ಸೋಮವಾರ, ಸೆಪ್ಟೆಂಬರ್ 2, 2013

ರಮ್ಯಾ

ರಮ್ಯಾ

ರಮ್ಯಾ ಹುಟ್ಟಿದ ಹಬ್ಬ ನವೆಂಬರ್ 29. 

ಇತ್ತೀಚಿನ ಸಿನಿಮಾಗಳು ನಮ್ಮ ಕಾಲದಂತಲ್ಲ.  ನಮ್ಮ ಕಾಲವೆಂದರೆ ಆರತಿ, ಭಾರತಿ, ಜಯಂತಿ, ಕಲ್ಪನ, ಮಂಜುಳಎಂಬ ಪಂಚ ನಟಿಯರದ್ದು.  ಈಗಿನ ಕಾಲದಲ್ಲಿ ಅದೆಷ್ಟು ನಟಿಯರೋ, ಅದೆಷ್ಟು ಸಿನಿಮಾಗಳೋ ಲೆಕ್ಕವಿಲ್ಲ!

2003ರ ವರ್ಷದಲ್ಲಿ ಪುನೀತ್ ಜೊತೆಯಲ್ಲಿ  ಅಭಿಚಿತ್ರದ ಮೂಲಕ ಬಂದ ಈ ಹುಡುಗಿ ಇಂದೂ  ಚಿತ್ರರಂಗದಲ್ಲಿ ಪ್ರಖ್ಯಾತಿ ಉಳಿಸಿಕೊಂಡಿರುವುದು ಇಂದಿನ ಚಿತ್ರರಂಗದ ದೃಷ್ಟಿಯಿಂದ ವಿಶೇಷವೇ ಎನಿಸುವಂತದ್ದು.  ಕಾರಣ ಇಂದಿನ ನಟಿಯರಿಗೆ ಅಂದಿನ ಬಿ. ಸರೋಜಾ ದೇವಿ, ಕಲ್ಪನ, ಭಾರತಿ, ಜಯಂತಿ, ಆರತಿ, ಮಂಜುಳ, ಸುಹಾಸಿನಿ ಅಂತಹ ನಟಿಯರಿಗೆ ಸಿಕ್ಕ ವಿಶಿಷ್ಟ ಪಾತ್ರಗಳು ಸಿಗುವುದು ಸಾಧ್ಯವೇ ಇಲ್ಲ ಎಂಬ ಹಿನ್ನಲೆಯಲ್ಲಿ ಈ ಚಾಕು, ಚೂರಿ ಹಿಡಿದ ಹುಡುಗರ ಪ್ರೇಮಿಗಳಾಗಿಯೋ, ಬಹಳಷ್ಟು ವೇಳೆ ನೋಡಲು ಕಷ್ಟ ಎನಿಸುವ ನಾಯಕರುಗಳ ಪ್ರೇಮಿಗಳಾಗಿಯೋ ಉಳಿಯಲು ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು, ಒಂದಷ್ಟು ಪ್ರತಿಭೆಯನ್ನೂ ತೋರುತ್ತ ಉಳಿಯುವುದು ಕಷ್ಟ ಸಾಧ್ಯವೇ ಸರಿ.  ಅದೂ ವ್ಯಾಪಾರೀ ದೃಷ್ಟಿಯಿಂದ ಸಿನಿಮಾಗಳನ್ನು ಸುತ್ತಿ, ಏನಾದರೂ ಮಾತಾಡಿದರೆ ಈ ಹುಡುಗಿಯರಿಗೆ ಕೊಬ್ಬು ಎಂದು ಕೋಲಾಹಲ ಮಾಡಿ ಬೆದರಿಸುವ ಸಿನಿ ಮಂದಿಯ ದಿನ ನಿತ್ಯದ ಕತೆಗಳಲ್ಲಿ ಇಂತಹ ಹುಡುಗಿಯರು ಕೆಲಸ ಮಾಡಿ ಹಲವು ವರ್ಷಗಳವರೆಗೆ ತಮ್ಮ ಕೆಲಸದ ಪ್ರೇರಣೆಯನ್ನು ಕಾಪಾಡಿಕೊಳ್ಳುವುದು ಸುಲಭದ ಮಾತೇನಲ್ಲ.

ರಮ್ಯಾ ಕೆಲಸ ಮಾಡಿರುವ ಕೆಲವೊಂದು ಯಶಸ್ವಿ ಎನ್ನಬಹುದಾದ ಚಿತ್ರಗಳಾದ ಅಭಿ’, ‘ಅರಸು’, ‘ಆಕಾಶ್’,  ‘ಎಕ್ಸ್ ಕ್ಯೂಸ್ ಮಿ’, ‘ಅಮೃತಧಾರೆ’, ‘ಜೊತೆ ಜೊತೆಯಲ್ಲಿ’, ‘ಸಂಜು ವೆಡ್ಸ್ ಗೀತಮುಂತಾದ ಚಿತ್ರಗಳ ಯಶಸ್ಸಿನ ಹಿನ್ನಲೆಯಲ್ಲಿ ಆಕೆಯ ಸುಂದರ ಅಭಿವ್ಯಕ್ತಿ, ಚುರುಕುತನ ಕೂಡ ಸಾಕಷ್ಟು ಕೆಲಸ ಮಾಡಿರುವುದು ಗೋಚರವಾಗುತ್ತದೆ.  ಕನ್ನಡದಲ್ಲಷ್ಟೇ ಅಲ್ಲದೆ ದಿವ್ಯ ಸ್ಪಂದನ ಎಂಬ ಹೆಸರಿನಲ್ಲಿ  ಹಲವು ತಮಿಳು, ತೆಲುಗು ಭಾಷೆಗಳ ಚಿತ್ರಗಳಲ್ಲೂ ಅಭಿನಯಿಸಿ ಅಲ್ಲೂ ಈಕೆ ಯಶಸ್ವಿಯಾಗಿದ್ದಾರೆ.

ರಮ್ಯಾ ಅವರಿಗೆ  ಸಂಜು ವೆಡ್ಸ್ ಗೀತಾಚಿತ್ರದಲ್ಲಿನ  ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ  ಪ್ರಶಸ್ತಿ ಸಂದಿದೆ.  ಜೊತೆಗೆ ತನನಂ ತನನಂ ಮತ್ತು ‘ಸಂಜು ವೆಡ್ಸ್ ಗೀತಾ’  ಚಿತ್ರಗಳಲ್ಲಿನ   ಅಭಿನಯಕ್ಕಾಗಿ  ಅವರಿಗೆ  ಫಿಲಂಫೇರ್ ಪ್ರಶಸ್ತಿಗಳೂ  ಬಂದಿವೆ.  

ಹಲವು ತಿರುವುಗಳ ಸುಳಿಯಲ್ಲಿರುವ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ರಮ್ಯಾ ಇತ್ತೀಚಿಗೆ ಇನ್ನೊಂದೇ ವರ್ಷ ಅವಧಿ ಉಳಿದಿರುವ  ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದಾರೆ. 


ಚಲನಚಿತ್ರ ಮಾಧ್ಯಮದ ಕಲಾವಿದೆಯಾಗಿ ಒಂದು ದಶಕದಷ್ಟು ಅವಧಿಯನ್ನು ಕ್ರಮಿಸಿರುವ ರಮ್ಯಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳೋಣ.  ಕಲಾವಿದೆಯಾಗಿ ಅವರಿಂದ ವಿವಾದರಹಿತ ಉತ್ತಮ ಪಾತ್ರನಿರ್ವಹಣೆ ನಿರೀಕ್ಷಿಸೋಣ.   ಅವರ ರಾಜಕೀಯದ ಬಗ್ಗೆ ಅವರ ಕಾರ್ಯ ಮತ್ತು ಕಾಲವೇ ಮಾತನಾಡುವುದು ಒಳಿತು.  ಅವರಿಗೂ ಅವರನ್ನು ನಂಬಿ ಗೆಲಿಸಿರುವ ಮತದಾರರಿಗೂ ಒಳಿತಾಗಲಿ ಎಂದಷ್ಟೇ ನಾವು ಹೇಳಬಹುದಾದಂತದ್ದು.

Tag: Ramya

ಕಾಮೆಂಟ್‌ಗಳಿಲ್ಲ: