ಭಾನುವಾರ, ಸೆಪ್ಟೆಂಬರ್ 1, 2013

ಜಿ. ಪಿ. ರಾಜರತ್ನಂ

ಜಿ. ಪಿ. ರಾಜರತ್ನಂ

ಡಿಸೆಂಬರ್ 5 ಕನ್ನಡಕ್ಕಾಗಿ ಅಪಾರವಾಗಿ ದುಡಿದ ಜಿ.ಪಿ. ರಾಜರತ್ನಂ ಅವರು ಹುಟ್ಟಿದ ದಿನ.  ಗುಂಡ್ಲು ಪಂಡಿತ ರಾಜರತ್ನಂ ಅವರು ಹುಟ್ಟಿದ್ದು ಡಿಸೆಂಬರ್ 5, 1908.   ನಾವು ಎಷ್ಟೇ ವಯಸ್ಸಿನವರಿರಬಹುದು, ಜಿ.ಪಿ. ರಾಜರತ್ನಂ ಅವರು ನಮಗೆ ನಾವು ಪುಟ್ಟವರಿದ್ದಾಗ ಉಣಬಡಿಸಿದ್ದ ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’, ‘ಒಂದು ಎರಡು ಬಾಳೆಲೆ ಹರಡು’, ‘ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು’, ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’, ‘ರೊಟ್ಟಿ ಅಂಗಡಿ ಕಿಟ್ಟಪ್ಪ, ನನಗೊಂದು ರೊಟ್ಟಿ ತಟ್ಟಪ್ಪ’, ‘ಅಪ್ಪಾ ನಾಕಾಣಿ, ಯಾಕೋ ಪುಟಾಣಿ, ಹೇರ್ ಕಟ್ಟಿಂಗ್ ಸೆಲೂನ್’  ಈ ಪದ್ಯಗಳು ಈಗಲೂ ಅಷ್ಟೇ ಮುದ ನೀಡುತ್ತವೆ ಅಲ್ಲವೇ

ಜಿ.ಪಿ. ರಾಜರತ್ನಂ ಅವರ ಒಂದು ಪದ್ಯದ ಸಾಲು ಹೀಗಿದೆ.

ಆಚೆ ಜಡೆ, ಈಚೆ ಜಡೆ,
ನಡುವೆ ಊವಿನ ಸೇತುವೆ

ಸೇತುವೆಪದ ರಾಜರತ್ನಂಗೆ ಪ್ರಿಯ, ವಿಶೇಷ ಅರ್ಥವುಳ್ಳದ್ದು.  ವಿಭಿನ್ನ ವಿಚಾರಗಳ ನಡುವೆ, ಕ್ಷೇತ್ರಗಳ ನಡುವೆ, ಬಣಗಳ ನಡುವೆ, ಮಾರ್ಗಗಳ ನಡುವೆ, ಯುಗಗಳ ನಡುವೆ, ಜನಕೂಟಗಳ ನಡುವೆ, ಮತ ಧರ್ಮಗಳ ನಡುವೆ, ಒಲವುಗಳ ನಡುವೆ, ರುಚಿಗಳ ನಡುವೆ, ವ್ಯಕ್ತಿಗಳ ನಡುವೆ, ವಯೋತಂಡಗಳ ನಡುವೆ ಸಂಪರ್ಕ ಅಗತ್ಯ ಅಲ್ಲವೇರಾಜರತ್ನಂ ಅಂಥ ಸೇತುವೆ ಆಗಿದ್ದರು. 

ರಾಜರತ್ನಂ ಹಳೆಗನ್ನಡದಲ್ಲಿ ಪರಿಣತರು.  ಜೊತೆಗೆ ಹೊಸಗನ್ನಡದ ನಾನಾ ಅಲೆಗಳ ಆಟವನ್ನು ಕಂಡಿದ್ದರು.  ಹಾಗಾಗಿ ಹಳೆ-ಹೊಸಗನ್ನಡದ ನಡುವೆ ಸೇತುವೆ ಆದರು.  ಎಳೆಯ ಮಕ್ಕಳಿಗೆ ಅಗತ್ಯವಾದ ತಿಳಿಯಾದ ಸಾಹಿತ್ಯವನ್ನು ರಚಿಸಿಕೊಟ್ಟರು.  ಬೆಳೆದವರ ಗಟ್ಟಿಹಲ್ಲಿಗೆ ತಕ್ಕುದಾದ ಪುಷ್ಟಿಕರ ವಿಚಾರದ ಉಂಡೆಗಳನ್ನು ಕಟ್ಟಿಕೊಟ್ಟರು.  ಹಾಗೆಯೇ ದೊಡ್ಡವರ ಮೆಲುಕಿಗೆ ಚಿಂತನೆಯ ಗ್ರಾಸವನ್ನು ಒದಗಿಸಿದರು.  ಹೀಗೆ ಮಕ್ಕಳಿಂದ ಮುದುಕರವರೆಗೆ ಸೇತುವೆ ಆದರು. 

ಸರ್ವಧರ್ಮ ಸಮನ್ವಯಅವರು ನಂಬಿದ್ದ ಇನ್ನೊಂದು ಮೌಲ್ಯ.  ವೇದೋಪನಿಷತ್ತಿನ ವಾಕ್ಯಗಳು, ಬುದ್ಧ-ಅಶೋಕರ ಮಾತುಗಳು, ಗಾಂಧೀ ವಾಣಿ ಹಾಗೂ ಸತ್ಯಸಾಯಿಯವರ ಮಾತುಗಳು ಎಲ್ಲವೂ ಅವರಿಗೆ ಈ ನಿಟ್ಟಿನಲ್ಲಿ ಬಲವಾದ ಆಧಾರವನ್ನು ಒದಗಿಸಿದ್ದವು.  ಅಂತೆಯೇ ಅವರು ಜಗತ್ತಿನ ನಾನಾ ಧರ್ಮಗಳನ್ನು ಸಮಾನಾಸಕ್ತಿಯಿಂದ ಶ್ರದ್ಧೆಯಿಂದ ಅಧ್ಯಯನ ಮಾಡಿದರು.  ಜನತೆಗೆ ತಿಳಿಯ ಹೇಳಿದರು.  ಮತಗಳ ಮಳೆಬಿಲ್ಲನ್ನು ಕಟ್ಟಿ ತೋರಿಸಿದರು.  ಮತ ಮತಗಳ ನಡುವೆ ಸಂಪರ್ಕ ಸೇತು ಆದರು. 

ಸಾಹಿತ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖ ಎನಿಸಿಕೊಂಡ ಅವರ ಸಂಪರ್ಕದ ಮಹತ್ವಪೂರ್ಣ ಕಾರ್ಯವೆಂದರೆ ಸಾಹಿತ್ಯ ಪರಿಚಾರಿಕೆಯ ಕೆಲಸ.  ತಮ್ಮದು ಬೇರೆಯವರದು ಎಂಬ ಭೇದ ಇಲ್ಲದೆ ಎಲ್ಲರ ಸಾಹಿತ್ಯವನ್ನೂ ಅವರು ಜನರಿಗೆ ಪರಿಚಯ ಮಾಡಿ ಕೊಟ್ಟರು.  ತಾ ಕಂಡ ಶಿವಪಥವ ಎಲ್ಲರಿಗೆ ತೋರ್ಪಶಿವಶರಣರಂತೆ ಅವರು ತಾವು ಸಾಹಿತ್ಯದಲ್ಲಿ ಕಂಡ ಬೆಳಕನ್ನು ಸವಿದ ಸ್ವಾರಸ್ಯವನ್ನು ನಾಡಿಗೆಲ್ಲ ಹಂಚಲು ಹೆಣಗಿದರು.  ಇದರಿಂದಾಗಿ ರಾಜರತ್ನಂ ಸಾಹಿತಿಗಳಿಗೂ ಜನಕ್ಕೂ ನಡುವೆ ಸೇತುವೆ ಆಗಿದ್ದರು.  ನವೋದಯ ಕಾಲದಲ್ಲಿ ಕನ್ನಡ ಸಾಹಿತ್ಯವನ್ನು ಜನತೆಯ ಹತ್ತಿರಕ್ಕೆ ಕೊಂಡೊಯ್ದು ಮುಟ್ಟಿಸುವ ಕೆಲಸ ಏನಿದೆಯೋ  ಅದರಲ್ಲಿ ಭೀಮಪಾಲು ಜಿ.ಪಿ.ರಾಜರತ್ನಂ ಅವರದು.

ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿ, ‘ನೋವೆಲ್ಲ ಪಾವಕಎನ್ನುವುದು ಜಿ.ಪಿ. ರಾಜರತ್ನಂ ಅವರಿಗೆ ಪ್ರಿಯತತ್ವ.  1931ರಲ್ಲಿ ಅವರು ಕನ್ನಡ ಎಂ.ಎ. ಮುಗಿಸಿದರು.  ಕೆಲಸಕ್ಕಾಗಿ ಅಲೆದರು.  ಅಲ್ಲಲ್ಲಿ ಸಣ್ಣ ಮಾಸ್ತರ ಹುದ್ದೆ ನಡೆಸಿದರೂ ಜೀವನದ ಭದ್ರತೆ ಇಲ್ಲದೆ ಅಲೆಯುತ್ತಾ  ಬೆಂಗಳೂರಿನ ಜನಗಣತಿ ಕಚೇರಿಯಲ್ಲಿ ವಿಂಗಡನಾ ಗುಮಾಸ್ತೆಯ  ಕೆಲಸಕ್ಕೆ ಪ್ರಯತ್ನಿಸಿದರು.  ಅಲ್ಲಿ ಅಧಿಕಾರಿ ಆಗಿದ್ದ ಮಾಸ್ತಿ ಅವರು ಜಿ.ಪಿ. ರಾಜರತ್ನಂ ಅವರ ಸಾಹಿತ್ಯದ ಚಟುವಟಿಕೆಯನ್ನು ಬಲ್ಲವರಾಗಿದ್ದರು.  ಸಾಹಿತ್ಯದ ಕೆಲಸವನ್ನೇ ಮುಂದುವರೆಸು ನಾನು ನೆರವು ನೀಡುತ್ತೇನೆ ಎಂದರು.  ಅದರ ಪರಿಣಾಮ ರಾಜರತ್ನಂ ಅವರ ಬೌದ್ಧ ಅಧ್ಯಯನ, ಅದರಿಂದ ಕನ್ನಡಕ್ಕೆ ಆದ ಲಾಭ ಬೌದ್ಧ ಸಾಹಿತ್ಯ ಹಾಗೂ ಸಾಹಿತಿ ರಾಜರತ್ನಂ! ಚೀನಾದೇಶದ ಬೌದ್ಧ ಯಾತ್ರಿಕರು’, ‘ಧರ್ಮದಾನಿ ಬುದ್ಧ’, ‘ಬುದ್ಧನ ಜಾತಕಗಳುಮುಂತಾದ ಬೌದ್ಧಕೃತಿಗಳನ್ನು ರಚಿಸಿದರು.  ಭಗವಾನ್ ಮಹಾವೀರ’, ‘ಶ್ರೀ ಗೋಮಟೇಶ್ವರ ‘, ‘ಮಹಾವೀರರ ಮಾತುಕತೆ’, ‘ಭಗವಾನ್ ಪಾರ್ಶ್ವನಾಥ’, ‘ಜೈನರ ಅರವತ್ತು ಮೂವರು’  ಮೊದಲಾದ ಜೈನ ಸಾಹಿತ್ಯವನ್ನೂ ಸೃಷ್ಟಿಸಿದರು.  ಮುಂದೆ ಅವರ ಗೌತಮ ಬುದ್ಧಪಠ್ಯ ಪುಸ್ತಕವಾಯಿತು.

ಎಂ.ವಿ. ಗೋಪಾಲಸ್ವಾಮಿ ಶಿಶುವಿಹಾರದ ಮಾಸ್ತರಿಕೆಯ ಅವರ ಅನುಭವ ಎಳೆಯ ಮಕ್ಕಳು ಹಾಡಿಕೊಂಡು ನಲಿದು ಕುಣಿಯುವಂತೆ ಹಾಡುಗಳನ್ನು ರಚಿಸಲು ಪ್ರಚೋದಿಸಿತು.  ಪ್ರಖ್ಯಾತ ಪದ್ಯ ತುತ್ತೂರಿಬಂತು.  ಅದೇ ಮಾದರಿಯ ಕಡಲೆಪುರಿ’, ‘ಗುಲಗಂಜಿ’, 'ಕಂದನ ಕಾವ್ಯಮಾಲೆಕೂಡಾ ಬಂದವು.  ಶಿವರಾಮ ಕಾರಂತರು ಪುತ್ತೂರಿನ ಬಾಲವನದಲ್ಲಿ ನಡೆಸುತ್ತಿದ್ದ ಮಕ್ಕಳ ಮೇಳದ ಅನುಭವಗಳಿಂದ ಈ ಶಿಶುಸಾಹಿತ್ಯ ರಚನೆ ಬಲಗೊಂಡಿತು.  ಕನ್ನಡದಲ್ಲಿ ಶಿಶುಸಾಹಿತ್ಯ ಪ್ರಕಾರವನ್ನು ರಾಜರತ್ನಂ ಪೋಷಿಸಿ ಬೆಳೆಸಿದರು.  ಖಾದಿಯ ಉಡುಪು ಅವರ ಬಾಳಿನ ವ್ರತವೇ ಆಗಿತ್ತು. ನೆಹರೂ ಅವರು ಮಾಡಿದ ಒಂದು ಭಾಷಣ ಗಂಡುಗೊಡಲಿಯಂಥ ಉತ್ತಮ ವಿಶಿಷ್ಟ ನಾಟಕಕ್ಕೆ ಪ್ರೇರಕವಾಯಿತು. 

ಮೈಸೂರಿನ ಹೆಂಡದ ಅಂಗಡಿಯ ದೃಶ್ಯಗಳನ್ನು ನೋಡಿ ರಾಜರತ್ನಂರಲ್ಲಿ ಉಂಟಾದ ಪ್ರತಿಕ್ರಿಯೆಯಿಂದ ಎಂಡಕುಡುಕ ರತ್ನಎಂಬ ಅನನ್ಯ ಕೃತಿ ಹೊರಬರುವಂತೆ ಮಾಡಿತು.  ಆ ಪುಸ್ತಿಕೆಯ ಪ್ರಕಟಣೆಗೆ ಹಣ ಇಲ್ಲದೆ, ತಮ್ಮ ತಾರೆಕವನಕ್ಕೆ ಕೊಟ್ಟಿದ್ದ ಬಿ.ಎಂ.ಶ್ರೀ ಚಿನ್ನದ ಪದಕವನ್ನೇ ಒತ್ತೆ ಇಟ್ಟು ಸಾಲ ಪಡೆದರು.  14 ಪದ್ಯಗಳ ಎಂಡಕುಡುಕ ರತ್ನಕೃತಿಗೆ ಪುಟ್ನಂಜಿ ಪದಗಳು, ಮುನಿಯನ ಪದಗಳು ಸೇರಿಕೊಂಡು 77 ಪದಗಳ ರತ್ನನ ಪದಗಳುಕೃತಿ ಆಯಿತು.  ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಆ ಪದಗಳು ಎಬ್ಬಿಸಿದ ಕೋಲಾಹಲ, ಪಡೆದ ಪ್ರಚಾರ, ಜನಪ್ರಿಯತೆಗಳು ಅಸೂಯೆ ಹುಟ್ಟಿಸುವ ಹಾಗಿದ್ದವು.  ರತ್ನನ ಪದಗಳುಅಂದಿನ ದಿನದಲ್ಲೇ ಸತತವಾಗಿ ಏಳೆಂಟು ಮುದ್ರಣ ಕಂಡು, ಇಂದಿಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿರುವ ಹತ್ತಾರು ಕನ್ನಡ ಪುಸ್ತಕಗಳಲ್ಲಿ ಒಂದು ಎಂಬ ವಿಕ್ರಮವನ್ನು ಉಳಿಸಿಕೊಂಡಿದೆ. ಕಂಚಿನಕಂಠದ ರಾಜರತ್ನಂ ಉತ್ತಮ ಸಾಹಿತಿ, ಉತ್ತಮ ವಾಗ್ಮಿ ಎಂದು ನಾಡಿನಲ್ಲೆಲ್ಲಾ ಹೆಸರಾದರು. 

1938ರಲ್ಲಿ ದೊರೆತ ಕಾಲೇಜು ಕನ್ನಡ ಪಂಡಿತ ಹುದ್ದೆ ರಾಜರತ್ನಂ ಅವರ ಬದುಕಿಗೆ ಸ್ಥಿರತೆಯನ್ನು ತಂದಿತ್ತಿತು.  ಅಲ್ಲಿಂದ 1964ರಲ್ಲಿ  ನಿವೃತ್ತರಾಗುವವರೆಗೆ ಮೈಸೂರು, ಶಿವಮೊಗ್ಗ, ತುಮಕೂರು ಮುಂತಾದ ಊರುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡಿದರು.  ಅವರಲ್ಲಿ ಸಾಹಿತಾಸಕ್ತಿಯನ್ನು ತುಂಬಿದರು.  ನಿವೃತ್ತರಾದಾಗ ಅವರು ಕನ್ನಡ ರೀಡರ್’.  ಆಮೇಲೆಯೂ ಒಂದೆರಡು ವರ್ಷ ಯು.ಜಿ.ಸಿ. ಅಧ್ಯಾಪಕರಾಗಿ ಕೆಲಸ ಮಾಡಿದರು.  ಅಲ್ಲದೆ ಇನ್ನೂ ಅಷ್ಟು ಕಾಲ ನ್ಯಾಷನಲ್ ಕಾಲೇಜು, ಎಂ.ಇ.ಎಸ್ ಕಾಲೇಜು, ಸತ್ಯಸಾಯಿ ಕಾಲೇಜುಗಳಲ್ಲಿ ನಾನಾ ವಿಷಯಗಳ ಬಗ್ಗೆ ಭೋಧನೆ ನಡೆಸಿದರು.

ಕಾಲೇಜಿನ ಕೆಲಸ ರಾಜರತ್ನಂ ಅವರ ಬದುಕಿನ ಇನ್ನೊಂದು ಪುಟವನ್ನು ತುಂಬಿತು.  ಅದೆಂದರೆ ವಿದ್ಯಾರ್ಥಿಗಳ ಸಾಹಿತ್ಯಕೃಷಿಗೆ ಪ್ರೇರಣೆ.  ವಿದ್ಯಾರ್ಥಿಗಳಿಂದ ಬರೆಯಿಸಿದ ಲೇಖನಗಳನ್ನು ಅಚ್ಚುಮಾಡಿ ಪ್ರಕಟಿಸಿದರು.  ನಮ್ಮ ನಮ್ಮವರು’, ‘ವಿದ್ಯಾರ್ಥಿ ವಿಚಾರ ವಿಲಾಸ’, ‘ಗಂಧದ ಹುಡಿ’, ‘ನಮ್ಮ ಬೇಂದ್ರೆಯವರು’, ‘ಬಾಲ ಸರಸ್ವತಿ’, ‘ಹೂವಿನ ಪೂಜೆಇತ್ಯಾದಿಗಳು ಇಂತಹ ಕೃತಿಗಳು.  ಇದರಿಂದಾಗಿ ಹಲವಾರು ತರುಣರು ಸಾಹಿತಿಗಳಾಗುವುದಕ್ಕೂ, ನೂರಾರು ತರುಣರು ಸಾಹಿತ್ಯಸೇವಕರಾಗುವುದಕ್ಕೂ ಇಂಬು ದೊರೆಯಿತು.  ಇಂದು ಖ್ಯಾತನಾಮರಾಗಿರುವ ಹಲವಾರು ಸಾಹಿತಿಗಳು ಹಾಗೆ ತಯಾರಾದವರೇ.  ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘ ಕನ್ನಡನಾಡಿನ ಹಳೆಯ ಸಾಹಿತ್ಯ ಸಂಸ್ಥೆಗಳಲ್ಲಿ ಒಂದು.  ಪ್ರೊ.ಎ. ಆರ್. ಕೃಷ್ಣಶಾಸ್ತ್ರಿ ಅವರು ಸ್ಥಾಪಿಸಿದ್ದು.  ರಾಜರತ್ನಂ ಅದಕ್ಕೆ ಜೀವಕಳೆ ತುಂಬಿದರು.  ಸುಮಾರು 30 ಕೃತಿಗಳನ್ನು ಸಂಘದಿಂದ ಪ್ರಕಟಿಸಿದರು.  ತಾವೇ ಹೊತ್ತು ತಿರುಗಾಡಿ ಮಾರಿದರು.  ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆ, ಗಾಂಧೀ ಸಾಹಿತ್ಯ ಸಂಘ ಮೊದಲಾದ ಸಂಸ್ಥೆಗಳ ನಿಕಟ ಸಂಬಂಧ ಇಟ್ಟುಕೊಂಡಿದ್ದರು.  ಅಲ್ಲಿ ಹಾಗೂ ಇತರ ಅನೇಕ ಕಡೆಗಳಲ್ಲಿ ಸಾವಿರಾರು ಭಾಷಣಗಳಿಂದ ಸಾಹಿತ್ಯ, ಧರ್ಮ, ನೀತಿ ಇತ್ಯಾದಿ ವಿಷಯಗಳನ್ನು ಜನರಿಗೆ ತಿಳಿಯಹೇಳಿದರು. 

ಹಲವು ಕವಿ ಸಮ್ಮೇಳನಗಳ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್, ಮಲ್ಲೇಶ್ವರದ ನಾಗರೀಕರಿಂದ ಪುಸ್ತಕ ಮಾರಾಟದ ನಿಧಿಯ ಅರ್ಪಣೆಯ ವಿಶಿಷ್ಟ ಸನ್ಮಾನ, ಎಲ್ಲಕ್ಕೂ ಕಿರೀಟ ಪ್ರಾಯವಾಗಿ 1978ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವು ರಾಜರತ್ನಂ ಅವರಿಗೆ ಸಂದ ಗೌರವಗಳು.  1979ರ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಟಿಯ ಅಧ್ಯಕ್ಷತೆಯೇ ಕೊನೆಯದು.

ರಾಜರತ್ನಂ ಅವರ ರತ್ನನ ಪದಗಳು ಕನ್ನಡ ಭಾಷೆಯ ಪೊಗರು, ಭಾವದ ನವಿರು, ಕಲ್ಪನೆಯ ಸೊಗಸು, ಛಂದಸ್ಸಿನ ವೈವಿಧ್ಯ ಎಲ್ಲವೂ ಸೇರಿ ಒಂದು ಅಮೂಲ್ಯ ಪಾಕವಾಗಿದೆ. ಅದರಲ್ಲಿರುವ ಜೀವನ ದರ್ಶನ, ಕುಡುಕನೆಂಬ ಹೀಯಾಳಿಕೆಗೆ ಒಳಗಾದ ಬಡವನೊಬ್ಬನ ಕಾಣ್ಕೆ, ಆತನ ನೋವು, ನಲಿವು, ಒಲವು, ಗೆಲವು, ಸೋಲು, ಜೊತೆಗೆ ಆರ್ಥಿಕ ವಿಷಮತೆ, ಶೋಷಣೆಗಳ ಬಗ್ಗೆ ಆಕ್ರೋಶದ ಪ್ರತಿಭಟನೆಯ ದನಿ, ಬದುಕಿನ ಬಗ್ಗೆ ನಲ್ಮೆಯ ನೋಟ, ಬಡವನ ಶೃಂಗಾರ, ಹಾಸ್ಯ ರಸಪ್ರಜ್ಞೆ, ಆ ಧಾಟಿ! ಕನ್ನಡದಲ್ಲೇ ಅಸಮಾನ!   ಇಂದು ದಲಿತ-ಬಂಡಾಯಗಳು ಸಾಹಿತ್ಯ ವೃಕ್ಷದ ಹೊಸ ರೆಂಬೆಗಳೆಂದುಕೊಂಡು ಚಿಗುರುತ್ತವೆ.  1930ರ ದಶಕದಲ್ಲೇ ರತ್ನನ ಪದದಲ್ಲಿಯೇ, ದಲಿತರ ದನಿಯನ್ನು, ಬಂಡಾಯದ ದನಿಯನ್ನು ಕೇಳಬಹುದಾಗಿದೆ.  ಇದಕ್ಕೆ ತಮ್ಮನ  ಹಾಗೆ ಬಂದ ನಾಗನ ಪದಗಳುಇಂಥದೇ ಪ್ರತಿಭೆಯ ಫಲ.  ಜೀವನ ದರ್ಶನ ಬೇರೆಯದು.  ಇಲ್ಲಿ ನೆಮ್ಮದಿಯ ಸಂಸಾರ ಚಿತ್ರಣವಿದೆ.  ಪ್ರಾಮಾಣಿಕವಾಗಿ ದುಡಿದು ಹೊಟ್ಟೆಪಾಡು ನಡೆಸಿಕೊಳ್ಳುತ್ತಾ, ಕಾಪೇಯ ಇಲ್ಲದಂತೆ ಬದುಕುತ್ತಾ ಹೆಂಡಿರು ಮಕ್ಕಳನ್ನು ಅಕ್ಕರೆಯಿಂದ ಸಾಕುತ್ತಾ, ಬಾಳಯಾನಕ್ಕೆ ನಂಬಿಕೆಯ ಚುಕ್ಕಾಣಿಯನ್ನು ಇಟ್ಟುಕೊಂಡು ಸಾಗುತ್ತ, ನಲಿವಿನಿಂದ ನಡೆಯುವವನ ಚಿತ್ರಣ ಇಲ್ಲಿದೆ.  ಈ ಎರಡೂ ಕೃತಿಗಳಲ್ಲಿ ರಾಜರತ್ನಂ ಅವರ ಸ್ವಂತಿಕೆ, ಪ್ರತಿಭೆ ಮಿಂಚಿವೆ. ಪುರುಷ ಸರಸ್ವತಿಕಾವ್ಯವಂತೂ ವಿಡಂಬನ ಸಾಹಿತ್ಯಕ್ಕೆ ಸೊಗಸಾದ ಉದಾಹರಣೆಯಾಗಿ ನಿಂತಿದೆ. 

ರಾಜರತ್ನಂ ದೈಹಿಕವಾಗಿ, ಮಾನಸಿಕವಾಗಿ ಒಳ್ಳೆಯ ದಾರ್ಢ್ಯವನ್ನು ಪಡೆದಿದ್ದರು.  ಅಂಗಸಾಧನೆ ಮಾಡಿದ ಬಲವಾದ ಮೈಕಟ್ಟು, ಸವಾಲು ಹಾಕುವ ಹುರುಪು, ಅಧ್ಯಯನ, ಅನುಭವ, ಆತ್ಮಗೌರವ, ಅಭಿಮಾನಗಳ ವ್ಯಕ್ತಿತ್ವ ಅವರದಾಗಿತ್ತು. ಎಣೆಯಿಲ್ಲದ ಸೊಗಸಾದ ಭಾಷಣಕಾರರು, ಕಂಚಿನ ಕಂಠ.  1979ರ ಮಾರ್ಚಿ 11ರಂದು ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಿಂದ ಹಿಂದಿರುಗಿ ಬಂದು, ಮಾರ್ಚಿ 13ರ ಮಧ್ಯಾಹ್ನ ಒಮ್ಮೆಲೇ ಹೃದಯಾಘಾತಕ್ಕೆ ಒಳಗಾಗಿ ತಮ್ಮ ನೆಮ್ಮದಿಯ ನಾಡಿಗೆ ನಡೆದುಬಿಟ್ಟರು.

ರಾಜರತ್ನಂ ಸಾರ್ನಿಮ್ಮಂತಹವರು ಹೆಚ್ಚು ಹೆಚ್ಚು ಈ ವಿಶ್ವದಲ್ಲಿ ಉದಯಿಸುತ್ತಲಿರಲಿ ಎಂದು ಕನ್ನಡಿಗರು ನಿರಂತರ ಬೇಡುತ್ತಾರೆ.

ಆಧಾರ:  ನೀಲತ್ತಹಳ್ಳಿ ಕಸ್ತೂರಿ ಅವರ ಜಿ.ಪಿ. ರಾಜರತ್ನಂ ಅವರ ಕುರಿತ ಲೇಖನ

ಫೋಟೋ ಕೃಪೆ: www.kamat.com

Tag: G. P. Rajaratnam

1 ಕಾಮೆಂಟ್‌:

manjunath ಹೇಳಿದರು...

ಜಿ.ಪಿ. ರಾಜರತ್ನಂ ಕನ್ನಡ ಭಾಷೆಗೆ ರತ್ನವೇ ಅಲ್ಲದೆ ಇನ್ನೇನು. ಅವರು ಕನ್ನಡದ ಗೋಪುರದಲ್ಲಿ ಎತ್ತರದ ಕಲಶವಿದ್ದಂತೆ ಎಂದರೆ ತಪ್ಪಾಗಲಾರದು. ಅವರ ಹೆಂಡ್ಕುಡ್ಕ ರತ್ನ ನಿಜಕ್ಕೂ ಕನ್ನಡದ ಅದ್ಭುತ ರಚೆನೆ ಎಂದೇ ನನ್ನ ಅನಿಸಿಕೆ. ಅವರ ಸಾಹಿತ್ಯಾಸಕ್ತಿ, ಸಾಹಿತ್ಯ ಕೃಷಿ ಅದ್ವಿತೀಯವೂ ಹೌದು. ಡಿ.ವಿ.ಜಿ ರವರ ಮಂಕುತಿಮ್ಮನ ಕಗ್ಗದ ಪ್ರಕಟಣೆಗೆ ಅವರ ಕಾಣಿಕೆ ಬಲು ಮುಖ್ಯವಾದದ್ದು.