ಮಂಗಳವಾರ, ಸೆಪ್ಟೆಂಬರ್ 3, 2013

ಎಡ್ವರ್ಡ್ ಪೀಟರ್ ರೈಸ್

ಎಡ್ವರ್ಡ್ ಪೀಟರ್ ರೈಸ್

ಬ್ರಿಟಿಷರು ಭಾರತದಲ್ಲಿದ್ದಾಗ ಯೂರೋಪ್ ದೇಶಗಳಿಂದ ಇಲ್ಲಿಗೆ ಆಗಮಿತರಾದ ಹಲವರು, ಅವರು ಇಲ್ಲಿಗೆ ಬಂದ ಆಡಳಿತ ಮತ್ತು ಧಾರ್ಮಿಕ ಪ್ರಚಾರದ ಕೆಲಸಗಳ ಜೊತೆಗೆ ಇಲ್ಲಿನ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ  ಹಲವಾರು ನಿದರ್ಶನಗಳಿವೆ.  ಇಂತಹ ಗಣನೀಯರಲ್ಲಿ ಬೆಂಜಮಿನ್ ರೈಸ್ ಮತ್ತು ಅವರ ಮಕ್ಕಳಾದ ಬಿ.ಎಲ್. ರೈಸ್, ಇ.ಪಿ. ರೈಸ್ ಪ್ರಮುಖರಾಗಿದ್ದಾರೆ.  ಇವರಲ್ಲಿ ಬಿ. ಎಲ್ ರೈಸ್ ಶಾಸನ ಮತ್ತು ಸಂಶೋಧನ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿ ‘ಶಾಸನ ಪಿತಾಮಹ’ ನೆಂಬ ಖ್ಯಾತಿ ಪಡೆದವರು.  ಅವರ ಕಿರಿಯ ಸಹೋದರ ಎಡ್ವರ್ಡ್ ಪೀಟರ್ ರೈಸ್ ಅವರು ಕೂಡಾ ಕನ್ನಡಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆಯನ್ನುನೀಡಿದ್ದಾರೆ.

ಎಡ್ವರ್ಡ್ ಪೀಟರ್ ರೈಸ್ ಇ.ಪಿ. ರೈಸ್ ಎಂದೇ ಕನ್ನಡ ಸಾಹಿತ್ಯ ವಲಯದಲ್ಲಿ ಖ್ಯಾತರು.  ಅವರು 1849ನೆಯ ಏಪ್ರಿಲ್ 26ರಂದು ಬೆಂಗಳೂರಿನಲ್ಲಿ ಜನಿಸಿದರು.  ತಮ್ಮ ಧಾರ್ಮಿಕ ಪ್ರಚಾರ ಕಾರ್ಯದ ಜೊತೆ ಜೊತೆಗೆ ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ಮತ್ತು ಕನ್ನಡ ಭಾಷೆಯನ್ನು ವಿಶೇಷವಾಗಿ ರೂಢಿಸಿಕೊಂಡು ಅವುಗಳಲ್ಲಿ ವಿಶಿಷ್ಟ ಪ್ರೀತಿಯನ್ನು ಬೆಳೆಸಿಕೊಂಡರು.  1915ರವರೆಗೆ ಬೆಂಗಳೂರಿನಲ್ಲಿದ್ದು, ನಂತರ ಹ್ಯಾರೋ ಪಟ್ಟಣದಲ್ಲಿ ನೆಲೆಸಿದ ಅವರು 1936ರ ಜುಲೈ ವೇಳೆಗೆ ನಿಧನರಾದರು.  ಭಾರತವನ್ನು ಬಿಟ್ಟು ಹ್ಯಾರೋದಲ್ಲಿ ನೆಲೆಸಿದ ಮೇಲೂ ಸಹಾ ಕನ್ನಡ ಭಾಷಾ ಸಾಹಿತ್ಯಗಳ ವಿಷಯದಲ್ಲಿ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದ ರೈಸ್ ಅವರು ಹಲವು ಕೃತಿಗಳ ರಚನೆಯನ್ನು ಕೈಗೊಂಡರು.

ಮೊದ ಮೊದಲು ಅವರ ಧಾರ್ಮಿಕ ಪ್ರಚಾರಕ್ಕೆ ಅನುಕೂಲಕರವಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದರು.  ಹಳೆಯ ಒಡಂಬಡಿಕೆಯನ್ನು 1890ರಲ್ಲಿ ಸರಳ ಕನ್ನಡದಲ್ಲಿ ಬರೆದು ಪ್ರಕಟಿಸಿದರು.  ಮೋಸೆಯ ವಿರಚಿತ ಮೊದಲ ಕಾಂಡ, ಯಾತ್ರಾ ಕಾಂಡ ಮತ್ತು ಕನ್ನಡ ಬೈಬಲ್ ಕೀರ್ತನೆಗಳು ನಂತರ ಪ್ರಕಟಗೊಂಡವು.

ಇಂಗ್ಲಿಷ್ ಭಾಷೆಯಲ್ಲಿ ರೈಸರು ಮೂರು ಕೃತಿಗಳನ್ನು ರಚಿಸಿದ್ದಾರೆ.  ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಅತ್ಯಂತ ಗಮನಾರ್ಹ ಕೃತಿಯೆಂದರೆ ‘ಹಿಸ್ಟರಿ ಆಫ್ ಕೆನರೀಸ್ ಲಿಟರೇಚರ್’.  ಇಂಗ್ಲಿಷ್ ಬಾಷೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯ ಮಾಡಿಕೊಡುವ ಕೃತಿ ಇದಾಗಿದೆ.  ಇದು 1915ರಲ್ಲಿ ಮೊದಲು ಪ್ರಕಟವಾಯಿತು.  ಧರ್ಮ ಪ್ರಚಾರಕರಾಗಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ತಮ್ಮ ತಂದೆಯವರ ಜೀವನ ಚರಿತ್ರೆಯನ್ನು ‘ಬೆಂಜಮಿನ್ ರೈಸ್ ಆರ್ ಫಿಫ್ಟಿ ಇಯರ್ಸ್ ಇನ್ ದಿ ಮಾಸ್ಟರ್ ಸರ್ವೀಸ್’ ಎಂಬ ಹೆಸರಿನಲ್ಲಿ ಪ್ರಕಟಿಸಿದರು.  ಅವರ ಮತ್ತೊಂದು ಕೃತಿ ‘ದಿ ಮಹಾಭಾರತ ಅನಾಲಿಸಿಸ್ ಅಂಡ್ ಇಂಡೆಕ್ಸ್’ ಇದು 1934ರಲ್ಲಿ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರಕಾಶನದ ಮೂಲಕ ಪ್ರಕಟವಾಗಿದೆ.

ಕನ್ನಡ ಸಾಹಿತ್ಯದ ಇತಿಹಾಸ ದೃಷ್ಟಿಯಿಂದ ರೈಸರು ರಚಿಸಿದ ‘ಹಿಸ್ಟರ ಆಫ್ ಕೆನರೀಸ್ ಲಿಟರೇಚರ್’ ಅತ್ಯಂತ ಗಮನಾರ್ಹ ಕೃತಿಯೆಂದು ಹೇಳಬಹುದು.  ಈ ಕೃತಿ ಇಡೀ ಕನ್ನಡ ಸಾಹಿತ್ಯವನ್ನು ಮೊದಲ ಬಾರಿಗೆ ಸಾಹಿತ್ಯ ಚರಿತ್ರೆಯ ಪರಿಕಲ್ಪನೆಯಲ್ಲಿ ಗಮನಿಸಿದ ಕೃತಿ.  ಅದು ಹೊರ ಬರುವ ಹೊತ್ತಿಗೆ ಆರ್ ನರಸಿಂಹಾಚಾರ್ಯರ ಕರ್ಣಾಟಕ ಕವಿಚರಿತೆಯ ಮೊದಲ ಸಂಪುಟ (1907) ಮಾತ್ರ ಪ್ರಕಟವಾಗಿತ್ತು.  ಡಾ. ಕಿಟಲ್, ಬಿ. ಎಲ್. ರೈಸ್ ಮೊದಲಾದವರು ತಾವು ಸಂಪಾದಿಸಿದ ಕೃತಿಗಳಿಗೆ ಬರೆದ ಉಪೋದ್ಘಾತಗಳಲ್ಲಿ ಮತ್ತು ಬಿಡಿ ಲೇಖನಗಳಲ್ಲಿ ಸಾಹಿತ್ಯ ಚರಿತ್ರೆಯ ಹೊಳಹುಗಳನ್ನು ಕಾಣಿಸಿದ್ದರು.  ರೈಸ್ ಅವರ ಕೃತಿ ರಚನೆಯ ಮೊದಲು ಕನ್ನಡ ಸಾಹಿತ್ಯವನ್ನು ಒಟ್ಟಾಗಿ ಗ್ರಹಿಸುವ ಪ್ರಯತ್ನ ಆಗಿರಲಿಲ್ಲ.  ಅಂಥ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕನ್ನಡ ಸಾಹಿತ್ಯದ ಇತಿಹಾಸವನ್ನು ಬರೆಯಲು ಹೊರಟರು.  ಕನ್ನಡ ಸಾಹಿತ್ಯವನ್ನು ಕುರಿತು ವಿಹಂಗಮ ದೃಷ್ಟಿಯಿಂದ ಕೂಡಿದ್ದರೂ ಸಂಪೂರ್ಣ ಕಲ್ಪನೆಯನ್ನು ಕೊಡುವಂಥ ಈ ಕೃತಿ ಅವರು ಬರೆದದ್ದು ಗಮನಾರ್ಹವಾಗಿದೆ.  ಕನ್ನಡ ಸಾಹಿತ್ಯದ ರಸಮಯ ಅಂಶಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಒಂದು ಸ್ತುತ್ಯ ಕಾರ್ಯವನ್ನು ಅವರು ಕೈಗೊಂಡರು.  ಹನ್ನೆರಡು ಅಧ್ಯಾಯಗಳಲ್ಲಿ ಕನ್ನಡ ಸಾಹಿತ್ಯವನ್ನು ವಿಭಾಗಿಸಿಕೊಂಡು ವಿವೇಚಿಸಿದ್ದಾರೆ.  ಕಾವ್ಯ ಭಾಗಗಳನ್ನು ಉದಾಹರಿಸುವಾಗ ಅನೇಕ ಕಾವ್ಯಭಾಗಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ.  ಸೋಮೇಶ್ವರ ಶತಕ, ಬಸವ ಪುರಾಣ, ಸರ್ವಜ್ಞನ ವಚನಗಳು ಮುಂತಾದುವನ್ನು ಅನುವಾದಿಸಲಾಗಿದೆ.

ಇ. ಪಿ. ರೈಸರ ಕೃತಿಯಲ್ಲಿನ ಹಲವಾರು ಅಂಶಗಳ ಬಗೆಗೆ ಹಲಾವರು ಭಿನ್ನಾಭಿಪ್ರಾಯಗಳು ನಂತರದಲ್ಲಿ ಮೂಡಿವೆ.  ಇದರ ಪ್ರಾತಿನಿಧಿಕವಾಗಿ ರಂ.ಶ್ರೀ. ಮುಗಳಿಯವರ ಅಭಿಪ್ರಾಯವನ್ನು ಇಲ್ಲಿ ನೆನೆಯುವುದು ಸೂಕ್ತವೆನಿಸುತ್ತದೆ.  ‘ಹೊಸಗನ್ನಡ ಸಾಹಿತ್ಯದ ಆರಂಭ ಕಾಲದಲ್ಲಿ ಮಿಷನರಿ ವಿದ್ವಾಂಸರು ಅಂದು ಅವರಿಗೆ ದೊರೆತ ಸಾಮಗ್ರಿಯನ್ನು ಉಪಯೋಗಿಸಿ ಕನ್ನಡ ಸಾಹಿತ್ಯದ ಪರಿಚಯವನ್ನು ಇಂಗ್ಲಿಷಿನಲ್ಲಿ ಮಾಡಿಕೊಟ್ಟರು.  ಅವಕ್ಕೆ ಚರಿತ್ರೆಯೆಂದಾಗಲಿ ಸಮೀಕ್ಷೆಯೆಂದಾಗಲಿ ಕರೆಯುವುದು ಸೂಕ್ತವಾಗದು.  ಆ ಸಾಮಗ್ರಿಯೂ ಸ್ವಲ್ಪವಾಗಿತ್ತು’.

ಒಂದು ಭಾಷೆಯ ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಮಾಡುವ ಕೆಲಸಗಳಲ್ಲಿ ಗ್ರಹಿಕೆಯ ತೊಡಕುಗಳು, ಸೀಮಿತ ರೇಖೆಗಳು, ಗ್ರಹಿಕೆಯ ತೊಡಕುಗಳು ಇತ್ಯಾದಿ ಇರುತ್ತವಾದರೂ ಇ.ಪಿ. ರೈಸರ ಕಾರ್ಯ ಅತ್ಯಲ್ಪ ಸಾಮಗ್ರಿಗಳು ಮತ್ತು ವ್ಯವಸ್ಥೆಗಳಿದ್ದ ಕಾಲದಲ್ಲಿ ಉತ್ತಮ ಶ್ರಮ ಎಂಬುದನ್ನು ವಿದ್ವಾಂಸರು ಪುರಸ್ಕರಿಸುತ್ತಾರೆ.  ಈ ಕೃತಿಯ ದ್ವಿತೀಯಾವೃತ್ತಿ 1921ರಲ್ಲಿ ಪ್ರಕಟವಾಯಿತು.  ಶಾಸನಗಳು, ವಚನ, ಕೀರ್ತನೆ, ಷಟ್ಪದಿಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದಾರೆ.  ಅವರ ಅನುವಾದ ಸಾಮರ್ಥ್ಯ ಉತ್ತಮ ಮಟ್ಟದ್ದಾಗಿ ಕಂಡು ಬರುತ್ತದೆ.

ರೈಸ್ ಅವರು ತಮ್ಮ ತಂದೆಯಾದ ಬೆಂಜಮಿನ್ನರ ಬಗ್ಗೆ ಒಂದು ಉತ್ತಮ ಜೀವನ ಚರಿತ್ರೆಯನ್ನು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದಾರೆ.  ಉತ್ತಮ ರೀತಿಯಲ್ಲಿ ಅಚ್ಚುಕಟ್ಟಾಗಿ ರಚಿತವಾದ ಈ ಜೀವನ ಚರಿತ್ರೆ ಇ.ಪಿ. ರೈಸ್ ಅವರ ಸಂಶೋಧನಾ ಮತ್ತು ವಸ್ತು ನಿಷ್ಠ ಮನೋಧರ್ಮಕ್ಕೆ ಉತ್ತಮ ಸಾಕ್ಷಿಯಾಗಿದೆ.

ರೈಸರ ಮೂರನೆಯ ಮಹತ್ವದ ಇಂಗ್ಲಿಷ್ ಕೃತಿ ‘ದಿ ಮಹಾಭಾರತ ಅನಾಲಿಸಿಸ್ ಅಂಡ್ ಇಂಡೆಕ್ಸ್’ ಎಂಬುದಾಗಿದೆ.  1934ರಲ್ಲಿ ಪ್ರಕಟವಾದ ಈ ಕೃತಿ ಇ. ಪಿ. ರೈಸರ ಅಧ್ಯಯನ ವ್ಯಾಪ್ತಿಯನ್ನು ಅನಾವರಣಗೊಳಿಸುತ್ತದೆ.  ರೈಸ್ ಅವರು ವಿಷಯಾನುಕ್ರಮವಾಗಿ ಹೆಸರುಗಳು, ಯುದ್ಧಕಲೆ, ಕಲ್ಪಗಳು, ಯುಗಗಳು ಮುಂತಾದವುಗಳಿಗೆ ಸಮರ್ಪಕ ರೀತಿಯಲ್ಲಿ ವಿವರಣೆಯನ್ನು ನೀಡಿ ಮಹಾಭಾರತದ ಅಭ್ಯಾಸಕ್ಕೆ ಉಪಯುಕ್ತ ಕೈಪಿಡಿಯೊಂದನ್ನು ನೀಡಿದ್ದಾರೆ.

ರೈಸರು ಕನ್ನಡ ನಾಡು ನುಡಿಗಳ ವಿಷಯದಲ್ಲಿ ಅಪಾರವಾದ ಪ್ರೀತಿಯನ್ನು ಹೊಂದಿದ್ದರು.  ತಮಗೆ ಬೇರೆ ಬೇರೆ ಸಂದರ್ಭಗಳಲ್ಲಿ ದೊರೆತಿದ್ದ ಅಮೂಲ್ಯ ವಸ್ತುಗಳನ್ನು ಬೆಂಗಳೂರಿನ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿರುವುದು ಕಂಡುಬರುತ್ತದೆ.  ಇ. ಪಿ. ರೈಸ್ ಅವರ ಸಾಮಾಜಿಕ ಕಾರ್ಯಗಳನ್ನು ಗಮನಿಸಿ 1891ನೆಯ ಇಸವಿಯಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಸೇವೆ ಸಲ್ಲಿಸಲು ಯೋಗ್ಯರಾದ ವ್ಯಕ್ತಿಗಳ ಪಟ್ಟಿಯಲ್ಲಿ ಶ್ರೀಯುತರ ಹೆಸರಿದ್ದುದು ತಿಳಿದು ಬರುತ್ತದೆ.

ರೈಸ್ ಅವರ ಅಧ್ಯಯನಶೀಲತೆ, ಕನ್ನಡ ಸಾಹಿತ್ಯ ಪ್ರೇಮ, ಭಾಷಾ ಪ್ರೀತಿಗಳು ಅವರ ಕೃತಿಗಳಲ್ಲಿ ಮೂಡಿ ನಿಂತಿವೆ.  ತಾವು ರಚಿಸಿದ ಸಾಹಿತ್ಯ ಚರಿತ್ರೆಯನ್ನು ಕರ್ಣಾಟಕ ಕವಿಚರಿತೆಯನ್ನು ಬರೆದ ಪ್ರಾಕ್ತನ ವಿಮರ್ಶ ವಿಚಕ್ಷಣ ರಾವ್ ಬಹದ್ದೂರ್ ಆರ್. ನರಸಿಂಹಾಚಾರ್ಯರಿಗೆ ಅರ್ಪಿಸಿದ್ದಾರೆ.  ಇದು ರೈಸ್ ಅವರ ವಿದ್ವತ್ಪ್ರೀತಿ ಮತ್ತು ನಿಷ್ಪಕ್ಷಪಾತ ಮನೋಭಾವ, ಕನ್ನಡ ವಿದ್ವಾಂಸರಿಗೆ ತೋರಿಸುವ ಪ್ರೀತ್ಯಾದರ ಗುಣಗಳಿಗೆ ಸಂಕೇತವಾಗಿವೆ.

ರೈಸ್ ಅವರು ಹ್ಯಾರೋದಲ್ಲಿ ಮೃತರಾದ ವಿಷಯ ತಿಳಿದ ನಂತರ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ತುಂಬಾ ಗೌರವಪೂರ್ವಕವಾಗಿ ಅವರನ್ನು ಸ್ಮರಿಸಲಾಗಿದೆ.  ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಪ್ರಧಾನಗಣ್ಯರು ಭಾಗವಹಿಸಿ ಅವರನ್ನು ಕೊಂಡಾಡಿದ್ದಾಗಿ ತಿಳಿದುಬರುತ್ತದೆ.  ರೈಸ್ ಅವರು ಕನ್ನಡ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ಪಡೆದ ಗಣ್ಯ ಸ್ಥಾನವನ್ನು ಇದು ಸೂಚಿಸುತ್ತದೆ.

(ಆಧಾರ: ಡಾ. ಸಿ. ಯು. ಮಂಜುನಾಥ್ ಅವರ ಇ.ಪಿ. ರೈಸ್ ಅವರ ಕುರಿತಾದ ಲೇಖನ)

Tag: Edward Peter Rice

ಕಾಮೆಂಟ್‌ಗಳಿಲ್ಲ: