ಸೋಮವಾರ, ಸೆಪ್ಟೆಂಬರ್ 2, 2013

ಕ್ಷೀರ ಪಿತಾಮಹ ವರ್ಗಿಸ್ ಕುರಿಯನ್

ಕ್ಷೀರ ಪಿತಾಮಹ ವರ್ಗಿಸ್ ಕುರಿಯನ್

ಭಾರತದ ಹಾಲಿನ ಮನುಷ್ಯ ಎಂದೇ ಪ್ರಖ್ಯಾತರಾಗಿರುವವರು ಕ್ಷೀರಪಿತಾಮಹ ವರ್ಗಿಸ್ ಕುರಿಯನ್. ಶ್ವೇತ ಕ್ರಾಂತಿ’, ‘ಕ್ಷೀರ ಕ್ರಾಂತಿ’, ‘ಆಪರೇಷನ್ ಫ್ಲಡ್ಮುಂತಾದ ಪ್ರಖ್ಯಾತ ಹೆಸರುಗಳಿಂದ ಗುರುತಿಸಲ್ಪಡುವ ಪ್ರಪಂಚದಲ್ಲೇ ಬೃಹತ್ ಡೈರಿ ಅಭಿವೃದ್ಧಿ ಕಾರ್ಯ ಸಂಯೋಜನೆಯಾದ ಗುಜರಾತ್ ಹಾಲು ಉತ್ಪಾದಕರ ಒಕ್ಕೂಟವನ್ನು ನಿರ್ಮಿಸಿ ಹಾಲಿನ ಹೊಳೆಯನ್ನೇ ಹರಿಸಿದ ಹಾಲಿನ ಮನುಷ್ಯ’  ಡಾ. ವರ್ಗಿಸ್ ಕುರಿಯನ್.  ಅಮುಲ್ಎಂಬುದು ಇಂದು ವಿಶ್ವದಲ್ಲೇ ಜನಪ್ರಿಯವಾದ ಹೆಸರು.  ಆ ಹೆಸರಿನ ಹಿಂದಿರುವ ತಾರೆ ಈ ಕುರಿಯನ್.

ವರ್ಗಿಸ್ ಕುರಿಯನ್ ಅವರು ನವೆಂಬರ್ 26, 1921ರಲ್ಲಿ ಕೇರಳದ ಕೊಯಿಕೋಡಿನಲ್ಲಿ ಜನಿಸಿದರು. ಅವರು ಮದ್ರಾಸಿನಲ್ಲಿ ಭೌತಶಾಸ್ತ್ರವನ್ನು ಅಭ್ಯಸಿಸಿ ಪದವೀಧರರಾಗುವುದರ ಜೊತೆಗೆ ಬಿ.ಇ ಮೆಕ್ಯಾನಿಕಲ್ ಇಂಜಿನಿಯರ್  ಆದರು.  ಅಮೆರಿಕದಲ್ಲಿ ಸ್ನಾತಕೋತ್ತರ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಜಮಷೆಡಪುರದಲ್ಲಿ ಟಾಟಾ ಸಂಸ್ಥೆಯಲ್ಲಿಯೂ ನಂತರದಲ್ಲಿ ಬೆಂಗಳೂರಿನ ಡೈರಿ ಸಂಶೋಧನಾ ಸಂಸ್ಥೆಯಲ್ಲಿಯೂ ತರಬೇತಿ ಗಳಿಸಿದರು.  

ಅಮೆರಿಕದಿಂದ 1948ರಲ್ಲಿ ಭಾರತಕ್ಕೆ ಹಿಂದಿರುಗಿದ ವರ್ಗಿಸ್ ಕುರಿಯನ್ನರು ಸರ್ಕಾರಿ ಸೇವೆಗೆ ಸೇರಿ ಆನಂದ್ ನಗರದಲ್ಲಿದ್ದ  ಹಾಲಿನ ಪೌಡರ್ ಉತ್ಪಾದಿಸುವ ಸಣ್ಣ ಘಟಕವೊಂದರಲ್ಲಿ ತಂತ್ರಜ್ಞರಾಗಿ ಕೆಲಸಕ್ಕೆ ಸೇರಿದರು.  ಇದೇ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದನಾ ಸಂಘಟನೆಯು ತನ್ನ ಉಳಿಗಾಲಕ್ಕಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿದ ಕುರಿಯನ್ನರು,  ಸರ್ಕಾರಿ ಸೇವೆಯನ್ನು ತ್ಯಜಿಸಿ ಆ ಸಂಸ್ಥೆಗೆ ಜೀವ ತುಂಬಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು.  ವರ್ಗಿಸ್ ಕುರಿಯನ್ನರ ಈ ಸಾಹಸ ಅಮುಲ್ಎಂಬ ಹೊಸ ಚರಿತ್ರೆಗೆ ನಾಂದಿಹಾಡಿತು.

ಗುಜರಾತ್ ಹಾಲಿನ ಒಕ್ಕೂಟದ ಯಶಸ್ಸು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಪ್ರೇರೇಪಿಸಿ ಡಾ. ವರ್ಗಿಸ್ ಕುರಿಯನ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸುವಂತೆ ಮಾಡಿತು.  ಹೀಗೆ  1965ರ ವರ್ಷದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ರಾಷ್ತ್ರೀಯ ಹಾಲು ಉತ್ಪಾದನಾ ನಿಗಮಕ್ಕೆ ಅಧ್ಯಕ್ಷರೆಂದು ನೇಮಿಸಲ್ಪಟ್ಟ ವರ್ಗಿಸ್ ಕುರಿಯನ್ನರು ಮುಂದೆ 1973ರಲ್ಲಿ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಸ್ಥಾಪಿಸಿ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಮರ್ಥವಾಗಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದರು.  ಹೀಗೆ ವರ್ಗಿಸ್ ಕುರಿಯನ್ನರು ಭಾರತವನ್ನು ಅತ್ಯಂತ ಬ್ರಹತ್ ಹಾಲು ಉತ್ಪಾದನಾ ದೇಶವನ್ನಾಗಿ ಮಾಡಿದರು.  

ಅತ್ಯಂತ ಕುಶಲ ಹಾಗೂ  ಶ್ರಮಭರಿತ ದುಡಿಮೆಗೆ ಹೆಸರಾದ ವರ್ಗಿಸ್ ಕುರಿಯನ್ನರು ಯಾವುದೇ ಪ್ರತೀಕೂಲ ಪರಿಸ್ಥಿತಿ ಇದ್ದಾಗ್ಯೂ ಹೇಗೆ ಒಬ್ಬ ವ್ಯಕ್ತಿ ಇಡೀ ಸಮಾಜಕ್ಕೆ ದೇಶಕ್ಕೆ  ದಾರಿ ದೀಪವಾಗಬಹುದು ಎಂಬುದನ್ನು ಭಾರತೀಯ ಸಮಾಜದಲ್ಲಿ  ಸಮರ್ಥವಾಗಿ ಪ್ರತಿಬಿಂಬಿಸಿದ್ದು, ಭಾರತೀಯ ಗ್ರಾಮೀಣ ಅಭಿವೃದ್ಧಿಯ ಆಸಕ್ತಿಯುಳ್ಳ ಹಲವಾರು ಸಂಘಟನೆಗಳ ನೇತಾರರು ಮಾರ್ಗದರ್ಶಕರು ಕೊಡಾ ಆಗಿದ್ದರು.

ವಿಶ್ವ ಆಹಾರ ಪ್ರಶಸ್ತಿ, ಮ್ಯಾಗ್ಸೇಸೆ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕೃಷಿರತ್ನ ಪ್ರಶಸ್ತಿಗಳು, ಹಲವು ವಿಶ್ವ ವಿದ್ಯಾಲಯದ ಡಾಕ್ಟರೇಟ್, ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಇವೆಲ್ಲವನ್ನೂ ಮೀರಿದ ಜನಪ್ರಿಯತೆ, ಜನನಂಬುಗೆ ಕುರಿಯನ್ ಅವರನ್ನು ಅರಸಿ ಬಂದಿದವು.  ಶ್ಯಾಮ್ ಬೆನಗಲ್ ಅವರ ಮಂಥನ್ಅಂತಹ ಸುಂದರ ಚಿತ್ರಗಳು ಸಹಾ ವರ್ಗಿಸ್ ಕುರಿಯನ್ನರ ಕಾಯಕದ ಪ್ರೇರಣೆ ಹೊಂದಿವೆ.  ಅವರ ಕುರಿತ ಆಡಿಯೋ ಪುಸ್ತಕವಾದ  ‘The man who made elephant dance’ ಕೃತಿಯನ್ನು   ಬಿಡುಗಡೆ ಮಾಡಿದ ಸಮಯದಲ್ಲಿ ಎನ್ ಆರ್ ನಾರಾಯಣ ಮೂರ್ತಿ ನುಡಿದರು:  ವರ್ಗಿಸ್ ಕುರಿಯನ್ ಅವರಿಗಿಂತ ಭಾರತ ರತ್ನ ಪ್ರಶಸ್ತಿಗೆ ಮತ್ತ್ಯಾರು ತಾನೇ ಅರ್ಹರಿರಲು ಸಾಧ್ಯ.  ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ನಮಿಸದಿರುವುದು  ದುರದೃಷ್ಟಕರಎಂದು ನುಡಿದಿದ್ದರು.  ಈ ಕೃತಿ ವರ್ಗಿಸ್ ಕುರಿಯನ್ ಅವರ 'I too had a dream' ಅನ್ನು ಆಧರಿಸಿದೆ.

ಈ ಮಹಾನ್ ಸಾಧಕರಾದ ಡಾ. ವರ್ಗಿಸ್ ಕುರಿಯನ್ ಅವರು ಸೆಪ್ಟೆಂಬರ್ 9, 2012ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Varghese Kurian

ಕಾಮೆಂಟ್‌ಗಳಿಲ್ಲ: