ಮಂಗಳವಾರ, ಸೆಪ್ಟೆಂಬರ್ 3, 2013

ರವೀಂದ್ರ ಕಲಾಕ್ಷೇತ್ರದ ಚಿನ್ನದ ನೆನಪುಗಳು

ರವೀಂದ್ರ ಕಲಾಕ್ಷೇತ್ರದ ಚಿನ್ನದ ನೆನಪುಗಳು
-ಶ್ರೀನಿವಾಸ್ ಜಿ. ಕಪ್ಪಣ್ಣ,  ರಾಜ್ಯ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರು


ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ನೀಡಿರುವ ಕೊಡುಗೆ ಅನನ್ಯ. ಹವ್ಯಾಸಿ ರಂಗಭೂಮಿಯ ಹಲವು ಪ್ರಯೋಗಗಳಿಗೆ ಈ ಕಲಾಕ್ಷೇತ್ರ ವೇದಿಕೆ. ರಂಗಕರ್ಮಿಗಳು, ಬರಹಗಾರರು, ಕಲಾವಿದರ ಸೃಜನಶೀಲ ಕನಸುಗಳಿಗೆ ಅನುಭವ ಮಂಟಪ.

ಹಲವು ಚಳವಳಿ, ಪ್ರತಿಭಟನೆ, ಸಂವಾದಗಳ ಕಾವಿನೊಂದಿಗೆ ಸ್ನೇಹ ಸಂಬಂಧಗಳ ಆರ್ದ್ರತೆಯೂ ಕಲಾಕ್ಷೇತ್ರದ ಪರಿಸರದಲ್ಲಿ ಸಾಧ್ಯವಾಗಿದೆ. ಇಂಥ ಅಪೂರ್ವ ಸಾಂಸ್ಕೃತಿಕ ಕಟ್ಟಡಕ್ಕೀಗ ಸುವರ್ಣ ಸಂಭ್ರಮ. ನಡೆದ ದಾರಿಯನ್ನು ಹಿಂತಿರುಗಿ ನೋಡಲು `ಐವತ್ತು' ಒಂದು ಸುಂದರ ನೆಪ.

1961.ವಿಶ್ವಕವಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರರ ಜನ್ಮ ಶತಾಬ್ದಿ ವರ್ಷ. ಕೇಂದ್ರ ಸರ್ಕಾರ ಆ ವರ್ಷವನ್ನು ರಾಷ್ಟ್ರದ ಆಯ್ದ ರಾಜ್ಯಗಳಲ್ಲಿ `ರವೀಂದ್ರ ರಂಗಮಂದಿರ'ಗಳನ್ನು ನಿರ್ಮಿಸುವ ಮೂಲಕ ಆಚರಿಸಲು ನಿರ್ಧರಿಸಿತು. ಕೋಲ್ಕತ್ತಾ, ಮುಂಬೈ, ಹೈದರಾಬಾದ್, ಭೋಪಾಲ್ ಮತ್ತು ಬೆಂಗಳೂರು ಆಯ್ಕೆಯಾದ ಕೇಂದ್ರಗಳು.

ಕೊಲ್ಕತ್ತಾದ `ರವೀಂದ್ರ ಸದನ್' ಬಂಗಾಳಿ ಸಂಸ್ಕೃತಿಗೆ ಪ್ರೋತ್ಸಾಹಿಸುವ ಕೇಂದ್ರವಾಗಿ ರೂಪಗೊಂಡಿತು. ಈ ರಂಗಮಂದಿರದ ಮೊದಲ ಕಾರ್ಯಕ್ರಮ ಅಲ್ಲಿಯ ಕನ್ನಡಿಗರು ತಮ್ಮ ಸಂಸ್ಥೆಯ ಕಟ್ಟಡಕ್ಕಾಗಿ ಹಣ ಸಂಗ್ರಹಿಸಲು ಏರ್ಪಡಿಸಿದ್ದ ವೈಜಯಂತಿ ಮಾಲಾ ಅವರ ನೃತ್ಯ ಪ್ರದರ್ಶನ! ಮುಂಬೈನ `ರವೀಂದ್ರ ನಾಟ್ಯಮಂದಿರ್' ಒಂದು ಬಹುಬೇಡಿಕೆಯ ರಂಗಮಂದಿರವಾಗಿದ್ದರೂ ಮಹಾರಾಷ್ಟ್ರದ ಸಂಸ್ಕೃತಿಗೆ ಇದರಿಂದ ಅಪಾರ ಕೊಡುಗೆ ಇದೆ ಎಂದು ಹೇಳಲು ಸಾಧ್ಯವಾಗದು.

ಆದರೆ, ಮಧ್ಯಪ್ರದೇಶದ ಭೋಪಾಲ್‌ನ ಎಂಟು ಎಕರೆ ವಿಸ್ತೀರ್ಣದ `ರವೀಂದ್ರ ಭವನ್' ಇಡೀ ಮಧ್ಯಪ್ರದೇಶದ ಸಾಂಸ್ಕೃತಿಕ ಚಳವಳಿಗೆ ಸ್ಫೂರ್ತಿಯ ನೆಲೆ. `ರವೀಂದ್ರಭವನ್' ಆವರಣದಲ್ಲಿ, ಸಭಾಂಗಣದ ಹೊರಗೆ, ಸುಂದರ ಗಿಡಮರಗಳಿದ್ದು ಇವುಗಳ ನಡುವೆ ನಡೆದ ಬುಡಕಟ್ಟು ಜನಾಂಗದ ಕಲಾವಿದರ `ಲೋಕ ನೃತ್ಯ' ಅಲ್ಲಿಯ ಕಲಾರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇನ್ನು ಹೈದರಾಬಾದ್‌ನ `ರವೀಂದ್ರ ಭಾರತಿ' ಮತ್ತೊಂದು ಜನಪ್ರಿಯ ರಂಗಮಂದಿರವಾಗಿ ಬೆಳೆಯಿತು. ಬೆಂಗಳೂರಿನ `ರವೀಂದ್ರ ಕಲಾಕ್ಷೇತ್ರ' ರವೀಂದ್ರರ ಶತಮಾನೋತ್ಸವ ನೆನಪಿನ ನಾಲ್ಕನೇ ರಂಗಮಂದಿರ.

`ರವೀಂದ್ರ ಕಲಾಕ್ಷೇತ್ರ' ನಿರ್ಮಾಣದ್ದು ಒಂದು ಸ್ವಾರಸ್ಯಕರ ಸಾಂಸ್ಕೃತಿಕ ಅಧ್ಯಾಯ. ಇದರ ರಚನೆಗಾಗಿ 1959ರಲ್ಲಿ ಒಂದು ಉನ್ನತ ಸಮಿತಿಯ ರಚನೆಯಾಯಿತು. ಅಂದಿನ ಮುಖ್ಯಮಂತ್ರಿ ಬಿ.ಡಿ.ಜತ್ತಿ ಅಧ್ಯಕ್ಷತೆಯ ಸಮಿತಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ. ಶಿವಮೂರ್ತಿ ಶಾಸ್ತ್ರಿ, ಜಿ.ಆರ್. ಘೋಷ್, ಶಿವರಾಮ ಕಾರಂತ, ದ.ರಾ. ಬೇಂದ್ರೆ, ಎಸ್.ಎಸ್. ಒಡೆಯರ್, ಎಂ.ಎಸ್. ನಟರಾಜನ್ (ಮಾಯಾರಾವ್‌ರ ಪತಿ), ವೃತ್ತಿರಂಗಭೂಮಿಯ ಎಚ್.ಸಿ. ಮಹಾದೇವಸ್ವಾಮಿ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಎಂ.ಪಿ.ಎಲ್. ಶಾಸ್ತ್ರಿ, ಪಿಟೀಲು ಟಿ. ಚೌಡಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ವಿಮಲಾ ರಂಗಾಚಾರ್ಯ ಸೇರಿದಂತೆ ಕೆಲವು ಸರ್ಕಾರಿ ಅಧಿಕಾರಿಗಳು ಇದ್ದರು.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ `ರವೀಂದ್ರ ಕಲಾಕ್ಷೇತ್ರ' ನಿರ್ಮಾಣಕ್ಕೆ ನೀಡಿದ್ದ ಅನುದಾನ ಎರಡು ಲಕ್ಷ ರೂಪಾಯಿ. ಇದಕ್ಕೆ ಜೊತೆಯಾಗಿ ಅಂದಿನ ಮೈಸೂರು ಸರ್ಕಾರದಿಂದ ಎರಡು ಲಕ್ಷ ರೂಪಾಯಿ ಅನುದಾನ. ಸರ್ಕಾರಿ ಉದ್ಯಮಗಳು, ಸಾರ್ವಜನಿಕರೂ ದೇಣಿಗೆ ನೀಡಿದರು. ಕಲಾವಿಶಾರದ ಎಚ್.ಸಿ. ಮಹಾದೇವಪ್ಪ ಹಾಗೂ ಖ್ಯಾತ ತಮಿಳು ಚಿತ್ರನಟ ಶಿವಾಜಿ ಗಣೇಶನ್ ತಲಾ ಇಪ್ಪತ್ತೆರಡು ಸಾವಿರ ರೂಪಾಯಿ ದೇಣಿಗೆ ನೀಡಿದರು.

ಶಿವಾಜಿಗಣೇಶನ್ ತಮ್ಮ ತಂಡದ `ವೀರಪಾಂಡ್ಯ ಕಟ್ಟಾಬೊಮ್ಮನ್' ನಾಟಕವನ್ನು ರಂಗಮಂದಿರದ ಸಹಾಯಾರ್ಥ `ಟೌನ್‌ಹಾಲ್'ನಲ್ಲಿ ಪ್ರದರ್ಶಿಸಿದರು. ಅನೇಕ ಮಠಮಾನ್ಯರು, ಕಲಾವಿದರು, ಖಾಸಗೀ ಉದ್ಯಮಿಗಳು ತಮ್ಮ ಸಹಾಯ ಹಸ್ತ ಚಾಚಿದರು.

ಕೇಂದ್ರ ಸರ್ಕಾರದ ವೈಜ್ಞಾನಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವರಾಗಿದ್ದ ಪ್ರೊ. ಹುಮಾಯೂನ್ ಕಬೀರ್ ಅವರು ಶುಕ್ರವಾರ, 16ನೇ ಸೆಪ್ಟೆಂಬರ್ 1960ರಂದು `ರವೀಂದ್ರ ಕಲಾಕ್ಷೇತ್ರ' ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ಅಧ್ಯಕ್ಷತೆ ಮತ್ತು ಮಾರ್ಗದರ್ಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿತು.

ಕಲಾಕ್ಷೇತ್ರದ ನಿರ್ಮಾಣದಲ್ಲಿ ವೃತ್ತಿರಂಗಭೂಮಿಯ ಉಜ್ವಲ ಭವಿಷ್ಯದ ಕನಸನ್ನು ಕಂಡ ಎಚ್.ಸಿ. ಮಹಾದೇವಪ್ಪನವರು, ರವೀಂದ್ರ ಕಲಾಕ್ಷೇತ್ರದ ನಿರ್ಮಾಣದಲ್ಲಿ ಬಹಳ ಆಸಕ್ತಿ, ಕಾಳಜಿ ತೋರಿ ಅತ್ಯುತ್ತಮ ರಂಗಮಂದಿರ ನಿರ್ಮಾಣವಾಗಲು ಶ್ರಮಿಸಿದರು. ವೃತ್ತಿ ಕಂಪನಿಯ ನಾಟಕಗಳಿಗೆ ಅಗತ್ಯವಿದ್ದ ಎಲ್ಲಾ ಸೀನರಿ, ಪರದೆ, ಸಿಂಹಾಸನ ಇತ್ಯಾದಿಗಳನ್ನು ಸಿದ್ಧಪಡಿಸಿದರು. ಹಾಗಾಗಿ ಮುಖ್ಯ ವೇದಿಕೆ ವರ್ಣರಂಜಿತವಾಗಿತ್ತು. ವೇದಿಕೆ ಮುಂದಿನ ಜಾಗದಲ್ಲಿ ವಾದ್ಯಗೋಷ್ಠಿ ಕುಳಿತುಕೊಳ್ಳಲು `musical pitಿ ನಿರ್ಮಾಣವಾಯಿತು. ಇದು ಕೆಳಗಿಳಿಯುವ  ಅಥವಾ ಮೇಲೇರುವ ತಂತ್ರಜ್ಞಾನ ಒಳಗೊಂಡಿತ್ತು. ವಾಸ್ತುಶಿಲ್ಪಿ ಚಾರ್ಲ್ಸ್ ವಿಲ್ಸನ್ ಅವರ ವಿನ್ಯಾಸ, ಮುಖ್ಯ ಎಂಜಿನಿಯರ್ ಬಿ.ಆರ್. ಮಾಣಿಕ್ಯಮ್‌ರ ನಿರ್ಮಾಣ ನಿರ್ವಹಣೆ ಕಟ್ಟಡಕ್ಕಿದೆ. ಇದರ ಒಟ್ಟು ವಿಸ್ತೀರ್ಣ ಮೂರು ಎಕರೆ.

ಬಿ.ಡಿ. ಜತ್ತಿಯವರ ನಂತರ ಕೆಲವು ತಿಂಗಳು ಎಸ್.ಆರ್. ಕಂಠಿಯವರು ಸಮಿತಿಯ ಅಧ್ಯಕ್ಷರಾಗಿದ್ದರು. ನಂತರ ಬಂದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು, ರಂಗಮಂದಿರದ ನಿರ್ಮಾಣಕ್ಕೆ ಇದ್ದ ಹಣದ ಕೊರತೆಯನ್ನು ಅರಿತು ಮತ್ತೆ ಒಂದೂವರೆ ಲಕ್ಷ ರೂಪಾಯಿ  ಅನುದಾನ ಬಿಡುಗಡೆ ಮಾಡಿದರು.

12ನೇ ಮಾರ್ಚ್ 1963. ಬಹುದಿನಗಳ ಶ್ರಮ, ಪ್ರಯತ್ನ ಹಾಗೂ ಬದ್ಧತೆಯ ಪರಿಣಾಮವಾಗಿ ನಿರ್ಮಾಣವಾದ `ರವೀಂದ್ರ ಕಲಾಕ್ಷೇತ್ರ'ದ ಉದ್ಘಾಟನೆ. ಉದ್ಘಾಟಿಸಿದವರು ಕೇಂದ್ರ ಸಚಿವರಾಗಿದ್ದ ಪ್ರೊ. ಹುಮಾಯೂನ್ ಕಬೀರ್. ಅಧ್ಯಕ್ಷತೆ ಮೈಸೂರಿನ ಮಹಾರಾಜರಾಗಿದ್ದ ರಾಜಪ್ರಮುಖ್ ಜಯಚಾಮರಾಜೇಂದ್ರ ಒಡೆಯರ್ ಅವರದು. ಅಲ್ಲಿಂದ ಆರಂಭ ಕಲಾಕ್ಷೇತ್ರದ ಕಲಾಪ್ರಯಾಣ. ಮಾರ್ಚ್‌ನಲ್ಲಿ ಸಾಂಪ್ರದಾಯಿಕವಾಗಿ ಉದ್ಘಾಟನೆ ಆದರೂ ಅದು ಪ್ರದರ್ಶನಕ್ಕೆ ಲಭಿಸಿದ್ದು ಆಗಸ್ಟ್ ತಿಂಗಳ ವೇಳೆಗೆ.

`ರವೀಂದ್ರ ಕಲಾಕ್ಷೇತ್ರ' ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಸಣ್ಣ ಸಣ್ಣ ಊರುಗಳಿಂದ ಬಂದ ಕಲಾವಿದರ ಉತ್ಸವ, ಪ್ರದರ್ಶನಗಳಿಗೆ ವೇದಿಕೆಯಾಗಿದೆ. ವಿಶ್ವವಿಖ್ಯಾತ ಕಲಾವಿದರಿಂದ ಮೊದಲುಗೊಂಡು ಅರಳುವ ಪ್ರತಿಭೆಗಳವರೆಗೆ ಅಸಂಖ್ಯಾತ ಕಲಾವಿದರಿಗೆ ಅತ್ಯಂತ ಪ್ರಿಯವಾದ ವೇದಿಕೆಯಾಗಿದೆ. ಕಲಾಕ್ಷೇತ್ರ ಅತ್ಯಂತ ಪ್ರಿಯವಾದ ವೇದಿಕೆಯಾಗಲು ಮುಖ್ಯಕಾರಣ ಇದರ ವಿನ್ಯಾಸ. ವಿಶಾಲವಾದ ವೇದಿಕೆ, ವಿಸ್ತಾರವಾದ `ಪ್ರೊಸೀನಿಯಂ' ವೇದಿಕೆ, ಬಹಳ ಅಪರೂಪದ ವಿಶಾಲ `ವಿಂಗ್ಸ್‌ಸ್ಪೇಸ್', ಉತ್ತಮ `ಗ್ರೀನ್‌ರೂಂ'ಗಳು, ವೈಜ್ಞಾನಿಕವಾಗಿ ಸಿದ್ಧಪಡಿಸಿದ ಸಭಾಂಗಣ.

ಆರಂಭದಲ್ಲಿ ಯಾರಿಗೂ ಈ ರಂಗಮಂದಿರಕ್ಕೆ ಹವಾ ನಿಯಂತ್ರಣ ವ್ಯವಸ್ಥೆ ಬೇಕೆಂದು ಅನಿಸಿಯೇ ಇರಲಿಲ್ಲ. ಧ್ವನಿವರ್ಧಕ ಇಲ್ಲದೆ ನಾಟಕ ಪ್ರದರ್ಶನಗಳನ್ನು ನೀಡಿದ್ದೂ ಉಂಟು. ಎದುರು ರಸ್ತೆಯ ವಾಹನ ದಟ್ಟಣೆ, ಏರಿದ ತಾಪಮಾನ, ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆಯಲು ಅವಶ್ಯವಿದ್ದ ಕಾರಣ, ಹವಾನಿಯಂತ್ರಣ ಅಳವಡಿಸಲು ಕಿಟಕಿಗಳನ್ನೆಲ್ಲ ಮುಚ್ಚಲಾಯಿತು.

`ರವೀಂದ್ರ ಕಲಾಕ್ಷೇತ್ರ'ದ ಇತಿಹಾಸ ಹೇಳಿದರೆ ಅದು ಕನ್ನಡ ಸಾಂಸ್ಕೃತಿಕ ಲೋಕದ ಇತಿಹಾಸವೇ ಆಗುತ್ತದೆ. ನಾಟಕ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ ಮುಂತಾದ ಪ್ರದರ್ಶಕ ಕಲೆಗಳಿಗೆ ಮಾತ್ರವಲ್ಲ, ಸಾಹಿತ್ಯ, ಚಿತ್ರಕಲೆ, ಹೀಗೆ ಹಲವಾರು ಕಲಾಪ್ರಕಾರಗಳ ಆಡಂಬೊಲ ಈ `ರವೀಂದ್ರ ಕಲಾಕ್ಷೇತ್ರ'.

1965-66ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಆದ್ಯರಂಗಾಚಾರ್ಯರು, ಪ್ರಪ್ರಥಮ ಬಾರಿಗೆ ಶಾಲಾ-ಕಾಲೇಜುಗಳ ಅಧ್ಯಾಪಕರಿಗೆ ರಾಜ್ಯಮಟ್ಟದ ರಂಗ ತರಬೇತಿ ಶಿಬಿರ ಏರ್ಪಡಿಸಿದರು. ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಅಧ್ಯಾಪಕರು ಮುಂದಿನ ಪೀಳಿಗೆಯ ಚಳವಳಿಯ ನೇತಾರರಾದರು. ಅಲ್ಲಿಂದಾಚೆಗೆ ರಾಜ್ಯದ ಮೂಲೆ ಮೂಲೆಗಳಲ್ಲೂ ರಂಗತರಬೇತಿ (workshops) ಹಾಗೂ ರಂಗಪ್ರಯೋಗಗಳು ಸಾಮಾನ್ಯವಾದವು. 1969ರಲ್ಲಿ ಪ್ರೊ. ಬಿ. ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಗಿರೀಶ ಕಾರ್ನಾಡರ `ತುಘಲಕ್' ನಾಟಕ ಪ್ರದರ್ಶನ ಕಂಡಿತು.

`ತುಘಲಕ್' ಮೂಲಕ ಗಿರೀಶ ಕಾರ್ನಾಡರು ನಾಟಕಕಾರರಾಗಿ ರಾಷ್ಟ್ರೀಯ ಮನ್ನಣೆ ಪಡೆದರೆ, ಸಿ.ಆರ್. ಸಿಂಹ, ಕೊಂಡಜ್ಜಿ ರಾಜಶೇಖರ್, ಶಿವರಾಮಯ್ಯ ಮುಂತಾದ ಅನೇಕ ನಟರು ಬೆಳಕಿಗೆ ಬಂದರು. ಆರ್. ನಾಗೇಶ್ (ರಂಗಸಜ್ಜಿಕೆ), ಶ್ರೀನಿವಾಸ್ ಜಿ. ಕಪ್ಪಣ್ಣ (Stage lighting)) ಜನಪ್ರಿಯರಾದರು. 1966ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿದ ಬಿ.ವಿ. ಕಾರಂತರ `ಶಕೆ' ಆರಂಭವಾಯಿತು. 1970ರಲ್ಲಿ ಆದ್ಯರ `ಸ್ವರ್ಗಕ್ಕೆ ಮೂರು ಬಾಗಿಲು' ನಾಟಕದ ಪ್ರದರ್ಶನ ಕಲಾಕ್ಷೇತ್ರದ ರಂಗ ಸಾಧ್ಯತೆಗಳನ್ನು ವಿಸ್ತರಿಸಿತು.

ನಿರ್ದೇಶಕ ಬಿ.ವಿ. ಕಾರಂತರು ಈ ಪ್ರದರ್ಶನವನ್ನು 'Epic theatre’ಗೆ ಅಳವಡಿಸಿದ್ದರು. 1971ರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಂಗೀತ ನಾಟಕ ವಿಭಾಗದಿಂದ ರಾಷ್ಟ್ರಮಟ್ಟದ `ಬಹುಭಾಷಾ ನಾಟಕೋತ್ಸವ' ನಡೆಯಿತು.1972ರಲ್ಲಿ ಕಲಾಕ್ಷೇತ್ರದ ಮೇಲ್ಛಾವಣಿಯನ್ನು ದುರಸ್ತಿಗೊಳಿಸಲು ಕಲಾಕ್ಷೇತ್ರವನ್ನು ಮುಚ್ಚಲಾಯಿತು. ಆ ಸಮಯದಲ್ಲಿ ಬಿ.ವಿ. ಕಾರಂತರು `ಈಡಿಪಸ್' (ಗಿರೀಶ್‌ಕಾರ್ನಾಡ್), `ಜೋಕುಮಾರಸ್ವಾಮಿ' (ಚಂದ್ರಶೇಖರ ಕಂಬಾರ) ಮತ್ತು `ಸಂಕ್ರಾಂತಿ' (ಪಿ.ಲಂಕೇಶ್) ನಾಟಕಗಳನ್ನು ನಿರ್ದೇಶಿಸಿ, ಪ್ರದರ್ಶಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು `ಪ್ರತಿಮಾ ನಾಟಕರಂಗ' ಉತ್ಸವ ಸಂಘಟಿಸಿತು. ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಈ ಮೂರು ಪ್ರದರ್ಶನಗಳು ಪ್ರಮುಖವಾದವು. ಇಲ್ಲಿಂದ ಸಾಹಿತಿ, ಕವಿಗಳಾಗಿದ್ದ ಕಂಬಾರರು ಹಾಗೂ ಲೇಖಕ ಲಂಕೇಶ್ ನಾಟಕಕಾರರಾದರು. ಕಾರ್ನಾಡರು ತಾವು ಒಬ್ಬ ಉತ್ತಮ ನಟ ಎಂಬುದನ್ನು ಸಾಬೀತುಪಡಿಸಿದರು.

ನಟಿಯಾಗಿ ಗಿರಿಜಾ ಲೋಕೇಶ್‌ರ ಭವಿಷ್ಯ ಭದ್ರವಾದದ್ದು ಇಲ್ಲಿ. ಈ ಮೂರು ಪ್ರದರ್ಶನಗಳು ಹಲವಾರು ತಂಡಗಳು ರೂಪುಗೊಳ್ಳಲು ಕಾರಣವಾಯಿತು. `ನಟರಂಗ', `ಬೆನಕ', `ಕಲಾಗಂಗೋತ್ರಿ', `ಸಮುದಾಯ', `ಸ್ಪಂದನ', `ರಂಗಸಂಪದ', ಸೇರಿದಂತೆ ಅನೇಕ ತಂಡಗಳು 1972-73ರ ಅವಧಿಯಲ್ಲಿ ರಂಗ ಇತಿಹಾಸ ಆರಂಭಿಸಿದವು. 1983-84ರಲ್ಲಿ ಕಲಾಕ್ಷೇತ್ರ ಮತ್ತೊಮ್ಮೆ ಮುಚ್ಚಿದಾಗ ಹವ್ಯಾಸಿ ತಂಡಗಳೇ ನಿರ್ಮಿಸಿಕೊಂಡಿದ್ದ `ಕೈಲಾಸಂ ಕಲಾಕ್ಷೇತ್ರ' ಇತಿಹಾಸದ ಒಂದು ಅಂಗವಾಯಿತು. ತಾಲೀಮು ಕೊಠಡಿಯನ್ನೇ `Studio theatre' ಮಾಡಿಕೊಂಡು ಸಿ.ಜಿ. ಕೃಷ್ಣಸ್ವಾಮಿ ಪ್ರದರ್ಶನಗಳನ್ನು ರೂಪಿಸಿದರು. ಈ ಎಲ್ಲಾ ಚಟುವಟಿಕೆಗಳಿಂದಾಗಿ ಕನ್ನಡ ರಂಗಭೂಮಿ ರಾಷ್ಟ್ರದ ಗಮನ ಸೆಳೆಯಿತು.

ರಾಷ್ಟ್ರದ ಪ್ರಮುಖ ಸಂಗೀತಗಾರರು, ನೃತ್ಯಗಾರರು ಇಲ್ಲಿ ಪ್ರದರ್ಶನ ನೀಡಿದ್ದಾರೆ. `ಐಸಿಸಿಆರ್', `ಸಾರ್ಕ್ ಉತ್ಸವ' ಮುಂತಾದ ಅಂತರರಾಷ್ಟ್ರೀಯ ಸಮಾವೇಶಗಳ ಕಾರಣದಿಂದಾಗಿ ಪ್ರಪಂಚದ ಎಲ್ಲ ಪ್ರಮುಖ ರಾಷ್ಟ್ರಗಳ ಸಾಂಸ್ಕೃತಿಕ ತಂಡಗಳು ಇಲ್ಲಿ ಪ್ರದರ್ಶನ ನೀಡಿ `ರವೀಂದ್ರ ಕಲಾಕ್ಷೇತ್ರ'ವನ್ನು ಉತ್ತಮ ರಂಗಮಂದಿರ ಎಂದು ಹೇಳಿರುವುದು ಕಲಾಕ್ಷೇತ್ರದ ಹಿರಿಮೆ.

ಪ್ರಾರಂಭದಲ್ಲಿ ಲೋಕೋಪಯೋಗಿ ಇಲಾಖೆ ನಿಯಂತ್ರಣದಲ್ಲಿದ್ದ ರಂಗಮಂದಿರ 1978ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಂತ್ರಣಕ್ಕೆ ಬಂತು. `ನಾಟಕ ಅಕಾಡೆಮಿ', `ಸಂಗೀತ ಮತ್ತು ನೃತ್ಯ ಅಕಾಡೆಮಿ', `ಜಾನಪದ ಅಕಾಡೆಮಿ', `ಸಾಹಿತ್ಯ ಅಕಾಡೆಮಿ', `ಚಿತ್ರಕಲಾ, ಶಿಲ್ಪಕಲಾ, ಯಕ್ಷಗಾನ ಅಕಾಡೆಮಿ' ಮುಂತಾದವು ತಮ್ಮ ಪ್ರಮುಖ ಚಟುವಟಿಕೆಗಳಿಗೆ `ರವೀಂದ್ರ ಕಲಾಕ್ಷೇತ್ರ'ವನ್ನು ಕೇಂದ್ರವನ್ನಾಗಿ ಮಾಡಿಕೊಂಡಿದ್ದರಿಂದ ಕಲಾಕ್ಷೇತ್ರದ ಆಯಾಮ ಹೆಚ್ಚಾಗುತ್ತಾ ಬಂತು.

ಪುಸ್ತಕ ಬಿಡುಗಡೆ, ಸಾಹಿತ್ಯ ಸಂವಾದ, ಉಪನ್ಯಾಸಗಳು, ಇಲ್ಲಿ ನಡೆಯುತ್ತಿದ್ದ ಕಾರಣ ಸಾಹಿತಿಗಳು ಒಂದೆಡೆ ಸೇರುವ ಕೇಂದ್ರ ಇದಾಯಿತು. ಒಂದು ವರ್ಣರಂಜಿತ ವೇದಿಕೆ ಮಾಯವಾಗಿ ಸಾಂಸ್ಕೃತಿಕ ರಂಗು ಬಂತು. `ನಾಟ್ಯ ಸಂಘ ಥಿಯೇಟರ್ ಸೆಂಟರ್' 1973ರಲ್ಲಿ ಏರ್ಪಡಿಸಿದ್ದ ‘All India Theatre and Drama Festival’ ಕಲಾಕ್ಷೇತ್ರದ ಹಿಂಭಾಗದಲ್ಲಿ ವೇದಿಕೆ ನಿರ್ಮಿಸಿತು. ಹೀಗೆ ರೂಪುಗೊಂಡ `ಸಂಸ ಬಯಲು ರಂಗಮಂದಿರ'ಕ್ಕೀಗ 40 ವರ್ಷ.

`ರವೀಂದ್ರ ಕಲಾಕ್ಷೇತ್ರ' ಹೇಗೆ ಪ್ರದರ್ಶನಗಳಿಗೆ ಪ್ರಮುಖ ಕ್ಷೇತ್ರವಾಯಿತೋ ಹಾಗೆಯೇ ಸಾಹಿತಿ ಕಲಾವಿದರ ಹೋರಾಟಗಳ, ಪ್ರತಿಭಟನೆಗಳ ಕೇಂದ್ರವೂ ಆಯಿತು. ಗುಂಡೂರಾವ್ ಮುಖ್ಯಮಂತ್ರಿಗಳಾಗಿದ್ದಾಗ ಕಲಾಕ್ಷೇತ್ರದ ಆವರಣದಲ್ಲಿ ವಸ್ತು ಪ್ರದರ್ಶನ ನಡೆಸುವ ಪ್ರಸ್ತಾವನೆಯನ್ನು ಕಲಾವಿದರ ತೀವ್ರ ಪ್ರತಿಭಟನೆಯಿಂದ ರದ್ದುಪಡಿಸಲಾಯಿತು.

ಕಲಾಕ್ಷೇತ್ರದಲ್ಲಿ ಸಿನಿಮಾ ಪ್ರೊಜೆಕ್ಟರ್ ಅಳವಡಿಸುವ ಪ್ರಸ್ತಾವನೆ, ಕಲಾಕ್ಷೇತ್ರದ ಬಾಡಿಗೆ ಹೆಚ್ಚಿಸುವ ಪ್ರಸ್ತಾವನೆಗಳಿಗೂ ಹೀಗೆಯೇ ಪ್ರತಿಭಟನೆಯ ಬಿಸಿ ತಗುಲಿತು. `ಗೋಕಾಕ್ ವರದಿ' ಜಾರಿಗೆ ಆಗ್ರಹಿಸಿ ಚಳವಳಿ, ಬಾಬ್ರಿ ಮಸೀದಿ ಪ್ರಕರಣ, ಕಾವೇರಿ ಪರ ಹೋರಾಟ- ಹೀಗೆ ಹತ್ತು ಹಲವು ಪ್ರತಿಭಟನೆಗಳಿಗೆ ಕಲಾಕ್ಷೇತ್ರ ಸಾಕ್ಷಿಯಾಗಿದೆ.

ಇಡೀ ದೇಶದಲ್ಲಿಯೇ ಅಪರೂಪದ `ಅನಧಿಕೃತ' ಸಂಪ್ರದಾಯ ಕಲಾಕ್ಷೇತ್ರದಲ್ಲಿದೆ. ರಂಗಭೂಮಿಯ ಅಥವಾ ಸಾಹಿತ್ಯ ವಲಯದ ಧೀಮಂತ ವ್ಯಕ್ತಿಗಳು ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ಕಲಾಕ್ಷೇತ್ರದ ಹಿಂಭಾಗದ ಸಂಸ ರಂಗಮಂದಿರದ ಮೇಲೆ ಇಟ್ಟು ಅವರಿಗೆ ಗೌರವ ಸಲ್ಲಿಸುವುದೇ ಆ ಉತ್ತಮ ಸಂಪ್ರದಾಯ. ಪರ್ವತವಾಣಿ, ಬಿ.ವಿ. ಕಾರಂತ, ಸಿ. ಅಶ್ವತ್ಥ್, ಸಿ.ಜಿ.ಕೆ. ಲೋಕೇಶ್, ವೈಶಾಲಿ ಕಾಸರವಳ್ಳಿ, ಅ.ಸಿ. ರಮೇಶ್, ಆರ್. ನಾಗೇಶ್, ಕಿ.ರಂ. ನಾಗರಾಜ್, ಕರಿಬಸವಯ್ಯ, ಲೈಟಿಂಗ್ ನಾಗರಾಜ್ ಮುಂತಾದವರಿಗೆ ಕಲಾಕ್ಷೇತ್ರದಲ್ಲಿ ಗೌರವ ಸಲ್ಲಿಸಲಾಗಿದೆ.

ಪುಸ್ತಕ ಪ್ರೇಮಿಗಳಿಗಾಗಿ ಕಲಾಕ್ಷೇತ್ರದ ಪರಿಸರದಲ್ಲಿ ಪುಸ್ತಕ ಮಳಿಗೆಯೂ ಇದೆ. ಕಲಾಕ್ಷೇತ್ರದಲ್ಲಿ ನಡೆದ ಕನ್ನಡೇತರ ರಂಗತಂಡಗಳ ಸಾಧನೆಯೂ ಕಲಾಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಿದೆ. ಇಂಗ್ಲಿಷ್ ಭಾಷೆಯ ನಾಟಕಗಳನ್ನು ಪ್ರದರ್ಶಿಸುವ, 50 ವರ್ಷಗಳ ಇತಿಹಾಸದ `ಬಿ.ಎಲ್.ಟಿ' ತಂಡದ ಅನೇಕ ಪ್ರಮುಖ ಪ್ರದರ್ಶನಗಳು ಹಿಂದಿ ಭಾಷೆಯ ಮಹತ್ತರ ಪ್ರದರ್ಶನಗಳೂ ಇಲ್ಲಿ ನಡೆದಿವೆ.


ಜೀವನದಲ್ಲಿ ಒಮ್ಮೆಯಾದರೂ ಕಲಾಕ್ಷೇತ್ರದಲ್ಲಿ ನಟಿಸಬೇಕೆಂಬ ರಂಗಭೂಮಿಯ ಕಲಾವಿದರ ಆಸೆ. ಒಮ್ಮೆಯಾದರೂ ಹಾಡಬೇಕು, ನರ್ತಿಸಬೇಕು ಎನ್ನುವುದು ಸಂಗೀತ, ನೃತ್ಯಗಾರರ ಕನಸು. ರವೀಂದ್ರ ಕಲಾಕ್ಷೇತ್ರ ಕಲಾವಿದಸ್ನೇಹಿ ರಂಗಮಂದಿರ. ಅದರ ಮೆಟ್ಟಿಲು ಏರಿದಂತೆ ಧನ್ಯತಾ ಭಾವವೊಂದು ಮನದುಂಬಿ ಬರುತ್ತದೆ. ಈಗ ಕಲಾಕ್ಷೇತ್ರಕ್ಕೆ ಐವತ್ತರ ಸಂಭ್ರಮ. ಈ ಸಂಭ್ರಮ ಕನ್ನಡ ಸಾಂಸ್ಕೃತಿಕ ಲೋಕದ್ದು ಕೂಡ.

ಕನಸಿನ, ವಯಸಿನ ಭಾಗಶ್ರೀಮಂತ ಸಮಯವನ್ನು ಅಲ್ಲಿ ಕಳೆದೆ
-ಗಿರೀಶ್ ಕಾರ್ನಾಡ್

`ಕಾಡು', `ವಂಶವೃಕ್ಷ', `ಸಂಸ್ಕಾರ' ಕೃತಿಗಳೆಲ್ಲ ರಂಗರೂಪಕ್ಕೋ ದೃಶ್ಯರೂಪಕ್ಕೋ ಬಂದಿದ್ದರೆ ಅದಕ್ಕೆ ಕಾರಣ ಕಲಾಕ್ಷೇತ್ರ. ನನ್ನ ಬದುಕಿನ ಶ್ರೀಮಂತ ಸಮಯವನ್ನು ಅಲ್ಲಿ ಕಳೆದಿದ್ದೇನೆ. ಆಗ ಜೆ.ಸಿ. ರಸ್ತೆಯಲ್ಲಿ ಈಗಿನಂತೆ ಏಕಮುಖ ಸಂಚಾರ ಇರಲಿಲ್ಲ. ಸಂಚಾರ ದಟ್ಟಣೆಯೂ ಇರುತ್ತಿರಲಿಲ್ಲ. ನಾಟಕ ನೋಡಬೇಕು ಅನ್ನಿಸಿದರೆ ಅಥವಾ ಯಾರನ್ನಾದರೂ ಭೇಟಿ ಮಾಡಬೇಕು ಅನ್ನಿಸಿದರೆ ನಾವು ತಕ್ಷಣ ಕಲಾಕ್ಷೇತ್ರದತ್ತ ಮುಖ ಮಾಡುತ್ತಿದ್ದೆವು. ಊರಿನ ಮಧ್ಯಭಾಗದಲ್ಲಿ, ಕಾಲೇಜುಗಳಿಗೆ ಸಮೀಪದಲ್ಲಿ ಇದ್ದುದರಿಂದ ಅದು ಯುವಕರನ್ನು, ಕಲಾಸಕ್ತರನ್ನು ಸುಲಭವಾಗಿ ಆಕರ್ಷಿಸುತ್ತಿತ್ತು.
ಬೇರೆ ರಂಗಶಾಲೆಗಳಿಗೆ ಹೋಲಿಸಿದರೆ ಅದೊಂದು ಸುಂದರ ನಾಟ್ಯಗೃಹ. ಅದರ ವೇದಿಕೆ, ಗ್ರೀನ್‌ರೂಂ, ಸೈಡ್‌ವಿಂಗ್‌ಗಳನ್ನು ನೋಡಿದರೆ ರಂಗಕರ್ಮಿಗಳ ಸಲಹೆ ಪಡೆದು ಅವರಿಗೆಂದೇ ರೂಪಿಸಿದ ನಾಟ್ಯಗೃಹ ಎಂದು ತೋರುತ್ತದೆ. ಇದು ಸೋಜಿಗದ ವಿಚಾರ. ಆಮೇಲೆ ಕಟ್ಟಿದ, ಪಕ್ಕದಲ್ಲೇ ಇರುವ ಕನ್ನಡ ಭವನಕ್ಕೆ ಹೋಲಿಸಿದರೆ ಇದು ನೂರು ಪಾಲು ಉತ್ತಮ.

ಕೃಪೆ: ಪ್ರಜಾವಾಣಿ

Tag: Ravindra Kalakshetra Nenapu

ಕಾಮೆಂಟ್‌ಗಳಿಲ್ಲ: