ಸೋಮವಾರ, ಸೆಪ್ಟೆಂಬರ್ 2, 2013

ವೀರೇಂದ್ರ ಸೆಹವಾಗ್

ವೀರೇಂದ್ರ ಸೆಹವಾಗ್

ಒಂದು ಕಾಲದಲ್ಲಿ ನಮಗೆ ಕ್ರಿಕೆಟ್ಟಿಗರೆಂದರೆ ರಣಜೀ ಪಂದ್ಯಗಳನ್ನು ಮಾತ್ರ ಆಡುತ್ತಿದ್ದ ಮಾಜಿ ಆಟಗಾರರೂ ನೆನಪಿರುತ್ತಿದ್ದರು.  ಇಂದು ದಿನನಿತ್ಯ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳಾಗುವುದರಿಂದ ಚಲಾವಣೆಯಲ್ಲಿರುವವರಿಗಷ್ಟೇ ಪ್ರಚಾರ.  ಕೆಲವೇ ವರ್ಷಗಳ ಹಿಂದೆ ಇಡೀ ಕ್ರಿಕೆಟ್ ವಿಶ್ವವನ್ನೇ ಅಚ್ಚರಿಯಲ್ಲಿ ತೇಲಿಸಿದ್ದ ವೀರೇಂದ್ರ ಸೆಹವಾಗ್ ಅಂತಹ ಅಪ್ರತಿಮ ಆಟಗಾರನೂ   ಸದ್ಯಕ್ಕೆ ಇಂದಿನ ಈ ಪ್ರಚಾರಯುಗದಲ್ಲಿ ಮಸಕಾಗಿದ್ದಾರೆ.

ಕ್ರಿಕೆಟ್ ಕ್ರೀಡೆಗೆ ಹೊಸ ಭಾಷ್ಯ ಬರೆದ ವೀರೇಂದ್ರ ಸೆಹವಾಗ್ ಅವರು ಹುಟ್ಟಿದ್ದು ಅಕ್ಟೋಬರ್ 20, 1978ರಂದುನಮ್ಮ ಪೌರಾಣಿಕ ಕಲ್ಪನೆಯ ಭೀಮನ ಕಾಯ ಈತನಿಗಿಲ್ಲವಾದರೂ ಆತನ ಬ್ಯಾಟಿಂಗ್ ಸಂಕಲ್ಪ ಮಾತ್ರ ಭೀಮನ ಗದಾಸಂಕಲ್ಪದ್ದೇ.  ಆತನ ಬ್ಯಾಟಿಂಗ್ ಬಿರುಸು, ಅದರಲ್ಲಿನ ಆತ್ಮವಿಶ್ವಾಸ, ಕೈಚೆಳಕ ಅಪೂರ್ವವಾದದ್ದು.  ಟೆಸ್ಟ್ ಕ್ರಿಕೆಟ್ ಆಟದಲ್ಲಿ ತ್ರಿಶಕವನ್ನು ಭಾರಿಸಿದಾಗಲೂ ಆತ ಎದುರಿಸಿದ್ದ ಚೆಂಡುಗಳು ಕೇವಲ 278.  ಟೆಸ್ಟ್ ಕ್ರಿಕೆಟ್ ಆಟದಲ್ಲಿ ಕೂಡಾ ಆತನ ಸ್ಟ್ರೈಕ್ ರೇಟ್ ಎಂಭತ್ತಕ್ಕೆ ಮೀರಿದ್ದು.  ಒಂದು ದಿನದ ಪಂದ್ಯದಲ್ಲಂತೂ ಅದು ಶತಕವನ್ನೇ ಮೀರಿದ್ದು.  ಟೆಸ್ಟ್ ಕ್ರಿಕೆಟ್ ಆಟದಲ್ಲಿ ಅತೀ ಹೆಚ್ಚು 319, ಒಂದು ದಿನದ ಪಂದ್ಯದಲ್ಲಿ 219.  2008, 2009ರ ವರ್ಷಗಳಲ್ಲಿ ವಿಸ್ಡನ್ ಹೆಸರಿಸಿದ ಶ್ರೇಷ್ಠ ಆಟಗಾರ, 2010ರ ವರ್ಷದ ಐಸಿಸಿ ಹೆಸರಿಸಿದ ಶ್ರೇಷ್ಠ ಆಟಗಾರ ಹೀಗೆ ಸೆಹವಾಗ್ ಪ್ರಸಿದ್ಧರು.  ಅವರು ಬ್ಯಾಟು ಹಿಡಿದು ನಿಂತಿದ್ದಾಗ ಆ ಆಟದ ಸೊಗಸನ್ನು ಕಳೆದುಕೊಳ್ಳಬಯಸುವ ಕ್ರಿಕೆಟ್ ಪ್ರೇಮಿ ವಿಶ್ವದಲ್ಲೇ ಇಲ್ಲವೇನೋ. ಸ್ಪಿನ್ ಬೌಲರ್ ಆಗಿ ಸಹಾ ಸೆಹವಾಗರ ಕೊಡುಗೆ ಅಪೂರ್ವವಾದದ್ದು.  

ಭಾರತದ ಕಳೆದ ದಶಕದ ಕ್ರಿಕೆಟ್ನಲ್ಲಿನ ಉತ್ತುಂಗಕ್ಕೆ ತನ್ನದೇ ಆದ ರೀತಿಯಲ್ಲಿ ಸೆಹವಾಗ್ ಕೊಡುಗೆ ನೀಡಿದ್ದಾರೆ.  ಅವರ ಆಟಕ್ಕಾಗಿ ಪದೇ ಪದೇ ಜನರನ್ನು ಕ್ರಿಕೆಟ್ ಮೈದಾನಗಳಲ್ಲಿ  ಮತ್ತು ದೂರದರ್ಶನಗಳ ಮುಂದೆ ಕೂರುವಂತೆ ಮಾಡಿದ್ದಾರೆ.  ಇಷ್ಟೆಲ್ಲಾ ಇದ್ದೂ ಅವರು ತಮ್ಮ ದೈಹಿಕ ದೃಢತೆಯಲ್ಲಿನ ಕೊರತೆಯಿಂದಾಗಿ ಆಗಾಗ ಕ್ರೀಡೆಯಿಂದ ಹೊರತಾಗುತ್ತಿರುವುದು ಕ್ರೀಡಾಭಿಮಾನಿಗಳಿಗೆ ಮತ್ತು ಕ್ರೀಡೆಗೆ ಒಂದು ನಷ್ಟದಂತೆ ಪರಿಣಮಿಸುತ್ತಿದೆ.


ಸೆಹವಾಗ್ ಪುನಃ ಕ್ರಿಕೆಟ್ ಲೋಕಕ್ಕೆ ಹಿಂದಿರುಗುತ್ತಾರೋ ಇಲ್ಲವೋ ಹೇಳುವುದು ಕಷ್ಟ.  ಅವರ ಸುಂದರ ಆಟ ಇನ್ನೊಂದಿಷ್ಟು ಕಾಲ ನೋಡುವ ಹಾಗಿದ್ದರೆ ಚೆನ್ನಿತ್ತು.  ಅವರ ಆರೋಗ್ಯ, ಮನಸ್ಸು, ಆಟ ಮತ್ತು ಬದುಕುಗಳು ಸುಂದರವಾಗಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳೋಣ.

Tag: Virender Sehwag

ಕಾಮೆಂಟ್‌ಗಳಿಲ್ಲ: