ಸೋಮವಾರ, ಸೆಪ್ಟೆಂಬರ್ 2, 2013

ಜಿ. ಎಚ್. ನಾಯಕ್

ಜಿ. ಎಚ್.  ನಾಯಕ್

ಕನ್ನಡ ಸಾಹಿತ್ಯಾಸಕ್ತರಲ್ಲಿ ಜಿ ಎಚ್ ನಾಯಕ್ ಗೊತ್ತಿಲ್ಲ ಎನ್ನುವವರಿಲ್ಲ. ಜಿ ಎಚ್ ಕೇವಲ ವಿಮರ್ಶಕರಲ್ಲ, ವಿಮರ್ಶೆಯ ಗುರು. ಕೇವಲ ಸಾಹಿತಿಯಲ್ಲ, ಅವರು ಕನ್ನಡ ಸಂಸ್ಕೃತಿಯ ಧೀಮಂತ ವಕ್ತಾರ. ಬದುಕಿ ಬರೆದ, ಅಂದಂತೆ ನಡೆದುಕೊಂಡ ಒಂದು ಸಾತ್ವಿಕ ತೇಜಸ್ಸು.

ಗೋವಿಂದರೇ ಎಚ್ ನಾಯಕ್ ಅವರು ಸೆಪ್ಟಂಬರ್ 18, 1935ರಂದು ಅಂಕೋಲಾದ ಬಳಿಯ ಸುರ್ವೆ ಎಂಬ ಹಳ್ಳಿಯಲ್ಲಿ ಜನಿಸಿದರು.   ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ  ಸೇವೆ ಸಲ್ಲಿಸಿರುವ  ನಾಯಕ್  ಅಪಾರ ಶಿಷ್ಯ ವೃಂದ ಹೊಂದಿದವರಾಗಿದ್ದಾರೆ.  ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿದ್ದ ಜಿ. ಎಚ್. ನಾಯಕರು ಇಂದಿನವರೆಗೆ ಹಲವಾರು ಸಾಮಾಜಿಕ ಹೋರಾಟಗಳಲ್ಲಿ ನಿರಂತರ ಸಕ್ರಿಯರಾಗಿದ್ದಾರೆ.  

ಕನ್ನಡದ ಸೃಜನೇತರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಸಾಹಿತಿ ಹಾಗೂ ವಿಮರ್ಶಕರಾದ  ಡಾ. ಜಿ.ಎಚ್.ನಾಯಕ್ ಅವರಿಗೆ 2010ನೇ ಸಾಲಿನ ಪಂಪ ಪ್ರಶಸ್ತಿಸಂದಿದೆ. ಅವರ ‘ಉತ್ತರಾರ್ಧ’ ಕೃತಿಗೆ  2014ರ ವರ್ಷದ  ಕೇಂದ್ರ ಸಾಹಿತ್ಯ ಅಕಾಡೆಮಿ  ಗೌರವ  ಸಂದಿದೆ. ನಾಯಕರು ತಮಗನ್ನಿಸಿದ್ದನ್ನೇ ಹೇಳುವ ನೇರವಾದಿ, ಛಲವಾದಿ. ಪ್ರೀತಿಸಿದವರನ್ನು ತೀರಾ ಹಚ್ಚಿಕೊಳ್ಳುವ ಮನಸ್ಸು ಅವರದು.   ಸಂಗೀತ ಪ್ರಿಯರಾದ ನಾಯಕರು ಬೇಂದ್ರೆಯವರ ಕವನಗಳನ್ನು ಸೊಗಸಾಗಿ ಹಾಡುತ್ತಾರೆ.

ತಮ್ಮ ವಿದ್ವತ್ತು, ಸರಳ, ಸಜ್ಜನಿಕೆಗಳಿಗೆ  ಹೆಸರಾಗಿರುವಂತೆಯೇ  ನಾಯಕ್ ಅವರು  ತಮ್ಮ  ನೇರ  ಮಾತುಗಾರಿಕೆಗೂ  ಹೆಸರಾಗಿದ್ದಾರೆ.  ಹಲವು ಹಿಂದಿನ  ಪ್ರಸಿದ್ಧ  ವ್ಯಕ್ತಿಗಳನ್ನು  ವೈಭವೀಕರಿಸಿ  ಪ್ರಚಾರ  ಮಾಡಿದಾಗಲೆಲ್ಲಾ ಅವರು ತಮ್ಮ  ಅಭಿಪ್ರಾಯಗಳನ್ನು  ಮುಚ್ಚು ಮರೆಯಿಲ್ಲದೆ  ಹೇಳಿದ್ದಾರೆ.

ನಾಯಕರ  ಕೃತಿಗಳಲ್ಲಿ ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ವಿನಯ ವಿಮರ್ಶೆ(1991), ಸಕಾಲಿಕ (1995), ಹರಿಶ್ಚಂದ್ರ ಕಾವ್ಯ (2002), ಗುಣಗೌರವ (2002), ದಲಿತ ಹೋರಾಟ: ಗಂಭೀರ ಸವಾಲುಗಳು (2004), ಕೃತಿಸಾಕ್ಷಿ (2006), ಸ್ಥಿತಿಪ್ರಜ್ಞ (2007), ಮತ್ತೆ ಮತ್ತೆ ಪಂಪ(2009), ಸಾಹಿತ್ಯ ಸಮೀಕ್ಷೆ (2009) ಪ್ರಮುಖವಾದವುಗಳು. ಇದಲ್ಲದೇ ಸಂವೇದನೆ, ಕನ್ನಡ ಸಣ್ಣಕತೆಗಳು, ಹೊಸಗನ್ನಡ ಕವಿತೆ, ಶತಮಾನದ ಕನ್ನಡ ಸಾಹಿತ್ಯ ಕೃತಿಗಳನ್ನು ಅವರು ಸಂಪಾದಿಸಿ ಹೊರತಂದಿದ್ದಾರೆ.  ಇತ್ತೀಚೆಗೆ  ಅವರ  ಆತ್ಮಕತೆ ‘ಬಾಳು’ ಹೊರಬಂದಿದೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರೊ.ನಾಯಕ್ ಉತ್ತಮ ಬರಹಗಾರರು.  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ  ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ  ಶಿವರಾಮ ಕಾರಂತ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಅವರನ್ನು ಅರಸಿ ಬಂದಿವೆ.

ಕನ್ನಡ ಸಾಹಿತ್ಯಲೋಕದ ಈ ಹಿರಿಯರಿಗೆ ಗೌರವಪೂರ್ವಕವಾದ ಹುಟ್ಟುಹಬ್ಬದ  ಶುಭ ಹಾರೈಕೆಗಳು.

Tag: G. H. Nayak

ಕಾಮೆಂಟ್‌ಗಳಿಲ್ಲ: