ಶುಕ್ರವಾರ, ಸೆಪ್ಟೆಂಬರ್ 27, 2013

ಭಗತ್ ಸಿಂಗ್

ಸರ್ದಾರ್ ಭಗತ್ ಸಿಂಗ್

"ಕೇವಲ ರಕ್ತಪಾತವಷ್ಟೆ ಕ್ರಾಂತಿಯಲ್ಲ. ಕ್ರಾಂತಿಯೆಂದರೆ ಬರೆ ಬಾಂಬು, ಪಿಸ್ತೂಲುಗಳ ಹೋರಾಟವಲ್ಲ. ಸ್ವಾತಂತ್ರ್ಯ ಎನ್ನುವುದೇ ಕ್ರಾಂತಿ. ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದೇ ಕ್ರಾಂತಿ. ಅಪ್ಪಟ ಕ್ರಾಂತಿಯು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ."  ಇದು ಭಗತ್ ಸಿಂಗ್ ಅವರ ಅಚ್ಚಳಿಯದ ನುಡಿಗಳು.  ಕೇವಲ ಹನ್ನೆರಡನೆಯ ವಯಸ್ಸಿನಲ್ಲೇ ಜಲಿಯನ್ ವಾಲಾಬಾಗ್ ದುರಂತದಿಂದ ಮನನೊಂದು ದೇಶದ ಸ್ವಾತಂತ್ರ್ಯಕ್ಕಾಗಿ ತನ್ನನ್ನು  ಮುಡಿಪಾಗಿಟ್ಟುಕೊಂಡ ಭಗತ್ ಸಿಂಗ್ ಅಂತಹ ಉದಾಹರಣೆಗಳು ಅಪರೂಪವಾದದ್ದು. 

ಭಗತ್ ಸಿಂಗರು  1907ರ ಸೆಪ್ಟೆಂಬರ್ 28 ರಂದು ಈಗ ಪಾಕಿಸ್ತಾನಕ್ಕೆ ಸೇರಿರುವ ಲಾಯಲ್ಪುರ ಜಿಲ್ಲೆಯ ಜರಾನ್ವಾಲಾ ತಾಲ್ಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಿಸಿದರು. ಭಗತ್ ಸಿಂಗರ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್.  ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ನಡುವೆ ಹಲವಾರು ಚಳುವಳಿಗಳನ್ನು ಸಂಘಟಿಸಿ ಪೊಲೀಸರ ಕೈಗೆ ಸಿಗದೆ ಕಾರ್ಯನಿರ್ವಹಿಸುತಿದ್ದರು.   ಈ ಪ್ರಭಾವದ ಜೊತೆಯಲ್ಲಿ  ಜಲಿಯನ್ ವಾಲಾಬಾಗ್ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ ಭಗತ್ ಸಿಂಗರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು.

ಭಗತ್ ಸಿಂಗರು ಚಂದ್ರಶೇಖರ್ ಆಜಾದ್, ಬಿ.ಕೆ. ದತ್, ಜೆ.ಸಿ.ಚಟರ್ಜಿ, ಬಿಜೊಯ್ ಕುಮಾರ್ ಸಿನ್ಹಾ, ಸಚಿಂದ್ರನಾಥ ಸನ್ಯಾಲ್, ಜೋಗೇಶ್ ಚಂದ್ರ ಚಟರ್ಜಿರಾಮಪ್ರಸಾದ್ ಬಿಸ್ಮಿಲ್, ಶಿವ ವರ್ಮ, ಸುಖದೇವ್ ಮುಂತಾದ ನಿಷ್ಠಾವಂತರೊಡನೆ ದೇಶಪ್ರೇಮದಿಂದ ಮಾಡಿದ ಹಲವಾರು ಹೋರಾಟಗಳು, ಬ್ರಿಟಿಷ್ ಸರ್ಕಾರಕ್ಕೆ ಹಿಡಿಸಿದ ಭಯ, ಈ ಎಲ್ಲವುಗಳ ಹಿಂದೆ ಅಡಗಿದ್ದ ಸ್ವಾರ್ಥರಹಿತ ದೇಶಪ್ರೇಮ ನಮ್ಮ ನಾಡನ್ನು ಸದಾಕಾಲ ಜಾಗೃತಗೊಳಿಸುವಂತಹದ್ದಾಗಿವೆ. 

ನೇಣುಗಂಬವೇರಿ ಸಾಯುವ ಕೆಲವೇ ನಿಮಿಷಗಳ ಮೊದಲು ಪ್ರಾರ್ಥನೆಯಂತೆ ಭಗತ್ ನುಡಿದ ಮಾತುಗಳು ಎಂಥವರನ್ನೂ ಕೆಚ್ಚೆದೆಯ ಉತ್ತುಂಗಕ್ಕೇರಿಸಬಲ್ಲವು. ಮೊದಲು ನಿಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ಆ ನಂತರದಲ್ಲಿ  ಕೆಲಸ ಮಾಡಲು ತೊಡಗಿ.  ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು; ದೃಢ ನಿರ್ಧಾರ ಬೇಕು; ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ ನಿಮ್ಮನ್ನು ನಿರಾಶೆಗೊಳಿಸಲಾರವು.  ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸಲಾರವು.  ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ....

ಭಗತ್ ಸಿಂಗ್ ಅದೆಷ್ಟು ಶ್ರೇಷ್ಠ ಪುಸ್ತಕಗಳನ್ನು ಓದುತ್ತಿದ್ದರೆಂದರೆ ಸಾಯುವ ದಿನದಲ್ಲಿ ಅವರನ್ನು ನೇಣುಗಂಬಕ್ಕೆ ಕರೆದೊಯ್ಯಲು ಬಂದಾಗ ಕೂಡಾ ಒಂದು ಕ್ಷಣ ತಡಿ ಮಹಾನ್ ಕ್ರಾಂತಿಕಾರ ಲೆನಿನ್ ಬಗ್ಗೆ ಇನ್ನೊಂದೆರಡು ವಾಕ್ಯ ಓದಿ ಬಿಡುತ್ತೇನೆಎಂದು ಹೇಳಿ ಒಂದೆರಡು ಕ್ಷಣದ ನಂತರ ನಡೆಯಿರಿ ಹೋಗೋಣಎಂದರಂತೆ.  ಮಾರ್ಚ್ 23, 1931ರಂದು ಅವರು ನಗುನಗುತ್ತಾ ಗೆಳೆಯ ಸುಖದೇವ್, ರಾಜ್ ಗುರು ಅವರ ಜೊತೆಗೂಡಿ ಗಲ್ಲಿಗೇರಿದಾಗ ಅವರಿಗಿನ್ನೂ 23ರ ಹರಯ.


ಈ ಮಹಾನ್ ದೇಶಪುತ್ರನ ಜನ್ಮದಿನದ ಸಂದರ್ಭದಲ್ಲಿ  ಅವರಿಗೆ ನಮನ ಸಲ್ಲಿಸೋಣ.  ಇಂತಹ ಮಹನೀಯರು ದೇಶಕ್ಕೆ ಬಲಿದಾನ ಸಲ್ಲಿಸಿ ತಂದುಕೊಟ್ಟ ಸ್ವಾತಂತ್ರ್ಯಕ್ಕೆ ಯೋಗ್ಯರಾಗಿ ಬಾಳುವ ಸಂಕಲ್ಪ ಕೈಗೊಳ್ಳೋಣ.

Tag: Sardar Bhagat Singh

ಕಾಮೆಂಟ್‌ಗಳಿಲ್ಲ: