುವುದಕ್ಕೆ ಹೊರಡಲಿಲ್ಲ.  ತಮ್ಮ ಗುರುವಿನ ಜೀವನ ಚರಿತ್ರೆಯನ್ನು ನಿರೂಪಿಸುವುದಕ್ಕೂ ಆ ವೇದಿಕೆಯನ್ನು ಬಳಸಿಕೊಳ್ಳಲಿಲ್ಲ.  ಅವೆರಡರ ಬದಲು ಪ್ರಾಚೀನ ಭರತಖಂಡ ರೂಪಿಸಿದ ಧಾರ್ಮಿಕ ಪ್ರಜ್ಞೆ, ತಮ್ಮ ದೇಶದ ಇಡೀ ಜನತೆಯ ಸಂದೇಶ ಸ್ವಾಮೀಜಿಯವರ ಮೂಲಕ ಅಲ್ಲಿ ಪ್ರಕಟಗೊಂಡವು. ನವತಾರುಣ್ಯದಲ್ಲಿದ್ದ ಪಶ್ಚಿಮದೇಶವನ್ನು ಉದ್ದೇಶಿಸಿ ಸ್ವಾಮೀಜಿ ಮಾತನಾಡುತ್ತಿದ್ದರು.  ಅದು ಮಧ್ಯಾಹ್ನದ ಸಮಯ.  ಅದೇ ಸಮಯದಲ್ಲಿ ಪೂರ್ವಾರ್ಧಗೋಳದ ಕತ್ತಲು ಕವಿದ ಭಾಗದಲ್ಲಿ, ಪೆಸಿಫಿಕ್ ಸಾಗರದ ಇನ್ನೊಂದು ಕಡೆಯಲ್ಲಿ ರಾಷ್ಟ್ರವೊಂದು ಮಲಗಿ ನಿದ್ರಿಸುತ್ತಿತ್ತು.  ತನ್ನದೇ ಮಹತ್ವ, ಶಕ್ತಿಗಳ ರಹಸ್ಯವನ್ನು ಸ್ವಾಮೀಜಿಯ ಯಾವ ಮಾತುಗಳು ತೆರೆದು ಪಶ್ಚಿಮಕ್ಕೆ ತೋರಿದುವೋ ಅದನ್ನು ಮರುದಿನದ ಮುಂಬೆಳಗು ಹೊತ್ತು ತರುವುದನ್ನು ಆ ರಾಷ್ಟ್ರ ನಿರೀಕ್ಷಿಸುತ್ತಿತ್ತು.

1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿಯವರು ನೀಡಿದ ಉಪನ್ಯಾಸ ಇಂತಿದೆ:

ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ,

ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳನ್ನು ಸಲ್ಲಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದದಿಂದ ತುಂಬಿ ತುಳುಕುತ್ತಿದೆ.  ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.  ಹಿಂದೂ ಜನಾಂಗಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯಾನುಕೋಟಿ ಜನರ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಇದೇ ವೇದಿಕೆಯ ಮೇಲೆ ನಿಂತು ಕೆಲವು ಭಾಷಣಕಾರರು, ಪೂರ್ವ ದೇಶಗಳಿಂದ ಬಂದಿರುವ ಪ್ರತಿನಿಧಿಗಳನ್ನು ಕುರಿತು ಹೀಗೆ ಹೇಳಿದ್ದಾರೆ:  ಬಹಳ ದೂರದಿಂದ ಬಂದಿರುವ ಇವರು ಧಾರ್ಮಿಕ ಸಹನೆಯ ಭಾವನೆಯನ್ನು ವಿವಿಧ ದೇಶಗಳಿಗೆ ಒಯ್ಯುವ ಗೌರವಕ್ಕೆ ಪಾತ್ರರಾಗುವರು.’  ಹಾಗೆ ಹೇಳಿದ ಭಾಷಣಕಾರರಿಗೂ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.  ಧಾರ್ಮಿಕ ಸಹನೆಯನ್ನೂ, ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುದನ್ನೂ ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು.  ಪರ ಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು; ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ.  ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು.  ಯಾವ ವರ್ಷ ರೋಮನ್ನರ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ಒಡೆದು ಪುಡಿಪುಡಿಯಾಯಿತೋ ಅದೇ ವರ್ಷ ಅಳಿದುಳಿದ ಶುದ್ಧ ಯಹೂದಿಗಳು ಆಶ್ರಯವನ್ನು ಬಯಸಿ ದಕ್ಷಿಣ ಭಾರತಕ್ಕೆ ಬಂದರು.  ಅವರಿಗೆ ಆಶ್ರಯ ನೀಡಿದ ದೇಶದವನು ನಾನು ಎಂಬ ಹೆಮ್ಮೆ ನನ್ನದು.  ಝೊರತೂಷ್ಟ್ರ ರಾಷ್ಟ್ರದ ನಿರಾಶ್ರಿತರಿಗೆ ಆಶ್ರಯ ನೀಡಿ ಇಂದಿಗೂ ಅವರನ್ನು ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು.  ಸೋದರರೆ, ಚಿಕ್ಕಂದಿನಿಂದ ನಾನು ಪಠಿಸುತ್ತಿದ್ದ, ಇಂದಿಗೂ ಕೋಟ್ಯಂತರ ಜನರು ಪಠಿಸುತ್ತಿರುವ ಶ್ಲೋಕವೊಂದರ ಕೆಲವು ಪಂಕ್ತಿಗಳನ್ನು ನಿಮ್ಮ ಮುಂದೆ ಹೇಳುತ್ತೇನೆ:

ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವನ್, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ, ನೇರವಾಗಿಯೋ ವಕ್ರವಾಗಿಯೋ ಇರುವ ಪಥಗಳನ್ನು ಅನುಸರಿಸುತ್ತಾರೆ.  ಅವೆಲ್ಲವೂ ನಿನ್ನೆಡೆಗೆ ಕರೆದೊಯ್ಯುತ್ತವೆ.

ಅತ್ಯಂತ ಮಹತ್ವಪೂರ್ಣವಾದ ಸಭೆಗಳಲ್ಲಿ ಒಂದು ಇಂದು ನೆರೆದಿರುವ ಈ ಸಭೆ.  ಯಾರೇ ಆಗಲಿ, ಯಾವುದೇ ರೂಪದಲ್ಲೇ ಆಗಲಿ ನನ್ನ ಬಳಿಗೆ ಬಂದರೆ ನಾನು ಅವರನ್ನು ಸ್ವೀಕರಿಸುತ್ತೇನೆ; ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿ ಬಂದು ನನ್ನನ್ನೇ ಸೇರಲು ಎಲ್ಲ ಜನರೂ ಪ್ರಯತ್ನಿಸುತ್ತಿದ್ದಾರೆ ಎಂಬ ಗೀತೆಯ ಅದ್ಭುತ ತತ್ವದ ಸತ್ಯವನ್ನು ಜಗತ್ತಿಗೆ ಸಾರುವುದಕ್ಕೆ ಈ ಸಭೆಯೊಂದೇ ಸಾಕು.  ಸಂಕುಚಿತ ಪಂಥಭಾವನೆ, ಸ್ವಮತಾಭಿಮಾನ, ಅದರ ಭೀಕರ ಸಂತಾನವಾದ ಮತಾಂಧತೆ ಇವು ಈ ಸುಂದರ ಪೃಥ್ವಿಯನ್ನು ಬಹುಕಾಲದಿಂದ ಬಾಧಿಸುತ್ತಿವೆ.  ಇವು ಈ ಭೂಮಿಯನ್ನು ಹಿಂಸೆಯಿಂದ ತುಂಬಿವೆ, ಅದನ್ನು ಮತ್ತೆ ಮತ್ತೆ ನರರಕ್ತದಿಂದ ತೊಯಿಸಿವೆ, ನಾಗರಿಕತೆಯನ್ನು ನಾಶಗೊಳಿಸಿವೆ, ರಾಷ್ಟ್ರ ರಾಷ್ಟ್ರಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ.  ಇಂಥ ಭಯಂಕರ (ಧರ್ಮಾಂಧತೆಯ) ರಾಕ್ಷಸರು ಇಲ್ಲದೆಯೇ ಇದ್ದಿದ್ದರೆ ಮಾನವ ಸಮಾಜ ಈಗಿರುವುದಕ್ಕಿಂತಲೂ ಎಷ್ಟೋ ಪಾಲು ಮುಂದುವರಿದಿರುತ್ತಿತ್ತು.  ಆದರೆ ಅವರ ಕಾಲ ಮುಗಿದಿದೆ. ಇಂದು ಬೆಳಿಗ್ಗೆ ಈ ಸಭೆಯ ಶುಭಾರಂಭವನ್ನು ಸೂಚಿಸಲು ಮೊಳಗಿದ ಘಂಟಾನಾದ ಎಲ್ಲ ಮತಾಂಧತೆಯ, ಖಡ್ಗ ಇಲ್ಲವೇ ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನುದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟಾನಾದವೂ ಆಗಲಿ ಎಂಬುದೇ ನನ್ನ ಆಶಯ.

ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.

ಈ ಭಾಷಣವನ್ನು ಸ್ವಾಮೀಜಿ ಮಾಡಿದ್ದು ಸಾವಿರಾರು ಶ್ರೋತೃಗಳ ಎದುರಿಗೆ. ಗುಲಾಮಗಿರಿಯಿಂದ ನರಳುತ್ತಿದ್ದ ದೇಶವೊಂದರಿಂದ ಬಂದ ಬಡ ಸಂನ್ಯಾಸಿಯಾಗಿದ್ದರು ಅವರು. ಈ ಹಿನ್ನೆಲೆಯನ್ನೂ, ಭಾಷಣಾನಂತರದ ಪರಿಣಾಮಗಳನ್ನೂ ತಾಳೆ ಹಾಕಿದಾಗ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟಿತ್ತು ಎನ್ನುವುದು ಅರ್ಥವಾಗುತ್ತದೆ.

ಸ್ವಾಮಿ ವಿವೇಕಾನಂದರ ಪಾದಪದ್ಮಗಳಿಗೆ ನಮ್ಮ ಅಭಿವಂದನೆಗಳು.

ವಿಷಯ ಕೃಪೆ: ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ ಸಂಪುಟ 1


Tag: Swami Vivekananda at Chicago World Religion Conference