ಮಂಗಳವಾರ, ಸೆಪ್ಟೆಂಬರ್ 3, 2013

ಹೀಗಿದ್ದರು ನಮ್ಮ ಕಮಲಾದೇವಿ

ಹೀಗಿದ್ದರು ನಮ್ಮ ಕಮಲಾದೇವಿ

ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯಾನಂತರ ಸಾಮಾನ್ಯ ಜನರಿಗಾಗಿ ದುಡಿದವರಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಮುಖರು. ಡಾ. ಜೋತ್ಸ್ನಾ ಕೃಷ್ಣಾನಂದ ಕಾಮತ್ ಅವರು ಕೊಂಕಣಿ ಭಾಷೆಯಲ್ಲಿ ಬರೆದಿರುವ ಪುಸ್ತಕ, ಮೂಲತಃ ಕರ್ನಾಟಕದ ಕರಾವಳಿ ಜಿಲ್ಲೆಯವರಾದ ಕಮಲಾದೇವಿ ಅವರ ಹೋರಾಟ, ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ.

ಡಾ. ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿರುವ `ಕಮಲಾದೇವಿ ಚಟ್ಟೋಪಾಧ್ಯಾಯ` ಹೆಸರಿನ ಈ ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಈಚೆಗೆ ಹೊರತಂದಿದೆ. ಪುಸ್ತಕದ ಎರಡು ಅಧ್ಯಾಯಗಳ ಆಯ್ದ ಭಾಗ ಇಲ್ಲಿದೆ.
________________________


ಕಮಲಾದೇವಿಯವರ ರಾಜಕೀಯ ಪ್ರವೇಶವು ಸೇವಾ ವೃತ್ತಿಯ ನೆವದಲ್ಲಿ ಆಯಿತು. ಡಾ. ಹರ್ಡೀಕರರ ಸೇವಾದಳದ ತರಬೇತಿ ನಿಜವಾಗಿಯೂ ಕಠಿಣ ಮತ್ತು ಹೆಚ್ಚು ಶ್ರಮದಾಯಕವಾಗಿತ್ತು. ಕಮಲಾದೇವಿಯ ಸೇವೆ ಗುಡಿಸುವುದು ಮತ್ತು ಕಸ ತುಂಬುವ ಕಾರ್ಯದಿಂದ ಪ್ರಾರಂಭವಾಯಿತು. ಆ ಕುರಿತು ಅವರಿಗೆ ಹೆಚ್ಚಿನ ಅಭಿಮಾನವಿತ್ತು!

ಕರಾವಳಿಯ ಸೆಕೆಯ ಅಭ್ಯಾಸವಿದ್ದು ನಾಜೂಕಾಗಿ ಬೆಳೆದಿದ್ದ ಹುಡುಗಿಗೆ ಬೆಳಗಾವಿಯ ಡಿಸೆಂಬರ್ ತಿಂಗಳ ಚಳಿ, ತಣ್ಣಗಿನ ನೀರಿನ ಸ್ನಾನ ಮೈನಡುಗಿಸುತ್ತಿತ್ತು. ರಾತ್ರಿ, ಮಧ್ಯರಾತ್ರಿ ಚಳಿಯಲ್ಲಿ ಎಚ್ಚರವಿದ್ದು ಅಧಿವೇಶನಕ್ಕೆ ದೂರದೂರದಿಂದ ಬರುತ್ತಿದ್ದ ಸದಸ್ಯರನ್ನು ಸ್ವಾಗತಿಸಿ ಅವರ ವಾಸದ ಮನೆಯವರೆಗೆ ತಲುಪಿಸಬೇಕಿತ್ತು. ಕ್ರಮೇಣ ದಳದ ಕಠಿಣ ವ್ಯಾಯಾಮ, ಮುಂಜಾನೆಯ ಪ್ರಭಾತಫೇರಿ ಮತ್ತು ಹೆಚ್ಚಿನ ವೇಳೆ ಎಚ್ಚರವಿದ್ದು ಕೆಲಸ ಮಾಡುವುದು ಅವರಿಗೆ ರೂಢಿಯಾಯಿತು.

ಸ್ವಯಂ ಸೇವಕರೆಲ್ಲರಿಗೂ ತ್ರಿವರ್ಣ (ಧ್ವಜದ ಬಣ್ಣದ) ಅಂಚಿನ ಕಪ್ಪು ಬಣ್ಣದ ಸೀರೆ ಸಮವಸ್ತ್ರವಾಗಿತ್ತು. ಒಬ್ಬರೇ ನಡೆದು ಬರುವಾಗ ಈ ಬಣ್ಣ ಏನೂ ಅನ್ನಿಸುತ್ತಿರಲಿಲ್ಲ. ಆದರೆ ನೂರಾರು ಸ್ವಯಂಸೇವಕರು ನಡೆದು ಬರುತ್ತಿರಬೇಕಾದರೆ, ಶೋಕ ಪ್ರದರ್ಶನಕ್ಕೆ ಹೊರಟ ಹಾಗೆ ಕಮಲಾದೇವಿಗೆ ಭಾಸವಾಗುತ್ತಿತ್ತು!

1927ನೇ ಇಸವಿಯಲ್ಲಿ ಮದ್ರಾಸ್ ಅಧಿವೇಶನ ನಡೆದ ಸಂದರ್ಭದಲ್ಲಿ ಅವರನ್ನು ಸ್ವಯಂ ಸೇವಕಿಯರ ತಂಡದ ಮುಖಂಡರನ್ನಾಗಿ ನಿಯೋಜಿಸಲಾಗಿತ್ತು. ಆಗ ಅವರು ಕಪ್ಪು ಬಣ್ಣದ ಬದಲು ಕೇಸರಿ ವರ್ಣದ ಸೀರೆಯನ್ನು ಪ್ರಚಾರಕ್ಕೆ ತಂದರು. ಈ ದಳಕ್ಕೆ `ಆರೆಂಜ್ ಬ್ರಿಗೇಡ್` ಎನ್ನುವ ಹೆಸರು ಅದೇ ವರ್ಷ ಚಾಲನೆಗೆ ಬಂತು.

ನಂತರದ ವರ್ಷಗಳಲ್ಲಿ ಕಮಲಾದೇವಿ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದವರು ಮಾರ್ಗರೇಟ್ ಕಸಿನ್ಸ್ (ಗ್ರೆಟ್ಟಾ). ಐರ್ಲೆಂ ಡಿನಲ್ಲಿ ಹುಟ್ಟಿದ ಗ್ರೆಟ್ಟಾ (1878-1954) ಡಾ. ಆನಿ ಬೆಸೆಂಟರ ಹಾಗೆಯೇ ಥಿಯೊಸಾಫಿಕಲ್ ಸೊಸೈಟಿಯ ತತ್ವದಿಂದ ಆಕರ್ಷಿತರಾಗಿ ಭಾರತಕ್ಕೆ ಬಂದವರು. ಅವರು ಮತ್ತು ಅವರ ಪತಿ ಜೇಮ್ಸ ಕಸಿನ್ಸ್ ಅವರು ಭಾರತದಲ್ಲಿ ನಡೆಸಿದ ಸಾಮಾಜಿಕ ಸೇವೆ ಅಪಾರ.

ಒಂದು ದಿನ ಅವಸರದಲ್ಲಿ ಬಂದ ಗ್ರೆಟ್ಟಾ ಹೊಸ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳುವಂತೆ ಕಮಲಾದೇವಿಗೆ ಆಗ್ರಹಪಡಿಸ ತೊಡಗಿದರು. 1926ನೇ ಇಸವಿಯ ಕೊನೆಯಲ್ಲಿ ಮದ್ರಾಸ್ ಲೆಜಿಸ್ಲೆಟಿವ್ ಕೌನ್ಸಿಲ್ ಮಹಿಳೆಯರಿಗಾಗಿ ಒಂದು ಸ್ಥಾನವನ್ನು ಘೋಷಿಸಿತ್ತು. ರಾಜಕೀಯದಲ್ಲಿ ಪ್ರಾತಿನಿಧ್ಯ ಬೇಕೆಂದು ದೇಶದಾದ್ಯಂತ ಕೆಲವು ಮಹಿಳೆಯರು ಚಳವಳಿ ನಡೆಸುತ್ತಿದ್ದ ಸಂದರ್ಭವದು.

ಈ ಅನಿರೀಕ್ಷಿತ ಅವಕಾಶವನ್ನು ಬಿಟ್ಟುಬಿಡುವ ಹಾಗಿಲ್ಲ! ಕಮಲಾದೇವಿಗೆ ಈ ಹುದ್ದೆಯಲ್ಲಿ ಆಕರ್ಷಣೆ ಇರಲಿಲ್ಲ. ಆದರೆ ಗ್ರೆಟ್ಟಾ ಬಿಡಲಿಲ್ಲ! ಅಸೆಂಬ್ಲಿ ಸದಸ್ಯರಾಗುವವರಿಗೆ ಸ್ಥಳೀಯವಾಗಿ ಕೆಲವು ಆಸ್ತಿ ಇರುವುದು ಅವಶ್ಯಕವಾಗಿತ್ತು. ತ್ವರಿತವಾಗಿ ಸ್ವಲ್ಪ ಜಾಗವನ್ನು ಕೂಡಾ ಖರೀದಿ ಮಾಡಲಾಯಿತು.

ಸ್ವಯಂ ಸೇವಕರನ್ನು ಸ್ವತಃ ಗ್ರೆಟ್ಟಾ ಅವರೇ ತಯಾರು ಮಾಡಿದರು. ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ವ್ಯವಸ್ಥೆ ನಡೆಸಿದರು. ಪ್ರತಿ ದಿನ ಸಂಗೀತ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಹಿಳೆಯರು ನಡೆಸುತ್ತಿದ್ದ ಈ ಅಹೋರಾತ್ರಿಯ ಸದ್ದಿನಿಂದ ನಿದ್ದೆಯಲ್ಲಿದ್ದ ಮಂಗಳೂರು ನಗರ ಎದ್ದು ಕುಳಿತಿತ್ತು.

ಸುಂದರವಾಗಿ ವಿನ್ಯಾಸಗೊಳಿಸಿದ ನೀಲಿ ಬ್ಯಾಡ್ಜ್ ಧರಿಸಿದ ಸ್ವಯಂ ಸೇವಕಿಯರು ತಿರುಗಾಡುತ್ತಾ ಪ್ರಚಾರ ಮಾಡುವುದು ಹೊಸ ಸುದ್ದಿಯಾಗಿ ಬಿಟ್ಟಿತು. ಇಡೀ ದೇಶದಲ್ಲಿ ಅದೇ ಮೊದಲಬಾರಿಗೆ ಚಿಕ್ಕ ವಯಸ್ಸಿನ ಮಹಿಳೆಯೊಬ್ಬಳು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾಳೆ! ಆದರೆ ಕಮಲಾದೇವಿಗೆ ದೊರೆತ ಸಮಯ ಬಹಳ ಕಡಿಮೆ ಇತ್ತು.

ಅವರು ಬರೀ 51 ಮತಗಳಿಗೆ ಸೋತುಹೋದರು. ಈ ಸ್ಥಾನವನ್ನು ಪಡೆಯುವ ಆಸೆ ಕಮಲಾದೇವಿಗೆ ಇರಲಿಲ್ಲ. ಅವರು ಸ್ಪರ್ಧಾ ಕಣಕ್ಕೆ ಇಳಿಯಲು ಗ್ರೆಟ್ಟಾ ಅವರ ಆಗ್ರಹವೇ ಕಾರಣ. ಇದರಿಂದ ಗ್ರೆಟ್ಟಾಗೆ ಮಾತ್ರ ತುಂಬ ದುಃಖವಾಯಿತು. ಈ ಘಟನೆಯಿಂದ ಕಮಲಾದೇವಿಯಲ್ಲಿ ವ್ಯವಸ್ಥಿತ ಸಂಘಟನೆಯ ಲಾಭದ ಅರಿವು ಉಂಟಾಯಿತು.

ಸಕ್ರಿಯ ರಾಜಕಾರಣದಲ್ಲಿ ಅವರ ಸ್ಥಾನ ಮೇಲೇರಲು ಈ ಅಸೆಂಬ್ಲಿ ಚುನಾವಣೆ ಹಲವು ರೀತಿಯಿಂದ ಕಾರಣವಾಯಿತು. ಅವರನ್ನು ಕಾಂಗ್ರೆಸ್ ಪಕ್ಷ ಎ.ಐ.ಸಿ.ಸಿ. ಸದಸ್ಯರನ್ನಾಗಿ ಮಾಡಿತು. ಆಗಾಗ ದೆಹಲಿಗೆ ಹೋಗುವ ಸಂದರ್ಭ ಅವರಿಗೆ ಬರುತ್ತಿತ್ತು. ಆಗ ನಡೆದ ಒಂದು ಐತಿಹಾಸಿಕ ಘಟನೆಗೆ ಪ್ರತ್ಯಕ್ಷದರ್ಶಿಯಾಗುವ ಅವಕಾಶ ಕಮಲಾದೇವಿಗೆ ದೊರೆಯಿತು.  1929ರ ಏಪ್ರಿಲ್ 8ನೇ ತಾರೀಖು. ಅಂದು ಸೆಂಟ್ರಲ್ ಅಸೆಂಬ್ಲಿಯಲ್ಲಿ `ಸಾರ್ವಜನಿಕ ಸುರಕ್ಷತಾ ಮಸೂದೆ` (ಪಬ್ಲಿಕ್ ಸೇಫ್ಟಿ ಬಿಲ್) ಕುರಿತು ಚರ್ಚೆ ನಡೆಯುವುದಿತ್ತು.

ಕಮಲಾದೇವಿ ಸಭಾ ಕಲಾಪವನ್ನು ಮುಕ್ತವಾಗಿ ವೀಕ್ಷಿಸುವ ಅವಕಾಶವಿದ್ದ ಪ್ರೇಕ್ಷಕರ ಗ್ಯಾಲರಿಗೆ ಬಂದು ಆಸೀನರಾದರು. ಅವರ ಮುಂದೆ ಅತ್ಯಂತ ಸ್ಫುರದ್ರೂಪಿ ಆಕರ್ಷಕ ವ್ಯಕ್ತಿಯೊಬ್ಬ ಕುಳಿತಿದ್ದ. ಆತನಿಗೆ ಅಸೆಂಬ್ಲಿಯಲ್ಲಿ ನಡೆಯುತ್ತಿದ್ದ ಚರ್ಚೆಯ ಕಡೆಗೆ ಗಮನವಿರಲಿಲ್ಲ. ಯಾವುದಕ್ಕೋ ಕಾಯುತ್ತಾ ಆತ ಚಡಪಡಿಸುತ್ತಿರುವುದು ಕಮಲಾದೇವಿ ಗಮನಕ್ಕೆ ಬಂತು.

ಕ್ಷಣಮಾತ್ರದಲ್ಲಿ ಢಂ! ಎನ್ನುವ ದೊಡ್ಡ ಸದ್ದು ಉಂಟಾಯಿತು! ಅಸೆಂಬ್ಲಿ ಹಾಲಿನಿಂದ ಹೊಗೆ ಬರಲಾರಂಭಿಸಿತು. ಅಲ್ಲಿದ್ದ ಆಕರ್ಷಕ ವ್ಯಕ್ತಿ ಬೇರೆ ಯಾರೂ ಅಲ್ಲ. ಸರದಾರ್ ಭಗತ್‌ಸಿಂಗ್ ಆಗಿದ್ದನು! ಅದು ಅವನು ಎಸೆದ ಬಾಂಬ್ ಆಗಿತ್ತು! ಬಾಂಬ್ ದಾಳಿಯಿಂದ ಆಗಿನ ಅರ್ಥಮಂತ್ರಿ, ಕಾರ್ಯದರ್ಶಿ ಮತ್ತು ಮೂರು ಸದಸ್ಯರಿಗೆ ಗಾಯಗಳಾದವು. ಅಸೆಂಬ್ಲಿ ಹಾಲಿನಲ್ಲಿದ್ದ ಪೀಠೋಪಕರಣಗಳು ನುಚ್ಚುನೂರಾದವು.

ಇದ್ದಕ್ಕಿದ್ದಂತೆ ಸುರಕ್ಷತಾ ಸಿಬ್ಬಂದಿ ಮತ್ತು ಪೊಲೀಸರು ಪ್ರತ್ಯಕ್ಷರಾದರು. ಅಸೆಂಬ್ಲಿಯ ಎಲ್ಲಾ ಮುಖ್ಯದ್ವಾರಗಳನ್ನೂ ಮುಚ್ಚಿಬಿಡಲಾಯಿತು. ಯಾರಿಗೂ ಹೊರಗೆ ಹೋಗಲು ಬಿಡಲಿಲ್ಲ. ಪ್ರವೇಶ ಪತ್ರವಿಲ್ಲದ ಕಮಲಾದೇವಿಯನ್ನು ಒಂದೆಡೆ ನಿಲ್ಲಿಸಲಾಯಿತು. ಪುಣ್ಯವಶಾತ್ ಅವರನ್ನು ಕರೆತಂದ ವಾಹನ ಚಾಲಕ ಹೊರಗೆ ಇದ್ದನು.

ಅವನು ತಕ್ಷಣ ಹೋಗಿ ತನ್ನ ಮಾಲೀಕರಾದ ಡಾ. ಜಯಕರ ಅವರ (ಅಸೆಂಬ್ಲಿ ಸದಸ್ಯರ) ಪತ್ರ ತರುವ ಪ್ರಸಂಗಾವಧಾನ ತೋರಿಸಿದನು. `ಈ ಮಹಿಳೆ ಸ್ವಯಂ ಸೇವಕಿ, ಕ್ರಾಂತಿಕಾರಿಯಲ್ಲ. ಅವರ ವರ್ತನೆಗೆ ನಾನು ಜಾಮೀನು ನಿಲ್ಲುತ್ತೇನೆ` ಎಂಬ ಆಶ್ವಾಸನೆ ಆ ಪತ್ರದಲ್ಲಿ ಇತ್ತು.

ನ್ಯಾಯವಾಗಿ ನೋಡುವುದಾದರೆ, ಅಧಿಕೃತ ಪರವಾನಗಿ ಇಲ್ಲದೆ ಒಳಬಂದು ಬಾಂಬ್ ಎಸೆದ ವಿದ್ರೋಹಿಯ ಹತ್ತಿರ ಕುಳಿತ ವ್ಯಕ್ತಿಯಲ್ಲಿ ವಿಶ್ವಾಸ ತೋರಿಸುವುದು ಹೇಗೆ ಅವರು ಕಮಲಾದೇವಿಯನ್ನು ಕಾರಾಗೃಹಕ್ಕೆ ಕಳುಹಿಸುವವರಿದ್ದರು! ಬಾಂಬ್ ಎಸೆದು ಓಡಿ ಹೋಗದ ಭಗತ್‌ಸಿಂಗ್ ಬಂಧಿತನಾದ! ಆತನ ಅಸೀಮ ಧೈರ್ಯ ಮತ್ತು ತ್ಯಾಗ, ಹಾಗೂ ತನ್ನ ಅಧೈರ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದರು ಕಮಲಾದೇವಿ.

ಭಗತ್‌ಸಿಂಗನಿಗೆ ಗಲ್ಲು ಶಿಕ್ಷೆಯಾಯಿತು. ಭಗತ್‌ಸಿಂಗನ ಮೇಲೆ ಸಾಂಡರ್ಸ್ ಎಂಬ ಪೊಲೀಸ್ ಅಧಿಕಾರಿಯ ಕೊಲೆ ಆರೋಪವಿತ್ತು. ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ಆಪಾದನೆ ಇತ್ತು. ಕಮಲಾದೇವಿಯ ದೃಷ್ಟಿಯಲ್ಲಿ ಭಗತ್‌ಸಿಂಗ್ ಒಬ್ಬ ವಿಚಾರಶೀಲ ಕ್ರಾಂತಿಕಾರಿ. ಹಾಗಾಗಿ ಅವನಿಗೆ ಮರಣ ಶಿಕ್ಷೆ ವಿಧಿಸಬಾರದೆಂಬ ಭಾವನೆ ಅವರದ್ದಾಗಿತ್ತು.

ನಂಬಲಾಗದ ಅನೇಕ ಅಪರಾಧಗಳು ಅವನ ಹೆಸರಿನಲ್ಲಿ ದಾಖಲಾಗಿದ್ದವು. ಆಫ್ಘಾನಿಸ್ತಾನದ ಅಮೀರನ ಜೊತೆ ಶಾಮೀಲಾಗಿ ಬ್ರಿಟಿಷರನ್ನು ಕೆಳಗಿಳಿಸುವ ಕಾರಸ್ಥಾನವನ್ನು ಅವನು ಮಾಡಿದ್ದಾನೆ ಎನ್ನುವ ಘೋರ ಅಪರಾಧದ ಸುದ್ದಿ ಲಂಡನ್ನಿನ ಪತ್ರಿಕೆಯಲ್ಲಿ ಕೂಡಾ ಪ್ರಕಟವಾಗಿತ್ತು. ಪತ್ರಿಕೆಯ ವಿರುದ್ಧ ಕಮಲಾದೇವಿ ಮತ್ತು ಇತರರು ನೀಡಿದ ನೋಟೀಸು ಅವರಿಗೆ ತಲುಪದಂತೆ ಸರ್ಕಾರ ವ್ಯವಸ್ಥೆ ಮಾಡಿತ್ತು!

ಸ್ವಾತಂತ್ರ್ಯ ಚಳವಳಿಯಲ್ಲಿ ದೇಶಕ್ಕಾಗಿ ಜೀವತೆತ್ತ ಹುತಾತ್ಮರು, ಮತ್ತೆ ಮತ್ತೆ ಕಾರಾಗೃಹಕ್ಕೆ ತೆರಳಿ ಭವಿಷ್ಯದ ಚಿಂತನೆ ನಡೆಸದೆ ಕಷ್ಟ ಅನುಭವಿಸಿದ ಸಾವಿರಾರು ಜನರನ್ನು ಕಂಡಿದ್ದೇವೆ. ಆದರೆ ಸ್ವಲ್ಪ ಕಾಲ ಮಾತ್ರ ಚಳವಳಿಯಲ್ಲಿ ಇದ್ದರೂ ಅದರಲ್ಲಿಯೇ ಇದ್ದಂತೆ ತೋರಿಸಿಕೊಳ್ಳುತ್ತಾ, `ತ್ಯಾಗಿ`, `ಸ್ವಾತಂತ್ರ್ಯಯೋಧ` ಎಂದು ಯಾವುದಾದರೂ ಪ್ರಮಾಣಪತ್ರವನ್ನು ತಂದು ನಿವೃತ್ತಿ ವೇತನ, ನಿವೇಶನ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿನಲ್ಲಿ ಸೀಟು, ಉದ್ಯೋಗ ಗಿಟ್ಟಿಸಿದವರೂ ಸಾವಿರಾರು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ!

ಅರವತ್ತರ ನಂತರದ ಎರಡು ದಶಕಗಳಲ್ಲಿ ಈ ರೀತಿಯ ಜನರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಕರ್ನಾಟಕದಲ್ಲಿ ಇಂದು ಮೈಸೂರು ಸಂಸ್ಥಾನದ ತ್ಯಾಗಿ ಜನರ ಸಂಖ್ಯೆ ಮತ್ತು ಹೆಸರು ನೋಡಿದರೆ, ಈ ಸತ್ಯಾಂಶ ತಿಳಿಯುತ್ತದೆ!

ಕಮಲಾದೇವಿ ಸ್ವಾತಂತ್ರ್ಯ ಚಳವಳಿಯ ಪ್ರಥಮ ಶ್ರೇಣಿಯ ಯೋಧರಾಗಿದ್ದವರು. ನಾಲ್ಕು ಬಾರಿ ಜೈಲಿಗೆ ಹೋದವರು. ಅವರ ಜೈಲು ವಾಸದ ಅವಧಿ ಕೂಡಾ ದೀರ್ಘ ಮತ್ತು ಶ್ರಮದಾಯಕವಾಗಿತ್ತು. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಬದುಕು ಹಾಳಾಯಿತು. ಇದ್ದ ಒಬ್ಬನೇ ಮಗನನ್ನು ಬಿಟ್ಟು ಅವರು ಜೈಲಿಗೆ ಹೋಗಬೇಕಾಯಿತು. ಸ್ವಾತಂತ್ರ್ಯ ಯೋಧರಿಗೆ ತಾನಾಗಿ ಬಂದ ಅಧಿಕಾರ ಮತ್ತು ಪ್ರತಿಷ್ಠೆಯ ಹುದ್ದೆಯನ್ನು ಅವರು ಬೇಡವೆಂದು ಬಿಟ್ಟಿದ್ದರಿಂದ ನಮ್ಮ ಸ್ವಾತಂತ್ರ್ಯ ಚಳವಳಿಯ ಪೂರ್ವೋತ್ತರ ಸ್ವರೂಪ ನಮಗೆ ತಿಳಿಯುತ್ತದೆ.

ಕಮಲಾದೇವಿಯವರನ್ನು ನಾಲ್ಕು ಬಾರಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಈ ಅವಧಿಯ ಜೈಲುವಾಸದ ಅವರ ಅನುಭವ ಬೇರೆ ಬೇರೆ ರೀತಿಯದ್ದಾಗಿತ್ತು. ಆಗಿನ ಕಾರಾಗೃಹವೆಂದರೆ ಕೊಲೆ, ದರೋಡೆ, ಹಾಗೂ ದೊಡ್ಡ ಅಪರಾಧವೆಸಗಿದ ಜನರನ್ನು ಒಟ್ಟುಗೂಡಿಸಿ ಹಾಕುತ್ತಿದ್ದ ಕೊಳಕು ಕೊಟ್ಟಿಗೆಯಾಗಿತ್ತು. ಸಂಡಾಸು, ಬಚ್ಚಲುಮನೆಯ ಸೌಕರ್ಯ ಕೂಡಾ ಸರಿಯಾಗಿ ಇರುತ್ತಿರಲಿಲ್ಲ. ಅನಾರೋಗ್ಯಕರ ವಾತಾವರಣ. ಜೈಲಿನ ಸಮವಸ್ತ್ರ, ಊಟ ತಿಂಡಿ ಈ ಕುರಿತು ಬರೆದಷ್ಟೂ ಕಡಿಮೆಯೇ!

ಉಪ್ಪಿನ ಸತ್ಯಾಗ್ರಹದಲ್ಲಿ ಬಂಧಿಯಾದ ಪ್ರಪ್ರಥಮ ಮಹಿಳೆ ಕಮಲಾದೇವಿ. 1930, ಏಪ್ರಿಲ್ 17 ರಂದು ಸಂಜೆ ರಸ್ತೆಯಲ್ಲಿ ಪಿಕೆಟಿಂಗ್ ಮಾಡುವಾಗ ಅವರ ಬಂಧನವಾಯಿತು. ಇಲ್ಲಿಂದ ಅವರನ್ನು ಆರ್ಥರ್ ರಸ್ತೆಯಲ್ಲಿದ್ದ ಮಹಿಳಾ ಕಾರಾಗೃಹಕ್ಕೆ ಕೊಂಡೊಯ್ಯಲಾಯಿತು. ಸಂಜೆ ಹೊತ್ತು ಹೊರಗೆ ಬೆಳಕಿದ್ದರೂ, ಕಿಟಕಿ ಇಲ್ಲದ್ದರಿಂದ ಜೈಲಿನೊಳಗೆ ಅಂಧಕಾರವಿತ್ತು.

ದುರ್ಗಂಧ ವ್ಯಾಪಕವಾಗಿ ಹರಡಿಕೊಂಡಿತ್ತು. ದೃಷ್ಟಿ ನಿಚ್ಚಳವಾದ ನಂತರ ಅಲ್ಲಲ್ಲಿ ಹೆಂಗಸರು ಬೋರಲು ಮಲಗಿದ್ದು ಕಮಲಾದೇವಿಯ ಕಣ್ಣಿಗೆ ಕಾಣಿಸಿತು! ಅಲ್ಲಿ ಎಲ್ಲಾ ವಯಸ್ಸಿನ ಹೆಂಗಸರಿದ್ದರೂ ಬೇರೆ ಬೇರೆ ಉಡುಪು ತೊಟ್ಟವರು. ಕೆಲವರದು ರಂಗುರಂಗಾದ ಹೊಳೆವ ಉಡುಪು. ಉಳಿದವರದು ಚಿಂದಿ.

ಕಮಲಾದೇವಿಯ ಪ್ರವೇಶ ಅವರಲ್ಲಿ ಯಾವ ಬದಲಾವಣೆಯನ್ನು ಕೂಡಾ ತರಲಿಲ್ಲ! ದಿನವಿಡೀ ಹೆಂಗಸರನ್ನು ಕರೆತರುವುದು, ಬೀಗದ ಬಾಗಿಲನ್ನು ತೆರೆಯುವುದು ಒಳಗೆ ಹಾಕುವುದು, ಮತ್ತೆ ದೊಡ್ಡ ದೊಡ್ಡ ಬೀಗಗಳನ್ನು ಜಡಿಯುವುದು ನಡೆದೇ ಇತ್ತು. ಅವರಿಗೆ ಅದು ರೂಢಿಯಾಗಿ ಹೋಗಿತ್ತು.

ಕಮಲಾದೇವಿಯವರು ಅಲ್ಲಿದ್ದ ಟ್ರಂಕಿನ ಮೇಲೆ ಕುಳಿತು ರಾತ್ರಿ ಕಳೆದರು.  ಮೇಲೆ ಕಾಯಂ ಬಿಡಾರ ಹೂಡಿದ್ದ ಬಾವಲಿಯ ಹಿಂಡು ರೆಕ್ಕೆ ಬಡಿಯುತ್ತಾ ಹಾರತೊಡಗಿದಾಗ ದುರ್ಗಂಧ ಇನ್ನೂ ಹೆಚ್ಚಾಯಿತು.

ಕಮಲಾ ದೇವಿಯವರನ್ನು ರಾಜಕೀಯ ಕೈದಿಯಾಗಿ ಇಲ್ಲಿ ಕರೆತಂದದ್ದು ಜೈಲರ್ ಮತ್ತು ಅಲ್ಲಿಯ ಪೊಲೀಸರಿಗೆ ಕೂಡಾ ಕೆಟ್ಟದೆನಿಸಿತು! ಮೂರು ದಿನಗಳ ನಂತರ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಅಲ್ಲಿ ಅವರ ಅಪರಾಧ ಸಾಬೀತಾಯಿತು. 9 ತಿಂಗಳು, 15 ದಿನಗಳ ಜೈಲು ಶಿಕ್ಷೆಯನ್ನು ಘೋಷಿಸಲಾಯಿತು.

ಕೈದಿಗಳಿಗೆ ಜೈಲಿನ ಸಮವಸ್ತ್ರ ಕಡ್ಡಾಯ. ಆದರೆ ಒಳ ಉಡುಪು ಧರಿಸುವಂತಿಲ್ಲ. ಮೊಕದ್ದಮೆ ನಡೆಯುತ್ತಿದ್ದವರಿಗೆ ಮಾತ್ರ ಸ್ವಂತ ಉಡುಪನ್ನು ಧರಿಸುವುದಕ್ಕೆ ಅನುಮತಿ ಇತ್ತು. ಶಿಕ್ಷೆಯಾದ ಮೇಲೆ ಜೈಲಿನ ಉಡುಪು ಧರಿಸಲು ಕಮಲಾದೇವಿ ವಿರೋಧ ವ್ಯಕ್ತಪಡಿಸಿದರು. (ಅಲ್ಲಿ ನಾನಾ ವಿಧದ ರೋಗಿಗಳಿದ್ದರು. ಸ್ವಚ್ಛತೆಯ ಕುರುಹು ಕೂಡಾ ಇರಲಿಲ್ಲ) ಅವರು ಅರ್ಜಿ ನೀಡಿದರು.

ಕೆಲವೇ ದಿನಗಳಲ್ಲಿ ಅವರನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಮೀರಾಬೆನ್‌ರನ್ನು ಭೇಟಿಯಾದರು. ಮೀರಾಬೆನ್ ಬ್ರಿಟಿಷ್ ಮಹಿಳೆ, ಮೆಡಲಿನ್ ಸ್ಲೆಡ್ ಅವರ ಪೂರ್ವಾಶ್ರಮದ ಹೆಸರು, ಗಾಂಧೀಜಿಯ ಆಪ್ತವಲಯದ ಸದಸ್ಯರಾಗಿದ್ದ ಅವರು ಕೂಡಾ ಚಳವಳಿಯಲ್ಲಿ ಭಾಗಿಯಾಗಿ ಬಂಧಿತರಾಗಿದ್ದರು. ಗಾಂಧೀಜಿ ಅವರಿಗೆ ಮೀರಾ ಎಂಬ ಹೆಸರನ್ನು ನೀಡಿದ್ದರಿಂದ ಎಲ್ಲರಿಗೂ ಅವರು ಮೀರಾಬೆನ್ ಆಗಿದ್ದರು.

ಕಮಲಾದೇವಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಜೈಲಿನ ಕಟು ಅನುಭವವನ್ನು ಬರೆದಿಲ್ಲ. ಆದರೆ ಮೀರಾಬೆನ್ ತಮ್ಮ ಆತ್ಮವೃತ್ತಾಂತ `ದಿ ಸ್ಪಿರಿಟ್ಸ್ ಪಿಲ್‌ಗ್ರಿಮೇಜ್`ನಲ್ಲಿ ಕಮಲಾದೇವಿ ಜೈಲಿಗೆ ಬಂದು ಕೆಲವು ದಿನಗಳನ್ನು ಕಳೆದುದರ ಬಗ್ಗೆ ಸುಂದರವಾದ ವರದಿ ನೀಡಿದ್ದಾರೆ.

`ಒಂದು ದಿನ ಸೋಶಿಯಲಿಸ್ಟ್ ಮುಖಂಡರಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರನ್ನು ಜೈಲಿಗೆ ಕರೆತರಲಾಯಿತು.

ಅವರು ಕಲಾತ್ಮಕ ಸೌಂದರ್ಯದ ಪ್ರತಿರೂಪವಾಗಿದ್ದರು. ರಾತ್ರಿ ಅವರನ್ನು `ಸಿ` ದರ್ಜೆಯ ಬೆಯಾರಕ್‌ನಲ್ಲಿ ಹಾಕಲಾಯಿತು. ನಂತರ ನಾವಿಬ್ಬರೂ ಕೂಡಿ ಜೈಲುವಾಸಿ ಮಹಿಳೆಯರ ಅನಾರೋಗ್ಯಕ್ಕೆ ಕಾರಣವಾಗಿದ್ದ ಆಡಳಿತದ ವಿರುದ್ಧ ನಿವೇದನಾ ಪತ್ರವೊಂದನ್ನು ತಯಾರಿಸಿದೆವು. ಅದನ್ನು ಹಿಡಿದು ಸೂಪರಿಂಟೆಂಡೆಂಟ್ ಅವರ ಬಳಿ ಹೋದರೆ, ಅವರು `ಸುಮ್ಮನಿರಿ!` ಎಂದು ಹೇಳಿ ನಮ್ಮನ್ನು ವಾಪಸು ಕಳುಹಿಸಿದರು.

ನಾವು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಕೆಲವೇ ದಿನಗಳಲ್ಲಿ ಕಮಲಾದೇವಿಯನ್ನು ಅಲ್ಲಿಯ ಬೇರೆ ಬೆಯಾರಕಿಗೆ ಹಾಕಿದರು. ಅದು `ಬಿ` ದರ್ಜೆ ಎಂದು ಕರೆಸಿಕೊಳ್ಳುತ್ತಿತ್ತು! ಎಲ್ಲಾ ಬೆಯಾರಕಿಗೂ ಅಂಗಳ ಒಂದೇ ಇದ್ದುದರಿಂದ ಕಮಲಾದೇವಿ ಎಲ್ಲಾ ಮಹಿಳಾ ಕೈದಿಗಳನ್ನೂ ಭೇಟಿಯಾಗುತ್ತಿದ್ದರು.`

ಒಂದು ದಿನ ಕಮಲಾದೇವಿಯವರು ಕಾಂಪೌಂಡಿನ ಗಿಡದಲ್ಲಿ ಅರಳಿದ್ದ ಕೆಂಪು ಹೂವನ್ನು ಕಿತ್ತು ತನ್ನ ಅಚ್ಚ ಕಪ್ಪು ಕೂದಲಲ್ಲಿ ಮುಡಿದುಕೊಂಡರು. ಸಂಜೆ ಮೇಟ್ರನ್ ಬಂದಾಗ ಅದನ್ನು ನೋಡಿದರು. ಹೂ ಕಿತ್ತು ಮುಡಿಯುವ ಹಾಗಿಲ್ಲ ಎಂದು ತಾಕೀತು ಮಾಡಿದರು. ಮರುದಿನ, ನಿಮ್ಮ ಒಗೆದ ಬಟ್ಟೆಯನ್ನು ಹೊರಗೆ ಒಣಗಿಸುವ ಹಾಗಿಲ್ಲ, ಕಿಟಕಿ ಬಳಿಯಂತೂ ಕಡ್ಡಾಯವಾಗಿ ಹಾಕುವಂತಿಲ್ಲ ಎಂದು ಆಜ್ಞೆ ಹೊರಡಿಸಿದರು. ಇದು ಆ ಕಾಲದ ರಾಜಕೀಯಕೈದಿಗಳ ಅವಸ್ಥೆ!

ಕೃಪೆ: ಪ್ರಜಾವಾಣಿ

Tag: Kamaladevi Chattopadhyaya

ಕಾಮೆಂಟ್‌ಗಳಿಲ್ಲ: