ಮಂಗಳವಾರ, ಸೆಪ್ಟೆಂಬರ್ 3, 2013

ಬಾಗಿಲೊಳು ಕೈಮುಗಿದು


ಬಾಗಿಲೊಳು ಕೈಮುಗಿದು
ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು 

ಕಂಬನಿಯ ಮಾಲೆಯನು
ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ
ಅರ್ಪಿಸಿಲ್ಲಿ

ಗಂಟೆಗಳ ದನಿಯಿಲ್ಲ
ಜಾಗಟೆಗಳಿಲ್ಲಿಲ್ಲ 
ಕರ್ಪೂರದಾರತಿಯ
ಜ್ಯೋತಿಯಿಲ್ಲ 
ಭಗವಂತನಾನಂದ ರೂಪಗೊಂಡಿಹುದಿಲ್ಲಿ 
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ

ಸಾಹಿತ್ಯ: ಕುವೆಂಪು

“ಈ ಗೀತೆಯನ್ನು ‘ಸೋಮನಾಥಪುರ ದೇವಾಲಯ’ವನ್ನು ಕುರಿತು ಕುವೆಂಪು ಅವರು  1928ರಲ್ಲಿ ಬರೆದರು.  ಇಲ್ಲಿ "ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ" ಎಂದು ಕುವೆಂಪು ಕರೆ ಕೊಡುವುದು, ಈ ದೇವಸ್ಥಾನ ತನ್ನ ಶಿಲ್ಪ ವೈಭವದಿಂದ ‘ಕಲೆಯಬಲೆ’ಯಂತೆ ಇದೆ ಎನ್ನುವ ಕಾರಣಕ್ಕೆ ಮಾತ್ರ ಅಲ್ಲ; ಅದಕ್ಕೂ ಮಿಗಿಲಾಗಿ, ‘ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲ’–ಎನ್ನುವ ಕಾರಣಕ್ಕೆ. ಗಂಟೆಗಳ ದನಿ, ಜಾಗಟೆಯ ಸದ್ದು ಮತ್ತು ಕರ್ಪೂರದಾರತಿ ಇಲ್ಲದಿರುವುದು ಒಂದು ನಷ್ಟ ಎಂಬ ವಿಷಾದಭಾವ ಇಲ್ಲಿದೆ ಎಂದೇನಾದರೂ ಭಾವಿಸುವುದಾದರೆ ಕವಿತೆಯ ಅರ್ಥದಿಂದ ನಾವು ವಂಚಿತರಾದಂತೆಯೇ ಸರಿ. ಯಾಕೆಂದರೆ ಗಂಟೆಗಳ ದನಿ, ಜಾಗಟೆಯ ಮೊಳಗು, ಕರ್ಪೂರದಾರತಿ ಇವೆಲ್ಲ ಪೂಜಾರಿ ಅಥವಾ ಪುರೋಹಿತನಿದ್ದಾನೆ ಎಂಬುದಕ್ಕೆ ಸಂಕೇತ; ಆದರೆ ಇಲ್ಲಿ ಪೂಜಾರಿ ಅಥವಾ ಪುರೋಹಿತ ಇಲ್ಲ, ಆದ ಕಾರಣ ಗಂಟೆಗಳ ದನಿಯಾಗಲೀ, ಜಾಗಟೆಯ ಸದ್ದಾಗಲೀ ಕರ್ಪೂರದಾರತಿಯಾಗಲೀ ಇಲ್ಲ. ಯಾಕೆಂದರೆ ಸೋಮನಾಥಪುರದ ಈ ದೇವಾಲಯ ಮತ್ತು ಇಲ್ಲಿನ ಮೂರ್ತಿ ಪರಕೀಯರ ದಾಳಿಯಿಂದ  ಭಗ್ನವಾಗಿರುವುದರಿಂದ ಅಲ್ಲಿ ಯಾವ ಪೂಜೆಯೂ ಇಲ್ಲ. ಹೀಗೆ ಪೂಜೆಯೂ ಇಲ್ಲದ, ಪೂಜಾರಿಯೂ ಇಲ್ಲದ, ಆದರೆ ತನ್ನ ಶಿಲ್ಪಕಲಾವೈಭವದಿಂದ ‘ಭಗವಂತನಾನಂದ ಮೂರ್ತಿ’ಗೊಂಡಂತಿರುವ ಈ ದೇವಸ್ಥಾನಕ್ಕೆ ಕುವೆಂಪು ಯಾತ್ರಿಕರನ್ನು ಕರೆಯುತ್ತಾರೆ.” (ಜಿ. ಎಸ್. ಶಿವರುದ್ರಪ್ಪನವರ ನುಡಿ)

Tag: Baagilolu Kai Mugidu, Bagilolu Kaimugidu

ಕಾಮೆಂಟ್‌ಗಳಿಲ್ಲ: