ಭಾನುವಾರ, ಸೆಪ್ಟೆಂಬರ್ 1, 2013

ಶ್ರೀ ಶಾರದಾದೇವಿ

ಶ್ರೀ ಶಾರದಾದೇವಿ

ಶ್ರೀಮಾತೆ ಶ್ರೀ ಶಾರದಾದೇವಿಯವರ ನೂರಾ ಅರವತ್ತೆರಡನೆಯ  ಜಯಂತಿಯನ್ನು ಇದೇ ಡಿಸೆಂಬರ್ 13 (2013) ರಂದು  ಆಚರಿಸಲಾಯಿತು.  ಶ್ರೀರಾಮಕೃಷ್ಣ ಪರಮಹಂಸರ ವಚನವೇದ’,  ‘ಶ್ರೀ ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯ ಅಲ್ಲಲ್ಲಿನ ಅವಲೋಕನ ಹಾಗೂ ಈ ಮಹಾನ್ ಪುರುಷರ ಕುರಿತ ಕೆಲವೊಂದು ಓದು ಕೇಳ್ವಿಕೆಗಳು ನನ್ನನ್ನು ಅಷ್ಟಿಷ್ಟು ಪುನೀತನನ್ನಾಗಿಸಿವೆ.  ನನಗಿರುವ ಸೀಮಿತ ಪರಿಜ್ಞಾನದಲ್ಲಿ ವ್ಯಕ್ತಪಡಿಸುವುದಾದರೆ ಶ್ರೀರಾಮಕೃಷ್ಣ ಪರಮಹಂಸರು ಮತ್ತು ಶ್ರೀ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಆಳದ ಸಿಂಚನ ನಿತ್ಯದ ಬದುಕಿನಿಂದ ಹೊರಬಂದು ಅನುಭಾವಿಸುವ  ತೆರೆನಾದದ್ದು.  ಆದರೆ ಶ್ರೀಮಾತೆ ಶಾರದದೇವಿಯವರ ಬದುಕನ್ನು ಓದಿದಾಗ ಅವರು ತಮಗಿದ್ದ ಅಸಂಖ್ಯಾತ  ಕಷ್ಟಗಳ ನಡುವೆ ಬದುಕು ನಡೆಸಿದರೂ, ಆ ಬಿಸಿಯನ್ನೆಲ್ಲಾ ತಾವನುಭವಿಸಿ ಹೊರಪ್ರಪಂಚಕ್ಕೆ ನೀಡಿದ ಆಧ್ಯಾತ್ಮಿಕ ಸಾಂತ್ವನದ ತಂಪು, ನಾವು ಬದುಕುತ್ತಿರುವ ಈ ಬಾಳಿಗೆ ಹೊಸ ವ್ಯಾಖ್ಯೆಯನ್ನು ನೀಡುವಂತದ್ದು ಎನಿಸುತ್ತದೆ.   

ಜೀವನದಲ್ಲಿ ನಾವೆಲ್ಲರೂ ಕಷ್ಟಗಳು ಅಥವಾ ಕಷ್ಟಗಳು ಎಂದುಕೊಳ್ಳುವಂತಹ ಘಟನೆಗಳನ್ನು  ಕಾಣುತ್ತಿರುತ್ತೇವೆ.  ನಾವು ಕಷ್ಟಗಳು ಎಂದುಕೊಂಡಿರುವ ಗಾತ್ರದ ಹಲವು ಪಟ್ಟು ಹೆಚ್ಚು ಕಷ್ಟಪಡುತ್ತಿರುವ ಜನರನ್ನು ಪ್ರತಿನಿತ್ಯ ಕಾಣುತ್ತಲೇ ಇರುತ್ತೇವೆ.  ಆ ಕಷ್ಟಗಳು ನಮ್ಮನ್ನು ಆದಷ್ಟು ಬಿಟ್ಟು ಹೋಗಬೇಕು ಎಂದು ತವಕಿಸುವುದು ಈ ಲೋಕದ ನಿತ್ಯ ಅನುಭವ.  ಹಾಗಾಗಿ ನಮ್ಮ ದೃಷ್ಟಿ ಕಷ್ಟಗಳೆಂಬ ಕತ್ತಲೆಯ ಕಡೆಗೆ ನೆಟ್ಟಿರುವಷ್ಟು,  ಬಿಡುಗಡೆಯ ಮುಕ್ತಿಯೆಂಬ ಬೆಳಕಿನ ಕಡೆಗೆ ಹೊರಳುವುದೇ ಇಲ್ಲ.  ಜಗತ್ತಿನಲ್ಲಿ ಕಷ್ಟಗಳ ನಡುವೆ ಇದ್ದು ಬೆಳಕಿನತ್ತ ಮುಖ ಮಾಡಿನಿಂತ ಅಪೂರ್ವ ವ್ಯಕ್ತಿತ್ವ ಶ್ರೀಮಾತೆ ಶಾರದಾದೇವಿಯವರದ್ದು. 

ಸ್ವಾಮಿ ನಿತ್ಯಾನಂದರು ಬರೆದಿರುವ ಶ್ರೀಮಾತೆ ಶಾರದಾದೇವಿ ಪುಸ್ತಕದ ಹಿಂಬದಿಯಲ್ಲಿ ಈ ಮಾತುಗಳಿವೆ  ಶ್ರೀಮಾತೆಯವರ ಬದುಕು ಕೆಸರಿನಲ್ಲಿ ಅರಳಿದ ಕಮಲದಂತೆ. ಕೆಳಗೆ ನೋಡಿದರೆ ಸಂಸಾರದ ಕೆಸರು, ಕೊಳೆ, ಕಲ್ಮಶ ಎಲ್ಲಾ ಇವೆ. ಆದರೆ ಕಮಲ, ಕೆಳಗೆ ನೋಡುವುದಿಲ್ಲ, ಮೇಲೆ ನೋಡುವುದು, ಯಾವಾಗಲೂ ಸೂರ್ಯನ ದಿಕ್ಕಿಗೆ ತಿರುಗುವುದು. ಶ್ರೀಮಾತೆಯವರ ಜೀವನವೇ ಇದಕ್ಕೆ ಸಾಕ್ಷಿ. ಕೆಳಗೆ ನೋಡಬೇಡಿ. ಅಲ್ಲಿ ಕೊಳೆ ಇದೆ, ಕೆಸರಿದೆ ಎಂದು ತಪ್ಪು ಕಂಡು ಹಿಡಿಯಬೇಡಿ. ಕೆಸರಿನ ಲಕ್ಷಣವೇ ಅದು. ಆದರೆ ಮೇಲೆ ನೋಡಿ, ಆಗ ಭಗವಾನ್ ಸೂರ್ಯನನ್ನು ಕಾಣುತ್ತೇವೆ. ಕೆಳಗಿರುವುದನ್ನು ರಿಪೇರಿ ಮಾಡಲು ಹೋಗಬೇಡಿ. ಅದು ರಿಪೇರಿ ಆಗುವುದಕ್ಕೆ ಕಾಯುತ್ತಿಲ್ಲ. ಆದರೆ ಮೇಲೆ ನೀವು ನೋಡಿ. ಆಗ ಅವನ ದರ್ಶನ ನಿಮಗಾಗುವುದು.  ಇಂಥಹ ಮಹಾನ್ ತತ್ವವನ್ನು ಶ್ರೀಮಾತೆ ಶಾರದಾದೇವಿಯವರ ಬದುಕು ನಮಗೆ ತಿಳಿಯಪಡಿಸುವಂತದ್ದಾಗಿದೆ.

ಈ ಲೋಕ ಕಂಡ ಮಹಾನ್ ತಪಸ್ವಿನಿ  ಶ್ರೀಮಾತೆಯವರ ಕೆಲವೊಂದು ದಿವ್ಯ ಸೂಕ್ತಿಗಳು ಇಂತಿವೆ:

ಮನುಷ್ಯನ ಬುದ್ಧಿ ಎಷ್ಟು ಅಲ್ಪ!  ಅವನಿಗೆ ಬೇಕಾಗಿರುವುದೇ ಒಂದಾದರೆ ಅವನು ಕೇಳುವುದೇ ಇನ್ನೊಂದು.  ಶಿವನನ್ನು ಮಾಡಲು ಹೋಗಿ ಮಂಗನ ಮೂತಿ ಮಾಡಿಡುತ್ತಾನೆ.  ಆದ್ದರಿಂದ ಆಸೆಗಳನ್ನೆಲ್ಲಾ ಭಗವಂತನ ಪಾದಗಳಲ್ಲಿ ಸಮರ್ಪಿಸಿಬಿಡುವುದೇ ಒಳ್ಳೆಯದು.  ಅವನು ನಮಗೆ ಯಾವುದು ಒಳ್ಳೆಯದೋ ಅದನ್ನು ಮಾಡಲಿ.  ಆದರೆ ಭಕ್ತಿ ವೈರಾಗ್ಯಗಳನ್ನು ಕೇಳಿಕೊಳ್ಳಬಹುದು.  ಅವನ್ನು ಆಸೆಗಳ ಗುಂಪಿಗೆ ಸೇರಿಸಲಾಗುವುದಿಲ್ಲ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಭಗವಂತನನ್ನು ಆಸೆಗಳಿಂದ ಪಾರುಮಾಡು ಎಂದು ಕೇಳಿಕೊಳ್ಳಬೇಕು.  ಏಕೆಂದರೆ ಆಸೆಯೇ ಎಲ್ಲ ದುಃಖದ ಮೂಲ.  ಮತ್ತೆ ಮತ್ತೆ ಜನನ ಮರಣಗಳಿಗೆ ತಳ್ಳುವುದೂ ಆಸೆಯೇ.  ಮುಕ್ತಿಯ ಮಾರ್ಗದಲ್ಲಿ ಅದೇ ಅಡ್ಡಿ.

ಪ್ರಾಪಂಚಿಕ ಸಂಬಂಧಗಳು ಶಾಶ್ವತವಲ್ಲ.  ಇಂದು ಅವೇ ಜೀವನದ ಸಾರಸರ್ವಸ್ವವೋ ಎಂಬಂತೆ ತೋರುತ್ತದೆ.  ಆದರೆ ನಾಳೆ ಎಲ್ಲವೂ ಮಾಯವಾಗುತ್ತವೆ.  ನಿನ್ನ ನಿಜವಾದ ಸಂಬಂಧ ದೇವರೊಂದಿಗೆ ಮಾತ್ರ.

ನೀನು ಮನುಷ್ಯ ಮಾತ್ರರನ್ನು ಪ್ರೀತಿಸಿದ್ದೆ ಆದರೆ ಕಷ್ಟಪಡಲೇಬೇಕಾಗುತ್ತದೆ.  ಯಾರು ಭಗವಂತನನ್ನು ಮಾತ್ರವೇ ಪ್ರೀತಿಸುತ್ತಾನೋ ಅವನೇ ಧನ್ಯ.  ಭಗವಂತನನ್ನು ಪ್ರೀತಿಸುವವನು ಕಷ್ಟಗಳಿಗೆ ಗುರಿಯಾಗುವುದಿಲ್ಲ.

ಬೇರೆಯವರಿಗಾಗಿ ನಿನ್ನ ಕರ್ತವ್ಯಗಳನ್ನು ಏನೇನು ಇರುತ್ತವೆಯೋ ಅವೆಲ್ಲವನ್ನೂ ಮಾಡು.  ಆದರೆ ನಿನ್ನ ಪ್ರೀತಿಯನ್ನು ಭಗವಂತನಿಗೆ ಮಾತ್ರ ಕೊಡು.  ಪ್ರಾಪಂಚಿಕ ಪ್ರೀತಿ ತನ್ನೊಂದಿಗೆ ಹೇಳಲಾಗದಷ್ಟು ಸಂಕಟವನ್ನು ತರುತ್ತದೆ.

ಆಸೆಯೇ ಎಲ್ಲಕ್ಕೂ ಕಾರಣ.  ಆಸೆಯಿಲ್ಲದವನಿಗೆ ಯಾವ ಬಂಧನವಿದೆನೋಡು, ನಾನು ಇವೆಲ್ಲದರ ಮಧ್ಯೆ ಇದ್ದೇನೆ.  ಆದರೆ ನಾನು ಅವಕ್ಕೆ ಸ್ವಲ್ಪವೂ ಅಂಟಿಕೊಂಡಿಲ್ಲ.  ಸ್ವಲ್ಪ ಕೂಡ ಅಂಟಿಕೊಂಡಿಲ್ಲ.

ಯಾವುದು ಆಕರ್ಷಿಸುತ್ತಿದೆಯೋ ಆ ಹೊರಗಡೆಯ ವಸ್ತು ಅಶಾಶ್ವತ ಎಂದು ಕಂಡುಕೊಳ್ಳಲು ಪ್ರಯತ್ನಿಸು.  ನಿನ್ನ ಗಮನವನ್ನು ಭಗವಂತನ ಕಡೆಗೆ ಹರಿಸು.

ಸಂಸಾರದಲ್ಲಿ ಸುಖವೂ ಇದೆ, ದುಃಖವೂ ಇದೇ.  ಹೀಗಿರುವಾಗ ಅದರ ಬಗ್ಗೆ ಸುಮ್ಮನೆ ತಲೆಕೆಡಿಸಿಕೊಂಡು ಮನಸ್ಸಿನ ಬಲವನ್ನೇಕೆ ಕಳೆದುಕೊಳ್ಳಬೇಕು.


ಮಗು, ನೀನು ಸಂಸಾರದಲ್ಲಿ ಇದ್ದರೆ ತಾನೇ ಏನಂತೆ?  ಸಂಸಾರದಲ್ಲಿ ಇರುವುದು ಎಂದರೆ ನಿನ್ನ ಪಾಲಿಗೆ ಮರದ ನೆರಳಿನಲ್ಲಿ ಇದ್ದಂತೆ.  ಸಂಸಾರವೇನು ದೇವರಿಂದ ಬೇರೆಯೇ?  ದೇವರು ಎಲ್ಲೆಲ್ಲೂ ಇದ್ದಾನೆ.... ದೇವರು ನಿನ್ನನ್ನು ಎಲ್ಲಿಟ್ಟಿರುವನೋ ಅಲ್ಲೇ ತೃಪ್ತಿಯಿಂದಿರು.  ದೇವರನ್ನು ಕರೆಯುವುದು, ಅವನನ್ನು ಪಡೆಯುವುದು, ಇದೇ ಗುರಿ.  ನೀನು ಅವನನ್ನು ಕರೆದರೆ, ಅವನು ಕೈಹಿಡಿದು ನಡೆಸುತ್ತಾನೆ.  ಅವನನ್ನು ನಂಬು.  ನಿನಗೆ ಯಾವ ಭಯವೂ ಇರುವುದಿಲ್ಲ.  

ಹೀಗೆ ಶ್ರೀಮಾತೆ ಶಾರದಾದೇವಿಯವರನ್ನು ಕುರಿತು ಓದಿದಂತೆಲ್ಲಾ ಅನಂತ ವಿಶ್ವಪ್ರಶಾಂತೆತೆಯ ತಾಣ ನಮ್ಮದಾಗುತ್ತಾ ಬರುತ್ತದೆ.  ಇಂತಹ ಪ್ರಶಾಂತತೆ ನಮ್ಮ ಜೊತೆ ನಿರಂತರವಾಗಿರುವಂತಾಗಲಿ.

ಕುವೆಂಪು ಅವರಿಂದ ರಚಿತವಾದ ಈ ಗೀತೆಯ ಮೂಲಕ ಶ್ರೀಮಾತೆ ಶಾರದಾದೇವಿಯವರ  ಚರಣಗಳಿಗೆ ಸಾಷ್ಟಾಂಗ ಪಾದಾಭಿವಂದನೆಗಳನ್ನು ಅರ್ಪಿಸೋಣ.

ಶ್ರೀಶಾರದಾದೇವಿ ಹೇ ಮಹಾಮಾತೆ
ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ
ಪರಮಪಾವನಹೃದಯೆ ಕಲಿಯುಗದ ಸೀತೆ
ಭಕ್ತಿಯಿಂದಾರಾಧಿಪೆವು ನಿನ್ನನಮ್ಮ

ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ
ನಿನ್ನ ತೇಜದ ಭಾಗವೀ ನಮ್ಮ ಸೂರ್ಯ
ನೀ ಕಾಳಿ ನೀ ಲಕ್ಷ್ಮಿ ನೀ ಬಿಜ್ಜೆಯಮ್ಮ
ಮಕ್ಕಳಾಗಿಹ ನಮ್ಮ ಪೊರೆ ಶಕ್ತಿಯಮ್ಮ

ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ
ಗುರುವರ್ಯನಂ ತಿಳಿದ ನೀ ಮಹಿಮಳಮ್ಮ
ಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ
ಪರಶಕ್ತಿ ನೀನಮ್ಮ ನಮ್ಮ ಸಲಹಮ್ಮ

ನಿನ್ನ ನಾಮವೆ ಜನನಿ ಸುರನದಿಯ ತೀರ್ಥ
ಎಲೆ ತಾಯೆ ನೀನೇ ಪವಿತ್ರತಮ ತೀರ್ಥ
ನಿನ್ನ ಪೂಜೆಯ ಭಕ್ತಿ, ಸಾಧನ ವಿರಕ್ತಿ

ನಿನ್ನ ನೆನೆವುದೆ ನಮಗೆ ಗುರು ತಪಃಶಕ್ತಿ.

Tag: Shree Sharada Devi

ಕಾಮೆಂಟ್‌ಗಳಿಲ್ಲ: