ಸೋಮವಾರ, ಸೆಪ್ಟೆಂಬರ್ 2, 2013

ಕುಲದೀಪ್ ನಯ್ಯರ್ - ಇವರು ಕಾಲಕ್ಕೆ ಕನ್ನಡಿ

ಕುಲದೀಪ್ ನಯ್ಯರ್ - ಇವರು ಕಾಲಕ್ಕೆ ಕನ್ನಡಿ
-ಜಿ. ಎನ್. ಮೋಹನ್

ದೇಶ ಕಂಡ ಘನತೆಯ ಪತ್ರಕರ್ತ ಕುಲದೀಪ್‌ ನಯ್ಯರ್‌! ಅವರ ಜೀವನ ಕಥನವೆಂದರೆ ದೇಶದ ಇತಿಹಾಸದ ಹಾದಿಯಲ್ಲಿ ಹೆಜ್ಜೆಗಳನ್ನು ಹಾಕುತ್ತ ಸಾಗಿದಂತೆ.

ಅದು ಆಗಸ್ಟ್‌ 15ಕ್ಕೆ ಸಜ್ಜಾಗುತ್ತಿರುವ ರಾತ್ರಿ. ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಗಾಢ ಕತ್ತಲು. ಆ ಕತ್ತಲನ್ನು ಹೊಡೆದೋಡಿಸಿ ದಶಮಾನಗಳ ಅಪನಂಬಿಕೆಯನ್ನು ಬಗೆಹರಿಸುವಂತೆ ಸಹಸ್ರಾರು ಮೋಂಬತ್ತಿಗಳನ್ನು ಒಬ್ಬೊಬ್ಬರೂ ಹಚ್ಚುತ್ತಾ ಸಾಗಿದ್ದಾರೆ. ಅದರಲ್ಲಿ ಈ ಕಡೆಯಿಂದ ಭಾರತೀಯರು, ಆ ಕಡೆಯಿಂದ ಪಾಕಿಸ್ತಾನೀಯರೂ ಇದ್ದಾರೆ. ಕತ್ತಲ ನಡುವೆ ಒಂದು ಬೆಳಕಿನ ದೀಪ ಹಚ್ಚಲು ಕಾರಣರಾದವರು ಇನ್ನಾರೂ ಅಲ್ಲ -ಕುಲದೀಪ್‌ ನಯ್ಯರ್‌. ಕುಲದೀಪ್‌ ನಯ್ಯರ್‌ ಅವರನ್ನು ಬಣ್ಣಿಸುವುದು ಹೇಗೆ? ಪತ್ರಕರ್ತ, ಮಾನವ ಹಕ್ಕುಗಳ ಪ್ರತಿಪಾದಕ, ರಾಯಭಾರಿ, ರಾಜ್ಯಸಭಾ ಸದಸ್ಯ, ಅಂಕಣಕಾರ...  ಕುಲದೀಪ್‌ ನಯ್ಯರ್‌ ಈ ಎಲ್ಲವೂ ಹೌದು. ಹಲವು ಆಸಕ್ತಿಯ ಒಂದು ಸುಂದರ ಕೊಲಾಜ್‌. ಆದರೂ ನನಗೆ ಯಾಕೋ ಚಿರಂಜೀವಿ ಸಿಂಗ್‌ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕುಲದೀಪ್‌ ನಯ್ಯರ್‌ ಅವರನ್ನು "ಕಾಲಕ್ಕೆ ಕನ್ನಡಿ' ಎಂದು ಬಣ್ಣಿಸಿದ್ದೇ ಹೆಚ್ಚು ಸರಿ ಅನಿಸಿತು.

"ಕಾಲಕ್ಕೆ ಕನ್ನಡಿ' ನಾಡು ಕಂಡ ವಿಶಿಷ್ಟ ಛಾಯಾಗ್ರಾಹಕ ಟಿ. ಎಸ್‌. ಸತ್ಯನ್‌ ಅವರ ಛಾಯಾ ನೆನಪುಗಳ ಕೃತಿಯ ಹೆಸರು. ಕಾಲಕ್ಕೆ ಕನ್ನಡಿಯಲ್ಲಿ ಟಿ. ಎಸ್‌. ಸತ್ಯನ್‌ ದಶಕಗಳ ಕಾಲ ತಾವು ಕೆಮರಾ ಕಣ್ಣಿನ ಮೂಲಕ ಕಂಡ ದೇಶವನ್ನು ಕಟ್ಟಿಕೊಟ್ಟಿದ್ದಾರೆ. ಕುಲದೀಪ್‌ ನಯ್ಯರ್‌ ಅವರು ಸ್ವತಃ ಕಾಲಕ್ಕೆ ಒಂದು ಕನ್ನಡಿ. ಕುಲದೀಪ್‌ ನಯ್ಯರ್‌ ಅವರನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ದೇಶವನ್ನು ಅರ್ಥ ಮಾಡಿಕೊಳ್ಳುವುದು ಎಂದು ಅರ್ಥ. ಕುಲದೀಪ್‌ ನಯ್ಯರ್‌ ಅವರನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಈ ದೇಶದ ಏಳು ಬೀಳುಗಳ ಜೊತೆಗೆ ನಡೆಸುವ ಒಂದು ಯಾನ. ನಿಜಕ್ಕೂ ಅವರು ಕಾಲಕ್ಕೆ ಹಿಡಿದ ಕನ್ನಡಿಯೇ...

ಅಂತಹ ಕುಲದೀಪ್‌ ನಯ್ಯರ್‌ ತಮ್ಮ ಆತ್ಮಕಥೆಯನ್ನು ಬರೆದಿದ್ದಾರೆ. ಕನ್ನಡಕ್ಕೆ ಸಾಕಷ್ಟು ಮೌಲಿಕ ಕೃತಿಗಳನ್ನು ನೀಡಿದ ಪ್ರತಿಷ್ಠಿತ ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಕನ್ನಡಕ್ಕೆ ತಂದಿದೆ. ಇಂಗ್ಲಿಷ್‌ನಲ್ಲಿ ಪ್ರಕಟವಾದ ಎರಡೇ ತಿಂಗಳಲ್ಲಿ ಅದನ್ನು ಕನ್ನಡಕ್ಕೆ ಕೊಟ್ಟ ಹೆಮ್ಮೆ ನವಕರ್ನಾಟಕದ ಆಡಳಿತ ನಿರ್ದೇಶಕ ಆರ್‌. ಎಸ್‌. ರಾಜಾರಾಂ ಹಾಗೂ ಪ್ರಧಾನ ವ್ಯವಸ್ಥಾಪಕ ಎ. ಆರ್‌. ಉಡುಪ  ಅವರದ್ದು. ಈ ಕೃತಿಯನ್ನು ಕನ್ನಡಕ್ಕೆ ತರುವಾಗ ನವಕರ್ನಾಟಕ ಪ್ರಕಾಶನ ಇದನ್ನು "ಒಂದು ಜೀವನ ಸಾಲದು!' ಎಂದು ಹೆಸರಿಸಿದೆ. ಎಷ್ಟು ಅರ್ಥಪೂರ್ಣವಾದ ಹೆಸರು. ಕುಲದೀಪ್‌ ನಯ್ಯರ್‌ ಅವರು ಕಂಡ ಉಂಡ ಘಟನೆಗಳು ಖಂಡಿತ ಒಂದು ಜೀವನ ಮೀರಿದ್ದು.

ಕುಲದೀಪ್‌ ನಯ್ಯರ್‌ ಇದನ್ನು ಕನ್ನಡದಲ್ಲಿ ಬರೆದಿದ್ದಾರೇನೋ ಎಂಬಷ್ಟು ಸಹಜವಾಗಿ ಡಾ. ಆರ್‌. ಪೂರ್ಣಿಮಾ ಇದನ್ನು ಅನುವಾದಿಸಿದ್ದಾರೆ.

ನಯ್ಯರ್‌ ಅವರ  ಬದುಕಿನಲ್ಲಿ ಏನುಂಟು ಏನಿಲ್ಲ?. ಈಗಿನ ಪಾಕಿಸ್ತಾನದ ಭಾಗವಾಗಿರುವ ಸಿಯಾಲಕೋಟ್ನಲ್ಲಿ ಜನಿಸಿದ ಕುಲದೀಪ್‌ ಸಿಂಗ್‌ ದೇಶ ಎರಡಾದದ್ದರ ಪರಿಣಾಮವನ್ನು ಕಣ್ಣೆದುರು ಕಂಡವರು. ಅದರ ಬಿಸಿಯನ್ನು ಉಂಡವರು. ದೇಶಕ್ಕೆ ಸ್ವಾತಂತ್ರ್ಯ ಬಂದ ರೀತಿ, ನಂತರದ ವಲಸೆ, ಹತ್ಯೆ, ನೆಹರೂ ಯುಗ, ನೆಹರೂ ಅವರಿಗೆ ಅವರ ಸಂಪುಟದಲ್ಲಿಯೇ ಸರ್ದಾರ್‌ ವಲ್ಲಭಬಾಯಿ ಪಟೇಲ… ಹಾಗೂ ಬಾಬು ರಾಜೇಂದ್ರ ಪ್ರಸಾದ್‌ ಅವರ ವಿರೋಧ, ಗಾಂಧಿ ಹಿಂದೂ ಮುಸ್ಲಿಮರು ನನ್ನ ಎರಡು ಕಣ್ಣುಗಳು ಎಂದದ್ದು, ಕುರಾನ್‌ ಪಠಣಕ್ಕೆ ವಿರೋಧ ಬಂದಾಗ ತಮ್ಮ ಪ್ರಾರ್ಥನೆಯನ್ನೇ ಸ್ಥಗಿತಗೊಳಿಸಿದ್ದು, ಜಿನ್ನಾ "ವಂದೇ ಮಾತರಂ' ಗೆ ವಿರೋಧ ವ್ಯಕ್ತಪಡಿಸಿದ್ದು, ಎರಡೂ ದೇಶಗಳ ನಡುವೆ ಇರುವೆಗಳ ರೀತಿಯಲ್ಲಿ ಜನ ಪ್ರವಾಹ ಹರಿದದ್ದನ್ನು ನೋಡಿ ತಲೆ ಮೇಲೆ ಕೈ ಹೊತ್ತುಕೊಂಡದ್ದು, ಲಾಲ್ ಬಹದ್ದೂರ್‌ ಶಾಸ್ತ್ರಿ ಅವರ ಸಾವಿನ ಹಿಂದಿನ ಅನುಮಾನಗಳು, ದೇಶದೊಳಗೆ ಉಂಟಾದ ಗಡಿಯ ಗಡಿಬಿಡಿ, ಮಹಾರಾಷ್ಟ್ರಕ್ಕೆ ಕರ್ನಾಟಕದ ಇನ್ನಷ್ಟು ಭಾಗ ಬೇಕು ಎನ್ನುವ ಹಂಬಲ ಇದ್ದದ್ದು, ಕಾಂಗ್ರೆಸ್‌ ಎರಡಾಗಲು ಕರ್ನಾಟಕ ನೆಲ ಒದಗಿಸಿದ್ದು. ಎಸ್‌. ನಿಜಲಿಂಗಪ್ಪ ಅವರ ನಡೆನುಡಿ, ಅವರು ಮಾಡುತ್ತಿದ್ದ ಟಿಪ್ಪಣಿ, ಇಂದಿರಾ ಯುಗ, ಅಲಹಾಬಾದ್‌ ತೀರ್ಪಿನ ನಂತರ ಚುನಾವಣೆಗೆ ಇಂದಿರಾ ಒಲವು ತೋರಿದ್ದು , ಆದರೆ ಸಂಜಯ ಗಾಂಧಿ ಹಾಗೂ ಸಿದ್ಧಾರ್ಥ ಶಂಕರ ರೇ  ಇಂದಿರಾ ಅವರನ್ನು ದಾರಿ ತಪ್ಪಿಸಿ ತುರ್ತು ಪರಿಸ್ಥಿತಿ ಹೇರುವಂತೆ ಮಾಡಿದ್ದು, ತುರ್ತು ಪರಿಸ್ಥಿತಿಯಿಂದಾಗಿ ಕುಲದೀಪ್‌ ನಯ್ಯರ್‌ ಸಹಾ ಜೈಲು ಸೇರಬೇಕಾಗಿ ಬಂದದ್ದು. ಬಾಂಗ್ಲಾ ದೇಶದ ವಿಮೋಚನೆ, ಭಿಂದ್ರನ್‌ ವಾಲೆ, ಖಾಲಿಸ್ತಾನ, ಆಪರೇಶನ್‌ ಬ್ಲೂ ಸ್ಟಾರ್‌, ಇಂದಿರಾ ಗಾಂಧಿ ಹತ್ಯೆ, ರಾಜೀವ್‌ ಗಾಂಧಿಯ ಹತ್ಯೆಯೂ ನಡೆದು ಹೋದದ್ದು, ಕೇಂದ್ರದಲ್ಲಿ ಆರಂಭವಾದ ಸಮ್ಮಿಶ್ರ ಸರ್ಕಾರಗಳ ಸರಮಾಲೆ, ಇದರ ಪರಿಣಾಮ, ಅಯೋಧ್ಯೆಯಲ್ಲಿ ಉರುಳಿದ ಮಸೀದಿ, ಆ ನಂತರದ ಬೆಳವಣಿಗೆಗಳು ಈ ಎಲ್ಲಕ್ಕೂ ಕುಲದೀಪ್‌ ನಯ್ಯರ್‌ ಪ್ರತ್ಯಕ್ಷ ಸಾಕ್ಷಿ. ಹಾಗಾಗಿಯೇ ಇವರು ಚಿರಂಜೀವಿ ಸಿಂಗ್‌ ಬಣ್ಣಿಸಿದಂತೆ ಕಾಲಕ್ಕೆ ಹಿಡಿದ ಕನ್ನಡಿ.

ಕುಲದೀಪ್‌ ನಯ್ಯರ್‌ ಖಂಡಿತ ಸಮಕಾಲೀನ ಚರಿತ್ರ ಕೋಶವೇ, 1940ರಲ್ಲಿ ಪಾಕಿಸ್ತಾನ ನಿರ್ಣಯ ಅಂಗೀಕಾರವಾದಾಗ ಕುಲದೀಪ್‌  ನಯ್ಯರ್‌ ಅವರಿಗೆ 17 ವರ್ಷ. ತಲ್ಲಣಗಳ ಮಳೆ ಸುರಿಯಲು ಶುರುವಾಗಿದ್ದು ಅಲ್ಲಿಂದ. ಸಿಯಾಲಕೋಟ್ನಲ್ಲಿ ವೈದ್ಯರಾಗಿದ್ದ ತಂದೆ ಆಗ ತಾನೇ ಹೊಸ ಮನೆ ಖರೀದಿಸಿದ್ದರು. ಕ್ಲಿನಿಕ್‌ ತೆರೆದಿದ್ದರು. ಅಂಗಡಿ ಸಾಲುಗಳನ್ನು ನಿರ್ಮಿಸಿದ್ದರು. ಆ ವೇಳೆಗೆ ಎಲ್ಲವನ್ನೂ ತೊರೆದು ಹೋಗಬೇಕಾದ ಸನ್ನಿವೇಶ ಉಂಟಾಯಿತು. ಭಾರತ ಎರಡಾಗಿತ್ತು. ಭಾರತಕ್ಕೆ ತೆರಳುತ್ತಿದ್ದ ಗೆಳೆಯರ ಜೀಪಿನಲ್ಲಿ ಉಳಿದಿದ್ದ ಒಂದೇ ಸೀಟಿನಲ್ಲಿ ಯಾರು ಹೋಗಬೇಕು ಎಂಬ ಪ್ರಶ್ನೆ ಬಂದಾಗ ಮನೆಯವರೆಲ್ಲರೂ ಚೀಟಿ ಎತ್ತುತ್ತಾರೆ. ಕುಲದೀಪ್‌ ನಯ್ಯರ್‌ ಹೆಸರು ಬರುತ್ತದೆ. ಒಂದಿಷ್ಟು ಅಂಗುಲ  ಜಾಗದಲ್ಲಿಯೇ  ಮುದುಡಿ ಕುಳಿತು ಭಾರತದ ಕಡೆಗೆ ಹೊರಟ ನಯ್ಯರ್‌ ಕಂಡದ್ದು ಕಥೆಯಲ್ಲ, ಜೀವನ.

ಎಲ್ಲೆಲ್ಲೂ  ಹಾಹಾಕಾರ, ಆಕ್ರಂದನ, ಸಾವು, ಕೊಲೆ, ಸುಲಿಗೆ, ದ್ವೇಷ ದಳ್ಳುರಿ, ಜೀಪಿನಲ್ಲಿ ಹೋಗುತ್ತಿದ್ದಾಗ ಇದ್ದ ಒಂದು ಮಗುವನ್ನೇ ಜೀಪಿನಲ್ಲಿ ಕರೆದುಕೊಂಡು ಹೋಗಿಬಿಡಿ, ನಮ್ಮ ಕುಟುಂಬದಲ್ಲಿ ಒಂದು ಜೀವವಾದರೂ ಬದುಕಿ ಉಳಿಯಲಿ ಎಂದು ಗೋಗರೆಯುವವರು, ಭಾರತಕ್ಕೆ ಬಂದ ನಂತರ ಕಂಡ ಇನ್ನೊಂದು ರೀತಿಯ ಮಾರಣಹೋಮ ಎಲ್ಲವೂ ಒಬ್ಬ ಕುಲದೀಪ್‌ ನಯ್ಯರ್‌ ಅವರು ರೂಪುಗೊಳ್ಳಲು ಕಾರಣವಾಗುತ್ತದೆ.

ಕುಲದೀಪ್‌ ನಯ್ಯರ್‌ ಒಂದು ರೀತಿ ಮೊಗೆದಷ್ಟೂ ಮುಗಿಯದ ಕಣಜ. ವಿಭಜನೆಯಿಂದ ಹಿಡಿದು ಮನಮೋಹನ್‌ ಸಿಂಗ್‌ವರೆಗೆ ಇವರು ಅಧಿಕಾರಯುತವಾಗಿ ಮಾತನಾಡಬಲ್ಲರು. ಅಂತಹ ಕುಲದೀಪ್‌ ನಯ್ಯರ್‌ ಅವರನ್ನು ಕಲಕಿ ಹಾಕಿದ ಘಟನೆಯೂ ಒಂದಿದೆ. ಅವರೇ ಹೇಳುವ ಪ್ರಕಾರ, "ನನ್ನ ಜೀವನದ ನಿರ್ಣಾಯಕ ತಿರುವಿನ ಗಳಿಗೆ ಯಾವುದು ಎಂಬುದನ್ನು ಗುರುತಿಸಲೆ? ತುರ್ತು ಪರಿಸ್ಥಿತಿಯಲ್ಲಿ ನಡೆದ ನನ್ನ ಬಂಧನವೇ ಆ ಗಳಿಗೆ. ಅದು ನನ್ನ ನಿರಪರಾಧಿ, ನಿರ್ದೋಷಿ ನಡವಳಿಕೆಯ ಮೇಲೆ ನಡೆದ ದೌರ್ಜನ್ಯವಾಗಿತ್ತು. ಸಿಯಾಲಕೋಟ್ನಿಂದ ಹೊರಡುವಾಗ ನನ್ನ ತಾಯಿ ಕೊಟ್ಟಿದ್ದ 120 ರೂಪಾಯಿಗಳೊಂದಿಗೆ ಭಾರತದಲ್ಲಿ ನಾನು ಜೀವನ ಆರಂಭಿಸಿದೆ. ವಿಭಜನೆಯಿಂದಾಗಿ ಹೊಸದಾಗಿ ಬದುಕು ಆರಂಭಿಸಬೇಕಾಗಿದ್ದರೂ ನನಗಾಗ ತುಂಬಾ ಚಿಕ್ಕ ವಯಸ್ಸು. ಏನು ಬಂದರೂ, ಏನು ನಡೆದರೂ ಸರಿಪಡಿಸಿಕೊಳ್ಳುತ್ತಿದ್ದೆ. ಆದರೆ ಆಬಾಧಿತವಾಗಿ ಸಾಗುತ್ತಿದ್ದ ನನ್ನ ಜೀವನವನ್ನು ತುರ್ತು ಪರಿಸ್ಥಿತಿ ಹಿಡಿದು ಅಲುಗಾಡಿಸಿಬಿಟ್ಟಿತು. ರಾಜಕೀಯ, ಪೂರ್ವಗ್ರಹ ಮತ್ತು  ಶಿಕ್ಷೆ ಎಲ್ಲದರ ಕಟುವಾಸ್ತವವನ್ನು ಎದುರಿಸುವ ಅನಿವಾರ್ಯತೆ ನನಗೆ ಎದುರಾಯಿತು'.

"ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ನಾನು ತೀವ್ರವಾಗಿ ಚಿಂತಿಸಲು ಶುರು ಮಾಡಿದ್ದು ಆಗಿನಿಂದಲೇ. ತಮ್ಮದೇನೂ ತಪ್ಪಿಲ್ಲದೆಯೂ ಸೆರೆಮನೆಗೆ ತಳ್ಳಿಸಿಕೊಂಡು ಅಲ್ಲಿ ಬಂಧನದಲ್ಲಿದ್ದ ರಾಜಕಾರಣಿಗಳ ಸೇವೆಗೆ ನಿಲ್ಲುವಂತಾದ ಸಣ್ಣ ಹುಡುಗರ ಸ್ಥಿತಿ ನನ್ನ ಅಂತಸಾಕ್ಷಿಯನ್ನೇ ಇನ್ನಿಲ್ಲದಂತೆ ಕಲಕಿಬಿಟ್ಟಿತು. ವ್ಯವಸ್ಥೆಯಲ್ಲಿ ನನಗಿದ್ದ ನಂಬಿಕೆಯನ್ನೇ ಅದು ಕಡಿಮೆ ಮಾಡಿತು. ಮಾನವ ಜೀವ ಅಥವಾ ವ್ಯಕ್ತಿಗಳ ಹಕ್ಕುಗಳಿಗೆ ಹೇಗೂ ಗೌರವ ನೀಡದ ದುಷ್ಟ ಮಾಫಿಯಾಗಳು ಬಿಡಿ, ನಮ್ಮ ರಾಜಕೀಯ ಮುಖಂಡರು ಕೂಡಾ ಅವುಗಳನ್ನು ಹೇಗೆ ಉಲ್ಲಂಘಿಸುತ್ತಿದ್ದಾರೆ ಅಂಬುದನ್ನು ನಾನು ನೋಡಿದೆ.' ಎಂದು ನಿಟ್ಟುಸಿರಿಡುತ್ತಾರೆ.

ಕುಲದೀಪ್‌ ನಯ್ಯರ್‌ ಅವರ ಬದುಕು ಇಂತಹ ಹಲವು ನಿಟ್ಟುಸಿರುಗಳ, ಅದಕ್ಕೆ ಇರುವ ಪರಿಹಾರಗಳ ಮೊತ್ತ. ಎಲ್ಲಕ್ಕಿಂತಲೂ ಹೆಚ್ಚಾಗಿ ಕುಲದೀಪ್‌ ನಯ್ಯರ್‌ ಅವರು ಸಮಸ್ಯೆಗಳ ನಡುವೆಯೇ ಇರುವ ಭರವಸೆಯ ಕಿರಣಗಳನ್ನು ತೋರಿಸುತ್ತಾರೆ. ಹಾಗಾಗಿಯೇ ನಯ್ಯರ್‌ ನಮ್ಮ ನಡುವೆ ಇರುವ ಕತ್ತಲ ತೊಡೆಯುವ ಬೆಳಕು.

ಕೃಪೆ: ಉದಯವಾಣಿ

Tag: Kuldip Nayyar

ಕಾಮೆಂಟ್‌ಗಳಿಲ್ಲ: