ಮಂಗಳವಾರ, ಸೆಪ್ಟೆಂಬರ್ 3, 2013

ಸಿ ಕೆ ನಾಗರಾಜರಾವ್

ಸಿ ಕೆ ನಾಗರಾಜ ರಾವ್

ಮಹಾನ್ ಸಾಹಿತಿಗಳೂ, ರಂಗಭೂಮಿ ಕಲಾವಿದರೂ, ಪತ್ರಕರ್ತರೂ ಆದ  ಸಿ. ಕೆ ನಾಗರಾಜ ರಾವ್ ಅವರು ಪಟ್ಟ ಮಹಾದೇವಿ ಶಾನ್ತಲದೇವಿಎಂಬ ಐತಿಹಾಸಿಕ ಕಾದಂಬರಿಗಾಗಿ ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯಕ್ಕೆ ಮೂರ್ತಿದೇವಿ ಪ್ರಶಸ್ತಿಪಡೆದವರು. ಭಾರತೀಯ ಜನಜೀವನದ ಶಾಶ್ವತ ಮೌಲ್ಯಗಳ ಮಹತ್ವವನ್ನು ಎತ್ತಿಹಿಡಿಯುವ, ಭಾರತೀಯ ಭಾಷೆಗಳಲ್ಲಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ ಅತ್ಯುತ್ತಮ ಗ್ರಂಥಕ್ಕೆ ಪ್ರಶಸ್ತಿ ಕೊಡುವ ಉದ್ದೇಶದಿಂದ ಭಾರತೀಯ ಜ್ಞಾನಪೀಠವು 1983ರಿಂದ ಪ್ರಾರಂಭಿಸಿರುವ ಈ ಪ್ರಶಸ್ತಿಯನ್ನು ಕನ್ನಡಕ್ಕೆ ಮೊದಲಬಾರಿಗೆ  ತಂದುಕೊಟ್ಟ ನಾಗರಾಜರಾಯರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1915ರ ಜೂನ್ 12ರಂದು ಜನಿಸಿದರು. ತಂದೆ ಕೃಷ್ಣಮೂರ್ತಿ ರಾವ್ ಅವರು  ಮತ್ತು ತಾಯಿ ಪುಟ್ಟಮ್ಮನವರು.

ನಾಗರಾಜ ರಾವ್ ಅವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು   ಚಿಕ್ಕಬಳ್ಳಾಪುರದಲ್ಲಿ ನಡೆಸಿದರು. ತಂದೆಯವರಿಗೆ ಸೇವೆಯಲ್ಲಿ  ಆಗಾಗ್ಗೆ ವರ್ಗವಾಗುತ್ತಿದ್ದರಿಂದ ಇವರ ವಿದ್ಯಾಭ್ಯಾಸ  ಚನ್ನಪಟ್ಟಣ, ಚಿತ್ರದುರ್ಗ ಮತ್ತು ಬೆಂಗಳೂರುಗಳಲ್ಲಿ ನೆರವೇರಿತು.   ನ್ಯಾಷನಲ್ ಹೈಸ್ಕೂಲಿನಿಂದ ಎಸ್.ಎಸ್. ಎಲ್.ಸಿ  ಉತ್ತೀರ್ಣರಾದ  ಅವರು ಸರಕಾರಿ ಕಾಲೇಜಿನಲ್ಲಿ  ಇಂಟರ್ ಮೀಡಿಯೇಟ್ ಓದಿದರು..

ನಾಗರಾಜ ರಾವ್ ಅವರು  ತಮ್ಮ 17ರ ಹರೆಯದಲ್ಲಿಯೇ ಕೈಲಾಸಂರವರ ಹೋಂ ರೂಲುನಾಟಕದಲ್ಲಿ ವಿಧವೆ ಸುಬ್ಬಮ್ಮನ ಪಾತ್ರವಹಿಸಿ  ಶ್ರೇಷ್ಠನಟ ಪ್ರಶಸ್ತಿ ಗಳಿಸಿದವರು. ಮಡಿ ಹೆಂಗಸಿನ ಪಾತ್ರಧಾರಿಯಾದ ಇವರ ನಟನಾ ಕೌಶಲವನ್ನು ಕುರಿತು ಜನವಾಣಿ ಪತ್ರಿಕೆ ಪ್ರೇಕ್ಷಕರಿಗೆ ಆನಂದವನ್ನುಂಟುಮಾಡಿತುಎಂದು ಬರೆದರೆ ತಾಯಿನಾಡು ಪತ್ರಿಕೆ ಪ್ರಥಮ ಸ್ಥಾನ ಸಲ್ಲಬೇಕುಎಂದು ಬರೆಯಿತು. ಇಂಟರ್ಮೀಡಿಯಟ್‌ ಓದುತ್ತಿದ್ದಾಗ ಕಾಲೇಜಿನಲ್ಲಿ ನಡೆಸಿದ ಸಣ್ಣ ಕಥಾ ಸ್ಪರ್ಧೆಯಲ್ಲಿ  ಕಾಡುಮಲ್ಲಿಗೆಎಂಬ ಕಥೆ ಬರೆದು ಮೊದಲ ಬಹುಮಾನ ಪಡೆದರು. ಈ ಕತೆ ಕಾಲೇಜಿನ ವಾರ್ತಾಸಂಚಿಕೆಯಲ್ಲೂ  ಪ್ರಕಟಗೊಂಡು ಇವರನ್ನು ಕಥೆಗಾರರನ್ನಾಗಿಸಿತು. ಜೀವನದಲ್ಲಿದ್ದ  ಆರ್ಥಿಕ  ಮಿತಿಗಳ  ಕಾರಣದಿಂದಾಗಿ  ಇಂಟರ್‌ಮೀಡಿಯೇಟ್ನಲ್ಲಿ ಉತ್ತೀರ್ಣರಾದರೂ ಓದು ಮುಂದುವರೆಸಲಾಗದೆ ಉದ್ಯೋಗವನ್ನು ಅರಸಿದ  ರಾವ್  ಅವರು  ಮೈಸೂರು ಪ್ರೀಮಿಯರ್ ಮೆಟಲ್‌ ಕಾರ್ಖಾನೆಯಲ್ಲಿ ಸಿಬ್ಬಂದಿ ನಿಯಂತ್ರಕರಾಗಿ  ಉದ್ಯೋಗ  ಸಂಪಾದಿಸಿದರು.   
ಎರಡು ವರ್ಷಗಳ  ಈ ಕಾಯಕದ  ನಂತರ   ತಮ್ಮ ಸೋದರಮಾವಂದಿರಾದ ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ಸತ್ಯಶೋಧನ ಪ್ರಕಟಣಾಮಂದಿರದಲ್ಲಿ ಐದು ವರ್ಷ ವ್ಯವಸ್ಥಾಪಕರಾಗಿ ದುಡಿದರು. ನಂತರದಲ್ಲಿ  ಇಂಡಿಯನ್‌ ಮ್ಯೂಚುಯಲ್‌ ಲೈಫ್‌ ಅಸೋಸಿಯೇಷನ್‌ ಸಂಸ್ಥೆಗೆ ಸೇರಿದರಾದರೂ  ಕಾರಣಾಂತರದಿಂದ ಆ  ಹುದ್ದೆಯನ್ನೂ  ಬಿಡಬೇಕಾಗಿ ಬಂದಿತು. ಇಷ್ಟರಲ್ಲಿ ಅವರ ಮದುವೆಯೂ ಆಗಿದ್ದು ಸಂಸಾರದ ಜವಾಬ್ದಾರಿ ಹೊತ್ತಿದ್ದರಿಂದ ದುಡಿಯಲೇಬೇಕಾದ ಅನಿವಾರ್ಯತೆ ಒದಗಿತು.  ಹೀಗಾಗಿ ಪತ್ರಿಕೋದ್ಯಮಕ್ಕೆ ಬಂದರು.  ಹರಿತಸ್‌ಎಂಬ ಕಾವ್ಯನಾಮದಿಂದ ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆಗಳಿಗೆ ಲೇಖನ ಮತ್ತು ವಿಮರ್ಶೆಗಳನ್ನು ಬರೆಯತೊಡಗಿದರು. ಕೆಲಕಾಲ ವಾಣಿಎಂಬ ಪತ್ರಿಕೆಯ ಸಂಪಾದಕರಾಗಿಯೂ ದುಡಿದರು.  ಕ್ವಾರ್ಟರ್ಲಿ ಜನರಲ್‌ ಆಫ್‌ ಮಿಥಿಕ್‌ ಸೊಸೈಟಿ ಪತ್ರಿಕೆಗೆ ವಿದ್ವತ್‌ ಪೂರ್ಣ ಲೇಖನಗಳನ್ನೂ ಬರೆಯುತ್ತಿದ್ದುದಲ್ಲದೆ ಆ ಪತ್ರಿಕೆಯ ಸಂಪಾದಕರಾಗಿಯೂ ಮೂರು ವರ್ಷ ದುಡಿದರು.

ಬಾಲ್ಯದಿಂದಲೂ ನಾಟಕದ ಆಕರ್ಷಣೆಗೆ ಒಳಗಾಗಿದ್ದ ನಾಗರಾಜ ರಾವ್  ಅವರು  1936ರಲ್ಲಿ  ದಿ ಯುನೈಟೆಡ್‌ ಆರ್ಟಿಸ್ಟ್ಸ್‌ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.   ಈ ಸಂಸ್ಥೆಯ ಮೂಲಕ ಹೋಂ ರೂಲು, ಆಷಾಢಭೂತಿ, ರಾಜಿಕಬೂಲಿ, ಜಯಶ್ರೀ, ವಾಲ್ಮಿಕಿಯ ಭಾಗ್ಯ, ಗದಾಯುದ್ಧಶಾಮಣ್ಣನ ಸಾಹಸಮುಂತಾದ ನಾಟಕಗಳಲ್ಲಿ ತಾವೂ ಅಭಿನಯಿಸಿ ಹಲವಾರು ಕಲಾವಿದರನನ್ನೂ  ಬೆಳಕಿಗೆ ತಂದರು.  ನಾಟಕಗಳನ್ನು  ಕರ್ನಾಟಕದಲ್ಲಷ್ಟೇ  ಅಲ್ಲದೆ  ಹೊರನಾಡಿನಲ್ಲೂ ಪ್ರದರ್ಶಿಸಿದರು. ಅವರ  ಹಲವಾರು ನಾಟಕಗಳು  ಆಕಾಶವಾಣಿಯಲ್ಲಿಯೂ  ಪ್ರಸಾರಗೊಂಡವು.

ನಾಗರಾಜ ರಾವ್ ಅವರು ಕನ್ನಡ, ಸಂಸ್ಕೃತ, ತೆಲುಗು, ಇಂಗ್ಲಿಷ್‌, ಹಿಂದಿ ಮುಂತಾದ ಭಾಷೆಗಳ ನೂರಾರು ನಾಟಕಗಳಲ್ಲಿ ಅಭಿನಯಿಸಿ, ಸುಮಾರು ನಾಲ್ಕು ದಶಕಗಳ ಕಾಲ ರಂಗಭೂಮಿಗಾಗಿ ದುಡಿದರು. ಎತ್ತರವಾದ ನಿಲುವು, ದೃಢಶರೀರ, ಕಂಚಿನಕಂಠ, ಭಾಷೆಯ ಮೇಲಿನ ಹಿಡಿತ, ಧ್ವನಿಯ ಏರಿಳಿತ ಮುಂತಾದವುಗಳನ್ನು ಕರಾರುವಾಕ್ಕಾಗಿ ಬಳಸುತ್ತಿದ್ದ ಅವರು  ರಂಗಭೂಮಿಯ ಮಹತ್ವದ  ನಟರೆನಿಸಿದ್ದರು. ತಾವು ಬರೆದ ಶೂದ್ರಮುನಿ, ಸಂಪನ್ನ ಸಮಾಜ ಮತ್ತು ಸಂಕೋಲೆ ಬಸವ ಎಂಬ ಮೂರು ನಾಟಕಗಳನ್ನು ಪ್ರಕಟಿಸಿದರಲ್ಲದೆ  ಹಿಂದಿಯಲ್ಲಿ ಏಕಲವ್ಯನಾಟಕವನ್ನು  ಬರೆದರು.

ಕಲೆಯ ಹುಚ್ಚಿನಿಂದ ಚಲನಚಿತ್ರರಂಗವನ್ನೂ ಪ್ರವೇಶಿಸಿ ದ್ರೌಪದಿಯ ಮಾನಸಂರಕ್ಷಣಮುಎಂಬ ಚಲನಚಿತ್ರದ ಸಹಾಯಕ ನಿರ್ದೇಶಕರಾಗಿ, ‘ಸಂತಕಾನ್ಹೋಪಾತ್ರಚಿತ್ರಕ್ಕೆ ಚಿತ್ರಕಥೆ ಮತ್ತು ಗೌರಿ, ಅಪರೂಪದ ಅತಿಥಿಗಳು ಚಿತ್ರಗಳಿಗೆ ಸಂಭಾಷಣೆ ಬರೆದರು. ದೈವಲೀಲೆಚಿತ್ರವನ್ನು ಸಿ.ಎನ್‌. ಕೃಷ್ಣಮಾಚಾರ್ ಅವರು ನಿರ್ದೇಶನದಲ್ಲಿ, ಆರ್.ವಿ. ಅರಸುಕುಮಾರರೊಡನೆ ನಿರ್ಮಿಸಿ ಆ ಚಿತ್ರದಲ್ಲಿ  ಒಂದು ಪಾತ್ರವನ್ನೂ ನಿರ್ವಹಿಸಿದ್ದರು.

ನಾಗಾರಾಜ ರಾವ್ ಅವರು ಶಾಲಾ, ಕಾಲೇಜು ದಿನಗಳಿಂದಲೇ ಬರೆದ ಹಲವಾರು ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕಾಡುಮಲ್ಲಿಗೆ, ಸಂಗಮ, ದೃಷ್ಟಿಮಥನ, ಸಾವಿಲ್ಲದವರು ಮುಂತಾದ ಸಂಕಲನಗಳು ಪ್ರಕಟಗೊಂಡವು. ಹಿಂದಿ ಭಾಷೆಯಿಂದ  ಶರಶ್ಚಂದ್ರರ ಪ್ರೇಮಯೋಗಿನಿ, ದರ್ಪಚೂರ್ಣ, ಅರಕ್ಷಣೀಯ, ಕಾಶಿನಾಥ, ವಿಶ್ವೇಶ್ವರಿ ಮತ್ತು ಮಂತ್ರ ದೀಕ್ಷೆ ಎಂಬ ಆರು ಕಾದಂಬರಿಗಳನ್ನು ಅನುವಾದಿಸಿದರು.

ನಾಗರಾಜರಾಯರ ಮತ್ತೊಂದು ಸಂಶೋಧನ ಗ್ರಂಥವೆಂದರೆ ಜೈಮಿನಿ ಭಾರತವನ್ನು ಬರೆದಿರುವ ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲ’ . ಲಕ್ಷ್ಮೀಶನ ಊರು ಸುರಪುರದ ಬಳಿಯ ದೇವಪುರ ಅಲ್ಲ, ಕಡೂರು ತಾಲ್ಲೂಕಿನ ದೇವನೂರುಎಂಬುದನ್ನು  ಖಚಿತಪಡಿಸಲು ಅವರು ಹಲವಾರು ಸಾಕ್ಷ್ಯಾಧಾರಗಳನ್ನು ಒದಿಗಿಸಿದ್ದಾರೆ.

ಸ್ವತಂತ್ರ ಕಾದಂಬರಿಯ ರಚನೆಯಲ್ಲಿ ತೊಡಗಿದ ನಾಗರಾಜರಾಯರು ರಚಿಸಿದ ಬೃಹತ್‌ ಕಾದಂಬರಿ ಪಟ್ಟ ಮಹಾದೇವಿ ಶಾನ್ತಲದೇವಿ’. ಈ ಹೊಯ್ಸಳ ಸಾಮ್ರಾಜ್ಯದ ಕತೆ ನೂರ ಐವತ್ತು ವರ್ಷಗಳ ಇತಿಹಾಸವನ್ನು ಒಳಗೊಂಡಿರುವುದಲ್ಲದೆಶಾನ್ತಲೆಯ ನಲವತ್ತು ವರ್ಷಗಳ ಬದುಕಿನ ಚಿತ್ರಣ ಕೊಡುವ ಸುಮಾರು 175 ಅಧ್ಯಾಯಗಳ 2150 ಪುಟಗಳನ್ನೊಳಗೊಂಡ ಮೇರುಕೃತಿ.  ಇವರು ರಚಿಸಿದ ಇತರ ಕಾದಂಬರಿಗಳೆಂದರೆ ಭಕ್ತಿವಿಜಯದ ಸಣ್ಣಕತೆಯನ್ನಾಧರಿಸಿದ ನಂಬಿದಜೀವಮತ್ತು ಮಣಿಪುರದ ಇತಿಹಾಸದ ಕುರಂಗ ನಯನಿ’. ಶಾನ್ತಲದೇವಿ ಕಾದಂಬರಿಯ ಮುಂದುವರೆದ ಭಾಗವಾದ ವೀರಗಂಗ ವಿಷ್ಣುವರ್ಧನ’  ಮತ್ತು ಹೊಯ್ಸಳ ಸಾಮ್ರಾಜ್ಯದ ಸಂಪೂರ್ಣ ಕತೆಯನ್ನು ಕಟ್ಟಿ ಕೊಡುವ ದಾಯಾದ ದಾವಾನಲ’. ‘ಕುರಂಗನಯನಿ’, ‘ಶ್ರೀಪೃಥ್ವೀವಲ್ಲಭಕಾದಂಬರಿಗಳು ಅಪಾರ  ಮೆಚ್ಚುಗೆ  ಗಳಿಸಿವೆ.

ನನ್ನ ನೆಚ್ಚಿನ ನಾಡೆ’, ‘ತಾತ ಮಾವನ ಕನಸು’, ‘ಕಾಂಬೋಡಿಯಾ ಲಾವೋಸ್’, ‘ನಾಯಿಕೊಡೆ’, ‘ಏಕಲವ್ಯ ದರ್ಶನಮುಂತಾದವು ಸಿ ಕೆ ನಾಗರಾಜ ರಾವ್ ಅವರ ಇನ್ನಿತರ ಕೃತಿಗಳು.

ಹೀಗೆ ನಾಟಕ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ದುಡಿದ ನಾಗರಾಜರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ, ಕೋಶಾಧಿಕಾರಿಗಳಾಗಿ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಮಿಥಿಕ್‌ ಸೊಸೈಟಿಯ ಕಾರ್ಯದರ್ಶಿಗಳಾಗಿ, ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನ ಸ್ಥಾಪಕ ಸಹಾಯಕ ಪ್ರಾಚಾರ್ಯರಾಗಿ, ಕರ್ನಾಟಕ ಸಾಹಿತ್ಯ ಆಕಾಡೆಮಿಯ ಸದಸ್ಯರಾಗಿ ಹೀಗೆ  ವಿವಿಧ  ಜವಾಬ್ಧಾರಿಗಳನ್ನು  ನಿರ್ವಹಿಸಿದರು.

ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲಕೃತಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಟ್ಟ ಮಹಾದೇವಿ ಶಾನ್ತಲದೇವಿ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಶ್ರೇಷ್ಠ ಸೃಜನಶೀಲ ಕೃತಿ ಪ್ರಶಸ್ತಿ ಮತ್ತು ಭಾರತೀಯ ಜ್ಞಾನಪೀಠ ಪ್ರತಿಷ್ಠಾನದ  ಮೂರ್ತಿದೇವಿಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು  ನಾಗರಾಜ  ರಾವ್  ಅವರನ್ನು  ಅರಸಿಬಂದಿದ್ದವು. 

ಹೀಗೆ  ವಿವಿಧ ರೀತಿಯಲ್ಲಿ  ಮಹಾನ್  ಸಾಧನೆಗೈದ  ನಾಗರಾಜ ರಾವ್  ಅವರು   1998ರ ಏಪ್ರಿಲ್‌ 10ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಆಧಾರ: 'ಕಣಜ'

Tag: C. K. Nagarajarao

ಕಾಮೆಂಟ್‌ಗಳಿಲ್ಲ: