ಮಂಗಳವಾರ, ಸೆಪ್ಟೆಂಬರ್ 3, 2013

ಅರವಿಂದ್ ಕೆಜ್ರೀವಾಲ್

ಅರವಿಂದ್ ಕೆಜ್ರೀವಾಲ್

ಅರವಿಂದ್ ಕೆಜ್ರೀವಾಲ್

ಜೂನ್ 16 ಅರವಿಂದ್ ಕೆಜ್ರೀವಾಲ್ ಅವರು ಜನಿಸಿದ ದಿನ.  ಅರವಿಂದ್ ಕೆಜ್ರೀವಾಲ್ ಜನರಿಗೆ  ಮಾಹಿತಿ ಕಾಯಿದೆ ಹಕ್ಕುಗಳಿಸಿಕೊಡುವಲ್ಲಿ ಅವರು  ಭಾರತದಲ್ಲಿ ಮಾಡಿರುವ ಕಾರ್ಯಕ್ಕಾಗಿ ವಿಶ್ವದಾದ್ಯಂತ ಹೆಸರು.    ಇದರಿಂದ ಸರ್ಕಾರಿ ವ್ಯವಸ್ಥೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.      ಇಂದು ಬಹಳಷ್ಟು ಭ್ರಷ್ಟಾಚಾರಗಳು ಬೀದಿಗೆ ಬಂದಿರುವುದಕ್ಕೆ ಜನರಲ್ಲಿ ಒಂದಿಷ್ಟು ಜಾಗೃತಿ ಮೂಡಿರುವುದಕ್ಕೆ ಈ ಮಾಹಿತಿ ಹಕ್ಕು ಕಾಯಿದೆ ನೀಡಿರುವ ಕೊಡುಗೆ ಮಹತ್ವಪೂರ್ಣವಾದುದು.  ಈ ನಿಟ್ಟಿನಲ್ಲಿ ಕೆಜ್ರೀವಾಲ್ ಅವರು ಮಾಡಿರುವ ಕಾರ್ಯಕ್ಕೆ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಕೂಡಾ ಅವರಿಗೆ ಸಂದಿದೆ.  ಅವರು ಅಸೋಸಿಯೇಶನ್ ಫಾರ್ ಇಂಡಿಯಾ ಡೆವಲಪ್ಮೆಂಟ್ ಎಂಬ ಪ್ರಖ್ಯಾತ ಎನ್ ಜಿ ಓ ಸಂಸ್ಥೆಯನ್ನೂ ಹುಟ್ಟುಹಾಕಿದ್ದಾರೆ.  ಕೆಜ್ರೀವಾಲ್ ಅಣ್ಣಾ ಹಜಾರೆ ಅವರ ನೇತೃತ್ವದ  ಭ್ರಷ್ಟಾಚಾರ ವಿರೋಧಿ ಆಂದೋಲನ ಪ್ರಮುಖ ಪಾತ್ರಧಾರಿ ಕೂಡಾ ಆಗಿದ್ದರು.  ಈ ಆಂದೋಲನ  ಕಂಡ ಹಲವು ಏಳು ಬೀಳುಗಳು ಮತ್ತು ಪರ ವಿರೋಧಿ ವಾದ -  ವಾಗ್ವಾದ ವಿವಾಧಗಳ ಕೇಂದ್ರವೂ ಆಗಿದ್ದರು. 

ಮುಂದೆ ಕೆಜ್ರೀವಾಲರು ಅಣ್ಣಾ  ಆಂದೋಲನವನ್ನು ಬಿಟ್ಟು ಹೊರಬಂದು ರಾಜಕೀಯ ಪ್ರವೇಶ ಮಾಡಿದ್ದಾರೆ.  ಅವರ ರಾಜಕೀಯ ಪ್ರವೇಶ ಅಣ್ಣಾ ಆಂದೋಲನವನ್ನು ಕುಂಟಿತಗೊಳಿಸಿತು, ರಾಜಕೀಯವಾಗಿ ಯಾವುದೇ ಪ್ರಭಾವವನ್ನು ಬೀರಲು ಅಶಕ್ಯವಾಗಿದೆ, ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಕೆಲವೊಂದು ಭ್ರಷ್ಟಾಚಾರ ವಿಚಾರಗಳು ಮಾಧ್ಯಮಗಳಲ್ಲಿ ಸುದ್ಧಿ ಹಬ್ಬಿಸಿದ್ದು ಬಿಟ್ಟರೆ ಹೆಚ್ಚಿನದೇನನ್ನೂ ಸಾಧಿಸಿಲ್ಲ ಇತ್ಯಾದಿ ವಿಚಾರಗಳು ಇತ್ತೀಚಿನ ಹಲವು ಮಾಸಗಳಲ್ಲಿ ಕಂಡುಬಂದಿದೆ.  ಆದರೆ ಅವರು ನಡೆಸುತ್ತಿರುವ ಸಾರ್ವಜನಿಕ ವಲಯದಲ್ಲಿನ ಸತ್ಯಶೋಧನೆಯ ಕೆಲಸ ಇನ್ಯಾವುದೇ ವಲಯದಿಂದ ಕಿಂಚಿತ್ತೂ ಆಗುತ್ತಿಲ್ಲ ಎಂಬುದಂತೂ ಸತ್ಯವಾಗಿರುವುದರಿಂದ, ಕೆಜ್ರೀವಾಲರ ಹೋರಾಟದ ಬಿಸಿ ಅಷ್ಟು ಸುಲಭವಾಗಿ ಆರುವಂತದ್ದಲ್ಲ; ಅದು ಎಷ್ಟೇ ಎಡವಿದರೂ ತನ್ನ ಪ್ರಭಾವವನ್ನು ಅಳಿಸಿಕೊಳ್ಳುವಂತದ್ದಲ್ಲ, ದೇಶದಲ್ಲಿ ನಿತ್ಯ ವಿಜ್ರಂಭಿಸುವ ಸ್ವಾರ್ಥಪರ ರಾಜಕೀಯ ಉದ್ದೇಶವುಳ್ಳ ಹೋರಾಟಗಳ ನಡುವಿನಲ್ಲಿ ಒಂದಷ್ಟು ಶುಭ್ರವಾಗಿ ಪ್ರಕಾಶಿಸುತ್ತಿರುವಂತದ್ದು ಎಂಬುದಂತೂ ನಿಜ. 

ಅರವಿಂದ್ ಕೆಜ್ರೀವಾಲ್ ಅವರು ಜೂನ್ 16, 1968ರಂದು ಹರ್ಯಾಣಾದ ಹಿಸ್ಸಾರ್ ಎಂಬಲ್ಲಿ ಜನಿಸಿದರು.  ಅವರ ತಂದೆ ಇಂಜಿನಿಯರ್ ಹುದ್ಧೆಯಲ್ಲಿದ್ದರು.  ಕೆಜ್ರೀವಾಲ್ ತಮ್ಮ ಬಾಲ್ಯದ ದಿನಗಳನ್ನೆಲ್ಲಾ ಸೋನೇಪೇಟ್, ಮಥುರಾ, ಹಿಸ್ಸಾರ್ ಮುಂತಾದೆಡೆಗಳಲ್ಲಿ ಕಳೆದರು.  ಕ್ಯಾಂಪಸ್ ಶಾಲೆಯಲ್ಲಿ ಓದಿದ ಕೆಜ್ರೀವಾಲ್ 1989ರ ವರ್ಷದ  ಐಐಟಿ ಖರಗ್ಪುರದ ಮೆಕಾನಿಕಲ್ ಇಂಜಿನಿಯರ್.        

ಓದಿನ ನಂತರದಲ್ಲಿ ಕೆಜ್ರೀವಾಲ್ ಟಾಟಾ ಸ್ಟೀಲ್ ಸಂಸ್ಥೆಯನ್ನು ಸೇರಿದರಾದರೂ ಜನಸೇವೆಯ ಹಂಬಲದಿಂದ ಆ ಕೆಲಸವನ್ನು ಬಿಟ್ಟು ಕಲ್ಕತ್ತಾದ ಮದರ್ ತೆರೇಸಾ ಅವರ ಮಿಷಿನರೀಸ್ ಆಫ್ ಚಾರಿಟಿ, ರಾಮಕೃಷ್ಣ ಮಿಷನ್ ಮತ್ತು ನೆಹರೂ ಯುವಕ ಕೇಂದ್ರಗಳಲ್ಲಿನ ಸಾರ್ವಜನಿಕ ಸೇವೆಗಳಲ್ಲಿ ಹಲವಾರು  ವರ್ಷಗಳ ಕಾಲ ತಮ್ಮನ್ನು ಮುಡಿಪಾಗಿರಿಸಿಕೊಂಡರು.   1995ರ ವರ್ಷದಲ್ಲಿ ಕೆಜ್ರೀವಾಲ್ ಐ ಎ ಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಇಂಡಿಯನ್ ರೆವಿನ್ಯೂ ಸರ್ವಿಸ್ ಸೇರಿದರು.  ಫೆಬ್ರವರಿ 2006ರ ವರ್ಷದಲ್ಲಿ ಕೆಜ್ರೀವಾಲ್ ತಮ್ಮ ಆದಾಯ ತೆರಿಗೆ ವಿಭಾಗದ ಜಾಯಿಂಟ್ ಕಮಿಷನರ್ ಹುದ್ಧೆಯಿಂದ ಸ್ವಯಂ ನಿವೃತ್ತಿ ಪಡೆದರು.  ಸ್ವಯಂ ನಿವೃತ್ತಿಯ ನಂತರದಲ್ಲಿ ಅವರು ನವದೆಹಲಿಯಲ್ಲಿ ಪರಿವರ್ತನ್ ಎಂಬ ಆಂದೋಳನವನ್ನು ಹುಟ್ಟು ಹಾಕಿ ಸರ್ಕಾರಿ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರಿಗೆ ಉತ್ತರ ನೀಡುವಂತಹ ಆಡಳಿತ ವ್ಯವಸ್ಥೆಗಾಗಿ ಕಾರ್ಯನಿರ್ವಹಿಸತೊಡಗಿದರು.  ಡಿಸೆಂಬರ್ 2006ರ ವರ್ಷದಲ್ಲಿ ಅವರು ಮನಿಶ್ ಸಿಸೋಡಿಯಾ ಮತ್ತು ಅಬಿನಂದನ್ ಸಿಖ್ರಿ ಅವರೊಂದಿಗೂಡಿ ಪಬ್ಲಿಕ್ ಕಾಸ್ ರಿಸರ್ಚ್ ಫೌಂಡೇಶನ್ ಸ್ಥಾಪಿಸಿ ಸ್ವಯಂ ನಿಯಂತ್ರಿತ ಆಡಳಿತ ವ್ಯವಸ್ಥೆ ಮತ್ತು ರೈಟ್ ಟು ಇನ್ಫರ್ಮೇಶನ್ ಅಂದರೆ ಸಾರ್ವಜನಿಕರಿಗೆ ಮಾಹಿತಿ ಹಕ್ಕುಗಳನ ಕಾಯಿದೆಯ ಕುರಿತಾದ ತಿಳುವಳಿಕೆಗಳಿಗೆ ಹೆಚ್ಚಿನ  ಸಂಚಲನೆ ನೀಡಿದರು. 

ಕೆಜ್ರೀವಾಲ್ ಅರುಣಾ ರಾಯ್ ಮುಂತಾದವರೊಡಗೂಡಿ  ಪ್ರಾರಂಭಿಸಿದ  ಆರ್ ಟಿ ಐ ಪರವಾಗಿನ ಹೋರಾಟ ದಿನೇ ದಿನೇ ಸಾರ್ವಜನಿಕ ಅಂದೋಲನವಾಗಿ ಪ್ರಖ್ಯಾತಗೊಂಡಿತು. ಈ ಹೋರಾಟದ ಫಲವಾಗಿ ದೆಹಲಿ ಸರ್ಕಾರದ ಆಡಳಿತದಲ್ಲಿ ಮೊದಲಿಗೆ ಆರ್ ಟಿ ಐ ಕಾಯಿದೆ ಜಾರಿಗೊಂಡಿತು.  2005ರ ವರ್ಷದಲ್ಲಿ ಭಾರತದ ಪಾರ್ಲಿಮೆಂಟಿನಲ್ಲಿ ಆರ್ ಟಿ ಐ ಕಾಯಿದೆ ಜಾರಿಗೊಂಡಿತು.  ಜುಲೈ 2006ರ ವರ್ಷದಿಂದ ಮೊದಲ್ಗೊಂಡಂತೆ ಕೆಜ್ರೀವಾಲ್ ಭಾರತದಾದ್ಯಂತ ಆರ್ ಟಿ ಐ ಕಾಯಿದೆಯ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕಾಯಕ ಮಾಡತೊಡಗಿದರು.  ಜನರನ್ನು ಆರ್ ಟಿ ಐ ಕಾಯಿದೆ ಬಳಸಲು ಪ್ರೇರಿಸುವ ಸಲುವಾಗಿ ತಮ್ಮ ಎನ್ ಜಿ ಓ  ಸಂಸ್ಥೆಯಿಂದ ಪ್ರಶಸ್ತಿಗಳನ್ನು ನೀಡುವ ಪದ್ಧತಿಯನ್ನು ಸಹಾ ಜಾರಿಗೆ ತಂದರು.  ಸ್ವಯಂ ಕೆಜ್ರೀವಾಲ್ ಅವರೇ ಆರ್ ಟಿ ಐ ಕಾಯಿದೆಯನ್ನು ಉಪಯೋಗಿಸಿ ಆದಾಯ ತೆರಿಗೆ ಇಲಾಖೆ, ದೆಹಲಿ ನಗರ ಪಾಲಿಕೆ, ಭಾರತೀಯ ಸಾರ್ವಜನಿಕ ವಿತರಣಾ ವ್ಯವಸ್ಥೆ , ದೆಹಲಿ ವಿದ್ಯುತ್ ಶಕ್ತಿ ನಿಗಮ ಮುಂತಾದ ವ್ಯವಸ್ಥೆಗಳಲ್ಲಿನ  ಭ್ರಷ್ಟಾಚಾರಗಳನ್ನು ಬಯಲಿಗೆ ತಂದರು.   

ಸಾರ್ವಜನಿಕ ಜೀವನದಲ್ಲಿ ಶುದ್ಧತೆಯನ್ನು ಮೂಡಿಸುವ   ಬಗೆಗೆ ತಮ್ಮ ಕಾಯಕವನ್ನು ಮುಂದುವರೆಸಿದ ಅರವಿಂದ್ ಕೆಜ್ರೀವಾಲ್, ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಮಹತ್ವದ ಕೆಲಸ ಮಾಡಿದ್ದ ಅಣ್ಣಾ ಹಜಾರೆ ಅವರನ್ನು ರಾಷ್ಟ್ರಮಟ್ಟದ ಅಂದೋಲಕ್ಕೆ ತರುವಲ್ಲಿ ಪ್ರಮುಖ ಪಾತ್ರಧಾರಿಯಾದರು.  ಅಣ್ಣಾ ಹಜಾರೆ ಅವರ ಹೋರಾಟಕ್ಕೆ ದೊರೆತ ಅಪಾರ ಜನಬೆಂಬಲ ಕೆಜ್ರೀವಾಲ್ ಅವರನ್ನು ಆ ತಂಡದ ಪ್ರಮುಖ ಮುಖವಾಣಿಯನ್ನಾಗಿಸಿತು ಎಂಬುದೇನೋ ನಿಜ.  ಆದರೆ ಅಣ್ಣಾ ಹಜಾರೆ ಹೋರಾಟದಲ್ಲಿ ವಿವಿಧ ರೀತಿಯ ಮನೋಭಾವನೆಯ ಜನಗಳೂ ಸಹಾ ಇದ್ದು ಕೆಲವೊಂದು ಅಪಸ್ವರಗಳೂ ಹುಟ್ಟಿಕೊಂಡು.  ಅದು ಕೆಜ್ರೀವಾಲ್ ಅವರ ವಿರುದ್ಧ ಕೂಡಾ ತನ್ನ ಮೊನಚನ್ನು ಬೀರಿತು.  ಅಣ್ಣಾ ಹಜಾರೆ ಅವರ ಹೋರಾಟ ಸಾಂಸ್ಥಿಕವಾಗಿಲ್ಲದ ಕಾರಣ ಆ ಆಂದೋಲನಕ್ಕೆ ಬಂದ ಹಣ ಕೆಜ್ರೀವಾಲ್ ಅವರ ಎನ್ ಜಿ ಓ  ಆದ ಪಬ್ಲಿಕ್ ಕಾಸ್ ಫಾರ್ ರಿಸರ್ಚ್ ಅಂಡ್ ಫೌಂಡೇಶನ್  ಮೂಲಕ ನಿರ್ವಹಣೆಯಾಗತೊಡಗಿದ್ದು ಅಗ್ನಿವೇಶ್ ಅಂತಹ ನಿತ್ಯ ವಿವಾಧಿಗಳ ನಾಲಿಗೆಯಲ್ಲಿ ಕೆಟ್ಟ ರೀತಿಯಲ್ಲಿ ನಲಿಯತೊಡಗಿತು.  ಮತ್ತೋರ್ವ ವಿವಾಧಿತ ಮಾತುಗಾರ್ತಿ ಅರುಂಧತಿ ರಾಯ್ ಅವರು ಕೆಜ್ರೀವಾಲ್ ಅವರ ಎನ್ ಜಿ ಓ ಸಂಸ್ಥೆಗೆ ಎರಡು ವರ್ಷಗಳ ಹಿಂದೆ ಫೋರ್ಡ್ ಫೌಂಡೇಷನ್ ನೀಡಿದ ಅನುದಾನವನ್ನು ರಗಳೆ ಮಾಡಿದರು. 

ಅಣ್ಣಾ ಹಜಾರೆ ಮತ್ತು ಅವರ ಅಂದಿನ ಕೆಜ್ರೀವಾಲ್ ಮುಂತಾದವರ ತಂಡ ಬಯಸಿದ್ದ ಜನಲೋಕಪಾಲ ಮಸೂದೆ ಹೊರಬರುವ ಯಾವುದೇ ಸೂಚನೆಗಳೂ ಇಲ್ಲದಿದ್ದಾಗ ಅವರು ನಡೆಸುತ್ತಿದ್ದ ಆಂದೋಲನಕ್ಕೆ ಸಾರ್ವಜನಿಕವಾದ ಜನಬೆಂಬಲ ಕ್ಷೀಣಿಸತೊಡಗಿತ್ತು.  ಹೀಗಾಗಿ ಅಣ್ಣಾ ಹಜಾರೆ ಅವರ ಉಪವಾಸವನ್ನೇ ಆಯುಧ ಮಾಡಿಕೊಂಡಿದ್ದ ಈ ಅಂದೋಲನ ಅಣ್ಣಾ ಹಜಾರೆ ಅವರ ದೈಹಿಕ ಸಾಮರ್ಥ್ಯವನ್ನು ಕುಗ್ಗಿಸುವುದರ ಜೊತೆಗೆ ಆ ತಂಡದ ಆತ್ಮ ಸ್ಥೈರ್ಯವನ್ನೂ ಕಸಿಯತೊಡಗಿತ್ತು.  ಈ ಸಂದರ್ಭದಲ್ಲಿ ಈ ಅಂದೋಲನವು ರಾಜಕೀಯ ಪಕ್ಷವಾಗಿ ಹೊರಹೊಮ್ಮಬೇಕು ಎಂಬ ಅಭಿಪ್ರಾಯ ಈ ಅಂದೋಲನದ ಬುಡವನ್ನೇ ಕತ್ತರಿಸಿತ್ತು.  ಕೆಜ್ರೀವಾಲ್ ಮತ್ತು ಪ್ರಾಶಾಂತ್ ಭೂಷಣ್ ಮುಂತಾದವರು ಸೃಷ್ಟಿಸಿರುವ ಆಮ್ ಔರ್ ಆದ್ಮಿಪಕ್ಷ ರಾಜಕೀಯವಾಗಿ ಇದುವರೆವಿಗೂ ಏನನ್ನೂ ಮಹತ್ವದ್ದಾಗಿ ಸಾಧಿಸದಿದ್ದರೂ ರಾಜಕೀಯ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ತನ್ನ ಕಾಯಕ ಮತ್ತು ಹೋರಾಟವನ್ನಂತೂ ಅಷ್ಟಿಷ್ಟು ಜೀವಂತವಾಗಿರಿಸಿಕೊಂಡಿದೆ.

ವ್ಯವಸ್ಥೆಯಲ್ಲಿ ಬದಲಾವಣೆ ಎಂಬುದು ನಿರೀಕ್ಷಿತ ರೀತಿಯಲ್ಲಿ ಅಲ್ಪ ಕಾಲಮಾನದಲ್ಲಿ ಆಗುವಂತದ್ದಲ್ಲ.  ಸಾರ್ವಜನಿಕ ಹೋರಾಟ ಅಂದ ಮೇಲೆ ಅಲ್ಲಿ ಹಲವು ಗೋಜಲುಗಳು ಇದ್ದೇ ಇರುತ್ತವೆ.  ಈ ಎಲ್ಲ ಗೋಜಲುಗಳು ಏನೇ ಇದ್ದರೂ ಒಬ್ಬ ಯುವಕ ತಾನು ಜೀವನದಲ್ಲಿ ಯಾವುದೇ ಉಸಾಬರಿ ಇಲ್ಲದೆ ಹೇರಳವಾಗಿ ಹಣ ಮಾಡಿಕೊಂಡು ಬದುಕಬಹುದಾದ ಐ ಐ ಟಿ ಉತ್ತೀರ್ಣತೆ, ಐ ಎ ಎಸ್ ಉತ್ತೀರ್ಣತೆಗಳನ್ನು ಹೊಂದಿ ಉನ್ನತ ಹುದ್ಧೆಯನ್ನು ಹೊಂದಿದ್ದಾಗಿಯೂ ಅದನ್ನೆಲ್ಲಾ ಬಿಟ್ಟು,   ಸಾರ್ವಜನಿಕ ಹಿತಾಸಕ್ತಿಯ ಕುರಿತಾಗಿ ಆಸಕ್ತಿ ತಳೆದು ತನ್ನನ್ನು ಅದಕ್ಕಾಗಿ ಸಮರ್ಪಿಸಿಕೊಂಡಿರುವುದು ಸಾಮಾನ್ಯವಾದ ಮಾತೇನಲ್ಲ.   ಭಗ್ನಗೊಂಡ ಅಣ್ಣಾ ಹಜಾರೆ ಹೋರಾಟದ ಆಚೆಗೆ ಸಹಾ ಆರ್ ಟಿ ಐ ಕಾಯಿದೆಗಾಗಿ ಅವರು ಮಾಡಿರುವ ಹೋರಾಟ, ಸಾರ್ವಜನಿಕ ಜೀವನದಲ್ಲಿ  ಸೃಷ್ಟಿಸಿರುವ  ಜಾಗೃತಿಗಳು ಖಂಡಿತವಾಗಿಯೂ ಮಹತ್ವಪೂರ್ಣವಾದುದು. 


ಇನ್ನೂ ನಲವತ್ತೈದು ವರ್ಷ ವಯಸ್ಸಿನ   ಕೆಜ್ರೀವಾಲ್ ತನ್ನ ಚಿಕ್ಕಪುಟ್ಟ ತಪ್ಪುಗಳನ್ನು ತಿದ್ದಿಕೊಂಡು, ಸ್ಪಷ್ಟ ಹಾದಿಯನ್ನು ಕಂಡುಕೊಂಡು ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಯಲಿ.  ಇಂದು ಭಾರತೀಯ ಸಾರ್ವಜನಿಕ ಜೀವನಕ್ಕೆ ಅಗತ್ಯವಾಗಿ ಬೇಕಿರುವ ಸಮರ್ಥ ನಾಯಕತ್ವದ ಕೊರತೆಯನ್ನು ತುಂಬುವಂತಾಗಲಿ ಎಂದು ಆಶಿಸೋಣ.

Tag: Aravind Kejriwal

ಕಾಮೆಂಟ್‌ಗಳಿಲ್ಲ: