ಭಾನುವಾರ, ಸೆಪ್ಟೆಂಬರ್ 1, 2013

ವಿ. ಜಿ. ಭಟ್ಟ

ವಿ. ಜಿ. ಭಟ್ಟ

ವಿಷ್ಣು ಗೋವಿಂದ ಭಟ್ಟರು ಕನ್ನಡದ ಹಿರಿಯ ಕವಿ.  ವಿ.ಜಿ. ಭಟ್ಟರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದಲ್ಲಿ ಡಿಸೆಂಬರ್ 3, 1923ರ ವರ್ಷದಲ್ಲಿ ಜನಿಸಿದರು.  ತಂದೆ ಗೋವಿಂದಭಟ್ಟರು ಮತ್ತು  ತಾಯಿ ಗಂಗಮ್ಮನವರು.  ಭಟ್ಟರ ಶಿಕ್ಷಣ ಹೊನ್ನಾವರ, ಜಮಖಂಡಿಗಳಲ್ಲಿ ನೆರವೇರಿತು.  ಮುಂದೆ ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ಪುಣೆ ಪ್ರಾಂತ್ಯಕ್ಕೇ ಪ್ರಪ್ರಥಮ ಸ್ಥಾನ ಪಡೆದರು. ಸಾಂಗ್ಲಿಯಲ್ಲಿ ಕಾಲೇಜು ಶಿಕ್ಷಣ ನಡೆಸಿ ಪುಣೆ ಮತ್ತು ಕೊಲ್ಲಾಪುರದಲ್ಲಿ ಸ್ನಾತಕಕೋತ್ತರ ಪದವಿ ಪಡೆದರು.   ಸು. ರಂ. ಎಕ್ಕುಂಡಿ, ರಾಕು ಮತ್ತೆ ಕೆಲವು ನವೋದಯ ಲೇಖಕರು ಇವರ ಸಹಪಾಠಿಗಳಾಗಿದ್ದವರು.

ವಿ. ಜಿ. ಭಟ್ಟರು ಶಿಕ್ಷಕರಾಗಿ ಕೆಲಕಾಲ ದುಡಿದ ನಂತರದಲ್ಲಿ  ಸಂಶೋಧನೆಯ ಕುರಿತು ಆಸಕ್ತಿ ತಾಳಿ ಧಾರವಾಡಕ್ಕೆ ಬಂದರಾದರೂ, 1947ರಲ್ಲಿ ಸ್ಥಾಪನೆಯಾದ ಖಾದಿಗ್ರಾಮೋದ್ಯೋಗದಲ್ಲಿ ಉದ್ಯೋಗ ದೊರೆತು ನಿರ್ದೇಶಕರವರೆಗೂ ಬಡ್ತಿ ಪಡೆದರು. 1981ರಲ್ಲಿ ನಿವೃತ್ತಿಯ ನಂತರ ಮುಂಬಯಿಯಲ್ಲಿ ನೆಲೆಸಿದರು.

ಬಾಲ್ಯದಿಂದಲೂ ಗೋಕಾಕರು ಮತ್ತು ಬೇಂದ್ರೆಯವರ ಪ್ರಭಾವದಿಂದ ಪದ್ಯದ ಕುರಿತು ಭಟ್ಟರಲ್ಲಿ ಆಸಕ್ತಿ ಮೊಳೆಯಿತು.   ಇವರ ಮೊದಲ ಕವನ ಸಂಕಲನ ಸವಿನೆನಪು 1946 ರ ವರ್ಷದಲ್ಲಿ ಪ್ರಕಟಗೊಂಡಿತು.  ಮುಂದೆ ತಮ್ಮ  ಕೊನೆಯ ಕವನ ಸಂಕಲನ ಪ್ರಾರ್ಥನೆಯವರೆಗೆ ಅವರು  22 ಕವನ ಸಂಕಲನಗಳನ್ನು ಪ್ರಕಟಿಸಿದರು.    1946 ರಿಂದ 1976 ರವರೆಗೆ ಸಾಗಿದ ಇವರ ಕಾವ್ಯಕೃಷಿಯು ಇದ್ದಕ್ಕಿದ್ದಂತೆ ಬತ್ತಿ ಹೋದಂತೆನಿಸಿ ಪುನಃ ಥಟ್ಟನೆ ಚಿಗುರೊಡೆದದ್ದು 1983ರ ವರ್ಷದಲ್ಲಿ.  

ಭಟ್ಟರ  ಮೊದಲರ್ಧ ಭಾಗದ ಕವಿತೆಗಳಲ್ಲಿ ತುಂಟತನ, ವಿಡಂಬನೆಗಳು ತುಂಬಿದ್ದವು.  ಭಟ್ಟರ ಈ ಕವಿತೆಗಳಲ್ಲಿ ವಿಡಂಬನೆ ಮತ್ತು ಚೇಷ್ಟೆ ಎದ್ದು ಕಾಣುತ್ತದೆ.  ಪಲಾಯನ’, ‘ರಕ್ತಾಂಜಲಿ’, ‘ಕಾವ್ಯವೇದನೆ’, ‘ಲಹರಿಮುಂತಾದವು ಅವರ ಕೆಲವು ಪ್ರಮುಖ ಕಾವ್ಯ ಸಂಕಲನಗಳು.  ಇವುಗಳಲ್ಲಿ ಲಹರಿಸಂಕಲನದಲ್ಲಿ ಹಾಸ್ಯ ಕವನಗಳು ತುಂಬಿವೆ.  ಈ ಕವನಗಳನ್ನು ಭಟ್ಟರೇ ಕ್ಷುದ್ರ ಗೀತೆಗಳುಎಂದು ಕರೆದುಕೊಂಡಿದ್ದಾರೆ.  ಇಲ್ಲಿ ತಾವು ಪುರುಷ ಸರಸ್ವತಿಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿರುವುದಾಗಿ ಹೇಳುತ್ತಾರೆ. ಮುಂದಿನ ಘಟ್ಟದಲ್ಲಿ ಬಂದ ಅವರ ಕವಿತೆಗಳಲ್ಲಿ  ವೇದಾಂತ, ದರ್ಶನ, ಚಿಂತನೆ ಮುಂತಾದ ಅನುಭಾವಗಳು ಮೈದಳೆದಿವೆ.

ಭಟ್ಟರ ಗದ್ಯ ಕೃತಿಗಳಲ್ಲಿ ಸಹ್ಯಾದ್ರಿಉತ್ತರ ಕನ್ನಡದ ಜೀವನ ಚಿತ್ರವಾದರೆ, ‘ಬುರುಕಿ’, ‘ದಿವ್ಯ ಕಥೆಗಳುಮತ್ತು ‘ಪೆದ್ದಂಕಥೆಗಳುಕಥಾ ಸಂಗ್ರಹಗಳಾಗಿವೆ. ಅವರ  ಧ್ರುವ ದೋಸ್ತ್‌ ಮಕ್ಕಳ ಕಥಾ ಸಂಗ್ರಹ.  ಖಾದಿ ಗ್ರಾಮೋದ್ಯೋಗಅನುವಾದಿತ ಕೃತಿ.  ಉಪ್ಪಿನ ಮಾರಾಟಎಂಬುದು ನಾಟಕ. ಭಟ್ಟರು ಕೆಲಕಾಲ  ಗ್ರಾಮ ಜೀವನಎಂಬ ಪತ್ರಿಕೆಯನ್ನು  ನಡೆಸಿದರು.

1984ರ ನಂತರ ಭಟ್ಟರು ತಮ್ಮ ಕವನ ಸಂಕಲನಗಳನ್ನು ದಿವಂಗತ ಪತ್ನಿಯ ಹೆಸರಿನಲ್ಲಿ ಸ್ಥಾಪಿಸಿದ ರುಕ್ಮಿಣೀ ಪ್ರಕಾಶನ’ದಲ್ಲಿ  ಹೊರತಂದರು.

ಯಾವುದೇ ಪ್ರಶಸ್ತಿ-ಪುರಸ್ಕಾರಗಳನ್ನು ಬಯಸದ ವಿ. ಜಿ. ಭಟ್ಟರನ್ನು 1983 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಅರಸಿ ಬಂತು.

ವಿ. ಜಿ. ಭಟ್ಟರು 1991ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: V. G. Bhatta

ಕಾಮೆಂಟ್‌ಗಳಿಲ್ಲ: